ಇತ್ತೀಚಿಗೆ ಬಿಗ್ ಬಾಸ್ ಕನ್ನಡದ(Bigg Boss Kannada Season 12) ವಾರದ ಸಂಚಿಕೆಯಂತೆ ವಾರಾಂತ್ಯದ ಸಂಚಿಕೆ(Weekend episode) ಬಗ್ಗೆಯೂ ಪ್ರೇಕ್ಷಕರು ತೀವ್ರ ಅಸಮಾಧಾನ ಹೊರಹಾಕುತ್ತಿದ್ದಾರೆ. ಕಳೆದ ಎಲ್ಲಾ ಸೀಸನ್‌ಗಿಂತಲೂ ಈ ಸೀಸನ್‌ನಲ್ಲಿ ಕಾರ್ಯಕ್ರಮದ ಹೋಸ್ಟ್ ಕಿಚ್ಚ ಸುದೀಪ್(Kiccha Sudeep) ಹಾಗೂ ವಾಹಿನಿ ಒಂದಿಷ್ಟು ಸ್ಪರ್ಧಿಗಳ ಪರ ಕಾಳಜಿ ವಹಿಸಿದಂತೆ ಹಾಗೂ ಕೆಲವೊಂದಿಷ್ಟು ಸ್ಪರ್ಧಿಗಳನ್ನು ಲಘುವಾಗಿ (Taking For Granted) ಎನ್ನುವಂತೆ ನಡೆಸಿಕೊಳ್ಳುತ್ತಿದ್ದಾರೆ ಎನ್ನುವ ಆರೋಪ ಜೋರಾಗಿಯೇ ಕೇಳಿ ಬರುತ್ತಿದೆ. ಇದಕ್ಕೆ ನಿನ್ನೆಯ ವಾರಾಂತ್ಯ ಸಂಚಿಕೆ ಕೂಡ ಕಾರಣವಾಗಿದೆ.

ನಿನ್ನೆಯ ವಾರದ ಕಥೆ ಕಿಚ್ಚನ ಜೊತೆ ಸಂಚಿಕೆಯ ಮುಕ್ಕಾಲು ಭಾಗವನ್ನು ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾಗೆ ಸುದೀಪ್ ಕ್ಲಾಸ್ ತೆಗೆದುಕೊಳ್ಳಲು ಬಳಸಿಕೊಂಡರೆ ಉಳಿದ ಕಾಲು ಭಾಗವಷ್ಟೇ ಈ ವಾರದ ಇತರ ಸ್ಪರ್ಧಿಗಳ ಸರಿ ತಪ್ಪು ಲೆಕ್ಕಚಾರದ ಬಗ್ಗೆ ಮಾತನಾಡಿದ್ದಾರೆ. ಧ್ರುವಂತ್ ಜೊತೆ ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾ ಈ ವಾರ ಕೆಲವೊಂದಿಷ್ಟು ತಪ್ಪುಗಳನ್ನು ಮಾಡಿದ್ದರು. ಅದನ್ನು ತಿಳಿಸುವ ಕೆಲಸ ಸುದೀಪ್ ಮಾಡಿದ್ದಾರೆ. ಆದರೆ ಅವರು ಮತ್ತೆ ಬಿಗ್ ಬಾಸ್ ಮನೆಯೊಳಗೆ ಬರುತ್ತಿದ್ದಂತೆ ಕಾವ್ಯ ಬಗ್ಗೆ ಸೀಕ್ರೆಟ್ ರೂಮ್‌ನಲ್ಲಿದ್ದ ರಕ್ಷಿತಾ ತೆಗೆದುಕೊಂಡ ನಿರ್ಧಾರದ ಬಗ್ಗೆ ನೇರವಾಗಿ ಪ್ರಶ್ನಿಸಿದ್ದಾರೆ.

ಈವರೆಗೂ ಯಾವ ವಿಚಾರವನ್ನು ನೇರವಾಗಿ ಹೇಳದೆ ಎಸ್ ಆರ್ ನೋ ಪ್ರಶ್ನೆ ಮೂಲಕ ಒಂದು ಸ್ಪರ್ಧಿಯ ಅಭಿಪ್ರಾಯವನ್ನು ಮತ್ತೊಂದು ಸ್ಪರ್ಧಿಗೆ ತಿಳಿಸುತ್ತಿದ್ದ ಕಿಚ್ಚ ಸುದೀಪ್, ನಿನ್ನೆಯ ಸಂಚಿಕೆಯಲ್ಲಿ ರಕ್ಷಿತಾ, ಕಾವ್ಯ ನಾಮಿನೇಷನ್ ವಿಚಾರದಲ್ಲಿ ತೆಗೆದುಕೊಂಡ ತಂಡ ನಿರ್ಧಾರದ ಬಗ್ಗೆ ಹಾಗೂ ಕಾವ್ಯ ಮನೆಯ ಕ್ಯಾಪ್ಟನ್ ಆದ ಬಗ್ಗೆ ರಕ್ಷಿತಾ ವ್ಯಕ್ತಪಡಿಸಿದ ಅಸಮಾಧಾನವನ್ನು ನೇರವಾಗಿ ಹೇಳಿದ್ದಾರೆ. ಇದರಿಂದ ರಕ್ಷಿತಾ ಯಾವುದೇ ಮುಚ್ಚುಮರೆ ಇಲ್ಲದೇ ತಮಗನಿಸಿದ ವಿಷಯವನ್ನು ನೇರವಾಗಿ ಹೇಳಿದ್ದಾರೆ. ಈ ವೇಳೆ ರಕ್ಷಿತಾ ಮಾತಿನಲ್ಲಿ ಕೆಲ ತಪ್ಪು ಹುಡುಕಿದ ಸುದೀಪ್ ಅದೇ ವಿಚಾರವನ್ನು ಎಳೆದಾಡಿದರು ಎನ್ನುವುದು ಕೆಲ ಪ್ರೇಕ್ಷಕರ ಅಭಿಪ್ರಾಯವಾಗಿದೆ.

