ನಿರಂತರ ಹಸಿವು, ವ್ಯಾಪಕ ಅಪೌಷ್ಟಿಕತೆ ಹಾಗೂ ಪದೇ ಪದೇ ಕ್ಷಾಮ, ಅತಿವೃಷ್ಟಿ ಹಾಗೂ ಸಾಂಕ್ರಮಿಕ ರೋಗಗಳ ಜಗತ್ತಿನಲ್ಲಿ ನಾವು ಬದುಕಿದ್ದೇವೆ. ಈ ಅನಿಷ್ಟಗಳಿಗೆ ಪರಿಹಾರ ಕಷ್ಟದ ಕೆಲಸ, ಈ ಹತಾಶ ಸ್ಥಿತಿ ಸನ್ನಿವೇಶಗಳಿಗೆ ಪರಿಹಾರ ಕಂಡುಕೊಳ್ಳಲು ನಮ್ಮಿಂದೇನೂ ಮಾಡಲು ಬರುವುದಿಲ್ಲ ಎಂದು ಕೂಡ ಸರ್ಕಾರ ಭಾವಿಸಿದಂತಿದೆ. ಇಷ್ಟು ಸಾಕು ಜನರನ್ನು ಹತಾಶ ಸ್ಥಿತಿಗೆ ದೂಡಲು, ಸರ್ಕಾರ ಕಾರ್ಪಣ್ಯಗಳ ನಿವಾರಣೆಗೆ ಗಂಬೀರ ಪ್ರಯತ್ನಗಳನ್ನು ಮಾಡದಿರಲು.
ಜನರ ಹಸಿವಿನ ಸಮಸ್ಯೆ ಸ್ವರೂಪ ಕುರಿತು ಸ್ಪಷ್ಟ ಚಿತ್ರ ಹೊಂದಿಲ್ಲದಿರುವುದು ಇಂತಹ ಸಮಸ್ಯೆಗೆ ಕಾರಣ. ಹಸಿವೆಯ ವಿಷಯ ಪೂರ್ವಗ್ರಹಿಕೆಗಳಿಂದ ಆವೃತವಾಗಿರುವುದರಿಂದ ಹಾಗೂ ಕೆಲವೊಮ್ಮೆ ಬಹಳ ಜಟಿಲ ಸಮಸ್ಯೆಯನ್ನು ಅತಿಯಾದ ಸಂಕುಚಿತ ಮಾನದಂಡಗಳಿಂದ ಅರಿತುಕೊಳ್ಳುವ ಪ್ರಯತ್ನಗಳಿಂದ ಸ್ಪಷ್ಟತೆ ಕೆಲವು ಬಾರಿ ಕಷ್ಟ. ಸಮಕಾಲೀನ ಜಗತ್ತಿನಲ್ಲಿ, ಹಸಿವೆಯ ವಿಭಿನ್ನ ಮುಖಗಳ ಸಾಕಷ್ಟು ವಿಶಾಲ ತಿಳುವಳಿಕೆ ಎಲ್ಲಕ್ಕಿಂತ ಬಹಮುಖ್ಯ.
ಆಹಾರ ಮೂಲಭೂತ ಮಾನವ ಹಕ್ಕು. ಭಾರತದಲ್ಲಿ ಹಾಗೂ ವಿಶ್ವಮಟ್ಟದಲ್ಲಿ ಮನುಕುಲದ ಈ ಮೂಲ ಅವಶ್ಯಕತೆ ಮಾನ್ಯವಾಗಿದೆ. “ತನ್ನ ಜನರ ಪೌಷ್ಟಿಕತೆ ಮಟ್ಟ ಹಾಗೂ ಜೀವನ ಮಟ್ಟ ಸುಧಾರಣೆ ಮತ್ತು ಸಾರ್ವಜನಿಕ ಆರೋಗ್ಯವನ್ನು ಉತ್ತಮಪಡಿಸುವುದು ರಾಜ್ಯಶಾಸನ ವ್ಯವಸ್ಥೆಯ ಜವಬ್ದಾರಿಯಾಗಿದೆʼ ಎಂದು ಸಂವಿಧಾನದ ಅನುಚ್ಛೇದ೪೭ರ ಅನುಸಾರ ರಾಜ್ಯ ನೀತಿಯ ನಿರ್ಧೇಶನಾ ಸೂತ್ರ ನಿರೂಪಿಸಿದೆ.
