ದೇಶದಲ್ಲಿ ದಿನೇ ದಿನೇ ಹೆಚ್ಚಾಗುತ್ತಿರುವ ಕೋವಿಡ್ ಸೋಂಕು ಮತ್ತು ರೂಪಾಂತರಿ ಓಮಿಕ್ರಾನ್ ಭೀತಿ ನಡುವೆ ಸರ್ಕಾರ ಜಾರಿಗೆ ತಂದಿದ್ದ ಕೋವಿಡ್ ಮಾರ್ಗಸೂಚಿಗಳನ್ನು ರಾಜಕೀಯ ಪಕ್ಷಗಳು ಗಾಳಿಗೆ ತೂರಿದಂತೆ ಕಾಣುತ್ತಿದೆ.
ಮುಂದಿನ ವರ್ಷ ಪ್ರಾರಂಭದಲ್ಲಿ ನಡೆಯಲಿರುವ ಉತ್ತರ ಪ್ರದೇಶ ಚುನಾವಣೆಗೂ ಮುನ್ನವೇ ಈಗಾಗಲೇ ರಾಜಕೀಯ ಪಕ್ಷಗಳು ತಮ್ಮದೇ ಆದ ತಯಾರಿ ಮತ್ತು ತಂತ್ರಗಾರಿಕೆಯಲ್ಲಿ ತೊಡಗಿವೆ. ರಾಜಕೀಯ ಪಕ್ಷಗಳು ನಡೆಸುವ ಚುನಾವಣಾ ರ್ಯಾಲಿಗಳಲ್ಲಿ ಜನರು ಮಾಸ್ಕ್, ಸಾಮಾಜಿಕ ಅಂತರ ಪಾಲನೆ ಮಾಡುತ್ತಿಲ್ಲ. ಸುದ್ದಿವಾಹಿನಿಗಳಲ್ಲಿ ಪ್ರಕಟವಾಗುವ ಚಿತ್ರಣಗಳಲ್ಲಿ ಜನರು ಒಟ್ಟಾಗಿ ಗುಂಪಿನಲ್ಲಿ ನಿಂತಿರುವುದನ್ನು ಕಾಣಬಹುದು.
ದೇಶದಲ್ಲಿ ನಿತ್ಯ ಸೋಂಕಿನ ಪ್ರಮಾಣ ಮಂದಗತಿಯ ಏರಿಕೆ ಕಾಣುತ್ತಿದೆ. ರಾಜಕೀಯ ಪಕ್ಷಗಳು ನಡೆಸುವ ಚುನಾವಣಾ ರ್ಯಾಲಿಗಳ ಮೂಲಕ ವೇಗವಾಗಿ ಹರಡುವ ಭೀತಿ ಎದುರಾಗಿದೆ. ಇತ್ತೀಚೆಗೆ ಉತ್ತರ ಪ್ರದೇಶದಲ್ಲಿ ನಡೆದ ಮೋದಿ ಅವರಿಂದ ಹಲವು ಉದ್ಘಾಟನೆಗಳು, ಕಾಂಗ್ರೆಸ್ಸಿನ ಮಹಿಳಾ ಸಮಾವೇಶ, ಸಮಾಜವಾದಿ ಪಕ್ಷದ ಸಮಾವೇಶ ಮತ್ತು ಅಮಿತ್ ಶಾ ನಡೆಸಿದ ರೋಡ್ ಶೋ ಇವಿಷ್ಟನ್ನು ನೋಡಿದರೆ ಜನರು ಎಲ್ಲಿಯೂ ಸಹ ಕೋವಿಡ್ ಮಾರ್ಗಸೂಚಿಗಳನ್ನು ಪಾಲಿಸದಿರುವುದು ಸ್ಪಷ್ಟವಾಗಿ ಗೋಚರಿಸುತ್ತಿದೆ.
ದೇಶದಲ್ಲಿ ಪ್ರಸ್ತುತ ನಡೆಯುತ್ತಿರುವ ಲಸಿಕೆ ಅಭಿಯಾನದಲ್ಲಿ ಉತ್ತರ ಪ್ರದೇಶ ಕಳಪೆ ಸಾಧನೆಯನ್ನ ಮಾಡಿದೆ. ರಾಜ್ಯದ ಜನಸಂಖ್ಯೆಯ ಶೇ.30% ರಷ್ಟು ಜನರಿಗೆ ಮೊದಲ ಮತ್ತು ಎರಡನೇ ಡೋಸ್ ಲಸಿಕೆಯನ್ನು ಈವರಗೆ ನೀಡಲಾಗಿದೆ. ಎರಡನೇ ಅಲೆ ಸಂಭವಿಸಿದ ಸಮಯದಲ್ಲಿ ಹೆಚ್ಚು ಜನರು ಉತ್ತರ ಪ್ರದೇಶದಲ್ಲಿ ಸೋಂಕಿನ ತೀವ್ರತೆಗೆ ಬಳಲಿದ್ದರು. ಗಂಗಾ ನದಿ ದಡದಲ್ಲಿ ಸಾವಿರಾರು ಶವಗಳನ್ನು ನದಿಯಲ್ಲಿ ತೇಲಿ ಬಿಡುತ್ತಿರುವ ಫೋಟೋ ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣ ಮತ್ತು ಅಂತರಾಷ್ಟ್ರೀಯ ಸುದ್ದಿ ಮಾಧ್ಯಮಗಳಲ್ಲಿ ಪ್ರಸಾರ ಆಗಿದ್ದನ್ನು ಇಲ್ಲಿ ಸ್ಮರಿಸಬಹುದು.

