ಕೆಲವು ರಾಜಕೀಯ ನಾಯಕರು ತಮ್ಮ ತತ್ವನಿಷ್ಠೆಯಿಂದ ಗುರುತಿಸಲ್ಪಡುತ್ತಾರೆ, ಇನ್ನೂ ಕೆಲವರು ತಮ್ಮ ಜನಪ್ರಿಯ ಸಾಧನೆಗಳ ಮೂಲಕ ಹಾಗೂ ಆಡಳಿತದಿಂದ. ಮತ್ತೂ ಕೆಲವರು ತಮ್ಮ ಗೊಂದಲಗಳಿಂದಲೇ ಗುರುತಿಸಲ್ಪಡುತ್ತಾರೆ. ಬಿಹಾರದಲ್ಲಿ ಈ ಸಾಲಿನಲ್ಲಿ ನಿತೀಶ್ ಕುಮಾರ್ ಇದ್ದರೆ, ಕರ್ನಾಟಕದ ಮಟ್ಟಿಗೆ ಅದು ಹೆಚ್.ಡಿ. ಕುಮಾರಸ್ವಾಮಿ. ಒಮ್ಮೆ ಜಾತ್ಯಾತೀತ, ಇನ್ನೊಮ್ಮೆ ಕೋಮುವಾದಿ, ಎಲ್ಲವೂ ಅವಕಾಶ ಇದ್ದ ಹಾಗೆ. ಅಪ್ಪ ಕಟ್ಟಿದ ಆಲದಮರವನ್ನು ತಮ್ಮ ಎಡಬಿಡಂಗಿ ನಿಲುವಿನಿಂದ ಗೆದ್ದಲು ಹಿಡಿಸಿದ ಶ್ರೇಯಸ್ಸು ಕುಮಾರಸ್ವಾಮಿಗೆ ಸಲ್ಲಬೇಕು.

ಜೆಡಿಎಸ್ ಪಕ್ಷ ಇಂದು ಕರ್ನಾಟಕ ರಾಜಕೀಯದಲ್ಲಿ ಅವನತಿಯ ಅಂಚಿಗೆ ತಳ್ಳಲ್ಪಟ್ಟಿದ್ದರೆ, ಅದನ್ನು ಕೇವಲ ಕಾಲಘಟ್ಟದ ಬದಲಾವಣೆ, ಅಥವಾ ಕಾಂಗ್ರೆಸ್–ಬಿಜೆಪಿಯ ಪ್ರವರ್ಧಮಾನ ಎಂದು ನೋಡುವ ಹಾಗಿಲ್ಲ. ಈ ಕುಸಿತದ ಹಿಂದೆ ಒಂದು ದೀರ್ಘ, ಸ್ಪಷ್ಟ ಮತ್ತು ನಿರಾಕರಿಸಲಾಗದ ಸತ್ಯವಿದೆ. ಅದು ಹೆಚ್.ಡಿ ಕುಮಾರಸ್ವಾಮಿ ಎಂಬ ನಾಯಕನ ಎಡಬಿಡಂಗಿ ರಾಜಕೀಯ ತೀರ್ಮಾನ. ಹೌದು, ಒಂದು ಕಾಲದಲ್ಲಿ ಸಶಕ್ತ ಪ್ರಾದೇಶಿಕ ಪಕ್ಷವಾಗಿದ್ದ ಜೆಡಿಎಸ್ ಅನ್ನು ಜೋಕರ್‌ಗಳ ಪಾರ್ಟಿಯಂತೆ ಮಾಡಿದ ಎಲ್ಲಾ ಕ್ರೆಡಿಟ್ ಎರಡು ಬಾರಿ ರಾಜ್ಯದ ಮುಖ್ಯಮಂತ್ರಿ ಆಗಿದ್ದ ಕುಮಾರಸ್ವಾಮಿ ಅವರಿಗೆ ಸಲ್ಲಬೇಕು.

