ಬಹಳ ಕುತೂಹಲ ಕೆರಳಿಸಿ, ತಣ್ಣಗೆ ತೆರೆ ಬಿದ್ದ ರಾಜ್ಯ ರಾಜಕೀಯ ಪಲ್ಲಟಗಳಿಂದ ಗೃಹಮಂತ್ರಿಯಾಗಿದ್ದ ಬಸವರಾಜ್ ಬೊಮ್ಮಾಯಿಗೆ ಮುಖ್ಯಮಂತ್ರಿ ಅವಕಾಶ ಸಿಕ್ಕಿತು. ಈ ಮೂಲಕ ಬಿಎಸ್ ಯಡಿಯೂರಪ್ಪನ ಉತ್ತರಾಧಿಕಾರಿಯಾಗಿ ಬೊಮ್ಮಾಯಿ ಸಿಎಂ ಆದರು. ಆದರೆ ಇದರ ಬಳಿಕ ರಾಜ್ಯದಲ್ಲಿ ನಡೆದ ರಾಜಕೀಯ ಬೆಳವಣಿಗೆಗಳು ಹೀಗೆ ಕೆಲವೊಂದು ಪ್ರಶ್ನೆಗಳನ್ನು ಹುಟ್ಟುಹಾಕಿದೆ. ಬೊಮ್ಮಾಯಿ ಸಿಎಂ ಆದರೂ ಯಡಿಯೂರಪ್ಪನವರ ಕೈಯಲ್ಲೇ ಚುಕ್ಕಾಣಿ ಇದೆ ಎಂಬುವುದು ಇಲ್ಲಿಯ ಮಾತು. ಈ ಮಾತನ್ನು ಸುಳ್ಳು ಎಂದು ಹಾಗೆ ತಳ್ಳಿ ಹಾಕುವಂತಿಲ್ಲ. ರಾಜೀನಾಮೆ ಕೊಡುವಾಗ ಹೈಕಮಾಂಡ್ ಮುಂದೆ ಬೊಮ್ಮಾಯಿ ಹೆಸರು ಮುಂದಿಟ್ಟು ಸಿಎಂ ಖುರ್ಚಿ ಕೊಡಿ ಎಂದು ಬಿಎಸ್‌ವೈ ಕೇಳಿಕೊಂಡಿದ್ದೇ ಇದಕ್ಕೆ ಜ್ವಲಂತ ಸಾಕ್ಷಿ.

ಇದರಾಚೆಗೂ ಕೆಲವೊಂದು ಲೆಕ್ಕಾಚಾರಗಳು ಇದ್ದೇ ಇದೆ. ಅಚಾನಕ್ ಆಗಿ ನಡೆಯುವ ಘನಟೆಗಳ ಲಾಭ ಪಡೆಯುವಲ್ಲಿ ಬಿಜೆಪಿ ನಾಯಕರು ನಿಸ್ಸೀಮರು. ಅಂಥದ್ದೇ ಒಂದು ರಾಜಕೀಯ ಲೆಕ್ಕಾಚರವೇ ಆಗಿದೆ ಸಿಎಂ ಖುರ್ಚಿಯಲ್ಲಿ ಬಸವರಾಜ್ ಬೊಮ್ಮಾಯಿ ಬಂದು ಕೂರಲು ಪ್ರಮುಖ ಕಾರಣ. ಯಡಿಯೂರಪ್ಪ ತನ್ನ ಆಪ್ತರೊಬ್ಬರ ಕೈಯಲ್ಲಿ ಅಧಿಕಾರವಿರಲಿ ಎಂಬ ಕಾರಣಕ್ಕೆ ಬೊಮ್ಮಾಯಿ ಹೆಸರು ಮುಂದಿಟ್ಟರಾದರೂ, ಕೇಂದ್ರ ಬಿಜೆಪಿ ನಾಯಕರು ಸುಖಾಸುಮ್ಮನೆ ಬೊಮ್ಮಾಯಿಯನ್ನು ಮುಖ್ಯಮಂತ್ರಿ ಮಾಡಲು ಒಪ್ಪಲಿಲ್ಲವಂತೆ. ಹೈಕಮಾಂಡ್‌ನ ಈ ಒಪ್ಪಿಗೆಯೇ ಹಿಂದೆ ಬೇರೆಯೇ ರಾಜಕೀಯ ಲೆಕ್ಕಾಚಾರಗಳಿವೆ ಎನ್ನಲಾಗಿದೆ.
