ಕೃಷ್ಣಮಣಿ
ಭಾರತದಲ್ಲಿ ಕೇಂದ್ರ ಚುನಾವಣಾ ಆಯೋಗ ಹಾಗೂ ರಾಜ್ಯ ಚುನಾವಣಾ ಆಯೋಗ ಎಂದು ವಿಂಗಡಿಸಲಾಗಿದೆ. ಲೋಕಸಭೆ ಹಾಗೂ ವಿಧಾನಸಭಾ ಚುನಾವಣೆಗಳನ್ನು ಕೇಂದ್ರ ಚುನಾವಣಾ ಆಯೋಗ ನಡೆಸುತ್ತದೆ. ರಾಜ್ಯದಲ್ಲಿ ಸ್ಥಳೀಯ ಸಂಸ್ಥೆ ಚುನಾವಣೆಗಳನ್ನು ರಾಜ್ಯ ಚುನಾವಣಾ ಆಯೋಗ ನಡೆಸುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಚುನಾವಣೆಗಳು ಯಾವುದೇ ಪ್ರೇರಿತ ಶಕ್ತಿಗಳ ಕಪಿಮುಷ್ಠಿಯಲ್ಲಿ ಸಿಲುಕದೆ ನಡೆಯಬೇಕಿದೆ. ಆದರೆ ಇದೀಗ ಲೋಕಸಭಾ ಚುನಾವಣೆ ಹೊಸ್ತಿಲಲ್ಲಿ ಕೇಂದ್ರ ಚುನಾವಣಾ ಆಯೋಗದಲ್ಲಿ ಒಬ್ಬರಾಗಿದ್ದ ಅರುಣ್ ಗೋಯಲ್ ರಾಜೀನಾಮೆ ಸಲ್ಲಿಸಿದ್ದಾರೆ. ಶನಿವಾರ ರಾತ್ರಿ ಏಕಾಏಕಿ ಅರುಣ್ ಗೋಯಲ್ ಕೇಂದ್ರ ಚುನಾವಣಾ ಆಯುಕ್ತ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ರಾಷ್ಟ್ರಪತಿಗಳು ರಾಜೀನಾಮೆಯನ್ನೂ ಅಂಗೀಕಾರ ಮಾಡಿದ್ದಾರೆ. ಈ ಘಟನೆ ಸಾಕಷ್ಟು ಜನರನ್ನು ದಿಗ್ಬ್ರಾಂತರನ್ನಾಗಿ ಮಾಡಿದೆ.
ಚುನಾವಣಾ ಆಯೋಗದ ಸದಸ್ಯರಾಗಿದ್ದ ಅರುಣ್ ಗೋಯಲ್ ದಿಢೀರ್ ರಾಜೀನಾಮೆಗೆ ಕಾರಣ ಏನು..? ಅನ್ನೋದು ಪ್ರತಿಪಕ್ಷ ಕಾಂಗ್ರೆಸ್ ಸೇರಿದಂತೆ ಇತರೆ ಪಕ್ಷಗಳ ಪ್ರಶ್ನೆ ಆಗಿದೆ. ನರೇಂದ್ರ ಮೋದಿ ಸರ್ಕಾರ ಸಂವಿಧಾನದ ಮೇಲೆ ದಾಳಿ ಮಾಡ್ತಿರೋದಕ್ಕೆ ಇದು ಸ್ಪಷ್ಟ ಉದಾಹರಣೆ ಎಂದು ಆರೋಪವನ್ನೂ ಮಾಡಿದ್ದಾರೆ. ಈ ಬಗ್ಗೆ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮಾತನಾಡಿ, ಕೋಲ್ಕತ್ತಾ ಹೈಕೋರ್ಟ್ ನ್ಯಾಯಮೂರ್ತಿಯೊಬ್ಬರು ಇತ್ತೀಚೆಗೆ ರಾಜೀನಾಮೆ ಕೊಟ್ಟು, ಬಿಜೆಪಿ ಸೇರಿಕೊಂಡಿದ್ದಾರೆ, ಟಿಎಂಸಿ ಪಕ್ಷಕ್ಕೆ ಬೆದರಿಕೆ ಹಾಕ್ತಿದ್ದಾರೆ. ಜಡ್ಜ್ ಸ್ಥಾನದಲ್ಲಿದ್ದವರೇ ಆ ಮಾನಸಿಕ ಸ್ಥಿತಿ ಹೊಂದಿದ್ದರು. ಇದೀಗ ಚುನಾವಣಾ ಆಯುಕ್ತರಾಗಿದ್ದ ಅರುಣ್ ಗೋಯಲ್ ರಾಜೀನಾಮೆ ಕೊಟ್ಟಿದ್ದಾರೆ. ಕಾರಣ ಗೊತ್ತಿಲ್ಲ ಕಾದು ನೋಡೋಣ ಎಂದಿದ್ದಾರೆ.
