ಕೋವಿಡ್ ನಿಯಂತ್ರಣದ ಸಲುವಾಗಿ ಲಾಕ್ಡೌನ್ ಕಠಿಣ ನಿರ್ಬಂಧಗಳನ್ನು ರಾಜ್ಯ ಸರ್ಕಾರ ಜಾರಿಗೆಗೊಳಿಸಿದ್ದು, ಕೂಲಿ ಕಾರ್ಮಿಕರು, ಬಡವರು, ವಲಸಿಗರು, ನಿರ್ಗತಿಕರು ಹೊತ್ತಿನ ಊಟಕ್ಕೂ ಸಂಕಷ್ಟಕ್ಕೆ ಸಿಲುಕಿದ್ದು, ಹೊತ್ತಿನ ಊಟಕ್ಕೂ ಸಮಸ್ಯೆ ಎದುರಾಗಿದೆ. ಈ ಸಂಬಂಧ ಇಂದಿರಾ ಕ್ಯಾಂಟೀನ್ಗಳಲ್ಲಿ ಉಚಿತ ಆಹಾರ ನೀಡಲು ಸರ್ಕಾರ ಮುಂದಾಗಿದೆ.
ಪೌರಾಡಳಿತ ನಿರ್ದೇಶನಾಲಯ ನಗರ ಮತ್ತು ಸ್ಥಳೀಯ ಸಂಸ್ಥೆಗಳು ಇಂದಿರಾ ಕ್ಯಾಂಟೀನ್ಗಳಲ್ಲಿ ಲಾಕ್ ಡೌನ್ ಸಮಯದಲ್ಲಿ ಬೆಳಗ್ಗೆ ಉಪಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟವನ್ನು ಪೂರೈಸುವಂತೆ ಆದೇಶ ಹೊರಡಿಸಿದೆ.
ಈ ನಿಟ್ಟಿನಲ್ಲಿ ರಾಜ್ಯದ ರಾಜಧಾನಿ ಬೆಂಗಳೂನಲ್ಲಿ ಮೇ 12ರಿಂದ ಮೇ 24 ರವರೆಗೆ ಅಂದರೆ ಲಾಕ್ಡೌನ್ ಮುಗಿಯುವವರೆಗೆ ಬಿಬಿಎಂಪಿ(ಬೆಂಗಳೂರು ಬೃಹತ್ ಮಹಾನಗರ ಪಾಲಿಕೆ) ವ್ಯಾಪ್ತಿಯ ಇಂದಿರಾ ಕ್ಯಾಂಟೀನುಗಳು ಬಡ ಜನರು, ವಲಸಿಗರು ಮತ್ತು ಕಾರ್ಮಿಕರಿಗೆ ದಿನಕ್ಕೆ 3 ಬಾರಿ ಉಚಿತ ಆಹಾರ ಪೊಟ್ಟಣಗಳನ್ನು ಒದಗಿಸಲಿದ್ದಾವೆ. ಕೋವಿಡ್ ಸೋಂಕು ಉಂಟು ಮಾಡಿರುವ ಸಂಕಷ್ಟಗಳನ್ನು ಬಗೆಹರಿಸಲು ಬಿಬಿಎಂಪಿ ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದೆ ಎಂದು ಬಿಬಿಎಂಪಿ ಆಯುಕ್ತ ಗೌರವ್ ಗುಪ್ತಾ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.
ಇಂದು ಬೆಳಗ್ಗೆ ನಗರದ ವಿವಿಧ ಇಂದಿರಾ ಕ್ಯಾಂಟಿನ್ಗೆ ಭೇಟಿ ನೀಡಿದ ಆಯುಕ್ತ ಗೌರವ್ ಗುಪ್ತಾ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದು, ನಗರದ ಇಂದಿರಾ ಕ್ಯಾಂಟಿನ್ಗಳಲ್ಲಿ ಪ್ರತಿನಿತ್ಯ 3 ಲಕ್ಷದಷ್ಟು ಉಚಿತ ಆಹಾರದ ಪೊಟ್ಟಣಗಳನ್ನು ವಿತರಿಸುವ ಗುರಿಯನ್ನು ಬಿಬಿಎಂಪಿ ಹೊಂದಿದೆ ಎಂದಿದ್ದಾರೆ. ಈಗಾಗಲೇ ನಗರದಲ್ಲಿ ಇಂದಿರಾ ಕ್ಯಾಂಟೀನ್ ಕಾರ್ಯನಿರ್ವಹಿಸುತ್ತಿದ್ದು, ಆದರೆ ಈ ಲಾಕ್ಡೌನ್ ಅವಧಿಯಲ್ಲಿ ಬಡ ಜನರಿಗೆ, ನಿರ್ಗತಿಕರಿಗೆ ಮತ್ತು ಕಾರ್ಮಿಕರಿಗೆ ಅನುಕೂಲವಾಗಲು ಉಚಿತ ಆಹಾರ ನೀಡಲಾಗುತ್ತಿದೆ ಎಂದಿದ್ದಾರೆ.
ಪ್ರತಿಯೊಬ್ಬರಿಗೂ 3 ಆಹಾರದ ಪೊಟ್ಟಣಗಳನ್ನು ವಿತರಿಸಲಾಗುವುದು. ರೇಷನ್ ಕಾರ್ಡ್ ಹೊಂದಿರುವವರಿಗೆ ಹೆಚ್ಚಿನ ಆಹಾರ ಪೊಟ್ಟಣ ನೀಡಲಾಗುವುದು. ನಗರದ 15 ಅಡುಗೆ ಮನೆಗಳಲ್ಲಿ ಕೋವಿಡ್ ನಿಯಮ ಪಾಲಿಸಿಕೊಂಡು ಆಹಾರ ತಯಾರಿಸಿ ಕಂಟೈನರ್ಗಳ ಮೂಲಕ ಇಂದಿರಾ ಕ್ಯಾಂಟಿನ್ಗಳಿಗೆ ಸರಬರಾಜು ಮಾಡಲಾಗುತ್ತದೆ ಎಂಬ ಮಾಹಿತಿಯನ್ನೂ ಈ ವೇಳೆ ಹಂಚಿಕೊಂಡಿದ್ದಾರೆ.