ಮುಂದಿನ ವಿಧಾನಸಭಾ ಚುನಾವಣೆ 2023ರಲ್ಲಿ. ಹೆಚ್ಚು ಕಮ್ಮಿ ಎರಡು ವರ್ಷ. ನೇರವಾಗಿ ಸಿಗದಿದ್ದರೂ ವಾಮಮಾರ್ಗದ ಮೂಲಕವಾದರೂ ಅಧಿಕಾರದಲ್ಲಿರುವುದು ಬಿಜೆಪಿಯ ಅಜೆಂಡ. ಅದು ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಬೀತಾಗಿದೆ. ಜೊತೆಗೆ ಮಧ್ಯಪ್ರದೇಶದಲ್ಲೂ ಭಾಜಪ ಅಧಿಕಾರಕ್ಕೆ ಬಂದ ಪರಿ ಇದಕ್ಕೆ ಸಾಕ್ಷಿ. ಮುಂದಿನ ಚುನಾವಣೆಯಲ್ಲಿ ಕರ್ನಾಟಕದಲ್ಲೂ ಅಂಥದ್ದೇ ಒಂದು ಸಾಧ್ಯತೆ ತಳ್ಳಿಹಾಕುವಂತಿಲ್ಲ. ಅದರ ಪೂರ್ವ ತಯಾರಿಯೇ ಬಸವರಾಜ್ ಬೊಮ್ಮಾಯಿ ಅವರ ಈ ಸಿಎಂ ಪದಗ್ರಹಣ.
ಕಳೆದ ವಿಧಾನಸಭಾ ಚುನಾವಣೆಯಲ್ಲಿ ಅತಂತ್ರ ಸ್ಥಿತಿ ನಿರ್ಮಾಣಗೊಂಡು ಕಾಂಗ್ರೆಸ್ ಹಾಗೂ ಜೆಡಿಎಸ್ ಮೈತ್ರಿ ಸರ್ಕಾರ ರಚಿಸಿತ್ತು. ಆದರೆ ದೀರ್ಘಕಾಲ ಉಳಿದಿಲ್ಲ ಎನ್ನುವುದು ಈಗ ಇತಿಹಾಸ. ಇದಾದ ಬಳಿಕ ಕಾಂಗ್ರೆಸ್ ಹಾಗೂ ಜೆಡಿಎಸ್ ನಾಯಕರು ಪರಸ್ಪರ ನಡೆಸಿದ ಕೆಸರೆರಚಾಟ ರಾಜ್ಯದ ಜನರಲ್ಲಿ ಅಸಹ್ಯ ಮೂಡಿಸಿದ್ದು ಮಾತ್ರ ಸುಳ್ಳಲ್ಲ. ಇಂಥಾ ಬೆಳವಣಿಗೆಗಳ ಲಾಭ ಪಡೆಯುವ ಬುದ್ದಿವಂತಿಕೆ ಬಿಜೆಪಿಗೆ ಕರಗತ. ಅದ್ಯಾವಾಗ ಮೈತ್ರಿ ಸರ್ಕಾರ ಪತನಗೊಂಡಿತೋ ಅಂದಿನಿಂದಲೂ ಬಿಜೆಪಿ ನಾಯಕರಿಗೆ ಜೆಡಿಎಸ್ ಮೇಲೆ ವಿಪರೀತ ಒಲವು ಮೂಡಿದೆ.