ಲೋಕಸಭೆ ಚುನಾವಣೆಗೆ ಮಾರ್ಚ್ 16ರಂದು ಚುನಾವಣಾ ದಿನಾಂಕ ಘೋಷಣೆ ಆಗಲಿದೆ ಎನ್ನಲಾಗ್ತಿದೆ. ಈ ಸಮಯದಲ್ಲಿ ರಾಜೀನಾಮೆ ನೀಡಿದ್ದಾರೆ. ಅರುಣ್ ಗೋಯಲ್ ರಾಜೀನಾಮೆ ಕೊಟ್ಟು ಮೋದಿ ನೇತೃತ್ವದ ಬಿಜೆಪಿ ಸೇರ್ಪಡೆಯಾಗಿ ಚುನಾವಣೆಗೆ ಸ್ಪರ್ಧೆ ಮಾಡ್ತಾರಾ..? ಅಥವಾ ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಹೇಳಿದಂತೆ ನಡೆದುಕೊಳ್ಳಲಾಗದೆ ನೊಂದು ರಾಜೀನಾಮೆ ನೀಡಿದ್ದಾರಾ..? ಅಥವಾ ಒತ್ತಡ ಹೇರಿ ರಾಜೀನಾಮೆ ಕೊಡಿಸಿದ್ದಾರಾ..? ಅನ್ನೋ ಬಗ್ಗೆ ಮುಂದಿನ ದಿನಗಳಲ್ಲಿ ಉತ್ತರ ಸಿಗಬೇಕಿದೆ. ಆದರೆ ಈಗ ನೇಮಕ ಆಗಲಿರುವ ಚುನಾವಣಾ ಆಯುಕ್ತರು ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿ ಹೊರಗಿಟ್ಟು ಆಯ್ಕೆ ಮಾಡಲಿರುವ ಸಮಿತಿಯಿಂದ ನೇಮಕ ಆಗಲಿದ್ದಾರೆ. ಪ್ರಧಾನಿ ಹಾಗು ಓರ್ವ ಸಚಿವರು ಮತ್ತು ಲೋಕಸಭಾ ವಿರೋಧ ಪಕ್ಷದ ನಾಯಕರು ಆಯ್ಕೆ ಸಮಿತಿಯಲ್ಲಿ ಇರಲಿದ್ದಾರೆ.
ಕೇಂದ್ರ ಸರ್ಕಾರ ಆಯೋಗದ ಮೇಲೆ ಸವಾರಿ ಶಂಕೆ..
