
ಪ್ರಧಾನಿ ಇಂದಿರಾ ಗಾಂಧಿ 1975ರಲ್ಲಿ ಪ್ರಜಾಪ್ರಭುತ್ವವನ್ನು ರದ್ದು ಮಾಡಿ ದೇಶದ ಮೇಲೆ ತುರ್ತುಪರಿಸ್ಥಿತಿ ಹೇರಿದಾಗ ಅಮೆರಿಕದಲ್ಲಿದ್ದ ಕೆಲವು ಭಾರತೀಯರು, ಬಹುತೇಕರು ಯುವಕರು, ಅಲ್ಲಿ Indians for Democracy ಸಂಘಟನೆಯ ಹೆಸರಿನಲ್ಲಿ ಇಂದಿರಾ ಗಾಂಧಿಯವರ ಪ್ರಜಾಪ್ರಭುತ್ವವಿರೋಧಿ ಅತಿರೇಕಗಳ ವಿರುದ್ಧ ಅಲ್ಲಿಂದಲೇ ಧ್ವನಿಯೆತ್ತುತ್ತಾರೆ. ನೂರಾರು ಕಿಲೋಮೀಟರ್ ಪಾದಯಾತ್ರೆ ಮಾಡುತ್ತಾರೆ. ಭಾರತೀಯ ರಾಯಭಾರ ಕಚೇರಿ ಎದುರು ಧರಣಿ ಕೂರುತ್ತಾರೆ. ಅಲ್ಲಿಯ ಮಾಧ್ಯಮಗಳ ಮೂಲಕ ತುರ್ತುಪರಿಸ್ಥಿತಿ ವಿರುದ್ಧ ಜನಾಭಿಪ್ರಾಯ ರೂಪಿಸಲು ಯತ್ನಿಸುತ್ತಾರೆ. ಆ ಪ್ರತಿರೋಧದಲ್ಲಿ ಒಬ್ಬ ಪ್ರಮುಖರೆಂದರೆ ನಮ್ಮವರೇ ಆದ ಎಸ್.ಆರ್. ಹಿರೇಮಠರು. ಆಗ ವಿದೇಶದಲ್ಲಿ ಇವರ ಚಟುವಟಿಕೆಗಳನ್ನು ದೇಶದ್ರೋಹ ಎಂದು ಭಾವಿಸಿದ ಇಂದಿರಾ ಗಾಂಧಿ ಸರ್ಕಾರ, ಹಿರೇಮಠರೂ ಸೇರಿದಂತೆ ಅವರ ನಾಲ್ವರು ಸಂಗಡಿಗರ ಪಾಸ್‌ಪೋರ್ಟ್‌ಗಳನ್ನು ಮುಟ್ಟುಗೋಲು ಹಾಕಿಕೊಳ್ಳುತ್ತದೆ. ಮತ್ತು ಅಲ್ಲಿ ಸಂಶೋಧನಾ ವಿದ್ಯಾರ್ಥಿಯಾಗಿ PhD ವ್ಯಾಸಂಗ ಮಾಡುತ್ತಿದ್ದ ಆನಂದ್ ಕುಮಾರ್ ಎನ್ನುವ ಉತ್ತರ ಪ್ರದೇಶದ ಯುವಕನ ವಿದ್ಯಾರ್ಥಿವೇತನವನ್ನು ತಡೆಹಿಡಿಯುತ್ತದೆ.
ಆದರೆ ಅಲ್ಲಿ ಈ ಗುಂಪಿನ ಚಟುವಟಿಕೆಗಳು ಮತ್ತು ಇಂದಿರಾ ಗಾಂಧಿ ವಿರೋಧಿ ಹೋರಾಟ ಹೆಚ್ಚುತ್ತಾ ಹೋಗುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ತುರ್ತುಪರಿಸ್ಥಿತಿ ವಿರುದ್ಧದ ಹೋರಾಟದಲ್ಲಿ ಇವರ ಹೋರಾಟವೂ ಒಂದು ಅಧ್ಯಾಯ.
ಲೋಕನಾಯಕ ಜಯಪ್ರಕಾಶ ನಾರಾಯಣರ ನೇತೃತ್ವದಲ್ಲಿ ಭಾರತೀಯರು ದೊಡ್ಡ ಹೋರಾಟವನ್ನೇ ನಡೆಸಿ, ಕೊನೆಗೂ ಇಂದಿರಾ ಗಾಂಧಿ ತುರ್ತುಪರಿಸ್ಥಿತಿಯನ್ನು ತೆರವು ಮಾಡುವಂತೆ ಮಾಡುವಲ್ಲಿ ಯಶಸ್ವಿಯಾಗುತ್ತಾರೆ. ಮುಂದಿನ ಸಾರ್ವತ್ರಿಕ ಚುನಾವಣೆಯಲ್ಲಿ ಭಾರತೀಯರು ಇಂದಿರಾ ಗಾಂಧಿಯನ್ನು ನಿರ್ದಾಕ್ಷಿಣ್ಯವಾಗಿ ಸೋಲಿಸಿ ಭಾರತದ ಪ್ರಜಾಪ್ರಭುತ್ವದ ಘನತೆಯನ್ನು ಮರುಸ್ಥಾಪಿಸುತ್ತಾರೆ.

