ಬೆಂಗಳೂರು : ರಾಜ್ಯದಲ್ಲಿ ಚುನಾವಣೆ ನಡೆಸುತ್ತಿರುವುದು ಚುನಾವಣಾ ಆಯೋಗವೋ ಅಥವಾ ಬಿಜೆಪಿಯೋ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಪ್ರಶ್ನೆ ಮಾಡಿದ್ದಾರೆ . ಈ ಸಂಬಂಧ ಸಿದ್ದರಾಮಯ್ಯ ಮಾಧ್ಯಮ ಪ್ರಕಟಣೆ ಹೊರಡಿಸಿದ್ದು ಬಿಜೆಪಿ ಪಕ್ಷದ ಪದಾಧಿಕಾರಿಗಳು ನಿರ್ಧರಿಸಲಿರುವುದು ಸೂಕ್ಷ್ಮ, ಅತಿಸೂಕ್ಷ್ಮ ಮತಗಟ್ಟೆಗಳನ್ನೋ?ಬಿಜೆಪಿ ಪರ ಮತ್ತು ವಿರೋಧಿ ಮತದಾರರು ಇರುವ ಮತಗಟ್ಟೆಗಳನ್ನೋ? ಎಂದು ಕೇಳಿದ್ದಾರೆ.
ಬಿಜೆಪಿಯು ಈ ಪತ್ರದ ಮೂಲಕ ತಮ್ಮ ಪಕ್ಷದ ಪರವಾಗಿ ಇಲ್ಲದ ಮತದಾರರು ಇರುವ ಮತಗಟ್ಟೆಗಳಲ್ಲಿ ಭದ್ರತೆಯ ನೆಪದಲ್ಲಿ ಕೇಂದ್ರ ಸೇನಾಪಡೆಗಳನ್ನು ನಿಯೋಜಿಸಿ ಬಳಿಕ ಮತದಾರರನ್ನು ಬೆದರಿಸಿ ಅವರು ಮತದಾನ ಮಾಡದಂತೆ ತಡೆಯುವ ದುರುದ್ದೇಶ ಹೊಂದಿದ್ದಾರೆ.
ಚುನಾವಣಾ ಮತಗಟ್ಟೆಗಳಲ್ಲಿ ವೆಬ್ ಕಾಸ್ಟಿಂಗ್ ಮತ್ತು ವಿಡಿಯೋ ರೆಕಾರ್ಡಿಂಗ್ ಮಾಡುವ ಹೊಣೆ ಚುನಾವಣಾ ಆಯೋಗದಲ್ಲವೇ? ಇದನ್ನು ನಡೆಸಲು ರಾಜಕೀಯ ಪಕ್ಷಕ್ಕೆ ಅನುಮತಿ ಕೊಟ್ಟವರು ಯಾರು? ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರೇ ಈ ಪತ್ರ ಬರೆದಿರುವುದನ್ನು ನೋಡಿದರೆ ಕೇಂದ್ರ ಸರ್ಕಾರವೇ ಈ ಅಕ್ರಮ ಚಟುವಟಿಕೆಯಲ್ಲಿ ಷಾಮೀಲಾಗುರುವುದು ಸ್ಪಷ್ಟವಾಗಿದೆ ಎಂದಿದ್ದಾರೆ.
ಬಿಜೆಪಿ ರಾಜ್ಯ ಚುನಾವಣಾ ನಿರ್ವಹಣಾ ಸಮಿತಿಯಲ್ಲಿರುವ ಸಂಸದೆ ಶೋಭಾ ಕರಂದ್ಲಾಜೆ ಸೂಕ್ಷ್ಮ ಮತ್ತು ಅತಿ ಸೂಕ್ಷ್ಮ ಮತಗಟ್ಟೆಗಳ ವಿವರ ಸಲ್ಲಿಸುವಂತೆ ಜಿಲ್ಲಾಧ್ಯಕ್ಷರು , ಪ್ರಧಾನ ಕಾರ್ಯದರ್ಶಿಗಳು ಹಾಗೂ ಚುನಾವಣಾ ಏಜೆಂಟ್ಗಳಿಗೆ ಪತ್ರ ಬರೆದು ಸೂಚನೆ ನೀಡಿದ್ದರು.