ಜಾತ್ಯಾತೀತ ಆಶಯದಿಂದ ರಾಜಕೀಯಕ್ಕೆ ಎಂಟ್ರಿ
ಹೆಚ್ಡಿಕೆ ರಾಜಕೀಯ ಪ್ರವೇಶ ಪಡೆದ ಸಂದರ್ಭದಲ್ಲೇ ಅವರು ತಮ್ಮ ತಂದೆ ಹೆಚ್.ಡಿ ದೇವೇಗೌಡರ ರಾಜಕೀಯ ಪರಂಪರೆಯ ವಾರಸುದಾರರಾಗಿದ್ದರು. ಜನತಾದಳ (ಸೆಕ್ಯುಲರ್) ಪಕ್ಷದ ಮೂಲ ತತ್ವ ಜಾತ್ಯಾತೀತತೆ, ಅಲ್ಪಸಂಖ್ಯಾತರ ರಕ್ಷಣೆ, ಮತ್ತು ಗ್ರಾಮೀಣ–ಕೃಷಿಕ ಆಧಾರಿತ ರಾಜಕಾರಣವನ್ನು ಮುಂದಿಟ್ಟಿತ್ತು. ಈ ಹಿನ್ನೆಲೆಯಲ್ಲೇ ಕುಮಾರಸ್ವಾಮಿ ಅವರು ಸೆಕ್ಯುಲರ್ ನಾಯಕ ಎಂಬ ಸಾರ್ವಜನಿಕ ಚಿತ್ರವನ್ನು ಕಟ್ಟಿಕೊಂಡರು. ಆದರೆ ರಾಜಕೀಯ ತತ್ವ ಮತ್ತು ಅಧಿಕಾರದ ಆಸೆ ಒಂದೇ ದಾರಿಯಲ್ಲಿ ಸಾಗುವುದಿಲ್ಲ ಎಂಬುದನ್ನು ಅವರ ಮುಂದಿನ ಹೆಜ್ಜೆಗಳು ಕ್ರಮೇಣ ಸ್ಪಷ್ಟಪಡಿಸಿದವು. ಬಿಜೆಪಿ ಜೊತೆ ಮೈತ್ರಿ ಮಾಡಿಕೊಂಡು ಮುಖ್ಯಮಂತ್ರಿ ಆಗುವ ನಿರ್ಧಾರವೇ ಮೊದಲ ದೊಡ್ಡ ತಿರುವು ಪಡೆಯಿತು. ಹಿಂದುತ್ವ ಮತ್ತು ಬಲಪಂಥೀಯ ರಾಜಕಾರಣವೇ ತನ್ನ ಅಸ್ತಿತ್ವದ ಕೇಂದ್ರವಾಗಿರುವ ಪಕ್ಷದ ಜೊತೆ, “ಜಾತ್ಯಾತೀತ” ಹೆಸರಿನ ಪಕ್ಷ ಕೈಜೋಡಿಸಿದಾಗ, ಅಲ್ಪಸಂಖ್ಯಾತ ಸಮುದಾಯಗಳಲ್ಲಿ ಅನುಮಾನ ಮತ್ತು ಅಸಮಾಧಾನ ಹುಟ್ಟುವುದು ಅನಿವಾರ್ಯವಾಗಿತ್ತು.

ಈ ಹಂತದಿಂದಲೇ ಹೆಚ್ಡಿಕೆ ಅವರ ರಾಜಕೀಯ ಭಾಷೆಯಲ್ಲಿ ಒಂದು ಹೊಸ ಅಂಶ ಕಾಣಿಸಿಕೊಳ್ಳುತ್ತದೆ. ಅದು ನೇರ ದ್ವೇಷವಲ್ಲ; ಆದರೆ dog whistle politics. ಮುಸ್ಲಿಂ ಸಮುದಾಯವನ್ನು ನೇರವಾಗಿ ಗುರಿಯಾಗಿಸದೆ, ಬಹುಸಂಖ್ಯಾತ ಭಾವನೆಗಳನ್ನು ತಟ್ಟುವ, ಅಲ್ಪಸಂಖ್ಯಾತರನ್ನು ಪರೋಕ್ಷವಾಗಿ ಅನುಮಾನಕ್ಕೆ ಒಳಪಡಿಸುವ ಹೇಳಿಕೆಗಳು.

ಈ ರಾಜಕೀಯ ಪ್ರಯತ್ನದ ಗುರಿ ಸ್ಪಷ್ಟವಾಗಿತ್ತು. BJPಯ ಮತಬ್ಯಾಂಕ್‌ನ ಒಂದು ಭಾಗವನ್ನು ಸೆಳೆಯುವುದು, ಮತ್ತು JD(S) ಅನ್ನು “ಅತಿಯಾದ ಸೆಕ್ಯುಲರ್” ಎಂದು ಕಾಣದಂತೆ ಮಾಡುವುದು. ಆದರೆ ಈ ತಂತ್ರ ಜೆಡಿಎಸ್‌ಗೆ ಲಾಭವಾಗಲಿಲ್ಲ. ಕಡಿಮೆ ಹಿಂದುತ್ವದ ಜೆಡಿಎಸ್‌ಗಾಗಿ ಕಠಿಣ ಹಿಂದುತ್ವದ ಬಿಜೆಪಿಯನ್ನು ಬಿಡಲು ಕೇಸರಿ ತತ್ವದ ಮತದಾರರು ತಯಾರಿರಲಿಲ್ಲ. ಅದೇ ವೇಳೆ, ಮುಸ್ಲಿಂ ಮತದಾರರು JD(S) ನಿಂದ ದೂರ ಸರಿದರು.

