ಒಂದಲ್ಲ ಎರಡಲ್ಲ 375 ಅಮೂಲ್ಯ ಔಷಧೀಯ ಸಸ್ಯಗಳ ಪರಿಚಯ ಒಂದೇ ಪುಸ್ತಕದಲ್ಲಿ ಸಿಗುತ್ತದೆ. ಹೌದು ಕಪ್ಪತಗುಡ್ಡ ಔಷಧೀಯ ಸಸ್ಯಗಳ ಬಗ್ಗೆ ಬಹಳಷ್ಟು ಜನರಿಗೆ ಗೊತ್ತು. ಆದರೆ ಅಲ್ಲಿ ಯಾವ ಯಾವ ಸಸ್ಯಗಳು ಇವೆ, ಅವುಗಳ ಜಾತಿ, ಪ್ರಭೇದ, ಕನ್ನಡದಲ್ಲಿ ಕರೆಯುವ ಪದ, ಅವುಗಳ ಉಪಯೋಗ ಇದರ ಬಗ್ಗೆ ಇಷ್ಟು ವಿಸ್ತಾರ ಮಾಹಿತಿ ಈ ಪುಸ್ತಕದಲ್ಲಿವೆ.
ಈ ಪುಸ್ತಕವನ್ನು ಬರೆದಿದ್ದು ಯಶಪಾಲ್ ಕ್ಷೀರಸಾಗರ ಹಾಗೂ ಸೋನಲ್ ಎಂಬ ದಂಪತಿಗಳು. ಗದಗ್ ಜಿಲ್ಲೆಯಲ್ಲಿ ಅರಣ್ಯ ಅಧಿಕಾರಿಗಳಾಗಿ ಕಾರ್ಯನಿರ್ವಹಿಸಿದ ಈ ದಂಪತಿಗಳು ಬರೀ ಕರ್ತವ್ಯ ನಿರ್ವಹಣೆ ಅಲ್ಲದೇ ಜನರಿಗೆ ಈ ಗುಡ್ಡದ ಬಗ್ಗೆ ಸಂಪೂರ್ಣ ಅರಿವು ನೀಡಬೇಕು ಎಂಬ ತಿರ್ಮಾನ ಕೈಗೊಂಡರು.
ಈ ಪುಸ್ತಕ ಬರೆಯಬೇಕು ಎಂದು ನಿರ್ಧರಿಸಿದ್ದು 2015 ರಲ್ಲಿ. 5 ವರ್ಷಗಳ ಸುದೀರ್ಘ ಅಧ್ಯಯನ, ಹತ್ತಾರು ನಾಟಿ ವೈದ್ಯರೊಂದಿಗೆ ಚರ್ಚೆ, ಗುಡ್ಡದ ಪ್ರತಿಯೊಂದು ಭಾಗದಲ್ಲಿ ಹುಡುಕಿ ಫೋಟೊ ಕ್ಲಿಕ್ಕಿಸಿ ಇಷ್ಟೆಲ್ಲ ಶ್ರಮವಹಿಸಿ ಕೊನೆಗೆ 428 ಪುಟಗಳ ದೊಡ್ಡ ಪುಸ್ತಕವನ್ನು ಹೊರತಂದಿದ್ದಾರೆ. ಅಂದ ಹಾಗೆ ಈ ಪುಸ್ತಕ ಜನವರಿ 24 ರಂದು ಕಪ್ಪತ ಉತ್ಸವ ಕಾರ್ಯಕ್ರಮದಲ್ಲಿ ಲೋಕಾರ್ಪಣೆಗೊಳ್ಳಲಿದೆ.
ಏನೇನಿದೆ ಈ ಪುಸ್ತಕದಲ್ಲಿ: ಈ ಪುಸ್ತಕದಲ್ಲಿ 375 ಔಷಧೀಯ ಸಸ್ಯಗಳ ಸಂಪೂರ್ಣ ಪರಿಚಯ ಫೊಟೊ ಸಹಿತ ಹಾಗೂ ಅವುಗಳ ವೈಜ್ಞಾನಿಕ ವಿವರಗಳು ಮತ್ತು ಅವು ಯಾವ ಯಾವ ರೊಗಕ್ಕೆ ಮದ್ದು ಎಂಬುದರ ವಿವರಣೆ ಇದೆ. ಇದು ಸಂಶೋಧಕರಿಗೆ, ಜೀವ ವೈವಿಧ್ಯ ವಿಜ್ಞಾನಿಗಳಿಗೆ, ವಿದ್ಯಾರ್ಥಿಗಳಿಗೆ ಹಾಗೂ ಕಪ್ಪತಗುಡ್ಡ ಪ್ರಿಯರಿಗೆ ಅತ್ತ್ಯುತ್ತಮ ಪುಸ್ತಕವಾಗಲಿದೆ. ಈ ಪುಸ್ತಕವನ್ನು ಉಚಿತವಾಗಿ ಕೊಡಲಾಗುತ್ತದೆ ಎಂದು ಲೇಖಕರು ತಿಳಿಸಿದ್ದಾರೆ.
ಲೇಖಕರ ಪ್ರಕಾರ ಐದಾರು ವರ್ಷಗಳ ಕಾಲ ಮಾಹಿತಿ ಹುಡುಕಿ ಈ ಪುಸ್ತಕ ಹೊರತಂದಿದ್ದು ದುಡ್ಡಿಗಾಗಿ ಅಲ್ಲ, ಜನರಿಗೆ ಅನುಕೂಲವಾಗಲೆಂದು. ಹಾಗಾಗಿ ಆಸಕ್ತರು ಯಶಪಾಲ್ ಕ್ಷೀರಸಾಗರ ಅವರನ್ನು ಸಂಪರ್ಕಿಸಿದರೆ ಈ ಪುಸ್ತಕ ಉಚಿತವಾಗಿ ಸಿಗುತ್ತದೆ. ಸಂಪರ್ಕಕ್ಕೆ ಅಂತ ಯಾವುದು ನಂಬರ್ ನೀಡಿಲ್ಲ. ಅದನ್ನು ಕಪ್ಪತ ಉತ್ಸವದಲ್ಲಿ ನೀಡಬಹುದು. ಅದರೆ ಫೇಸ್ ಬುಕ್ ಮೆಸೆಂಜರ್ ಮೂಲಕ ಅವರನ್ನು ಸಂಪರ್ಕಿಸಬಹುದು.
ಈ ಪುಸ್ತಕವನ್ನು ಎಲ್ಲ ಗ್ರಂಥಾಲಯಗಳಿಗೆ ನೀಡುತ್ತೇವೆ ಹಾಗೂ ಆಸಕ್ತರಿಗೂ ತಲುಪಿಸುವ ವ್ಯವಸ್ಥೆ ಮಾಡುತ್ತೇವೆ. ಈ ಪುಸ್ತಕವನ್ನು ಎಲ್ಲ ಆಸಕ್ತರೂ ಓದಿ ಸಾದ್ಯವಾದಷ್ಟು ಹೆಚ್ಚು ಜನರಿಗೂ ತಲುಪಿಸಿ ಓದಲು ಹೇಳಿ ಎಂಬುದು ಲೇಖಕರ ಅಂಬೋಣ.
ಈ ಪುಸ್ತಕದ ಪ್ರತಿಯನ್ನು ಪಡೆಯಲು ಓದುಗರು ಮುಂದಿರುವ ಈ ಮೈಲ್ ವಿಳಾಸವನ್ನು ಬಳಸಿ ಸಂಪರ್ಕಿಸಬಹುದು yashpalforis@gmail.com