ಕಾಂಗ್ರೆಸ್ ನಾಯಕ ಜೈರಾಂ ರಮೇಶ್ ಮಾತನಾಡಿ, ಮುಖ್ಯ ಚುನಾವಣಾ ಆಯುಕ್ತರ ಜೊತೆ ಮನಃಸ್ತಾಪಗಳು ಉಂಟಾಗಿದ್ಯಾ..? ಅನ್ನೋ ಅನುಮಾನ ವ್ಯಕ್ತಪಡಿಸುವ ಜೊತೆಗೆ ಸಂವಿಧಾನದ ಮೇಲೆ ಮೋದಿ ಸರ್ಕಾರ ಆಗ್ಗಿಂದಾಗೆ ಸವಾರಿ ಮಾಡ್ತಿದೆ. ಹೀಗಾಗಿ ಈ ಪ್ರಕರಣದಲ್ಲೂ ಮೋದಿ ಸರ್ಕಾರದ ಜೊತೆ ಏನಾದ್ರೂ ಮನಃಸ್ತಾಪ ಬಂದಿತ್ತಾ..? ಎಂದು ಅನುಮಾನ ವ್ಯಕ್ತಪಡಿಸಿದ್ದಾರೆ. ರಾಜೀನಾಮೆಗೆ ವ್ಯಕ್ತಿಗತ ಕಾರಣವೂ ಇರಬಹುದು ಆದ್ರೆ ಎಲ್ಲೂ ಹೇಳದೆ ಇರುವುದು ಅನುಮಾನಕ್ಕೆ ಕಾರಣ ಎಂದಿದ್ದಾರೆ. ಇದೆಲ್ಲಾ ಬೆಳವಣಿಗೆ ನೋಡಿದರೆ ಪ್ರಜಾಪ್ರಭುತ್ವದ ಮೇಲೆ ಆಕ್ರಮಣ ನಡೆಯುತ್ತಿದೆ ಎಂದೆನಿಸುತ್ತದೆ ಎಂದು ಬೇಸರ ಹೊರಹಾಕಿದ್ದಾರೆ. ಪಶ್ಚಿಮ ಬಂಗಾಳ ಸಿಎಂ ಮಮತಾ ಬ್ಯಾನರ್ಜಿ ಕೂಡ ನ್ಯಾಯಸಮ್ಮತ ಚುನಾವಣೆ ನಡೆಯುವುದು ಅನುಮಾನ ಎಂದಿದ್ದಾರೆ.
ಕೇಂದ್ರ ಸರ್ಕಾರ ತನ್ನಿಷ್ಟ ಬಂದವನ್ನು ಇದೀಗ ಚುನಾವಣಾ ಆಯೋಗದ ಸದಸ್ಯರನ್ನಾಗಿ ನೇಮಕ ಮಾಡುವ ಅವಕಾಶ ಹೊಂದಿದೆ. ಕಳೆದ ಬಾರಿ ಆಯ್ಕೆ ಸಮಿತಿಯಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳೂ ಇದ್ದರು. ಆದರೆ ಕಾನೂನು ತಿದ್ದುಪಡಿ ಮಾಡಿರುವ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳನ್ನು ಆಯ್ಕೆ ಸಮಿತಿಯಿಂದ ಹೊರಗಿಟ್ಟಿತ್ತು. ಇದೀಗ ಕೇಂದ್ರ ಸರ್ಕಾರದ್ದೇ ಪಾರುಪತ್ಯ. ತನಗೆ ಬೇಕಾದವರನ್ನು ನೇಮಕ ಮಾಡುವುದು. ತನಗೆ ಬೇಕಾದ ರೀತಿಯಲ್ಲಿ ಚುನಾವಣೆ ಮಾಡುವುದು. ತನಗೆ ಬೇಕಾದ ಫಲಿತಾಂಶ ತೆಗೆದುಕೊಳ್ಳುವುದು. ಇದೊಂದು ರೀತಿಯಲ್ಲಿ ಪ್ರಜಾಪ್ರಭುತ್ವಕ್ಕೆ ಮಾರಕ ಆಗಿರುವ ವಿಚಾರವೇ ಸರಿ ಎನ್ನುವುದರಲ್ಲಿ ಯಾವುದೇ ಸಂಶಯವಿಲ್ಲ. ಮುಂದಿನ ದಿನಗಳಲ್ಲಿ ಎಲ್ಲದಕ್ಕೂ ಉತ್ತರ ಸಿಗಬೇಕಿದೆ ಅಷ್ಟೆ.