ಮದರಸಾ ಹೇಳಿಕೆ: ನಂಬಿಕೆಯ ಮೊದಲ ಬಿರುಕು
ಈ ರಾಜಕೀಯ ದಿಕ್ಕಿನ ಸ್ಪಷ್ಟ ಉದಾಹರಣೆ ಮದರಸಾಗಳ ಕುರಿತು ಕುಮಾರಸ್ವಾಮಿ ಮಾಡಿದ ವಿವಾದಾತ್ಮಕ ಹೇಳಿಕೆ. ಆ ಹೇಳಿಕೆಯು ಕೇವಲ ವೈಯಕ್ತಿಕ ಅಭಿಪ್ರಾಯವಾಗಿರಲಿಲ್ಲ. ಮದರಸಾದಲ್ಲಿ ಭಯೋತ್ಪಾದನೆ ಕಲಿಸಲಾಗುತ್ತದೆ ಎಂಬ ಹೆಚ್‌ಡಿಕೆ ಹೇಳಿಕೆ ಅದುವರೆಗೂ ಮಾಜಿ ಪ್ರಧಾನಿ ಹೆಚ್‌ಡಿ ದೇವೇಗೌಡರ ಬಗ್ಗೆ ಇದ್ದ ನಂಬಿಕೆಯನ್ನು ಅಲ್ಪಸಂಕ್ಯಾತ ಸಮುದಾಯದಲ್ಲಿ ಸಂಪೂರ್ಣವಾಗಿ ಘಾಸಿಗೊಳಿಸಿತ್ತು. ಯಾವಾಗ ಬಿಜೆಪಿ ಜೊತೆಗೆ ಮೈತ್ರಿ ಮಾಡಿ ಹೆಚ್‌ಡಿಕೆ ಅಧಿಕಾರಕ್ಕೇರಿದ್ದರೋ ಅಂದಿನಿಂದ ಕುಸಿಯುತ್ತಾ ಬಂದಿದ್ದ ನಂಬಿಕೆಯು ಈ ಹೇಳಿಕೆಯಿಂದ ಪಾತಾಳಕ್ಕಿಳಿದುಬಿಟ್ಟಿತ್ತು. ನಂತರ ಈ ಹೇಳಿಕೆಗೆ ಕ್ಷಮೆಯನ್ನು ಕೇಳಿದ್ದರೂ ಒಡೆದು ಹೋದ ಕನ್ನಡಿ ಮರುಜೋಡನೆ ಆಗಲಿಲ್ಲ. ಆದರೂ, ಬಿರುಕುಗಳು ಸ್ಪಷ್ಟವಾಗಿ ಗೋಚರಿಸುತ್ತಿದ್ದವು.

ಮತ್ತೆ ಜಾತ್ಯಾತೀತ ಬಸ್‌ಗೆ ʼಕೈʼ ತೋರಿಸಿದ ಪ್ರಾದೇಶಿಕ ನಾಯಕ!
ಬಿಜೆಪಿಯೊಂದಿಗೆ ಮೈತ್ರಿ ಮುರಿದುಕೊಂಡ ಬಳಿಕ, ಕುಮಾರಸ್ವಾಮಿ ಮತ್ತೆ “ಸೆಕ್ಯುಲರ್” ರಾಜಕಾರಣದ ದಾರಿಗೆ ಮರಳಿದಂತೆ ತೋರಿಸಿದರು. ಕಾಂಗ್ರೆಸ್ ಜೊತೆ ಕೈಜೋಡಿಸಿ ಮತ್ತೊಮ್ಮೆ ಮುಖ್ಯಮಂತ್ರಿ ಸ್ಥಾನಕ್ಕೇರಿದರು. ಈ ಹಂತದಲ್ಲಿ ಅವರು ಆರ್‌ಎಸ್‌ಎಸ್ ಹಾಗೂ ಬ್ರಾಹ್ಮಣ ಸಮುದಾಯದ ಕುರಿತು ಕಟುವಾದ ಟೀಕೆಗಳನ್ನು ಮಾಡಿದರು.