ಅಮೆರಿಕದಲ್ಲಿ ವ್ಯಾಸಂಗ ಮಾಡುತ್ತಿದ್ದ ಆಗಿನ ವಿದ್ಯಾರ್ಥಿ ಆನಂದ್ ಕುಮಾರ್ ಮುಂದೆ PhD ಮುಗಿಸಿಕೊಂಡು ಭಾರತಕ್ಕೆ ವಾಪಸಾಗಿ ತಮ್ಮೂರಿನ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಕೆಲವು ಕಾಲ ಪಾಠ ಮಾಡಿ ನಂತರ ದೆಹಲಿಯ ಪ್ರತಿಷ್ಠಿತ ಜವಾಹರ್‌ಲಾಲ್ ನೆಹರೂ ವಿಶ್ವವಿದ್ಯಾಲಯದಲ್ಲಿ (JNU) ಪ್ರೊಫೆಸರ್ ಆಗಿ ನಿವೃತ್ತಿಯ ತನಕ ಕೆಲಸ ಮಾಡುತ್ತಾರೆ. ಇದೆಲ್ಲದರ ಮಧ್ಯೆ ಸಾಮಾಜಿಕ ಹೋರಾಟಗಾರರಾಗಿಯೂ ಕ್ರಿಯಾಶೀಲರಾಗಿರುತ್ತಾರೆ. ಮುಂದಕ್ಕೆ ಭ್ರಷ್ಟಾಚಾರದ ವಿರುದ್ಧ ಭಾರತ (IAC) ಚಳವಳಿಯಲ್ಲಿಯೂ ಪಾಲ್ಗೊಂಡು ಆಮ್ ಆದ್ಮಿ ಪಕ್ಷದ ನಾಯಕರಾಗಿಯೂ ಕೆಲಸ ಮಾಡುತ್ತಾರೆ. 2014ರ ಲೋಕಸಭಾ ಚುನಾವಣೆಯಲ್ಲಿ ದೆಹಲಿಯ ಲೋಕಸಭಾ ಕ್ಷೇತ್ರವೊಂದರಿಂದ ಸ್ಪರ್ಧಿಸಿ ನಾಲ್ಕು ಲಕ್ಷಕ್ಕೂ ಹೆಚ್ಚಿನ ಮತಗಳನ್ನು ಪಡೆಯುತ್ತಾರೆ. ಮುಂದಕ್ಕೆ ಇವರಂತೆಯೇ ಆಮ್ ಆದ್ಮಿ ಸೇರಿದ್ದ ಅನೇಕ ಪ್ರಾಮಾಣಿಕ ಹೊರಾಟಗಾರರಂತೆ ಆಮ್ ಆದ್ಮಿ ಪಕ್ಷ ಬಿಟ್ಟು ಹೊರಬರುತ್ತಾರೆ. ಆರೋಗ್ಯದ ಕಾರಣಕ್ಕೆ ಈಗ ಅವರು ಗೋವಾದಲ್ಲಿ ವಾಸಿಸುತ್ತಿದ್ದು, ಸಾಮಾಜಿಕ /ರಾಜಕೀಯ ಹೋರಾಟಗಳಲ್ಲಿ ಭಾಗವಹಿಸಲು ಈಗಲೂ ದೇಶಾದ್ಯಂತ ಪ್ರವಾಸ ಮಾಡುತ್ತಾರೆ.

ತುರ್ತುಪರಿಸ್ಥಿತಿಯ ಪೂರ್ವದಲ್ಲಿ ಲೋಕನಾಯಕ ಜಯಪ್ರಕಾಶ ನಾರಾಯಣರು ಸ್ಥಾಪಿಸಿದ್ದ Citizens for Democracy ಸಂಘಟನೆಯ ಅಧ್ಯಕ್ಷರಾಗಿ ಕಳೆದ ಹತ್ತು ವರ್ಷಗಳಿಂದ ಹಿರೇಮಠರು ಕಾರ್ಯ ನಿರ್ವಹಿಸುತ್ತಿದ್ದರು. ಈ ವರ್ಷದ ಏಪ್ರಿಲ್ ತಿಂಗಳಲ್ಲಿ ಅದರ ಅಧ್ಯಕ್ಷರಾಗಿ ಪ್ರೊ. ಆನಂದ್ ಕುಮಾರ್ ನೇಮಕವಾಗಿದ್ದಾರೆ.