ಆಹಾರ ಧಾನ್ಯಗಳ ವಿತರಣೆಗೆ ಜಗತ್ತಿನಲ್ಲೇ ಅತ್ಯಂತ ವ್ಯಾಪಕ ಸ್ವರೂಪದ ಸರ್ಕಾರಿ ನಿರ್ವಹಣೆಯ ವ್ಯವಸ್ಥೆಯೊಂದನ್ನು ಭಾರತ ಅಭಿವೃದ್ಧಿಪಡಿಸಿಕೊಂಡಿದೆ. ಆದರೂ ಆಹಾರ ಲಭ್ಯತೆಯ ಪ್ರಮಾಣ ಮತ್ತು ಗುಣಮಟ್ಟದ ವಿಷಯದಲ್ಲಿ ಸಮಾಜದ ವಿವಿಧ ವರ್ಗಗಳ ನಡುವೆ ಈಗಲೂ ಅಸಮಾನತೆ ಇದೆ. ೧೯೯೬ರ ರೋಮ್ ನಲ್ಲಿ ನಡೆದ ಜಾಗತಿಕ ಆಹಾರ ಶೃಂಗಸಭೆ “ ಎಲ್ಲರೂ ಎಲ್ಲ ಕಾಲದಲ್ಲೂ ಆರೋಗ್ಯಪೂರ್ಣ ಹಾಗೂ ಲವಲವಿಕೆಯ ಬದುಕು ಸಾಗಿಸಲು ಸುರಕ್ಷಿತ, ಪೌಷ್ಟಿಕ ಹಾಗೂ ಸಾಕಷ್ಟು ಆಹಾರ ಪಡೆಯಲು ಸಾಧ್ಯವಿರುವ ಪರಿಸ್ಥಿತಿಯೇ ಆಹಾರ ಭದ್ರತೆಯ ಅರ್ಥ” ಆಹಾರ ಭದ್ರತೆಗೆ ಮೂರು ಆಯಾಮಗಳಿವೆ, ಅವೆಂದರೆ, ಲಭ್ಯತೆ, ಎಟುಕುವಂತಿರುವ ಪರಿಸ್ಥಿತಿ ಹಾಗೂ ವ್ಯಕ್ತಿ, ಮನೆ, ರಾಷ್ಟ್ರ ಈ ಎಲ್ಲ ಹಂತಗಳಲ್ಲಿ ಸ್ಥಿರತೆ.
ಭಾರತದಲ್ಲಿ ಶೇಕಡ ೪೦ ರಿಂದ ೬೦ ರಷ್ಟು ಎಳೆಯರು ಭಾರತದಲ್ಲಿ ಬಲಹೀನರು, ಅರ್ಧದಷ್ಟು ಭಾರತೀಯ ಮಕ್ಕಳು ನಿತ್ಯ ನಿರಂತರ ಸಣಕಲರು, ಅಪೌಷ್ಟಿಕತೆ ಪೀಡಿತರು. ಇಂತಹ ಸೂಕ್ತ ಬೆಳವಣಿಗೆಯಲ್ಲಿನ ಲೋಪ ಆರೋಗ್ಯಕ್ಕೆ,ಬೌದ್ಧಿಕ ಚಾತುರ್ಯಗಳ ಮೇಲೆ ಹಾಗೂ ರೋಗ ವ್ಯಾಪಿಸುವುದಕ್ಕೆ ಖಂಡಿತಾ ಪ್ರಭಾವ ಬೀರುತ್ತದೆ. ಎಳೆತನದಲ್ಲಿನ ಆರಂಭಾವಸ್ಥೆಯಲ್ಲಿ ಕಾಣಿಸಿಕೊಳ್ಳುವ ಅಪೌಷ್ಠಿಕತೆ ದೀರ್ಘಕಾಲೀನ ಆರೋಗ್ಯದ ಮೇಲೆ ಹಾಗೂ ಬುದ್ಧಿ ಚಾತುರ್ಯ ಕೌಶಲ್ಯಗಳ ಬೆಳವಣಿಗೆಯ ಮೇಲೂ ಕೂಡ ಪರಿಣಾಮ ಬೀರುತ್ತದೆ. ಸಸರಾಜಕಯುಕ್ತ ಅಪೌಷ್ಠಿಕತೆ ಜತೆಗೆ ವಿಶಿಷ್ಟ ನಿದಿಷ್ಟವಾದ ಕಬ್ಬಿಣ ಹಾಗೂ ಐಯೋಡಿನ್ ಅಂತಹ ಪೌಷ್ಟಿಕಾಂಶ ಕೊರತೆ ಸಮಸ್ಯೆ ಕೂಡ ಇದೆ, ಇವುಗಳ ಪರಿಣಾಮ ಒಳಗೊಳಗೇ ಅತಿ ಗಂಭೀರ.
