ದೇಶದಲ್ಲೀಗ ಡಿಜಿಟಲ್ ಪಾವತಿ ವ್ಯವಸ್ಥೆ ವ್ಯಾಪಕವಾಗುತ್ತಿದೆ. ಸಣ್ಣಪುಟ್ಟ ವ್ಯಾಪಾರಿಗಳೂ ಡಿಜಿಟಲ್ ವ್ಯವಸ್ಥೆಗೆ ಒಗ್ಗಿಕೊಂಡಿದ್ದಾರೆ. ಕೊರನಾ ಸಂಕಷ್ಟದ ನಡುವೆಯೂ ಕಳೆದ ಒಂದು ವರ್ಷದಲ್ಲಿ ಡಿಜಿಟಲ್ ಪಾವತಿಯ ಪ್ರಮಾಣವು ಶೇ.53ರಷ್ಟು ಹೆಚ್ಚಳವಾಗಿದೆ. ಭಾರತೀಯ ರಿಸರ್ವ್ ಬ್ಯಾಂಕ್ (ಆರ್ಬಿಐ) ಪಾವತಿ ಮತ್ತು ವಿಲೇವಾರಿ ವ್ಯವಸ್ಥೆಯ ಮುಖ್ಯ ಪ್ರಧಾನ ವ್ಯವಸ್ಥಾಪಕ ಪಿ. ವಾಸುದೇವನ್ ಅವರ ಪ್ರಕಾರ, ಕಳೆದ ಐದು ವರ್ಷಗಳಲ್ಲಿ ಪ್ರತಿವರ್ಷವೂ ಸರಾಸರಿ ಶೇ.42ರಷ್ಟು ಡಿಜಿಟಲ್ ಪಾವತಿ ಬೆಳವಣಿಗೆ ಕಂಡಿದೆ. ದೇಶದಲ್ಲಿಗ ನಿತ್ಯವೂ ಸರಾಸರಿ 21.79 ಕೋಟಿ ಪಾವತಿ ವಹಿವಾಟುಗಳಾಗುತ್ತಿವೆ. ಈ ಪ್ರಮಾಣವು ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಇದೆ.
ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾ ಆಯೋಜಿಸಿದ್ದ ಡಿಜಿಟಲ್ ಮನಿ ಅಧಿವೇಶನದಲ್ಲಿ ಪಾಲ್ಗೊಂಡಿದ್ದ ಪಿ.ವಾಸುದೇವನ್ , ಕಳೆದ ವರ್ಷ ಡಿಸೆಂಬರ್ನಲ್ಲಿ ಆರ್ಟಿಜಿಎಸ್ ಅನ್ನು 24x7x365 ಆಗಿ ಕಾರ್ಯಗತಗೊಳಿಸಲಾಗಿದೆ. ಇದನ್ನು ಸದುಪಯೋಗಪಡಿಸಿಕೊಳ್ಳಲು ಇಲ್ಲಿಯವರೆಗೆ ಹಲವು ಉಪಕ್ರಮಗಳನ್ನು ಕೈಗೊಳ್ಳಲಾಗಿದೆ. ನ್ಯಾಷನಲ್ ಆಟೊಮೆಟೆಡ್ ಕ್ಲಿಯರೆನ್ಸ್ ಹೌಸ್( NACH) ಭಾರತ್ ಬಿಲ್ ಪಾವತಿಯಂತಹ ಪಾವತಿ ವ್ಯವಸ್ಥೆಗಳನ್ನು ವಾರಾಂತ್ಯದಲ್ಲಿ ಹೊಂದಿಸಲು ಸಕ್ರಿಯಗೊಳಿಸಲಾಗಿದೆ. ಒಂದು ವಾರದಲ್ಲಿ ವಿಲೇವಾರಿಗಳ ಸಂಖ್ಯೆಯು 200 ರಷ್ಟು ಹೆಚ್ಚಾಗಿದೆ, ಇದರಿಂದಾಗಿ ಸಾಲ ಮತ್ತು ವಿಲೇವಾರಿ ಹಂತದಲ್ಲಿನ ಪಾವತಿ ವ್ಯವಸ್ಥೆಯಲ್ಲಿ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಹೇಳಿದ್ದಾರೆ.
