ಚೆನ್ನೈ:ಏ.೦೪: ಆರಂಭಿಕ ಬ್ಯಾಟರ್‌ಗಳ ಅಬ್ಬರದ ಆಟದ ನೆರವಿನಿಂದ ಚೆನ್ನೈ ಸೂಪರ್ ಕಿಂಗ್ಸ್ ತಂಡ, ಐಪಿಎಲ್ ಟೂರ್ನಿಯ ಪಂದ್ಯದಲ್ಲಿ ಲಖನೌ ಸೂಪರ್ ಜೈಂಟ್ಸ್ ವಿರುದ್ಧ 12 ರನ್‌ಗಳ ಭರ್ಜರಿ ಜಯ ಪಡೆಯಿತು.
ಸೋಲಿನ ಮೂಲಕ ಈ ಬಾರಿಯ ಐಪಿಎಲ್ ಆರಂಭಿಸಿದ್ದ ಧೋನಿ ಪಡೆಯು, ಜಯದ ಹಳಿಗೆ ಮರಳಿದೆ. ಲಖನೌ ಸೂಪರ್ ಜೈಂಟ್ಸ್ ವಿರುದ್ಧ ಭರ್ಜರಿ ಪ್ರದರ್ಶನ ನೀಡಿದ ತಂಡವು 12 ರನ್‌ಗಳ ಅಂತರದಿಂದ ಗೆದ್ದು ಬೀಗಿದೆ.
ಟಾಸ್ ಸೋತು ಮೊದಲು ಬ್ಯಾಟಿಂಗ್‌ಗೆ ಇಳಿಸಲ್ಪಟ್ಟ ಚೆನ್ನೈ, ಆರಂಭದಿಂದಲೇ ಅಬ್ಬರದ ಬ್ಯಾಟಿಂಗ್ ನಡೆಸಿತು. ಅಂತಿಮವಾಗಿ ನಿಗದಿತ 20 ಓವರ್‌ಗಳಲ್ಲಿ 7 ವಿಕೆಟ್ ನಷ್ಟಕ್ಕೆ 217 ರನ್ ಗಳಿಸಿತು. 218 ರನ್‌ಗಳ ಬೃಹತ್ ಗುರಿ ಪಡೆದ ಲಖನೌ, ಅಂತಿಮವಾಗಿ 205 ರನ್ ಗಳಿಸಲಷ್ಟೇ ಶಕ್ತವಾಯ್ತು. ಆ ಮೂಲಕ ಧೋನಿ ಪಡೆಗೆ ಶರಣಾಯಿತು.


ಲಖನೌ ಆರಂಭ ಸ್ಫೋಟಕವಾಗಿತ್ತು. ಮೊದಲ ವಿಕೆಟ್‌ಗೆ ಕೈಲ್ ಮೇಯರ್ಸ್ ಹಾಗೂ ನಾಯಜ ಕೆಎಲ್ ರಾಹುಲ್ 5.3 ಓವರ್‌ಗಳಲ್ಲಿ 79 ರನ್‌ಗಳ ಜೊತೆಯಾಟ ನೀಡಿದರು. ಕಳೆದ ಪಂದ್ಯದಲ್ಲಿ ಅರ್ಧಶತಕ ಸಿಡಿಸಿದ್ದ ಮೇಯರ್ಸ್ೀ ಪಂದ್ಯದಲ್ಲೂ 53 ರನ್ ಗಳಿಸಿದರು. ಮೇಯರ್ಸ್ ವಿಕೆಟ್ ಪತನವಾದ ಬೆನ್ನಲ್ಲೇ ದೀಪಕ್ ಹೂಡಾ(2) ಕೂಡಾ ಔಟಾದರು. ವೇಗದ ರನ್ ಗಳಿಕೆಎಗೆ ಮುಂದಾದ ನಾಯಕ ರಾಹುಲ್ 20 ರನ್ ಗಳಿಸಿ ನಿರ್ಗಮಿಸಿದರು.
ಗುರಿ ದೊಡ್ಡದಿದ್ದ ಕಾರಣ ಮಧ್ಯಮ ಕ್ರಮಾಂಕದಲ್ಲಿ ನಿರೀಕ್ಷಿತ ಪ್ರದರ್ಶನ ಯಾರಿಂದಲೂ ಬರಲಿಲ್ಲ. ಅಬ್ಬರಿಸುವ ಸೂಚನೆ ನೀಡಿದ ಕಕೃನಾಲ್ ಪಾಂಡ್ಯ ಮತ್ತು ಸ್ಟೋಯ್ನಿಸ್‌ಗೆ ಮೊಯೀನ್ ಅಲಿ ಪೆವಿಲಿಯನ್ ದಾರಿ ತೋರಿಸಿದರು. 3 ಸಿಕ್ಸರ್ ಸಹಿತ ಗುರಿ ತಲುಪುವ ಪ್ರಯತ್ನಕ್ಕೆ ಕೈ ಹಾಕಿದ ಪೂರನ್ 32 ರನ್ ಗಳಿಸಿದ್ದಾಗ ಸ್ಟೋಕ್ಸ್‌ಗೆ ಕ್ಯಾಚ್ ನೀಡಿ ಔಟಾದರು. ಡೆತ್ ಓವರ್‌ಗಳಲ್ಲಿ ಯಾರಿಂದಲೂ ನಿರೀಕ್ಷಿತ ಪ್ರದರ್ಶನ ಬರಲಿಲ್ಲ. ಅಂತಿಮವಾಗಿ ಲಖನೌ 205 ರನ್‌ಗಳಿಗೆ ಇನ್ನಿಂಗ್ಸ್ ಮುಗಿಸಿತು. ಚೆನ್ನೈ ಟೂರ್ನಿಯಲ್ಲಿ ಮೊದಲ ಜಯ ಗಳಿಸಿತು. ಅಲ್ಲದೆ ಇದು ಲಖನೌ ವಿರುದ್ಧವೂ ಸಿಎಸ್‌ಕೆಗೆ ಮೊದಲ ಜಯವಾಗಿದೆ.
