ಸಾರ್ವಜನಿಕ ಸುರಕ್ಷತೆ, ತುರ್ತು ಪರಿಸ್ಥಿತಿ ಉಂಟಾಗದಂತೆ ತಡೆಯು ಕಾರಣವೊಡ್ಡಿ ಗೃಹ ಸಚಿವಾಲಯ ದೆಹಲಿ ಗಡಿ ಭಾಗಗಳಲ್ಲಿ ಇಂರ್ಟನೆಟ್ ಸೇವೆಯನ್ನು ಜ. 31ರವರೆಗೆ ಬಂದ್ ಮಾಡಿದೆ.
ಸರ್ಕಾರದ ಈ ನಡೆಯನ್ನು ಟೀಕಿಸಿರುವ ರೈತ ಹೋರಾಟಗಾರರು, ಹೋರಾಟವನ್ನು ಹಲವು ರೀತಿಯಲ್ಲಿ ಹತ್ತಿಕ್ಕುವ ಪ್ರಯತ್ನ ಮಾಡಿ ಸೋತಿರುವ ಸರ್ಕಾರ, ಈಗ ಇಂಟರ್ನೆಟ್ ಬಂದ್ ಮಾಡಲು ಎಂದು ಮುಂದಾಗಿದೆ ಎಂದಿದ್ದಾರೆ.
ಸಿಂಘು, ಟಿಕ್ರಿ, ಗಾಝಿಪುರ್ ಮತ್ತು ಸುತ್ತಮುತ್ತಲ ಪ್ರದೇಶಗಳಲ್ಲಿ ಜ. 29ರ ರಾತ್ರಿ 11 ಗಂಟೆಯಿಂದಲೇ ಇಂಟರ್ನೆಟ್ ಸೇವೆ ಸ್ಥಗಿತಗೊಳಿಸಲಾಗಿದೆ. ಇದು ಜ. 31ರ ರಾತ್ರಿ 11 ಗಂಟೆಯವರೆಗೆ ಜಾರಿಯಲ್ಲಿರಲಿದೆ ಎಂದು ಗೃಹ ಸಚಿವಾಲಯದ ಪ್ರಕಟಣೆ ತಿಳಿಸಿದೆ.
ಗಣರಾಜ್ಯೋತ್ಸವದ ವಿದ್ಯಮಾನಗಳ ಬಳಿಕ, ಗಾಝಿಪುರ್, ಸಿಂಘು ಗಡಿಯಲ್ಲಿ ನಡೆದ ದಾಳಿಗಳು, ಹಾಗೂ ಅದಕ್ಕೆ ಪ್ರತಿಕ್ರಿಯೆಯಾಗಿ ಹರ್ಯಾಣ ಉತ್ತರ ಪ್ರದೇಶಗಳಿಂದ ಸಾಗರೋಪಾದಿಯಲ್ಲಿ ಬಂದ ಜನ ಸರ್ಕಾರಕ್ಕೆ ಆತಂಕ ಉಂಟು ಮಾಡಿರಬಹುದು. ಹತಾಶಗೊಂಡಿರುವ ಸರ್ಕಾರ ಇಂತಹ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದೆ ಎಂದು ರೈತರು ಕುಟುಕಿದ್ದಾರೆ.
ಹರ್ಯಾಣ ಕೂಡ ಜ.30ರಂದು ಇಡೀ ದಿನ 17 ರಾಜ್ಯಗಳಲ್ಲಿ ಇಂಟರ್ನೆಟ್ ಸೇವೆಯನ್ನು ಸ್ಥಗಿತಗೊಳಿಸಿದೆ. ಈ ಮೂಲಕ ರೈತರ ಹೋರಾಟವನ್ನು ನಿಯಂತ್ರಿಸಬಹುದು ಎಂಬ ಹುನ್ನಾರ ಆಳುವ ಸರ್ಕಾರದ್ದು, ಇದು ಭ್ರಮೆ ಎಂದು ಗಡಿಗಳಲ್ಲಿ ನೆರೆದಿರುವ ವಿವಿಧ ರೈತ ಸಂಘಟನೆಗಳು ಮುಖಂಡರು ಪ್ರತಿಕ್ರಿಯಿಸಿದ್ದಾರೆ.
ಈ ವರದಿ ‘ಮಾಸ್ ಮೀಡಿಯಾ ಫೌಂಡೇಷನ್’ ನಿಯೋಜಿಸಿರುವ ವಿಶೇಷ ದೆಹಲಿ ತಂಡದಿಂದ ಪಡೆದ ಮಾಹಿತಿ ಆಧರಿಸಿ, ಸಿದ್ಧಪಡಿಸಿದೆ.