ಇದು ಒಂದು ಕಡೆ ಬಿಜೆಪಿ ವಿರುದ್ಧದ ಅಂತರವನ್ನು ತೋರಿಸುವ ಪ್ರಯತ್ನವಾಗಿದ್ದರೆ, ಮತ್ತೊಂದು ಕಡೆ ಅಲ್ಪಸಂಖ್ಯಾತ ಮತಬ್ಯಾಂಕ್ ಅನ್ನು ಮರಳಿ ಪಡೆಯುವ ಯತ್ನವಾಗಿತ್ತು. ಆದರೆ ಈ ನಿಲುವುಗಳು ತತ್ವಾಧಾರಿತವಾಗಿರದೆ, ಸಂಪೂರ್ಣವಾಗಿ ಅಧಿಕಾರ ಕೇಂದ್ರಿತವಾಗಿದ್ದವು ಎಂಬ ಭಾವನೆ ಬಲವಾಯಿತು. ಏಕೆಂದರೆ, ಕಾಂಗ್ರೆಸ್ ಜೊತೆಗಿನ ಮೈತ್ರಿಯೂ ಹೆಚ್ಚು ದಿನ ಉಳಿಯಲಿಲ್ಲ. ಸರ್ಕಾರ ಪತನಗೊಂಡಿತು. ಮತ್ತೆ ರಾಜಕೀಯ ಸಮೀಕರಣಗಳು ಬದಲಾಗಿದವು.

ಮುಸ್ಲಿಂ ಕವಿಯ ಕವನ ವಾಚನ
ಈ ದ್ವಂದ್ವವನ್ನು ಇನ್ನಷ್ಟು ಸ್ಪಷ್ಟವಾಗಿ ತೋರಿಸಿದ ಘಟನೆ ವಿಧಾನಸಭೆಯಲ್ಲಿ ನಡೆದ CAA–NRC ಚರ್ಚೆ. ಆ ಸಂದರ್ಭದಲ್ಲಿ ಒಬ್ಬ ಮುಸ್ಲಿಂ ಕವಿ ಕವಿತೆ ಓದಿದ್ದಕ್ಕಾಗಿ ಬಂಧಿಸಲ್ಪಟ್ಟ ಘಟನೆಯನ್ನು ಹೆಚ್‌ಡಿಕೆ ಸದನದಲ್ಲಿ ಪ್ರಸ್ತಾಪಿಸಿದರು. ಅಭಿವ್ಯಕ್ತಿ ಸ್ವಾತಂತ್ರ್ಯ ಮತ್ತು ಅಲ್ಪಸಂಖ್ಯಾತರ ಹಕ್ಕುಗಳ ಪ್ರಶ್ನೆಯನ್ನು ಮುಂದಿಟ್ಟು ಕವಿಯ ಬಂಧನಕ್ಕೆ ವಿರೋಧ ವ್ಯಕ್ತಪಟಡಿಸಿದರು. ಸಿಎಎ ಎನ್‌ಆರ್‌ಸಿ ವಿರೋಧಿ ಚಳುವಳಿ ತೀವ್ರವಾಗಿದ್ದ ಕಾಲದಲ್ಲಿ ಹೆಚ್‌ಡಿಕೆ ಅವರ ಈ ನಡೆ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆಯಿತು. ಒಂದು ಮಟ್ಟಿಗೆ ಅವರ ಮೇಲಿನ ವಿಶ್ವಾಸವೂ ವೃದ್ಧಿಯಾದಂತೆ ಕಂಡಿತು.

