ಉತ್ತರ ಪ್ರದೇಶದ ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ಉದ್ಘಾಟನೆಗೆ ದಿನಾಂಕ ನಿಗದಿಯಾಗಿದೆ. ಜನವರಿ 22ರಂದು ಬಾಲ ರಾಮ ಮೂರ್ತಿಗೆ ಪ್ರಾಣ ಪ್ರತಿಷ್ಟಾಪನೆ ಮಾಡುವ ಮೂಲಕ ರಾಮಮಂದಿರ ಉದ್ಘಾಟನೆ ಆಗಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಕೇಂದ್ರ ಸರ್ಕಾರದ ಗಣ್ಯಾತಿಗಣ್ಯರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ. ಇದೊಂದು ಬೃಹತ್ ಕಾರ್ಯಕ್ರಮವಾಗಿದ್ದು, ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ, ಲೋಕಸಭಾ ವಿರೋಧ ಪಕ್ಷದ ನಾಯಕ ಅಧೀರ್ ರಂಜನ್ ಚೌಧರಿ ಹಾಗು ರಾಜ್ಯಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರಿಗೂ ಅಯೋಧ್ಯೆ ರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮಕ್ಕೆ ಆಹ್ವಾನ ನೀಡಲಾಗಿತ್ತು. ಆದರೆ ಕಾರ್ಯಕ್ರಮವನ್ನು ಬಹಿಷ್ಕಾರ ಮಾಡುವ ನಿರ್ಧಾರ ಮಾಡಿದೆ ಕಾಂಗ್ರೆಸ್ ಪಕ್ಷ. ಈ ನಿರ್ಧಾರದ ಬಗ್ಗೆ ಪರ ವಿರೋಧ ಚರ್ಚೆಗಳಿಗೆ ಆಹ್ವಾನ ಕೊಟ್ಟಂತಾಗಿದೆ.

ಆಹ್ವಾನ ನೀಡದ್ದಕ್ಕೆ ರಾಜ್ಯದಲ್ಲಿ ಆಕ್ರೋಶದ ಬುತ್ತಿ!
ರಾಜ್ಯದಿಂದ ಮಾಜಿ ಸಿಎಂ ಹೆಚ್.ಡಿ ಕುಮಾರಸ್ವಾಮಿ ಸೇರಿದಂತೆ ಹಲವು ನಾಯಕರಿಗೆ ಆಹ್ವಾನ ನೀಡಲಾಗಿದೆ. ಆದರೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗು ಡಿಸಿಎಂ ಡಿಕೆ ಶಿವಕುಮಾರ್ ಅವರಿಗೆ ಆಹ್ವಾನ ನೀಡಿಲ್ಲ. ಕಾಂಗ್ರೆಸ್ ಪಕ್ಷ ಈ ವಿಚಾರವನ್ನು ರಾಜಕೀಯವಾಗಿ ಟೀಕೆ ಮಾಡಿತ್ತು. ನಾವು ರಾಮನ ಭಕ್ತರು ಆದರೆ ನಮ್ಮನ್ನು ಕಡೆಗಣಿಸಲಾಗಿದೆ ಎಂದು ಟೀಕಿಸಿತ್ತು. ಕಾರ್ಯಕ್ರಮದಲ್ಲಿ ಲಕ್ಷಾಂತರ ಜನರು ಸೇರುವ ಕಾರಣದಿಂದ ಪ್ರೋಟೋಕಾಲ್ ಕಷ್ಟ ಆಗಲಿದೆ ಅನ್ನೋ ಕಾರಣಕ್ಕೆ ಆಹ್ವಾನ ನೀಡಿಲ್ಲ ಎಂದು ಬಿಜೆಪಿ ನಾಯಕರು ಸಮಜಾಯಿಸಿ ನೀಡಿದ್ದರು. ನಮ್ಮ ನಮ್ಮ ಊರಿನಲ್ಲೇ ರಾಮನ ದೇವಸ್ಥಾನಗಳಲ್ಲಿ ಪೂಜೆ ಮಾಡೋಣ ಎಂದು ಕೆಲವರು ಹೇಳಿದ್ರೆ, ಸಿದ್ದರಾಮಯ್ಯನ ಹೆಸರಲ್ಲೇ ರಾಮನಿದ್ದಾನೆ ಎಂದು ಕೆಲವರು ಹೇಳಿದ್ದರು. ಆದರೆ ಇದೀಗ ಆಹ್ವಾನ ಪಡೆದಿದ್ದ ಸೋನಿಯಾ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ಗೈರು ಹಾಜರಾಗುವ ಮಾಹಿತಿ ನೀಡಿದ್ದಾರೆ.

ಅಯೋಧ್ಯೆಗೆ ಸೋನಿಯಾ, ಖರ್ಗೆ ಹೋಗ್ತಿಲ್ಲ ಯಾಕೆ..?