ಕಳೆದ ವರ್ಷ ಜೆಡಿಎಸ್ ರಾಜ್ಯಾಧ್ಯಕ್ಷ ಹಾಗೂ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಹುಟ್ಟುಹಬ್ಬದ ದಿನ ಖುದ್ದಾಗಿ ಮೋದಿಯೇ ಟ್ವೀಟ್ ಮಾಡಿ ಶುಭಾಶಯ ತಿಳಿಸಿದ್ದರು. ಅಲ್ಲದೆ ಮುಖ್ಯಮಂತ್ರಿಯಾಗಿದ್ದಾದ ಅವರ ಕಾರ್ಯವೈಖರಿಯ ಬಗ್ಗೆ ಪ್ರಧಾನಿ ಮೋದಿ ಹಾಡಿಹೊಗಳಿದ್ದರು. ನಂತರ ಮಾಜಿ ಪ್ರಧಾನಿ ದೇವೇಗೌಡರ ಸರದಿ. ಇದೇ ವರ್ಷ ಮೇ ತಿಂಗಳಿನಲ್ಲಿ ಮುಗಿದು ಹೋದ ದೇವೇಗೌಡರ ಹುಟ್ಟುಹಬ್ಬದ ದಿನದಂದು ಪ್ರಧಾನಿ ಮೋದಿಯವರು ಖುದ್ದಾಗಿ ಕರೆ ಮಾಡಿ ಶುಭಾಶಯಗಳು ತಿಳಿಸಿದ್ದರು ಎಂದು ದೇವೇಗೌಡರು ಟ್ವೀಟ್ ಮಾಡಿ, ಪ್ರಧಾನಿ ಮೋದಿಯ ಬಗ್ಗೆಯೂ ಹೊಗಳಿಕೆಯ ಮಾತುಗಳನ್ನು ಆಡಿದ್ದರು. ಹೀಗೆ ಜೆಡಿಎಸ್ ಅನ್ನು ತಮ್ಮ ಸಂಪರ್ಕದಲ್ಲಿಟ್ಟುಕೊಳ್ಳಲು ಭಾಜಪ ಕೇಂದ್ರ ನಾಯಕರು ಪ್ರಯತ್ನಿಸಿದ್ದಾರೆ. ಈಗಲೂ ಪ್ರಯತ್ನಿಸುತ್ತಲಿದ್ದಾರೆ. ಇಂಥಾ ಹಲವು Hijacking Attitudeಗಳು ಬಿಜೆಪಿ ಕಡೆಯಿಂದ ತೋರಿಕೆಯಾಗಿದೆ. ಈಗ ಮತ್ತೊಂದು ಹೆಜ್ಜೆ ಮುಂದೆ ಬಂದಿರುವ ಬಿಜೆಪಿ ಕೇಂದ್ರ ನಾಯಕರು ಬೊಮ್ಮಾಯಿಯನ್ನು ಮುಂದಿಟ್ಟುಕೊಂಡು ಜೆಡಿಎಸ್ ಗೆಳೆತನಕ್ಕೆ ಇಳಿದಿದ್ದಾರೆ ಎನ್ನುವುದು ರಾಜಕೀಯ ಪಡಸಾಲೆಯಲ್ಲಿ ಕೇಳಿಬರುವ ಮಾತು.
ಈಗ ರೋಗಿ ಇಚ್ಛಿಸಿದ್ದು, ವೈದ್ಯ ಕಲ್ಪಿಸಿದ್ದು ಹಾಲು ಎಂಬಂತೆ ಯಡಿಯೂರಪ್ಪನವರ ಅಭಿಪ್ರಾಯಕ್ಕೆ ಮಹೋನ್ನತ ಬೆಲೆ ಕೊಟ್ಟ ಹಾಗೆಯೂ ಇತ್ತ ಜೆಡಿಎಸ್ ಅನ್ನು ತಮ್ಮ ಬುಟ್ಟಿಗೆ ಹಾಕಿಕೊಳ್ಳುವುದು ಭಾಜಪದ ಲೆಕ್ಕಾಚಾರ ಎನ್ನಲಾಗಿದೆ. ಮೂಲತಃ ಜನತಾ ಪರಿವಾರದಿಂದಲೇ ಬಂದಿರುವ ಬಸವರಾಜ್ ಬೊಮ್ಮಾಯಿಗೆ ಜೆಡಿಎಸ್ ಹಾಗೂ ಬಿಜೆಪಿ ನಡುವೆ ಸಮನ್ವಯದ ಕೊಂಡಿಯಾಗಿ ಕೆಲಸ ಮಾಡುವುದು ಅಷ್ಟು ಕಷ್ಟದ ಕೆಲಸವಲ್ಲ. ಸಿಎಂ ಆದ ಬೆನ್ನಲ್ಲೇ ಸಿಎಂ ಬೊಮ್ಮಾಯಿ ಓಡೋಡಿ ಜೆಡಿಎಸ್ ವರಿಷ್ಠ ದೇವೇಗೌಡರ ಬಳಿ ಬಂದಿದ್ದರು. ಸುದೀರ್ಘ ಚರ್ಚೆ ನಡಿಸಿ ಅನಾಯಾಸ ಅಧಿಕಾರ ನಡೆಸಲು ಬೆಂಬಲವನ್ನೂ ಕೋರಿದ್ದರು. ಈ ವೇಳೆ ಬೊಮ್ಮಾಯಿ ಸಿಎಂ ಆಗಿದ್ದರೆ ನಮಗೆ ಯಾವ ತಕರಾರು ಇಲ್ಲ ಎಂಬರ್ಥದಲ್ಲಿ ದೇವೇಗೌಡರು ಆಶೀರ್ವಾದ ಕೊಟ್ಟು ಕಳುಹಿಸಿದ್ದರು.