ಅದು ನಿಜಕ್ಕೂ ಅವರ ರಾಜಕೀಯ ಜೀವನದ ಅತ್ಯಂತ ಸ್ಪಷ್ಟವಾದ ‘ಸೆಕ್ಯುಲರ್ ಕ್ಷಣಗಳಲ್ಲಿ’ ಒಂದಾಗಿತ್ತು. ಆದರೆ ಸಮಸ್ಯೆ ಇಲ್ಲಿಯೇ ಆರಂಭವಾಗುತ್ತದೆ. ಈ ಒಂದು ನಿಲುವು, ಈ ಒಂದು ಭಾಷಣ, ಅವರ ಉಳಿದ ರಾಜಕೀಯ ಪಯಣದೊಂದಿಗೆ ಹೊಂದಿಕೆಯಾಗುವುದಿಲ್ಲ. ರಾಜಕೀಯದಲ್ಲಿ ಸಿದ್ದಾಂತವು, ಒಂದು ಕ್ಷಣ ಸಾಕಾಗುವುದಿಲ್ಲ; ತತ್ವ ಪಾಲನೆಯಲ್ಲಿ ನಿರಂತರತೆ ಬೇಕು. ಅದರಲ್ಲಿ ಹೆಚ್‌ಡಿಕೆ ಸ್ಪಷ್ಟವಾಗಿ ಗೊಂದಲದ ಗೂಡಾಗಿದ್ದರು.

ಮತ್ತೆ ಬಿಜೆಪಿ: ಗೊಂದಲದ ಸರಣಿ
ಇವೆಲ್ಲದ ಬಳಿಕ, ಕುಮಾರಸ್ವಾಮಿ ಮತ್ತೆ ಬಿಜೆಪಿಯ ಜೊತೆ ಕೈಜೋಡಿಸಿದರು. ಇದು ಅವರ ರಾಜಕೀಯ ದ್ವಂದ್ವದ ಶೃಂಗವಾಗಿತ್ತು. ಒಂದು ಕಡೆ ಆರ್‌ಎಸ್‌ಎಸ್ ವಿರುದ್ಧ ಕಠಿಣ ಭಾಷಣ, ಇನ್ನೊಂದು ಕಡೆ ಅದೇ ರಾಜಕೀಯ ಧಾರೆಗೆ ನೇರವಾಗಿ ಜೋಡಣೆ. ಇದು ಕೆಲವೇ ತಿಂಗಳುಗಳಲ್ಲಿ ನಡೆದ ಬೆಳವಣಿಗೆ ಆದುದರಿಂದ ಸಾಕಷ್ಟು ವಿಡಂಬನೆಗೊಳಗಾದವು. ಸಾಮಾಜಿಕ ಜಾಲತಾಣದಲ್ಲಿ ಜೆಡಿಎಸ್ ಮುಸ್ಲಿಂ ನಾಯಕರಿಗೆ ಒತ್ತಡಗಳು ಎದುರಾದವು.
ಬಿಜೆಪಿಯೊಂದಿಗಿನ ಮೈತ್ರಿ ಬಳಿಕ ಹಲವು ಪ್ರಾದೇಶಿಕ ಮುಖಂಡರು ಕುಮಾರಸ್ವಾಮಿ ನಿಲುವನ್ನು ವಿರೋಧಿಸಿ ಪಕ್ಷ ತೊರೆದರು. ಈ ದ್ವಂದ್ವಗಳ ಪರಿಣಾಮವಾಗಿ ಜೆಡಿಎಸ್ ತನ್ನ ಪ್ರಭಾವಿ ಕ್ಷೇತ್ರಗಳಲ್ಲಿ ಸೋಲು ಅನುಭವಿಸತೊಡಗಿತು. ನಿಖಿಲ್ ಕುಮಾರಸ್ವಾಮಿ ಕಾಂಗ್ರೆಸ್‌ನ ಇಕ್ಬಾಲ್ ಹುಸೇನ್ ವಿರುದ್ಧ ಸೋತ ಚುನಾವಣೆ, ಕೇವಲ ಒಂದು ಅಭ್ಯರ್ಥಿಯ ಸೋಲಾಗಿರಲಿಲ್ಲ; ಅದು ಜೆಡಿಎಸ್ ರಾಜಕೀಯ ವಿಶ್ವಾಸಾರ್ಹತೆಯ ಸೋಲಾಗಿತ್ತು. ಆದರೆ ಈ ಸೋಲಿನ ಆತ್ಮಾವಲೋಕನ ಮಾಡುವ ಬದಲು, ಪಕ್ಷದ ಒಂದು ವರ್ಗ ಪರೋಕ್ಷವಾಗಿ ಮುಸ್ಲಿಂ ಸಮುದಾಯದ ಮೇಲೆ ಆರೋಪ ಹೊರಿಸಲು ಮುಂದಾಯಿತು. ಇದು ಹೊಣೆಗಾರಿಕೆಯ ಕೊರತೆಯಷ್ಟೇ ಅಲ್ಲ; ಅದು ಅಪಾಯಕಾರಿ ತಿರುವು. ‘ಸೆಕ್ಯುಲರ್’ ಪರಂಪರೆಯಿದ್ದ ಪಕ್ಷಕ್ಕೆ, minority-blaming ರಾಜಕಾರಣ ಆತ್ಮಹತ್ಯೆಯ ದಾರಿಯಾಗಿತ್ತು. ಆದರೆ. ಆಕ್ಷಣಕ್ಕೆ ಹೆಚ್‌ಡಿಕೆ ಅದೇ ದಾರಿಯನ್ನು ಹಿಡಿದರು.

