ದಲಿತ ವಿರೋಧಿ ಹೇಳಿಕೆ ನೀಡಿದ ಸಂಬಂಧ ಚಂದನವನದ ನಟ ಉಪೇಂದ್ರ ಅವರ ವಿರುದ್ಧದ ತನಿಖೆಗೆ ಕರ್ನಾಟಕ ಹೈಕೋರ್ಟ್ ಸೋಮವಾರ (ಆಗಸ್ಟ್ 14) ಮಧ್ಯಂತರ ತಡೆ ನೀಡಿದೆ.
ನಟ ಉಪೇಂದ್ರರ ದಲಿತ ಹೇಳಿಕೆ ಖಂಡಿಸಿ ಅನೇಕ ಪ್ರತಿಭಟನೆಗಳು ನಡೆದಿವೆ. ನಟನ ಬಂಧನಕ್ಕೆ ಅನೇಕ ಸಂಘಟನೆಗಳ ಒತ್ತಾಯ ಕೇಳಿ ಬರುತ್ತಿದೆ. ಫೇಸ್‌ಬುಕ್ ನೇರಪ್ರಸಾರ ಕಾರ್ಯಕ್ರಮವೊಂದರಲ್ಲಿ ದಲಿತ ವಿರೋಧಿ ಹೇಳಿಕೆ ಆರೋಪದಲ್ಲಿ ನಟನ ವಿರುದ್ಧ ಎರಡು ಪ್ರಕರಣ ದಾಖಲಾಗಿವೆ.
ಪ್ರಕರಣ ಸಂಬಂಧ ಉಪೇಂದ್ರ ಅವರ ವಿರುದ್ಧ ತನಿಖೆ ಕೈಗೊಳ್ಳಲು ಸೋಮವಾರ ಕರ್ನಾಟಕ ಪೊಲೀಸರು ನಟನ ನಿವಾಸಕ್ಕೆ ತೆರಳಿ ನೋಟಿಸ್ ನೀಡಿದ್ದಾರೆ.
ರಿಯಲ್ ಸ್ಟಾರ್ ತಮ್ಮ ಪಕ್ಷ ಉತ್ತಮ ಪ್ರಜಾಕೀಯ ಕುರಿತು ಫೇಸ್‌ಬುಕ್ ನೇರ ಪ್ರಸಾರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ, “ಊರು ಎಂದ ಮೇಲೆ ಅಲ್ಲಿ ಹೊಲಗೇರಿ ಇರುತ್ತದೆ” ಎಂದು ಹೇಳಿದ್ದರು. ಇದು ವಿವಾದಕ್ಕೆ ಕಾರಣವಾಗಿತ್ತು.
ನಟನ ಹೇಳಿಕೆ ಖಂಡಿಸಿ ರಾಮನಗರ ಸೇರಿದಂತೆ ರಾಜ್ಯದ ಬಹುತೇಕ ಕಡೆ ದಲಿತ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ. ನಟನ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸುತ್ತಿದ್ದು ರಿಯಲ್ ಸ್ಟಾರ್ ವಿರುದ್ಧ ಘೋಷಣೆ ಕೂಗುತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿವೆ.
ಈ ಸುದ್ದಿ ಓದಿದ್ದೀರಾ? ಕ್ಷಮೆಯನ್ನು ಸ್ವೀಕರಿಸುವ ದೊಡ್ಡತನವೂ ಇಲ್ಲವೇ ? ; ನಟ ಉಪೇಂದ್ರ
ಪ್ರಕರಣ ತೀವ್ರ ಸ್ವರೂಪ ಪಡೆಯುತ್ತಿದ್ದಂತೆ ರಿಯಲ್ ಸ್ಟಾರ್ ತಮ್ಮ ಅಧಿಕೃತ ಫೇಸ್‌ಬುಕ್ ಖಾತೆಯಲ್ಲಿ ಕ್ಷಮಾಪಣೆ ಕೇಳಿದ್ದಾರೆ.
ಉಪೇಂದ್ರ ಅವರ ಹೇಳಿಕೆಯನ್ನು ಸಮಾಜ ಕಲ್ಯಾಣ ಸಚಿವ ಎಚ್.ಸಿ.ಮಹದೇವಪ್ಪ ಖಂಡಿಸಿದ್ದಾರೆ.