ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಪರಿಣತ ಮಾನವ ಸಂಪನ್ಮೂಲವಿದೆ. ಆದ್ದರಿಂದ ಕಂಪನಿಗಳು ಇಲ್ಲಿ ಕೈಗಾರಿಕೆ ಆರಂಭಿಸಲು ಹೂಡಿಕೆ ಮಾಡಬೇಕು ಎಂದು ಆರೋಗ್ಯ ಮತ್ತು ವೈದ್ಯಕೀಯ ಶಿಕ್ಷಣ ಸಚಿವ ಡಾ.ಕೆ.ಸುಧಾಕರ್ ಆಹ್ವಾನ ನೀಡಿದರು.
ದೊಡ್ಡಬಳ್ಳಾಪುರದಲ್ಲಿ ಹಿಟಾಚಿ ಕಂಪನಿಯಿಂದ ಹೊಸ ಪವರ್ ಕ್ವಾಲಿಟಿ ಪ್ರೊಡಕ್ಟ್ ಘಟಕ ಸ್ಥಾಪಿಸುವ ಕಾರ್ಯಕ್ರಮದಲ್ಲಿ ಮಾತನಾಡಿದ ಸಚಿವರು, ಕಾರ್ಪೊರೇಟ್ ಕಂಪನಿಗಳು ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಹೆಚ್ಚು ಹೂಡಿಕೆ ಮಾಡಬೇಕು. ಇಲ್ಲಿ ಹೆಚ್ಚು ಶಿಕ್ಷಣ, ತರಬೇತಿ ಸಂಸ್ಥೆಗಳಿರುವುದರಿಂದ ಸುಲಭವಾಗಿ ಹೆಚ್ಚು ಪರಿಣತ ಸಿಬ್ಬಂದಿ ದೊರೆಯುತ್ತಾರೆ. ಸಿಟಿ ಸ್ಕ್ಯಾನ್ ನಿಂದ ಆರಂಭವಾಗಿ ಅನೇಕ ರೀತಿಯ ವೈದ್ಯೋಪಕರಣ, ತಂತ್ರಜ್ಞಾನವನ್ನು ರಾಜ್ಯದ ಆರೋಗ್ಯ ಕ್ಷೇತ್ರದಲ್ಲಿ ಬಳಸಲಾಗುತ್ತಿದೆ. ಅನೇಕ ಕಂಪನಿಗಳು ಇವುಗಳನ್ನು ಉತ್ಪಾದಿಸಿ ಆರೋಗ್ಯ ಕ್ಷೇತ್ರಕ್ಕೂ ಕೊಡುಗೆ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದರು.ಸ
ಈ ಹೊಸ ಘಟಕದಿಂದಾಗಿ ಅನೇಕರಿಗೆ ಉದ್ಯೋಗ ದೊರೆಯಲಿದೆ. ಕೆಲ ವರ್ಷಗಳ ಹಿಂದೆ ಕರ್ನಾಟಕ ಬೇರೆ ರಾಜ್ಯಗಳಿಂದ ವಿದ್ಯುತ್ ಪಡೆಯುವ ಪರಿಸ್ಥಿತಿ ಇತ್ತು. ಈಗ ರಾಜ್ಯದಿಂದ ಬೇರೆ ದೇಶ, ರಾಜ್ಯಗಳಿಗೆ ಹೆಚ್ಚುವರಿ ವಿದ್ಯುತ್ ಪೂರೈಕೆ ಮಾಡುವಷ್ಟು ಬೆಳವಣಿಗೆಯಾಗಿದೆ. ಸ್ವಚ್ಛ ಪರಿಸರ ಸ್ನೇಹಿ ಇಂಧನವನ್ನು ಉತ್ಪಾದಿಸುವುದು ಈಗ ನಮ್ಮ ಮುಂದಿರುವ ದೊಡ್ಡ ಸವಾಲು. ಕರ್ನಾಟಕ ಈ ವಿಚಾರದಲ್ಲಿ ಮುಂಚೂಣಿಯಲ್ಲಿದೆ. ಹಾಗೆಯೇ ಮುಂದೆ ಕರ್ನಾಟಕವು ಬೇರೆಲ್ಲಾ ರಾಜ್ಯಗಳಿಗೆ ಈ ಕ್ಷೇತ್ರಗಳಲ್ಲಿ ಮಾದರಿಯಾಗಲಿದೆ. ಕರ್ನಾಟಕವು ಏಷ್ಯಾದಲ್ಲೇ ಮೊದಲ ಬಾರಿಗೆ ಜಲವಿದ್ಯುತ್ ಉತ್ಪಾದಿಸಿದ ರಾಜ್ಯವಾಗಿತ್ತು. ಸರ್.ಎಂ.ವಿಶ್ವೇಶ್ವರಯ್ಯ ಅವರ ಶ್ರಮದ ಫಲವಾಗಿ ಈ ಮಹತ್ವದ ಕಾರ್ಯವಾಗಿತ್ತು ಎಂದರು.

ಈ ಹೊಸ ಘಟಕದಲ್ಲಿ ಆಟೊಮೇಶನ್ ತಂತ್ರಜ್ಞಾನ ಬಳಕೆಯಾಗುತ್ತಿದೆ. ಇದರಲ್ಲಿ ರೋಬೊ ತಂತ್ರಜ್ಞಾನವನ್ನೂ ಬಳಸಲಾಗುತ್ತಿದೆ. ಹಿಟಾಚಿ ಕಂಪನಿಯು ತಂತ್ರಜ್ಞಾನದ ಪಾಲುದಾರರಾಗಿ ರಾಜ್ಯ ಸರ್ಕಾರಕ್ಕೆ ಸಹಕಾರ ನೀಡಲಿ ಎಂದು ಮನವಿ ಮಾಡುತ್ತೇನೆ. ರಾಜ್ಯದಲ್ಲಿ ಹೆಚ್ಚುವರಿ ವಿದ್ಯುತ್ ಉತ್ಪಾದನೆಯಾಗುವುದರ ಜೊತೆಗೆ, ವಿದ್ಯುತ್ ನಷ್ಟವೂ ಉಂಟಾಗುತ್ತಿದೆ. ಈ ನಷ್ಟವನ್ನು ತಡೆಯಲು ಹೆಚ್ಚು ಖರ್ಚು ಮಾಡಲಾಗುತ್ತಿದೆ. ಇದಕ್ಕಾಗಿ ಹಿಟಾಚಿ ಕಂಪನಿಯು ತಂತ್ರಜ್ಞಾನದ ನೆರವು ನೀಡಬೇಕು ಎಂದು ಕೋರಿದರು.