ಶೇಕಡಾ ೯೦ರಷ್ಟು ಅಪೌಷ್ಠಿಕತೆಯನ್ನು ಅನುಭವಿಸುತ್ತಿರುವ ಕುಟುಂಬಗಳು ಅಕ್ಕಿ, ಗೋಧಿ, ಜೋಳ,ರಾಗಿ,ಬೇಳೆಕಾಳುಗಳು, ಸಕ್ಕರೆ, ದ್ವಿದಳ ಧಾನ್ಯಗಳು ಇವುಗಳಿಂದ ಸಾಮಾನ್ಯವಾಗಿ ಆಹಾರ ಕ್ಯಾಲೋರಿ ಪಡೆದುಕೊಳ್ಳುತ್ತಿರುವ ಭೋಜನ ಪದ್ಧತಿಯ ಸಮೀಕ್ಷೆಯಿಂದ ಸುವ್ಯಕ್ತ. ಆದರೆ ಅಭಿವೃದ್ಧಿ ಹೊಂದಿದ ದೇಶಗಳಲ್ಲಿ ಶೇಕಡಾ ೫೭ ರಷ್ಟು ಮಾತ್ರ ಕ್ಯಾಲೋರಿ ಪಡೆದುಕೊಂಡು, ಉಳಿದದನ್ನು ಪ್ರಾಣಿಜನ್ಯ ವಸ್ತುಗಳಿಂದ ಪಡೆಯಲಾಗುತ್ತದೆ. ಒಂದು ಸಮೀಕ್ಷೆ ಪ್ರಕಾರ ಶೇಕಡಾ ೪೭.೪ ರಷ್ಟು ಕುಟುಂಬಗಳಿಗೆ ಕಡಿಮೆ ಕ್ಯಾಲೋರಿ ಸಮಸ್ಯೆಯಾದರೆ, ಶೇಕಡಾ ೧೯.೮ ಪರಿವಾರಗಳು ಸಸಾರಜನಕ ಅಭಾವ ಪೀಡಿತ; ಶೇಕಡಾ ೧೯.೫ ಕುಟುಂಬಗಳು ಕ್ಯಾಲೋರಿ ಹಾಗೂ ಸಸಾರಜನಕವೆರಡರ ಅಭಾವದಿಂದಲೂ ಪೀಡಿತ.
