ದೇಶದ ಪರಮೋಚ್ಚ ನಾಯಕ ಅಯಾತೊಲ್ಲಾ ಅಲಿ ಖಮೇನಿ ಹತ್ಯೆಯಿಂದ ಸಿಟ್ಟಾದ ಇರಾನ್, ಸೋಮವಾರ ನೆರೆಯ ಕೊಲ್ಲಿದೇಶಗಳ ಮೇಲೆ ಪ್ರತೀಕಾರ ದಾಳಿ ನಡೆಸುತ್ತಿದೆ. ಇರಾನ್ ಬೆಂಬಲಿತ ಹೆಜ್ಬೊಲ್ಲಾ ಬಂಡುಕೂರರು ಇಸ್ರೇಲ್ ಮೇಲೆ ದಾಳಿ ನಡೆಸಿದ್ದಾರೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್, ಲೆಬನಾನ್ ಮೇಲೆ ದಾಳಿ ನಡೆಸಿದೆ.

ಸೌದಿ ಅರೇಬಿಯಾ, ಕತಾರ್, ಯುಎಇ, ಬಹರೇನ್, ಕುವೈತ್, ಒಮನ್ ದೇಶಗಳ ಮೂಲಸೌಕರ್ಯ ವ್ಯವಸ್ಥೆ, ಸೇನಾ ನೆಲೆಗಳು, ಜನ ವಸತಿ ಪ್ರದೇಶ, ವಿಮಾನ ನಿಲ್ದಾಣ, ತೈಲ ಹಾಗೂ ಅನಿಲ ಸಂಸ್ಕರಣ ಘಟಕಗಳ ಮೇಲೆ ಏಕಕಾಲದಲ್ಲೇ ನೂರಾರು ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇರಾನ್‌ನಲ್ಲಿ 550 ಜನರು ಸೇರಿದಂತೆ ಒಟ್ಟಾರೆ ಸಾವಿನ ಸಂಖ್ಯೆ 600ರ ಗಾಡಿ ದಾಟಿದೆ.

ರಕ್ಷಣಾ ಕಾರ್ಯತಂತ್ರ ಭಾಗವಾಗಿ ಹರ್ಮುಜ್ ಜಲಸಂಧಿಯನ್ನು ಬಂದ್ ಮಾಡಿರುವ ಇರಾನ್, ತೈಲ ಸಾಗಣೆ ಟ್ಯಾಂಕರ್, ಹಡಗುಗಳ ಮೇಲೆಯೂ ದಾಳಿ ನಡೆಸುತ್ತಿದೆ. ಸೋಮವಾರ ಸೌದಿ ಅರೇಬಿಯಾದ ಅರಾಮ್ಕೊ ಕಚ್ಚಾತೈಲ ಸಂಸ್ಕರಣಾ ಘಟಕದ ಮೇಲೆ ಕ್ಷಿಪಣಿ ಇರಾನ್ ಕ್ಷಿಪಣಿ ದಾಳಿ ನಡೆಸಿದೆ.

ಸೌದಿ ಬಳಿಕ ಕತಾರ್ ಇಂಧನ ಉತ್ಪಾದನಾ ಕೇಂದ್ರಗಳ ಮೇಲೆ ಇರಾನ್ ದಾಳಿ ನಡೆಸಿದೆ. ಕತಾರ್‌ನ ರಾಸ್ ಲಫಾನ್ ಅನಿಲ ಉತ್ಪಾದನೆ, ಹಾಗೂ ಇಂಧನ ಉತ್ಪಾದನಾ ಘಟಕಗಳ ಮೇಲೆ ದಾಳಿ ನಡೆಸಲಾಗಿದೆ. ದಾಳಿ ಬಳಿಕ ಜಾಗತಿಕವಾಗಿ ಶೇ.20ರಷ್ಟು ಅನಿಲ (ಗ್ಯಾಸ್) ಉತ್ಪಾದಿಸುತ್ತಿದ್ದ ಘಟಕವನ್ನು ಕತಾರ್ ಮುಚ್ಚಿದೆ.
ಅಮೆರಿಕದ ಮಿತ್ರದೇಶ ಕುವೈತ್‌ನಲ್ಲಿಅಮೆರಿಕದ ಮೂರು ಎಫ್-15 ಯುದ್ಧ ವಿಮಾನಗಳನ್ನು ಸೋಮವಾರ ಹೊಡೆದುರುಳಿಸಲಾಗಿದೆ. ತಪ್ಪು ಅಂದಾಜಿನಿಂದ ಈ ವಿಮಾನಗಳನ್ನು ಹೊಡೆದುರುಳಿಸಿರುವುದಾಗಿ ಕುವೈತ್ ಸೇನೆ ಹೇಳಿದೆ. ಮೂರು ಯುದ್ಧವಿಮಾನಗಳ ಪೈಲಟ್‌ಗಳು ಸೇಫ್ ಎಕ್ಸಿಟ್ ಮೂಲಕ ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಇರಾನ್ ವಿರದ್ಧ ಅಮೆರಿಕದ ಕಾರ್ಯಾಚರಣೆ ಇನ್ನೂ ಆರಂಭಿಕ ಹಂತದಲ್ಲಿದ್ದು, ಇರಾನ್ ಮೇಲೆ ದಾಳಿಗೆ ಮತ್ತಷ್ಟು ಸೈನ್ಯವನ್ನು ಸಜ್ಜುಗೊಳಿಸಲಾಗುತ್ತಿದೆ ಎಂದು ಅಮೆರಿಕ ಅಧ್ಯಕ್ಷ ಟ್ರಂಪ್ ಹೇಳಿದ್ದಾರೆ. ಟ್ರಂಪ್ ನೀಡಿದ ಸಂಧಾನ ಮಾತುಕತೆಗೆ ಇರಾನ್ ನಿರಾಕರಿಸಿದ್ದರಿಂದ ಕೆರಳಿರುವ ಟ್ರಂಪ್, ”ದೊಡ್ಡ ಅಲೆ ಇನ್ನೂ ಬಾಕಿ ಇದೆ,” ಎಂದು ಹೇಳಿದ್ದಾರೆ. ಅಮೆರಿಕದ ಮಿತ್ರ ದೇಶಗಳ ವಾಯುನೆಲೆ ಮತ್ತು ಸಮುದ್ರ ಗಡಿಯತ್ತ ಅಮೆರಿಕದ ಪಡೆಗಳು ಹೊರಟಿವೆ ಎಂದು ಮೂಲಗಳು ತಿಳಿಸಿವೆ.






