ಕಾಂಗ್ರೆಸ್ ಸರ್ಕಾರದ ಗ್ಯಾರಂಟಿ ಯೋಜನೆಗಳ ಜಾರಿಯಲ್ಲಿ ಆಗ್ತಿರೋ ವಿಳಂಬದ ಬಗ್ಗೆ ಸಚಿವ ಸತೀಶ್ ಜಾರಕಿಹೊಳಿ ಹೊಸ ಬಾಂಬ್ ಸಿಡಿಸಿದ್ದಾರೆ. ಗೃಹಲಕ್ಷ್ಮಿ ಯೋಜನೆ ಜಾರಿಗೆ ಸರ್ವರ್ ಸಮಸ್ಯೆ ಆಗ್ತಿದೆ. ಸರ್ವರ್ ಹ್ಯಾಕ್ ಮಾಡಲಾಗ್ತಿದೆ ಎಂದು ಬೆಳಗಾವಿಯಲ್ಲಿ ಸಚಿವ ಸತೀಶ್ ಜಾರಕಿಹೊಳಿ ಹೇಳಿರುವುದು ಹೊಸ ವಿವಾದಕ್ಕೆ ನಾಂದಿ ಹಾಡಿದೆ. ಇವಿಎಂ ರೀತಿ ಸಿಸ್ಟಮ್ಸ್ಗಳನ್ನ ಹ್ಯಾಕ್ ಮಾಡಲಾಗ್ತಿದೆ. ಲಕ್ಷ್ಮೀ ಹೆಬ್ಬಾಳ್ಕರ್ ಅವರ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಹ್ಯಾಕ್ ಆಗಿದೆ. ಹಾಗಾಗಿ ಮಹಿಳೆಯರಿಗೆ ಮಾಸಿಕ 2 ಸಾವಿರ ನೀಡುವ ಯೋಜನೆ ತಡವಾಗುತ್ತಿದೆ ಎಂದಿದ್ದಾರೆ. ಹ್ಯಾಕ್ ಆದ್ಮೇಲೆ ಅದನ್ನ ಸರಿ ಮಾಡುವ ಪ್ರಯತ್ನ ಮಾಡುತ್ತಿದ್ದೇವೆ. ಎಷ್ಟು ಬಾರಿ ಹ್ಯಾಕ್ ಮಾಡಿದ್ರೂ ನಾವು ನಮ್ಮ ಯೋಜನೆ ಜಾರಿ ಮಾಡ್ತೇವೆ ಎಂದು ಖಚಿತಪಡಿಸಿದ್ದಾರೆ. ಆದರೆ ಸಚಿವ ಸತೀಶ್ ಜಾರಕಿಹೊಳಿ ಹ್ಯಾಕ್ ಆರೋಪದ ಬೆನ್ನಲ್ಲೇ ಬಿಜೆಪಿ ನಾಯಕರು ತಿರುಗಿಬಿದ್ದಿದ್ದಾರೆ. ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಸೇರಿದಂತೆ ರಾಜ್ಯ ನಾಯಕರೂ ಕೂಡ ವಾಗ್ದಾಳಿ ಮಾಡಿದ್ದಾರೆ.
ರಾಜ್ಯದ ಮರ್ಯಾದೆ ತೆಗಿಯಬೇಡಿ ಎಂದ ಜೋಷಿ..!

ಧಾರವಾಡದಲ್ಲಿ ಸಚಿವ ಸತೀಶ್ ಜಾರಕಿಹೋಳಿ ಮಾತಿಗೆ ತಿರುಗೇಟು ನೀಡಿರುವ ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ, ರಾಜ್ಯ ಸರಕಾರದ ಯೋಜನೆಗಳ ಸರ್ವರ್ಗಳನ್ನ ಕೇಂದ್ರ ಸರಕಾರ ಹ್ಯಾಕ್ ಮಾಡುತ್ತಿದೆ ಎನ್ನುವುದು ಹಾಸ್ಯಾಸ್ಪದ ಹೇಳಿಕೆ. ಅವರು ಮಂತ್ರಿ ಆಗಿದ್ದಾರೆ. ಮುಂದಿನ ದಿನದಲ್ಲಿ ಸಿಎಂ ಆಗುತ್ತೇನೆ ಅನ್ನುತ್ತೀರಿ, ಗಂಭೀರವಾಗಿರಿ. ರಾಜ್ಯದ ಮರ್ಯಾದೆ ತೆಗಿಯಬೇಡಿ ಎಂದು ವಾಗ್ದಾಳಿ ಮಾಡಿದ್ದಾರೆ. ಹ್ಯಾಕ್ ಮಾಡಿದ್ರೆ ದೂರು ದಾಖಲಿಸಿ, ಸೈಬರ್ ಕ್ರೈಂ ಇದೆ ದೂರು ನೀಡಿ ಎಂದಿದ್ದಾರೆ. ಕೇವಲ ಯೋಜನೆಗಳನ್ನು ಕೊಡಲಿಕ್ಕೆ ಆಗುತ್ತಿಲ್ಲ. ಇಂದಿರಾ ಗಾಂಧಿ ಗರೀಭಿ ಹಠಾವೋ ಎಂದು 1970 ರಲ್ಲಿ ಹೇಳಿದ್ರು. ಸತ್ಯದ ಮುಖದ ಮೇಲೆ ಹೊಡಿಯೋ ಹಾಗೇ ಕಾಂಗ್ರೆಸ್ ಸುಳ್ಳು ಹೇಳುತ್ತಿದೆ. ಜನರು ತಕ್ಕ ಪಾಠವನ್ನು ಕಲಿಸುತ್ತಾರೆ. ಕುಣಿಲಿಕ್ಕೆ ಆಗದವರು ನೆಲ ಡೊಂಕು ಅಂತ ಹೇಳುತ್ತಾರೆ. ಕೈಲಿ ಆಗದವನು ಮೈಯೆಲ್ಲಾ ಪರಚಿಕೊಂಡಂತೆ ಅನ್ನೋ ಮಾತು ಸಿದ್ದರಾಮಯ್ಯಗೆ ಅನ್ವಯಿಸುತ್ತಿದೆ ಎಂದಿದ್ದಾರೆ.