ನಿದಿಷ್ಟ ಜನ ಸಮುದಾಯವನ್ನು ಗುರಿಯಾಗಿ ಇಟ್ಟುಕೊಂಡು ಜಾರಿಗೊಳಿಸಲಾಗಿರುವ ಈಗಿನ ಸುಧಾರಿತ ಸಾರ್ವಜನಿಕ ವಿತರಣೆ ವ್ಯವಸ್ಥೆ (ಟಿಪಿಡಿಎಸ್) ೧೯೯೭ರ ಜೂನ್ನಲ್ಲಿ ಜಾರಿಗೆ ಬಂತು. ಸಾರ್ವಜನಿಕ ವಿತರಣಾ ವ್ಯವಸ್ಥೆಯಲ್ಲಿ ಅದೆಷ್ಟೋ ಪಡಿತರ ಚೀಟಿ ಹೊಂದಿರುವವರು ಕಡಿಮೆ ದರದ ಆಹಾರ ಧಾನ್ಯ ಪಡೆಯುವುದೂ ಸಾಧ್ಯವಾಗದಿರುವುದಕ್ಕೆ ಬಡತನವೇ ಅಡ್ಡಿಯಾಗಿದೆ. ಆಹಾರ ವಂಚನೆಯಿಂದ ಹತಾಶ ಪರಿಣಾಮಗಳನ್ನು ಹಾಗೂ ವಿಶಿಷ್ಟ ಸ್ಥಿತಿಗಳಿಗೂ ಎಡೆಮಾಡಿಕೊಡಬಲ್ಲದು. ಆಹಾರ ಸಮಸ್ಯೆ ಎಂಬ ಏಕರೂಪದ ಸಮಸ್ಯೆ ಇಲ್ಲ. ಆಧುನಿಕ ಜಗತ್ತಿನಲ್ಲಿ ಜನರನ್ನು ಕಾಡಿಸುತ್ತಿರುವ ವಿಭಿನ್ನ ಬಗೆಯ ಕೊರತೆಗಳ ನಿವಾರಣೆ ಸಮರ್ಪಕ ವಿಶಾಲ ದೃಷ್ಟಿಕೋನದ ಅಭಾವದಿಂದಾಗಿ ಕಗ್ಗಂಟಾಗಬಹುದು. ಇಂದಿನ ಸಾಂಕ್ರಾಮಿಕ ರೋಗಗಳನ್ನು ತಡೆಯುವುದರಲ್ಲಿ, ಆರೋಗ್ಯ ಸೇವಾ ವ್ಯವಸ್ಥೆಗಳ ಮೇಲೆ ಭೀಕರ ಪ್ರಭಾವ ಬೀರುತ್ತವೆ. ಸೋಂಕು ನಿವಾರಣೆಗೆ ಕ್ರಮಗಳು ಹಾಗೂ ಆರೋಗ್ಯ ಸೇವೆ ಕುಸಿದು ಬೀಳುವುದರಿಂದಲೇ ಸಾವುಗಳು ಹೆಚ್ಚುತ್ತವೆ. ಹಸಿವೆಯೆಂದರೆ ಕೇವಲ ಅನ್ನ, ಆಹಾರ ಮಾತ್ರವಲ್ಲ; ಕೇವಲ ಆಹಾರ ಪೂರೈಕೆಗೆ ಗಮನ ಮಾತ್ರವಲ್ಲದೆ ಇನ್ನೂ ಅನೇಕ ಕ್ರಮಗಳು ಆಧುನಿಕ ಜಗತ್ತಿನಲ್ಲಿ ಹಸಿವೆಯ ಸಮಸ್ಯೆ ನೀಗಿಸಲು ಅಗತ್ಯ. ಆಹಾರ ಭರವಸೆ ತತ್ವದಲ್ಲಿನ ಈ ಬದಲಾವಣೆಯಿಂದಾಗಿ ಇನ್ನು ಮುಂದೆ ಬರೀ ಎರಡು ಕೇಜಿ ಅಕ್ಕಿ ಒದಗಿಸುವುದಕ್ಕಿಂತ ಮಿಗಿಲಾಗಿ ಪೌಷ್ಟಿಕತೆಗೆ ಹೆಚ್ಚು ಒತ್ತು ನೀಡಬೇಕಿದೆ. ಅತಿ ದುರ್ಬಲ ವರ್ಗದವರಿಗೆ ಪೌಷ್ಟಿಕಾಹಾರ ನೀಡುವುದು, ಪೌಷ್ಟಿಕಾಂಶಗಳ ಮತ್ತು ಪ್ರೋಟೀನ್ನ ಕೊರತೆಯನ್ನು ನೀಗಿಸುವ ವಿಶೇಷ ಆಹಾರ ಪದಾರ್ಥಗಳನ್ನು ಒದಗಿಸಬೇಕು.
ಈ ಕೋವಿಡ್-19ರ ಹಿನ್ನಲೆಯಲ್ಲಿ ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ಪೌಷ್ಠಿಕಾಂಶದ ದೃಷ್ಟಿಯಿಂದ ಈ ಮುಂದಿನವುಗಳ ಬಗ್ಗೆ ತೀರ್ವ ಗಮನಹರಿಸಬೇಕಿದೆ.
