ಬೆಂಗಳೂರು : ರಾಜ್ಯದಲ್ಲಿ ಕ್ರಾಂತಿಯ ಮಾತಿನಿಂದ ಸುದ್ದಿಯಾಗಿದ್ದ ಮಾಜಿ ಸಚಿವ ಕೆ.ಎನ್.ರಾಜಣ್ಣ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಅನೇಕ ಬಾರಿ ಹೇಳಿಕೆಗಳನ್ನು ನೀಡಿದ್ದರು.

ಸಿಎಂ ಸಿದ್ದರಾಮಯ್ಯ ಪರ ಸದಾ ಬ್ಯಾಟ್ ಬೀಸುತ್ತಿದ್ದ ರಾಜಣ್ಣ ಇಂದು ದಿಢೀರ್ ಡಿಕೆ ಶಿವಕುಮಾರ್ ಅವರನ್ನು ಭೇಟಿಯಾಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ. ಕಾಂಗ್ರೆಸ್ ಪಕ್ಷದಲ್ಲಿನ ನಾಯಕತ್ವ ಬದಲಾವಣೆಯ ವಿಚಾರದಲ್ಲಿ ರಾಜಣ್ಣ ಅನೇಕ ಸಲ ಡಿಕೆ ಶಿವಕುಮಾರ್‌ಗೆ ಕೌಂಟರ್ ನೀಡಿದ್ದರು. ಹನಿಟ್ರ್ಯಾಪ್ ಕೇಸ್‌ನಲ್ಲೂ ಪರೋಕ್ಷವಾಗಿಯೇ ರಾಜಣ್ಣ ಡಿಸಿಎಂ ವಿರುದ್ಧ ಆರೋಪಿಸಿದ್ದರು. ಆದರೆ ಇದೀಗ ಇಬ್ಬರೂ ನಾಯಕರು ಒಂದೇ ಫೋಟೋನಲ್ಲಿ ಕಾಣಿಸಿಕೊಂಡಿರುವುದು ರಾಜ್ಯ ರಾಜಕೀಯದಲ್ಲಿ ಸಾಕಷ್ಟು ಸಂಚಲನ ಮೂಡಿಸಿದೆ.

ಸಿದ್ದರಾಮಯ್ಯ ಬಣದಲ್ಲಿ ಗುರುತಿಸಿಕೊಂಡಿರುವ ರಾಜಣ್ಣ ಹಾಗೂ ಡಿಕೆಶಿ ನಡುವಿನ ಭೇಟಿಯು ಹೆಚ್ಚು ಮಹತ್ವ ಪಡೆದುಕೊಂಡಿದೆ. ಸಿಎಂ ಕನಸು ಕಾಣುತ್ತಿರುವ ಡಿಕೆ ಶಿವಕುಮಾರ್ ಕೆಲ ದಿನಗಳ ಹಿಂದಷ್ಟೇ ಸಿದ್ದು ನಿಷ್ಠ ಸತೀಶ್ ಜಾರಕಿಹೊಳಿ ಅವರನ್ನು ರಹಸ್ಯವಾಗಿ ಭೇಟಿಯಾಗಿ ಬೆಂಬಲ ಕೋರಿದ್ದರು. ಅದಾದ ಬಳಿಕ ಸಿದ್ದರಾಮಯ್ಯರ ಇನ್ನೊಬ್ಬ ಆಪ್ತ ರಾಜಣ್ಣ ಜೊತೆ ಚರ್ಚಿಸಿರುವುದನ್ನು ನೋಡಿದಾಗ ಮುಖ್ಯಮಂತ್ರಿ ಹಾದಿಯನ್ನು ಸುಗಮವಾಗಿಸಿಕೊಳ್ಳುವ ರಣತಂತ್ರ ರೂಪಿಸಿರುವಂತೆ ಕಂಡು ಬರುತ್ತಿದೆ.