ಕಾಂಗ್ರೆಸ್ ಹುಳುಕು ಮುಚ್ಚಲು ಸರ್ವರ್ ಹ್ಯಾಕ್ ಆರೋಪ
ಸಚಿವ ಸತೀಶ್ ಜಾರಕಿಹೊಳಿ ಆರೋಪಕ್ಕೆ ಪರಿಷತ್ ಬಿಜೆಪಿ ಸದಸ್ಯ ರವಿಕುಮಾರ್ ಮಾತನಾಡಿ, ಗೃಹಲಕ್ಷ್ಮಿ ಅರ್ಜಿ ವಿಳಂಬಕ್ಕೆ ಕಾರಣ ಸರ್ವರ್ ಡೌನ್ ಅಂತ ಹೇಳಿದ್ದಾರೆ. ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ ಅಂತ ಆರೋಪ ಮಾಡಿದ್ದಾರೆ. ಇವರ ಹುಳುಕು ಮುಚ್ಚಲು ಸರ್ವರ್ ಮೇಲೆ ಹಾಕ್ತಿದಾರೆ. ಈ ಯೋಜನೆ ವಿಳಂಬ ಆಗಲು ಕೇಂದ್ರ ಸರ್ಕಾರ ಹೇಗೆ ಕಾರಣ ಆಗುತ್ತೆ..? ಎಂದು ಪ್ರಶ್ನಿಸಿದ್ದಾರೆ. ಕೇಂದ್ರದವ್ರು ಹ್ಯಾಕ್ ಮಾಡಲಿಕ್ಕೆ ರಿಮೋಟ್ ಕಂಟ್ರೋಲ್ ಇಟ್ಕೊಂಡಿದ್ದಾರಾ..? ಪ್ರತಿಯೊಂದಕ್ಕೂ ಕೇಂದ್ರ ಸರ್ಕಾರದ ಮೇಲೆ ಆಪಾದನೆ ಮಾಡ್ತಿದಾರೆ. ಇವರಿಗೆ ಕೊಡಕ್ಕಾಗಲ್ಲ ಅಂದ್ರೆ ಕೇಂದ್ರ ಹೇಗೆ ಜವಾಬ್ದಾರಿ ಆಗುತ್ತೆ..? ಸರ್ವರ್ ಡೌನ್ ಆದ್ರೆ ಸರಿ ಮಾಡಿಸೋಕ್ಕೆ ಆಗಲ್ವಾ..? ಸರ್ವರ್ ಹ್ಯಾಕ್ ಮಾಡಿದ್ದಾರೆ ಅಂದ್ರೆ, ಹ್ಯಾಕ್ ಮಾಡಿದವ್ರನ್ನು ಬಂಧಿಸಿ ಎಂದಿದ್ದಾರೆ. ಇನ್ನು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಮಾತನಾಡಿ, ಸತೀಶ್ ಜಾರಕಿಹೊಳಿ ಅವರು, ಸಾಫ್ಟ್ವೇರ್ ಎಲ್ಲಿದು ಅಂತನೂ ಅವರಿಗೆ ಗೊತ್ತಿಲ್ಲ. ಕೇಂದ್ರ ಸರ್ಕಾರ ಹ್ಯಾಕ್ ಮಾಡಿದೆ, ಹಾಗಾಗಿ ಸರ್ವರ್ ಡೌನ್ ಆಗಿದೆ ಅಂತ ಹೇಳಿದ್ದಾರೆ. ಇದು ಹಾಸ್ಯಾಸ್ಪದ ವಿಚಾರ. ಇದು ಅವರ ಬುದ್ಧಿವಂತಿಕೆ ಪ್ರಚಾರ ಮಾಡಿದ್ದಾರೆ. ಸತೀಶ್ ಜಾರಕಿಹೊಳಿ ಅವರೇ ಈ ರೀತಿ ಅಪಹಾಸ್ಯ ಹೇಳಿಕೆ ನೀಡಬೇಡಿ. ನೀವು ಸರ್ಕಾರದಲ್ಲಿ ಮಂತ್ರಿ ಇದ್ದೀರಿ. ಇದರಿಂದ ನಿಮ್ಮ ಘನತೆ ಕಮ್ಮಿ ಆಗಲಿದೆ ಎಂದು ಕಿವಿಮಾತು ಹೇಳಿದ್ದಾರೆ.