ಇಂದು ಕುಮಾರಸ್ವಾಮಿ ಮತ್ತು ಜೆಡಿಎಸ್ ಎದುರಿಸುತ್ತಿರುವ ಸಂಕಟ ಕೇವಲ ಚುನಾವಣಾ ಸೋಲುಗಳಲ್ಲ. ಅದು ರಾಜಕೀಯ ಗುರುತಿನ ಸಂಕಟ. ಜೆಡಿಎಸ್ ಸಂಪೂರ್ಣವಾಗಿ ಸೆಕ್ಯುಲರ್ ಪಕ್ಷವಾಗಿಯೂ ಉಳಿಯಲಿಲ್ಲ; ಜಾತೀವಾದಿ ಅಥವಾ ಬಲಪಂಥೀಯ ಪಕ್ಷವೆಂದು ಘೋಷಿಸಿಕೊಳ್ಳಲೂ ಆಗಲಿಲ್ಲ. ಪರಿಣಾಮವಾಗಿ, ಅದು “ಯಾವುದೂ ಅಲ್ಲ” ಎಂಬ ಅತಂತ್ರ ಸ್ಥಿತಿಗೆ ತಲುಪಿದೆ.
ಹೆಚ್.ಡಿ. ಕುಮಾರಸ್ವಾಮಿ ಅವರ ಕಥೆ ಒಂದು ಪಾಠವನ್ನು ಹೇಳುತ್ತದೆ: ತತ್ವವಿಲ್ಲದ ಅಧಿಕಾರದ ರಾಜಕೀಯ, ಕೊನೆಗೆ ಅಧಿಕಾರವನ್ನೂ ಕಸಿದುಕೊಳ್ಳುತ್ತದೆ. ವರ್ಚಸ್ಸು ನಂಬಿಕೆಯನ್ನೂ ಕಳೆದುಕೊಳ್ಳುತ್ತದೆ. ಕುಮಾರಸ್ವಾಮಿ ಅವರ ಎಡಬಿಡಂಗಿ ರಾಜಕೀಯ ತಿರುವುಗಳನ್ನು ಮತದಾರರು ಮರೆತರೂ, ಮನ್ನಿಸುವುದಿಲ್ಲ ಎಂಬುದನ್ನು ಅರ್ಥ ಮಾಡಿಕೊಳ್ಳಬೇಕು. ಮತ್ತು ಪಕ್ಷ ಉಳಿಯಬೇಕಾದರೆ, ಮೊದಲಿಗೆ ತನ್ನ ರಾಜಕೀಯ ಆತ್ಮವನ್ನು ಹುಡುಕಬೇಕು. ಮತ್ತು ಅದಕ್ಕಾಗಿ, ಹೆಚ್ಡಿಕೆ ಅವರ ಗೊಂದಲಪೂರ್ಣ ರಾಜಕಾರಣದೊಂದಿಗೆ ನಿಷ್ಕರುಣ ಲೆಕ್ಕಪತ್ರ ತೆಗೆದು, ಸ್ವ ವಿಮರ್ಷೆ ಮಾಡಿಕೊಳ್ಳಲೇಬೇಕು. ಇಲ್ಲದಿದ್ದರೆ, ಜೆಡಿಎಸ್ ಇತಿಹಾಸದಲ್ಲಿ “ಒಂದು ಕಾಲದಲ್ಲಿ ಇದ್ದ ಪಕ್ಷ” ಎಂಬ ಸಾಲಿಗೆ ಸೇರಿಕೊಳ್ಳುತ್ತದೆ. ಮತ್ತು ಅದಕ್ಕೆ ಹೆಚ್‌ಡಿಕೆ ಅವರ ಅಪ್ರಬುದ್ಧ ರಾಜಕೀಯ ನಡೆಯೇ ಪ್ರಮುಖ ಕಾರಣ ಎಂದು ಇತಿಹಾಸ ದಾಖಲಿಸುತ್ತದೆ.