ಇದೊಂದು ಆರಂಭವೆಂದೇ ಅಂದುಕೊಳ್ಳೋಣ. ರಾಜ್ಯದಲ್ಲಿ ಮುಂದಿನ ಚುನಾವಣೆಯೂ ಅತಂತ್ರ ಸ್ಥಿತಿ ತಲುಪಿದರೆ ಇಂಥಾ ಭೇಟಿ, ಸೌಹಾರ್ದ ಮಾತುಕತೆಗಳು ಬಿಜೆಪಿ ಪಾಳಯಕ್ಕೆ ದೊಡ್ಡಮಟ್ಟದ ಲಾಭ ತಂದುಕೊಡಲಿದೆ. ಅದನ್ನು ಮೂಲತಃ ಆರ್‌ಎಸ್‌ಎಸ್ ಪ್ರತಿನಿಧಿಯೋ, ಅಥವಾ ಇನ್ನಿತರ ಪಕ್ಷದಿಂದ ಬಂದ ವಲಸಿಗರೋ ಬಿಜೆಪಿಯಲ್ಲಿ ಮಾಡಲು ಸಾಧ್ಯವಿಲ್ಲ. ಅದಕ್ಕೆ ದೇವೇಗೌಡರ ಗರಡಿಯಲ್ಲೇ ಪಳಗಿದ ಬಸವರಾಜ್ ಬೊಮ್ಮಾಯಿಂತವರೇ ಆಗಬೇಕು ವಿನಃ ಮತ್ತೊಬ್ಬರಿಂದ ಅದು ಸಾಧ್ಯವಿಲ್ಲ. ಇದೇ ಕಾರಣಕ್ಕೆ ಭಾಜಪ ಕೇಂದ್ರ ನಾಯಕರು ಬಸವರಾಜ್ ಬೊಮ್ಮಾಯಿಗೆ ಸಿಎಂ ಪಟ್ಟ ಕಟ್ಟುವ ನಿರ್ಧಾರಕ್ಕೆ ಬಂದಿದ್ದು ಕೇವಲ ಯಡಿಯೂರಪ್ಪನವರ ಮಾತಿಗೆ ಬಗ್ಗುವುದು ಮಾತ್ರವಲ್ಲ ಎನ್ನುವುದು ಮಾತ್ರ ಸತ್ಯ. ಅದರಾಚೆಗೂ ಹೀಗೆ ಮೋದಿ, ಅಮಿತ್ ಶಾ, ಜೆಪಿ ನಡ್ಡಾ ಸೇರಿದಂತೆ ಆರ್‌ಎಸ್‌ಎಸ್ ಒಂದೇ ಕಲ್ಲಿಗೆ ಎರಡು ಹಕ್ಕಿಗಳಿಗೆ ಗುರಿ ಇಟ್ಟುಕೊಂಡಿವೆ ಎಂದು ರಾಜಕೀಯ ಪಡಸಾಲೆ ಮಾತನಾಡಿಕೊಳ್ಳುತ್ತಿದೆ.