ಸಮಾವೇಶದಲ್ಲಿ, ಅಸ್ತಿತ್ವದಲ್ಲಿರುವ ಕಾರ್ಯಾಚರಣೆಗಳು ಸ್ಥಿರವಾಗಿ ಮತ್ತು ಸುಸ್ಥಿರವಾಗಿ ಕಾರ್ಯನಿರ್ವಹಿಸುವುದನ್ನು ಖಾತ್ರಿಪಡಿಸಿಕೊಳ್ಳುಲು ಮತ್ತು ಡಿಜಿಟಲ್ ಪಾವತಿಗಳನ್ನು ವ್ಯಾಪಕಗೊಳಿಸಲು ಪಾವತಿಗಳ ಪಾಲುದಾರರನ್ನು ತಾಂತ್ರಿಕ ನಾವೀನ್ಯತೆಗೆ ಹೇಗೆ ಸಕ್ರಿಯಗೊಳಿಸುಬೇಕು ಎಂಬುದರ ಬಗ್ಗೆ ಚರ್ಚಿಸಲಾಗಿದೆ.
2013 ರಲ್ಲಿ ಇಂಟರ್ನೆಟ್ ಅಂಡ್ ಮೊಬೈಲ್ ಅಸೋಸಿಯೇಷನ್ ಆಫ್ ಇಂಡಿಯಾ(IAMAI) ಆಶ್ರಯದಲ್ಲಿ ರೂಪುಗೊಂಡ ಪೇಮೆಂಟ್ ಕೌನ್ಸಿಲ್ ಆಫ್ ಇಂಡಿಯಾವು ಡಿಜಿಟಲ್ ಪಾವತಿ ಉದ್ಯಮದ ಅಗತ್ಯಗಳನ್ನು ಪೂರೈಸುತ್ತದೆ. ಬಹು ನಿಯಂತ್ರಿತ ಬ್ಯಾಂಕಿಂಗ್ ಅಲ್ಲದ ಪಾವತಿ ಉದ್ಯಮದ ಪಾಲುದಾರರನ್ನು ಪ್ರತಿನಿಧಿಸಲು ಮತ್ತು ಉದ್ಯಮ ಸಮಸ್ಯೆಗಳನ್ನು ಪರಿಹರಿಸಲು ಇದನ್ನು ರಚಿಸಲಾಗಿದೆ. ಪಾವತಿ ಉದ್ಯಮವನ್ನು ಉತ್ತೇಜಿಸಲು ಕೆಲಸ ಮಾಡುತ್ತದೆ ಮತ್ತು ಕಡಿಮೆ ನಗದು ಆರ್ಥಿಕ ವ್ಯವಸ್ಥೆ ರಚಿಸುವ ಗುರಿಯನ್ನು ಹೊಂದಿದೆ.

ಡಿಜಿಟಲ್ ಪಾವತಿ ಸವಾಲುಗಳು:
ಡಿಜಿಟಲ್ ಪೇಮೆಂಟ್ ವ್ಯಾಪಕವಾಗುತ್ತಿರುವಂತೆ ಗ್ರಾಹಕರು ನೀಡುತ್ತಿರುವ ದೂರುಗಳ ಸಂಖ್ಯೆಯೂ ಹೆಚ್ಚಳವಾಗುತ್ತಿದೆ. ಇತ್ತೀಚೆಗೆ ಕೇಂದ್ರ ಸರ್ಕಾರ ಕೇಂದ್ರೀಕೃತ ಒಂಬುಡ್ಸಮನ್ ವ್ಯವಸ್ಥೆಯನ್ನು ಜಾರಿಗೆ ತರಲು ಪ್ರಸ್ತಾಪಿಸಿದೆ.