ಆರ್‌ಎಸ್‌ಎಸ್ ಹಾಗು ಬಿಜೆಪಿ ಪಕ್ಷದ ನೇತೃತ್ವದಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಮಾಡಿದ್ದು, ಅದ್ಧೂರಿಯಾಗಿ ನಿರ್ಮಾಣ ಮಾಡಲಾಗಿದೆ. ಈ ಕಾರ್ಯಕ್ರಮದಿಂದ ದೂರ ಉಳಿಯಲು ಸೋನಿಯಾ ಗಾಂಧಿ ಹಾಗು ಮಲ್ಲಿಕಾರ್ಜುನ ಖರ್ಗೆ ನಿರ್ಧಾರ ಮಾಡಿದ್ದಾರೆ. ಆದರೆ ಈ ನಿರ್ಧಾರಕ್ಕೆ ಕಾರಣ ಏನು ಅನ್ನೋದನ್ನು ನೋಡೋದಾರೆ, ರಾಮ ಮಂದಿರಕ್ಕಾಗಿ ಕೋಟ್ಯಂತರ ಜನರು ಕಾಯುತ್ತಿದ್ದಾರೆ. ಆದರೆ ಧರ್ಮ ಎನ್ನುವುದು ವೈಯಕ್ತಿಕ ವಿಚಾರ. ಬಿಜೆಪಿ ಹಾಗು ಆರ್‌ಎಸ್‌ಎಸ್ ನಾಯಕರು ಇದನ್ನು ರಾಜಕೀಯ ವಿಚಾರವಾಗಿ ಮಾಡಿದ್ದಾರೆ. ಅಷ್ಟೂ ರಾಮ ಮಂದಿರ ಸಂಪೂರ್ಣ ನಿರ್ಮಾಣ ಕಾರ್ಯ ಆಗಿಯೇ ಇಲ್ಲ. ಆದರೂ ಮುಂಬರುವ ಲೋಕಸಭಾ ಚುನಾವಣೆಯ ವಿಚಾರ ಮಾಡಿಕೊಳ್ಳಲು ಹವಣಿಸುತ್ತಿದೆ ಎಂದಿದೆ ಕಾಂಗ್ರೆಸ್. ಇದೇ ಕಾರಣಕೊಟ್ಟು ಕಾರ್ಯಕ್ರಮದಿಂದ ಗೈರಾಗುವ ನಿರ್ಧಾರ ಹೊರ ಹಾಕಿದೆ.
ಹಿಂದೂಗಳ ಮನಗೆಲ್ಲುವ ಅವಕಾಶ ಕೈಚೆಲ್ಲಿತೇ ಕಾಂಗ್ರೆಸ್..!
ಹಿಂದೂಗಳನ್ನೇ ಮತಬ್ಯಾಂಕ್ ಮಾಡಿಕೊಂಡಿರುವ ಬಿಜೆಪಿ, ಕಾಂಗ್ರೆಸ್ ಹಿಂದೂಗಳ ವಿರೋಧಿ ಎಂದು ಸದಾ ಕಾಲ ಆರೋಪ ಮಾಡುತ್ತಲೇ ಇರುತ್ತದೆ. ಕಾಂಗ್ರೆಸ್ ಮುಸ್ಲಿಮರನ್ನು ಓಲೈಕೆ ಮಾಡುವುದರಲ್ಲೇ ಕಾಲ ಕಳೆಯುತ್ತದೆ ಅನ್ನೋ ಆರೋಪವೂ ಕಾಂಗ್ರೆಸ್ ಮೇಲಿದೆ. ಪರಿಸ್ಥಿತಿ ಹೀಗಿರುವಾಗ ಕಾಂಗ್ರೆಸ್ ಕೂಡ ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮದಲ್ಲಿ ಭಾಗಿಯಾಗುವ ಮೂಲಕ ನಾವು ಹಿಂದೂ ವಿರೋಧಿಗಳಲ್ಲಿ. ನಾವೂ ಕೂಡ ಹಿಂದೂಗಳ ನಂಬಿಕೆಯನ್ನು ಗೌರವಿಸುತ್ತೇವೆ ಎನ್ನುವ ಸಂದೇಶ ರವಾನೆ ಮಾಡಲು ಅವಕಾಶ ಸಿಕ್ಕಿತ್ತು. ಆದರೆ ಕಾಂಗ್ರೆಸ್ ರಾಜಕಾರಣದ ಆರೋಪ ಮಾಡಿಕೊಂಡು ಅವಕಾಶವನ್ನು ಕೈ ಚೆಲ್ಲಿದ್ದಾರೆ. ಚುನಾವಣೆ ಸಮಯದಲ್ಲಿ ದೇಸವ್ಥಾನಗಳಿಗೆ ಭೇಟಿ ನೀಡಿ, ನಾವೂ ಹಿಂದೂಗಳೇ ಎಂದು ಪೂಜೆ ಸಲ್ಲಿಸಿ ಜನರನ್ನು ಸೆಳೆಯಲು ಮುಂದಾಗುವ ರಾಜಕಾರಣಿಗಳು, ಇಂತಹ ಸಮಯದಲ್ಲಿ ದೇವಸ್ಥಾನಕ್ಕೆ ಹೋಗುವ ಅವಕಾಶ ಕೈ ಚೆಲ್ಲಿದ್ದು ಕಾಂಗ್ರೆಸ್ ಅಥವಾ ಬಿಜೆಪಿ ಎರಡೂ ಪಕ್ಷಗಳಿಂದ ದೂರ ಇರುವ ಜನರನ್ನು ನಿರಾಸೆ ಮಾಡಿದಂತೆ ಆಗಲಿದೆ ಎನ್ನಬಹುದು.
ಕೃಷ್ಣಮಣಿ