ಹ್ಯಾಕ್ ಮಾಡೋದಕ್ಕೆ ಸಾಧ್ಯ ಇದೆಯಾ..? ಇಲ್ಲವಾ..?

ಸರ್ಕಾರದ ಎಲ್ಲಾ ವೆಬ್ಸೈಟ್ಗಳಲ್ಲಿ NIC ಅನ್ನೋ ಸಿಂಬಲ್ ಇರುತ್ತದೆ. NIC ಅಂದ್ರೆ National Informatics Centre ಎಂದರ್ಥ. ಈ ಸಂಸ್ಥೆ ಸರ್ಕಾರದ ವೆಬ್ಸೈಟ್ಗಳನ್ನು ನಿರ್ವಹಣೆ ಮಾಡುತ್ತದೆ. ಈ ಸಂಸ್ಥೆ ಕೇಂದ್ರ ಸರ್ಕಾರದ ಮಾಹಿತಿ ಮತ್ತು ತಂತ್ರಜ್ಞಾನ ಇಲಾಖೆ ಅಡಿಯಲ್ಲಿ ಕೆಲಸ ಮಾಡುತ್ತದೆ. ನೇರವಾಗಿ ಕೇಂದ್ರ ಸರ್ಕಾರದ ಅಡಿಯಲ್ಲಿ ಕೆಲಸ ಮಾಡುವುದರಿಂದ ಕೆಲವು ಉದ್ದೇಶಪೂರ್ವಕ ಅಡ್ಡಿಗಳು ಆಗಿರಬಹುದು ಅನ್ನೋದು ಒಂದು ಕಡೆಯ ಆತಂಕ. ಇನ್ನೊಂದು ಕಾರಣ ಎಂದರೆ ಈಗಾಗಲೇ ಅನ್ನಭಾಗ್ಯ ಯೋಜನೆಗೆ ಅಕ್ಕಿಯನ್ನು ಕೊಡ್ತೇವೆ ಎಂದು ಜೂನ್ 12 ರಂದು ಹೇಳಿದ್ದ FCI ( Food Corporation of India ) ಜೂನ್ 13ರಂದು ಅಕ್ಕಿ ವಿತರಣೆ ಮಾಡಲು ಸಾಧ್ಯವಿಲ್ಲ ಎಂದು ಹೇಳಿದ್ದರಲ್ಲಿ ಕೇಂದ್ರ ಸರ್ಕಾರದ ಪಾತ್ರ ಇಲ್ಲವೇ..? ಎನ್ನುವುದು ರಾಜ್ಯದ ಪ್ರಶ್ನೆ. ಅಂದರೆ ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ಸಿಗುತ್ತಿರುವ ಪ್ರಚಾರ ಕಂಡು ಕರುಬುತ್ತಿದೆ. ಲೋಕಸಭೆಯಲ್ಲಿ ಭಾರೀ ಹಿನ್ನಡೆ ಆಗುವ ಭೀತಿಯಲ್ಲಿ ಕಾಂಗ್ರೆಸ್ ಯೋಜನೆಗಳಿಗೆ ಅಡ್ಡಗಾಲು ಹಾಕುವ ಪ್ರಯತ್ನ ಮಾಡ್ತಿದೆ ಎನ್ನುವುದು ಕಾಂಗ್ರೆಸ್ ಗುಮಾನಿ. ತಾಂತ್ರಿಕವಾಗಿ ಅಡ್ಡಿ ಮಾಡಿದರೆ ಕಾಂಗ್ರೆಸ್ ನಾಗಾಲೋಟ ತಡೆಯುವುದಕ್ಕೆ ಸಹಕಾರಿ ಅನ್ನೋದ್ರಿಂದ ಹೀಗೆಲ್ಲಾ ಮಾಡ್ತಿದ್ದಾರೆ ಅನ್ನೋ ಮಾತುಗಳು ಕೇಳಿ ಬರುತ್ತಿವೆ.
ಕೃಷ್ಣಮಣಿ