ಚೆನ್ನೈ ಸ್ಫೋಟಕ ಬ್ಯಾಟಿಂಗ್
ಚೆನ್ನೈ ಪರ ಮೊದಲ ಪಂದ್ಯದಲ್ಲೂ ಉತ್ತಮ ಪ್ರದರ್ಶನ ನೀಡಿದ್ದ ಆರಂಭಿಕ ಆಟಗಾರ ರುತುರಾಜ್ ಗಾಯಕ್ವಾಡ್, ಈ ಪಂದ್ಯದಲ್ಲೂ ಅಬ್ಬರಿಸಿದರು. ಕಿವೀಸ್ ಸ್ಟಾರ್ ಡಿವೋನ್ ಕಾನ್ವೆ ಜೊತೆಗೂಡಿದ ಗಾಯಕ್ವಾಡ್, 31 ಎಸೆತಗಳಿಂದ 57 ರನ್ ಕಲೆ ಹಾಕಿದರು. ಈ ವೇಳೆ 3 ಬೌಂಡರಿ ಹಾಗೂ 4 ಸಿಕ್ಸರ್ ಸಿಡಿಸಿದರು. ಇವರಿಗೆ ಉತ್ತಮ ಸಾಥ್ ನೀಡಿದ ಕಾನ್ವೇ 47 ರನ್ ಸಿಡಿಸಿದರು. ಇವರಿಬ್ಬರೂ ಮೊದಲ ವಿಕೆಟ್‌ಗೆ ಭರ್ಜರಿ 110 ರನ್‌ಗಳ ಜೊತೆಯಾಟವಾಡಿದರು. ಮೂರನೇ ಕ್ರಮಾಂಕದಲ್ಲಿ ಬಂದು ಅಬ್ಬರಿಸಿದ ಶಿವಂ ದುಬೆ ಮೂರು ಸಿಕ್ಸರ್ ಸಹಿತ 27 ರನ್ ಕಲೆ ಹಾಕಿದರು.
ಆಂಗ್ಲ ಆಲ್‌ರೌಂಡರ್ ಮೊಯೀನ್ ಅಲಿ 19 ರನ್ ಗಳಿಸಿ ನಿರ್ಗಮಿಸಿದರೆ, ಸಿಎಸ್‌ಕೆ ತಂಡದ ದುಬಾರಿ ಖರೀದಿಯಾದ ಬೆನ್ ಸ್ಟೋಕ್ಸ್ 8 ರನ್ ಗಳಿಸಿ ಮತ್ತೊಮ್ಮೆ ನಿರಾಸೆ ಮೂಡಿಸಿದರು. ಮತ್ತೊಮ್ಮೆ ಚೆಂಡನ್ನು ಸಿಕ್ಸರ್‌ಗಟ್ಟಲು ವಿಫಲರಾದ ಜಡೇಜಾ 3 ರನ್ ಗಳಿಸಿ ಔಟಾದರು. ಅಂಬಾಟಿ ರಾಯುಡು 27 ರನ್ ಗಳಿಸಿ ಅಜೇಯರಾಗಿ ಉಳಿದರು. ಕೊನೆಯ ಓವರ್ ವೇಳೆಗೆ ಬ್ಯಾಟಿಂಗ್‌ಗೆ ಬಂದ ಮಾಹಿ, ಎರಡು ಎಸೆತಗಳಲ್ಲಿ ಭರ್ಜರಿ ಸಿಕ್ಸರ್ ಸಿಡಿಸಿ ಮೂರನೇ ಎಸೆತಕ್ಕೆ ಔಟಾದರು.ಅಂತಿಮ ಓವರ್‌ಗಳಲ್ಲಿ ಆಯುಷ್ ಬದೋನಿ ಹಾಗೂ ಕೆ ಗೌತಮ್ ತಂಡವನ್ನು ಗೆಲ್ಲಿಸುವ ಪ್ರಯತ್ನ ಮಾಡಿದರಾದರೂ, ಪ್ರಯತ್ನ ಫಲ ಕೊಡಲಿಲ್ಲ.