• ಪ್ರಸ್ತುತ ಪೂರೈಸುವ ಆಹಾರ ಧಾನ್ಯಗಳು ಸಾಕಾಗುವುದಿಲ್ಲ,೧೦ ಕೆಜಿ ಅಕ್ಕಿ ಜೊತೆಗೆ ಗೋಧಿ, ರಾಗಿ ಮತ್ತು ರಾಗಿ ಸೇರ್ಪಡೆ ಜೊತೆಗೆ ಆಹಾರ ಧಾನ್ಯಗಳ ಹೆಚ್ಚಳದ ಬಗ್ಗೆ ಗಂಭೀರವಾಗಿ ಯೋಚಿಸಬೇಕು
• ಅಕ್ಕಿ ಮಾತ್ರ ಗ್ರಾಹಕರಿಗೆ ತಮ್ಮ ದೈನಂದಿನ ಕನಿಷ್ಠ ಶಕ್ತಿಯನ್ನು ಒದಗಿಸುವುದಿಲ್ಲ, ಅಪೌಷ್ಟಿಕತೆಯನ್ನು ಎದುರಿಸಲು ಅಗತ್ಯ ವಾಗಿ ಸರಿಸುಮಾರು 2 ರಿಂದ 3 ಕೆಜಿ ದ್ವಿದಳ ಧಾನ್ಯಗಳನ್ನು ಸೇರಿಸುವುದರಿಂದ ಸಮತೋಲಿತ ಆಹಾರವನ್ನು ತಯಾರಿಸಲು ಅನುಕೂಲವಾಗುತ್ತದೆ.
• ಪ್ರತಿ ಮಾಹೆ ಅಡುಗೆ ಎಣ್ಣೆ ಮತ್ತು ಅಯೋಡಿನ್ ಉಪ್ಪು ಹಾಗೂ ತರಕಾರಿಗಳನ್ನು ನೀಡುವ ಅಗತ್ಯವಿದೆ.
• ಆಹಾರಕ್ಕೆ ಸಂಬಂಧಿಸಿದಂತೆ ಗರ್ಭಿಣಿ ಮಹಿಳೆ, ಬಾಣಂತಿ ಮತ್ತು ಮಕ್ಕಳಿಗಿರುವ ಹಕ್ಕು ಬಾಧ್ಯತೆಗಳ ಖಾತ್ರಿ ಮಾಡಿಕೊಳ್ಳಬೇಕಿದೆ.
• ಶಾಲಾ ಮಕ್ಕಳಿಗೆ ಬಿಸಿಊಟದ ಭದ್ರತೆಯ ಜವಾಬ್ದಾರಿ ಹೊತ್ತಿರುವ ಬಿಸಿಊಟದ ನೌಕರರಿಗೆ ಸಾಮಾಜಿಕ ಭದ್ರತೆ ಭಾಗವಾಗಿ ಕನಿಷ್ಠ ವೇತನ ಒದಗಿಸಿ ಸೇವಾಭದ್ರತೆ ನೀಡಬೇಕಿದೆ.
• ಸರಕಾರ ಸ್ವಚ್ಛ ಆಹಾರಧಾನ್ಯ ಮತ್ತು ಭೇಳೆಯನ್ನು ನಿಯತವಾಗಿ ಪೂರೈಸಲು ಅಗತ್ಯ ಕ್ರಮ ಕೈಗೊಳ್ಳಬೇಕಿದೆ.
• ಆಹಾರ ಧಾನ್ಯದ ಸಮರ್ಪಕ ಸರಬರಾಜಿನ ಮೇಲೆ ಅಧಿಕಾರಿಗಳು ನಿಗಾವಹಿಸುವುದು ಅವಶ್ಯಕ.
• ಆಹಾರದ ಭದ್ರತೆ, ಉತ್ತಮ ಪೌಷ್ಟಿಕಾಂಶಗಳು, ಒಳ್ಳೆಯ ಗುಣಮಟ್ಟದ ಆಹಾರ ಇವೆಲ್ಲಾ ಸಿಗಬೇಕು ಅಂದರೆ ಉದ್ಯೋಗದ ರಕ್ಷಣೆ ಇರಬೇಕು. ಇಂದು ಗ್ರಾಮೀಣ ಕೃಷಿ ಹಾಗೂ ಕೃಷಿಯೇತರ ಕ್ಷೇತ್ರಗಳಲ್ಲಿ ಕೆಲಸ ಮಾಡುತ್ತಿರುವ ಲಕ್ಷಾಂತರ ಜನರಿಗೆ ಕೆಲಸ ಇಲ್ಲ. ಉದ್ಯೋಗದ ರಕ್ಷಣೆ ಇಲ್ಲದೇ ಹೋದರೆ ಆಹಾರದ ಪೌಷ್ಟಿಕಾಂಶದ ಭದ್ರತೆಯೂ ಇರುವುದಿಲ್ಲ. ಜನ ಕೆಲಸ ಕಳೆದುಕೊಳ್ಳುವಂತಾಗಬಾರದು. ಕಳೆದುಕೊಂಡವರಿಗೆ ನಗದು ಸಹಾಯ ಸಿಗುವಂತೆ ನೋಡಿಕೊಳ್ಳಬೇಕು.
