ಭಾರತದ ಅತ್ಯಂತ ಹಿರಿಯ ಸಾಕಾನೆ ಎಂದು ಹೆಸರುವಾಸಿಯಾಗಿದ್ದ 89 ವರ್ಷದ ʼಬಿಜುಲಿ ಪ್ರಸಾದ್ʼ ಸೋಮವಾರ (ಆಗಸ್ಟ್ 21) ಅಸ್ಸಾಂನ ಸೋನಿತ್ಪುರ ಜಿಲ್ಲೆಯ ಬೆಹಾಲಿ ಟೀ ಎಸ್ಟೇಟ್ನಲ್ಲಿ ಸಾವನ್ನಪ್ಪಿದೆ.
ವಯೋಸಹಜ ಸಮಸ್ಯೆಗಳಿಂದ ಬಳಲುತಿದ್ದ ಆನೆ ಸೋಮವಾರ ಮುಂಜಾನೆ 3.30ರ ಹೊತ್ತಿಗೆ ‘ದಿ ವಿಲಿಯಮ್ಮನ್ ಮಾಗೊರ್ ಗ್ರೂಪ್’ ಕಂಪನಿಗೆ ಸೇರಿದ ಬೆಹಾಲಿ ಟೀ ಎಸ್ಟೇಟ್ನಲ್ಲಿ ಕೊನೆಯುಸಿರೆಳೆದಿದೆ ಎಂದು ಎಸ್ಟೇಟ್ನ ಅಧಿಕಾರಿಗಳು ತಿಳಿಸಿದ್ದಾರೆ.
“ಚಿಕ್ಕ ಮರಿಯಿದ್ದಾಗ ಬಿಜುಲಿ ಪ್ರಸಾದ್ ಆನೆಯನ್ನು ಬಾರ್ಗಾಂಗ್ ಟೀ ಎಸ್ಟೇಟ್ಗೆ ಕರೆತರಲಾಗಿತ್ತು. ಬಾರ್ಗಾಂಗ್ ಟೀ ಎಸ್ಟೇಟ್’ ಮಾರಾಟವಾದ ನಂತರ ಆನೆಯನ್ನು ಬೆಹಾಲಿ ಟೀ ಎಸ್ಟೇಟ್ಗೆ ತರಲಾಯಿತು. ಅನೆಯು ಇಡೀ ಎಸ್ಟೇಟ್ನ ಹೆಮ್ಮೆಯ ಸಂಕೇತದಂತಿತ್ತು” ಎಂದು ಅಧಿಕಾರಿಗಳು ತಿಳಿಸಿದ್ದಾರೆ.
“ನನಗೆ ಗೊತ್ತಿರುವಂತೆ ಬಿಜುಲಿ ಪ್ರಸಾದ್ ಭಾರತದ ಅತ್ಯಂತ ಹಳೆಯ ಸಾಕಾನೆಯಾಗಿದೆ. ಸಾಮಾನ್ಯವಾಗಿ ಏಷ್ಯಾಟಿಕ್ ಕಾಡಾನೆಗಳು ಸುಮಾರು 60ರಿಂದ 65 ವರ್ಷ ಜೀವಿಸುತ್ತವೆ. ಸರಿಯಾದ ಆರೈಕೆ ಸಿಕ್ಕರೆ ಸಾಕಾನೆಗಳು ಸುಮಾರು 80 ವರ್ಷ ಬದುಕುತ್ತವೆ” ಎಂದು ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ, ಪ್ರಸಿದ್ಧ ಆನೆ ಶಸ್ತ್ರಚಿಕಿತ್ಸಕ ಡಾ.ಕುಶಾಲ್ ಕನ್ವರ್ ಶರ್ಮಾ ಹೇಳಿದರು.
“10 ವರ್ಷದ ಹಿಂದೆ ಬಿಜುಲಿ ಪ್ರಸಾದ್ ತನ್ನ ಎಲ್ಲ ಹಲ್ಲುಗಳನ್ನು ಕಳೆದುಕೊಂಡಿತ್ತು. ಇದರಿಂದ ಆಹಾರ ಸೇವಿಸಲು ಆಗದೆ ಕೃಶವಾಗಿತ್ತು. ಬಿಜುಲಿಗೆ ಚಿಕಿತ್ಸೆ ನೀಡುವಂತೆ ನನಗೆ (ಶರ್ಮಾ) ತಿಳಿಸಿದ್ದರು. ಆನೆಯನ್ನು ಪರೀಕ್ಷಿಸಿದ ನಾನು ಆನೆಯ ಆಹಾರ ಕ್ರಮವನ್ನು ಬದಲಾಯಿಸುತವಂತೆ ಸೂಚಿಸಿದೆ. ಅಕ್ಕಿ, ಸೋಯಾಬಿನ್ ಸೇರಿದಂತೆ ಹೆಚ್ಚು ಪ್ರೋಟಿನ್ ಇರುವ ಆಹಾರವನ್ನು ಬೇಯಿಸಿ ಕೊಡಲು ಪ್ರಾರಂಭಿಸಿದರು. ಇದರಿಂದ ಆನೆ ಇನಷ್ಟು ಕಾಲ ಬದುಕಲು ಸಹಾಯವಾಯಿತು” ಎಂದಿದ್ದಾರೆ.
ಬಿಜುಲಿ ಆನೆ ಪ್ರತಿದಿನ ಸುಮಾರು 25 ಕೆ.ಜಿ ಆಹಾರ ಸೇವಿಸುತಿತ್ತು ಎಂದು ಎಸ್ಟೇಟ್ ಅಧಿಕಾರಿಗಳು ತಿಳಿಸಿದ್ದಾರೆ.