ನಿತ್ಯವೂ ನಡೆಯುವ ಕೋಟಿ ಕೋಟಿ ಪಾವತಿ ವಹಿವಾಟಿನಲ್ಲಿ ಗ್ರಾಹಕರು ಸಾಕಷ್ಟು ತೊಂದರೆ ಅನುಭವಿಸುತ್ತಾರೆ. ಉದಾಹರಣೆಗೆ ಆನ್ಲೈನ್ ಖರೀದಿ ಮಾಡಿದಾಗ ಕಾರ್ಡ್ ಮೂಲಕ ಪಾವತಿ ಮಾಡುವಾಗ ತಾಂತ್ರಿಕ ದೋಷಗಳು ಕಾಣುತ್ತವೆ. ಗ್ರಾಹಕರ ಬ್ಯಾಂಕ್ ಖಾತೆಯಿಂದ ಹಣವು ಪಾವತಿಯಾಗಿರುತ್ತದೆ. ಆದರೆ, ಮಾರಾಟಗಾರರ ಖಾತೆಗೆ ಪಾವತಿಯಾಗಿರುವುದಿಲ್ಲ. ಇಂತಹ ಸಂದರ್ಭದಲ್ಲಿ ಗ್ರಾಹಕರ ಬ್ಯಾಂಕಿನವರು, ಪಾತಿಯಾಗಿದೆ ಎಂದೂ ಮಾರಾಟಗಾರರು ಪಾವತಿಯಾಗಿಲ್ಲ ಎಂದು ವಾದಿಸುತ್ತಾ ಗ್ರಾಹಕರನ್ನು ಸತಾಯಿಸುತ್ತಾರೆ. ಇಂತಹ ಸಂದರ್ಭದಲ್ಲಿ ಲಿಖಿತ ದೂರು ಸಲ್ಲಿಸಿದರೂ ಈ ದೂರು ವಿಲೇವಾರಿಗೆ ಬ್ಯಾಂಕುಗಳು ಮೂರು ತಿಂಗಳಷ್ಟು ದೀರ್ಘಾವಧಿ ತೆಗೆದುಕೊಳ್ಳುತ್ತವೆ.
ಅಲ್ಲಿಯವರೆಗೆ ಗ್ರಾಹಕರ ದುಡ್ಡಿಗೆ ಬಡ್ಡಿಯೂ ಇಲ್ಲ ರಕ್ಷಣೆಯೂ ಇರುವುದಿಲ್ಲ. ದೊಡ್ಡ ಮೊತ್ತ ಇದ್ದಾಗ ಗ್ರಾಹಕರು ಲಿಖಿತವಾಗಿ ದೂರು ಸಲ್ಲಿಸುತ್ತಾರೆ. ಬಹುತೇಕ ಸಂದರ್ಭಗಳಲ್ಲಿ ಐವತ್ತು, ನೂರು ರುಪಾಯಿಗಳ ವಹಿವಾಟು ನಡೆದಾಗ ಗ್ರಾಹಕರು ದೂರು ನೀಡುವ ಗೋಜಿಗೆ ಹೋಗುವುದಿಲ್ಲ. ಹೀಗೆ ಸಣ್ಣಪುಟ್ಟ ಮೊತ್ತದಲ್ಲಿ ಗ್ರಾಹಕರು ಹಣ ಕಳೆದುಕೊಳ್ಳುತ್ತಾರೆ. ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ಕೇಂದ್ರೀಕೃತ ಒಂಬುಡ್ಸ್ಮನ್ ವ್ಯವಸ್ಥೆ ಜಾರಿ ಆದ ನಂತರ ಈ ಸಮಸ್ಯೆಗಳು ಪರಿಹಾರ ಆಗಬಹುದು. ತಾಂತ್ರಿಕ ಕಾರಣಗಳಿಂದಾಗಿ ಉದ್ಭವಿಸುವ ಇಂತಹ ಸಮಸ್ಯೆಗಳಿಗೆ ತ್ವರಿತ ಪರಿಹಾರ ಕಂಡುಕೊಳ್ಲ್ಳುವ ಕುರಿತಂತೆ ಡಿಜಿಟಲ್ ಪಾವತಿ ಸಮಾವೇಶದಲ್ಲಿ ಚರ್ಚಿಸಲಾಗಿದೆ.