• ಸಣ್ಣ ಹಾಗೂ ಬಡ ರೈತರು ಮತ್ತು ಭೂರಹಿತ ಕುಟುಂಬಗಳು ಮತ್ತು ಅವರಲ್ಲಿನ ಮಹಿಳೆಯರಿಗೆ ಬದುಕಿನ ಸುರಕ್ಷತೆ ಒದಗಿಸುವುದಕ್ಕೆ ಇರುವ ಇನ್ನೊಂದು ಹಾದಿ ಅಂದರೆ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಕಾಯ್ದೆಯ (ಮನರೇಗಾ ಯೋಜನೆಯಲ್ಲಿ) 100 ದಿನ ಕೆಲಸದ ದಿನಗಳನ್ನು ಹಾಗೂ ಕೂಲಿಯ ದರವನ್ನು ಹೆಚ್ಚಿಸುವುದು.
ಆಹಾರ ಭರವಸೆ ತತ್ವದಲ್ಲಿನ ಈ ಬದಲಾವಣೆಯಿಂದಾಗಿ ಇನ್ನು ಮುಂದೆ ಬರೀ ಎರಡು ಕೆಜಿ ಅಕ್ಕಿ ಒದಗಿಸುವುದಕ್ಕಿಂತ ಮಿಗಿಲಾಗಿ ಪೌಷ್ಟಿಕತೆಗೆ ಹೆಚ್ಚು ಒತ್ತು ನೀಡಬೇಕಿದೆ. ಅತಿ ದುರ್ಬಲ ವರ್ಗದವರಿಗೆ ಪೌಷ್ಟಿಕಾಹಾರ ನೀಡುವುದು, ಪೌಷ್ಟಿಕಾಂಶಗಳ ಮತ್ತು ಪ್ರೋಟೀನ್ನ ಕೊರತೆಯನ್ನು ನೀಗಿಸುವ ವಿಶೇಷ ಆಹಾರ ಪದಾರ್ಥಗಳನ್ನು ಒದಗಿಸಬೇಕು. ಎಲ್ಲ ಗರ್ಬಿಣಿಯರಿಗೆ ಬಾಣಂತಿಯರಿಗೆ ಹಾಗೂ ಶಾಲಾ ಪೂರ್ವ ಮಕ್ಕಳಿಗೆ ಹೆಚ್ಚುವರಿ ಆಹಾರ ಒದಗಿಸುವುದು, ಶಾಲೆಗೆ ಹೋಗುವ ಮಕ್ಕಳಿಗೆ ಮಧ್ಯಾಹ್ನದ ಪೌಷ್ಠಿಕ ಊಟ ನೀಡುವುದು (ಮೊಟ್ಟೆ, ಹಣ್ಣು, ಕಾಳುಗಳು ಇತ್ಯಾದಿ) ಸುರಕ್ಷಿತ ತಾಯಿ ಮತ್ತು ಮಕ್ಕಳ ಅಪೌಷ್ಠಿಕತೆಯನ್ನು ತಡೆಗಟಗಲು ಚಿಕಿತ್ಸೆ ಹಾಗೂ ಪ್ರೋತ್ಸಾಹಕಗಳನ್ನು ಒದಗಿಸುವುದು ಇಂದಿನ ಅಗತ್ಯವಾಗಿದೆ.
“ಒಬ್ಬ ವ್ಯಕ್ತಿಗೆ ಊಟವಿಲ್ಲದಿದ್ದರೂ, ಅಂತಹ ವಿಶ್ವ ವಿನಾಶವಾಗಲಿ”