ಹಿರಿಯ ನಟಿ ಹಾಗೂ ಶಾಸಕಿ ಸುಮಲತಾ ಅಂಬರೀಶ್ ಅವರು ಕಾಂಗ್ರೆಸ್ ಸೇರ್ಪಡೆಯಾಗಲಿದ್ದಾರೆಯೇ? ಇಂತಹದೊಂದು ಪ್ರಶ್ನೆ ಇದೀಗ ಮಂಡ್ಯ ರಾಜಕೀಯ ವಲಯದಲ್ಲಿ ಪ್ರಬಲವಾಗಿ ಮೂಡೋದಕ್ಕೆ ಪ್ರಾರಂಭ ಆಗಿದೆ. ಇದಕ್ಕೆ ಪ್ರಮುಖವಾದ ಕಾರಣ ಅಂದ್ರೆ ಅದು ಸುಮಲತಾ ಅವರದ್ದೇ ಹೇಳಿಕೆ.
“ನನ್ನ ಬೆಂಬಲ ಬಿಜೆಪಿಗೆ ಹೊರತು ನಾನು ಬಿಜೆಪಿಯ ಮೆಂಬರ್ ಅಲ್ಲ” ಎಂಬಂತಹ ಹೇಳಿಕೆ ನೀಡಿರುವುದು ಈಗ ಹಲವು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ, ಚೆಲುವರಾಯಸ್ವಾಮಿಯವರ ಕುರಿತಾದಂತಹ ಪ್ರಶ್ನೆಗೆ ಉತ್ತರಿಸಿದ ಅವರು ಈ ರೀತಿಯಾದಂತ ಹೇಳಿಕೆ ನೀಡಿರುವುದು ಈಗ ಮಂಡ್ಯ ರಾಜಕಾರಣದಲ್ಲಿ ಬಹುದೊಡ್ಡ ಸಂಚಲನವನ್ನು ಮೂಡಿಸುವುದಕ್ಕೆ ಪ್ರಾರಂಭವಾಗಿದೆ.
ಇನ್ನು ಆಪರೇಷನ್ ಹಸ್ತದ ಕುರಿತು ಮಾತನಾಡಿದ ಸುಮಲತಾ ಅಂಬರೀಶ್ ಅವರು ಯಾರು ಕೂಡ ನನ್ನನ್ನ ಆ ವಿಚಾರಕ್ಕೆ ಸಂಬಂಧಪಟ್ಟ ಹಾಗೆ ಸಂಪರ್ಕಿಸಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ ಆ ಮೂಲಕ ಕಾಂಗ್ರೆಸ್ ನಾಯಕರು ಸುಮಲತಾ ಅಂಬರೀಶ್ ಅವರಿಗೆ ಮೇಲ್ನೋಟದಲ್ಲಿ ಹೆಚ್ಚಿನ ಆದ್ಯತೆ ನೀಡುತ್ತಿಲ್ಲ ಎಂಬುದು ಸ್ಪಷ್ಟವಾಗುತ್ತಿದ್ದರು ಈ ಹಿಂದೆ ಲೋಕಸಭೆ ಚುನಾವಣೆಯ ಗೆಲುವಿಗೆ ಕಾಂಗ್ರೆಸ್‌ನ ಕೆಲ ಕಾರ್ಯಕರ್ತರು ಪರೋಕ್ಷವಾಗಿ ಬೆಂಬಲ ನೀಡಿರುವುದರಿಂದ ಈ ಬಗ್ಗೆ ಕೂಡ ಹಲವು ಪ್ರಶ್ನೆಗಳು ಉದ್ಭವಿಸಿವೆ.
ಈ ಸುದ್ದಿ ಓದಿದ್ದೀರಾ? ಯಾರು ಕೂಡ ಅಷ್ಟು ಸುಲಭವಾಗಿ ಕಾಂಗ್ರೆಸ್ ಗೆ ಹೋಗುವುದಿಲ್ಲ ; ಸಿ.ಟಿ ರವಿ
ಕೆಲವೊಂದು ವಿಚಾರಗಳನ್ನ ಗೌಪ್ಯವಾಗಿ ಕಾಪಾಡಿಕೊಂಡು ಬಂದಿರುವ ಸುಮಲತಾ ಅವರು ತಮ್ಮ ರಾಜಕೀಯ ನಡೆಯ ಕುರಿತು ಬಹಳಷ್ಟು ಎಚ್ಚರಿಕೆಯ ಹೆಜ್ಜೆಗಳನ್ನ ಇಡುತ್ತಿದ್ದಾರೆ ಇದಕ್ಕೆ ಪೂರಕ ಅನ್ನೋ ಹಾಗೆ “ಕೆಲವೊಂದು ವಿಚಾರಗಳನ್ನ ಈಗಲೇ ನಾನು ಹೇಳುವುದಿಲ್ಲ, ಸಮಯ ಬಂದಾಗ ಆ ಕುರಿತು ತಿಳಿಸುತ್ತೇನೆ” ಎಂದು ಹೇಳಿರುವುದು ಕೂಡ ಸುಮಲತಾ ಅವರ ಮುಂದಿನ ರಾಜಕೀಯ ನಡೆಯ ಕುರಿತು ಕುತೂಹಲವನ್ನು ಮೂಡಿಸಿದೆ.
ಒಟ್ಟಾರೆಯಾಗಿ ಈಗ ಸುಮಲತಾ ಅಂಬರೀಶ್ ಕಾಂಗ್ರೆಸ್ ಗೆ ಸೇರ್ಪಡೆಗೊಳ್ಳುತ್ತಾರೋ ಅಥವಾ ಬಿಜೆಪಿಯ ಕಡೆಗೆ ಹೆಜ್ಜೆಯನ್ನು ಇಡುತ್ತಾರೋ ಎಂಬುದನ್ನು ಮುಂದಿನ ದಿನಗಳಲ್ಲಿ ಕಾದು ನೋಡಬೇಕಾಗಿದೆ.