ಇನ್ನೂ ಈ ವಾರ ಚರ್ಚಿಸಲೇಬೇಕಾದ ವಾರದ ಟಾಸ್ಕ್‌ಗಳ ಗೊಂದಲದ ಬಗ್ಗೆ ಸುದೀಪ್ ಸರಿಯಾದ ಸ್ಪಷ್ಟನೆ ನೀಡಲೇ ಇಲ್ಲ. ವಾರದ ಆರಂಭದಲ್ಲೇ ನಡೆದ ಟಾಸ್ಕ್‌ನಲ್ಲಿ ಉಸ್ತುವಾರಿ ಸಂಪೂರ್ಣ ವಿಫಲವಾಗಿತ್ತು. ಇನ್ನು ಸ್ಪರ್ಧಿಗಳು ತಮ್ಮ ಮನಬಂದಂತೆ ನಡೆದುಕೊಂಡರು. ಈ ವೇಳೆ ನಡೆದ ಯಡವಟ್ಟುಗಳ ಬಗ್ಗೆ ನಿನ್ನೆಯ ಸಂಚಿಕೆಯಲ್ಲಿ ಸ್ಪಷ್ಟನೆ ನೀಡಿಲ್ಲ. ಅಲ್ಲದೇ ವಾರದ ಕೊನೆಯಲ್ಲಿ ಕ್ಯಾಪ್ಟನ್ಸಿ ಟಾಸ್ಕ್‌ನಲ್ಲಿ ರಾಶಿಕಾ ಉಸ್ತುವಾರಿಯ ಬಗ್ಗೆ ಪ್ರೇಕ್ಷಕರಿಗೆ ಅಸಮಾಧಾನವಿದ್ದು, ಕಾವ್ಯ ಸೂರಜ್ ಗೆಲುವಿಗೆ ರಾಶಿಕಾ ಪರೋಕ್ಷವಾಗಿ ಬೆಂಬಲ ಕೊಟ್ಟರು ಎನ್ನುವುದು ಮೇಲ್ನೋಟಕ್ಕೆ ಕಂಡು ಬಂದ ಬಗ್ಗೆ ಸ್ಪಷ್ಟನೆ ಸಿಕ್ಕಿಲ್ಲ.

ಇನ್ನು ಟಾಸ್ಕ್ ಮಧ್ಯೆ ನಡೆದ ಕಾವ್ಯ-ಅಶ್ವಿನಿ ಗೌಡ ಜಗಳದ ಬಗ್ಗೆ ಪ್ರಸ್ತಾಪ ಮಾಡಿ ಅಶ್ವಿನಿ ಗೌಡ ಅವರ ಮಾತಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ಸುದೀಪ್, ಈ ಜಗಳದ ಆರಂಭ ಅಂದರೆ ಅಶ್ವಿನಿ ಗೌಡ ಅವರ ಬಗ್ಗೆ ಕಾವ್ಯ ಆಡಿದ ಮಾತು ಹಾಗೂ ಬಜಾರ್ ಬಂದರೂ ಅಶ್ವಿನಿ ಗೌಡ ತಮ್ಮ ಮೇಲೆ ಭಾರ ಬಿಟ್ಟಿದ್ದರು ಎನ್ನುವ ಆರೋಪಕ್ಕೆ ಸ್ಪಷ್ಟನೆ ಸಿಕ್ಕಿಲ್ಲ. ಹೀಗೆ ಪ್ರೇಕ್ಷಕರು ಅನೇಕ ವಿಚಾರಗಳನ್ನು ಗುರುತಿಸಿದ್ದು, ಈ ಮೂಲಕ ರಕ್ಷಿತಾ ಸೇರಿದಂತೆ ಕೆಲ ಸ್ಪರ್ಧಿಗಳಿಗೆ ಮಾತ್ರ ಕಿಚ್ಚನ ಕ್ಲಾಸ್ ಉಳಿದವರಿಗೆ ಯಾಕಿಲ್ಲ ಎನ್ನುವ ಪ್ರಶ್ನೆ ಪ್ರೇಕ್ಷಕರಲ್ಲಿದೆ.