ನೆನ್ನೆ ಮತ್ತು ಇಂದು ಅವರೊಂದಿಗೆ ಕೆಲವು ವಿಚಾರಗಳನ್ನು ಮಾತನಾಡಲು ಹಿರೇಮಠರ ಜೊತೆಗೆ ದೀಪಕ್ ಮತ್ತು ನಾನು ಗೋವಾಗೆ ಬಂದಿದ್ದೆವು. ಒಳ್ಳೆಯ ಚರ್ಚೆ ಮತ್ತು ಕೆಲವು ಕಾರ್ಯಕ್ರಮಗಳ ರೂಪುರೇಷೆ ಆಯಿತು. ಫಲಪ್ರದ ಭೇಟಿ.
ಅಂದಹಾಗೆ, ಭಾರತದ ಪ್ರಜಾಪ್ರಭುತ್ವ ಪುನರ್‌ಸ್ಥಾಪನೆಗಾಗಿ ನಡೆದ ಹೋರಾಟದಲ್ಲಿ ಅಮೆರಿಕದಲ್ಲಿದ್ದ ಭಾರತೀಯರೂ ಸೇರಿದಂತೆ ಅನಿವಾಸಿ ಭಾರತೀಯರ ಪ್ರತಿರೋಧದ ಕುರಿತು ನಮ್ಮವರೇ ಆದ ಸುಗತ ಶ್ರೀನಿವಾಸರಾಜು “The Conscience Network” ಎನ್ನುವ ಪುಸ್ತಕ ಬರೆದಿದ್ದು, ಅದು ಇಷ್ಟರಲ್ಲಿಯೇ ಬಿಡುಗಡೆ ಆಗಲಿದೆ. ಮುಂದಿನ ತಿಂಗಳು ಬಹುಶಃ ಬೆಂಗಳೂರಿನಲ್ಲಿಯೂ ಈ ಪುಸ್ತಕದ ಬಿಡುಗಡೆ ಕಾರ್ಯಕ್ರಮ ನಡೆಯಲಿದ್ದು ಪ್ರೊ. ಆನಂದ್ ಕುಮಾರ್ ಆಗ ಬೆಂಗಳೂರಿಗೂ ಬರಲಿದ್ದಾರೆ. (ಈ ಪುಸ್ತಕದ ಲಭ್ಯತೆ ಮತ್ತು ಇನ್ನಿತರ ವಿವರಗಳನ್ನು ಕಾಮೆಂಟ್ ವಿಭಾಗದಲ್ಲಿ ನೀಡಿರುತ್ತೇನೆ.)
ಸ್ವಾತಂತ್ರ್ಯ ಸಂಗ್ರಾಮದಿಂದ ಹಿಡಿದು ಇಲ್ಲಿಯವರೆಗೆ ಲಕ್ಷಾಂತರ ಭಾರತೀಯರ ಶ್ರಮ ಮತ್ತು ಹೋರಾಟದ ಕಾರಣದಿಂದ ನಾವಿಂದು ಒಂದಷ್ಟು ಸ್ವಾತಂತ್ರ್ಯ ಮತ್ತು ಹಕ್ಕುಗಳನ್ನು ಅನುಭವಿಸುತ್ತಿದ್ದೇವೆ. ಆದರೆ ಅದರ ಹಿಂದೆ ಯಾರೆಲ್ಲರ ಎಷ್ಟೆಲ್ಲಾ ತ್ಯಾಗ, ಪರಿಶ್ರಮ, ಬದ್ಧತೆ, ಚಿಂತನೆ, ಸಂಕಷ್ಟಗಳು ಇದ್ದವು ಎನ್ನುವುದು ಇಂದಿನ ಬಹುತೇಕರಿಗೆ ಗೊತ್ತಿಲ್ಲ. ಹಾಗಾಗಿಯೇ ಈಗಿನ ಸಮಾಜ ಸ್ವಾತಂತ್ರ್ಯವನ್ನು ಕಳೆದುಕೊಳ್ಳುವುದು ಅಷ್ಟೇನೂ ಕಷ್ಟವಲ್ಲ. Eternal vigilance is the price of liberty. ಎಚ್ಚರ ತಪ್ಪಿದಿರೋ, ಯಾವಾಗ ಬೇಕಾದರೂ ನಾವು ಮತ್ತು ನಮ್ಮ ಮುಂದಿನ ತಲೆಮಾರುಗಳು ಗುಲಾಮಗಿರಿಗೆ, ಸರ್ವಾಧಿಕಾರಕ್ಕೆ, ದಬ್ಬಾಳಿಕೆಗೆ ಬಲಿಯಾಗಬಹುದು. Don’t take liberty/freedom/democracy for granted. Nothing is granted, everything is earned.