ಕಳೆದ ವಾರ ಈ ಬಗ್ಗೆ ಅಲಹಾಬಾದ್ ಹೈಕೋರ್ಟ್ನಲ್ಲಿ ಅರ್ಜಿಯನ್ನು ಸಲ್ಲಿಸಲಾಗಿತ್ತು. ಈ ಬಗ್ಗೆ ತೀರ್ಪು ನೀಡಿದ ನ್ಯಾಯಾಧೀಶರು ಚುನಾವಣಾ ಆಯೋಗ ಮತ್ತು ಪ್ರಧಾನಿಗೆ ಚುನಾವಣೆಯನ್ನು ಒಂದೆರಡು ತಿಂಗಳುಗಳ ಕಾಲ ಮುಂದೂಡುವಂತೆ ಮನವಿ ಮಾಡಿತ್ತು. ಈ ವರ್ಷ ಪ್ರಾರಂಭದಲ್ಲಿ ಎರಡನೇ ಅಲೆ ಭೀತಿಯಲ್ಲಿ ನ್ಯಾಯಾಲಯ ಚುನಾವಣಾ ರ್ಯಾಲಿಗಳನ್ನು ರಾಜ್ಯದಲ್ಲಿ ನಿಷೇಧಿಸಿತ್ತು.
ಉತ್ತರ ಪ್ರದೇಶದಲ್ಲಿ ನಡೆದ ಗ್ರಾಮ ಪಂಚಾಯತ್ ಚುನಾವಣೆ ಮತ್ತು ದೇಶದಲ್ಲಿ ನಡೆದ ಪಂಚರಾಜ್ಯ ಚುನಾವಣೆಗಳು ಎರಡನೇ ಅಲೆಗೆ ಮುನ್ನುಡಿ ಬರೆದಿದ್ದವು. ನೀವುಗಳು ಇದನ್ನು ಅರಿತು ಈ ಕೂಡಲೇ ಚುನಾವಣಾ ಪ್ರಚಾರ ಸಭೆಗಳನ್ನು ನಿಲ್ಲಿಸದಿದ್ದರೆ ಎರಡನೇ ಅಲೆಗಿಂತ ಮೂರನೇ ಅಲೆ ಭೀಕರವಾಗಿರುತ್ತದೆ ಎಂದು ನ್ಯಾಯಾಧೀಶರು ಈ ವೇಳೆ ಸರ್ಕಾರವನ್ನು ಎಚ್ಚರಿಸಿದ್ದಾರೆ.
ಉತ್ತರ ಪ್ರದೇಶದಲ್ಲಿ ರಾಜಕೀಯ ಪಕ್ಷಗಳು ಚುನಾವಣೆ ತಯಾರಿಗಾಗಿ ಸಾರ್ವಜನಿಕ ಸಭೆಗಳು ಮತ್ತು ಸಮಾವೇಶಗಳನ್ನು ಆಯೋಜಿಸುತ್ತಿದೆ. ಅಂತಹ ಸಂದರ್ಭಗಳಲ್ಲಿ ಕೋವಿಡ್ ಮಾರ್ಗಸೂಚಿ ಪಾಲನೆ ಬಗ್ಗೆ ಖಚಿತಪಡಿಸಿಕೊಳ್ಳುವುದು ಅಸಾಧ್ಯ ಎಂದು ನ್ಯಾಮೂರ್ತಿಗಳು ಹೇಳಿದ್ದಾರೆ. ಆದರೆ, ನ್ಯಾಯಧೀಶರು ಚುನಾವಣಾ ಆಯೋಗ ಮತ್ತು ಸರ್ಕಾರಕ್ಕೆ ಎಷ್ಟೇ ಮನವಿ ಮಾಡಿದ್ದರೂ ಸಹ ಚುನಾವಣಾ ಆಯೋಗ ಮಾತ್ರ ಈಗಾಗಲೇ ತಯಾರಿಸಿರುವ ವೇಳಾಪಟ್ಟಿಗೆ ಅಂಟಿಕೊಳ್ಳಬಹುದು ಎಂದು ಹೇಳಲಾಗುತ್ತಿದೆ.
ನಿನ್ನೆ ಕೇಂದ್ರ ಸರ್ಕಾರದ ಆರೋಗ್ಯ ಇಲಾಖೆಯು ಮುಂಬರುವ ಪಂಚರಾಜ್ಯ ಚುನಾವಣೆ ನಿಮಿತ್ತ ಆರೋಗ್ಯ ಇಲಾಖೆಯ ಅಧಿಕಾರಿಗಳು ಮತ್ತು ತಜ್ಞರೊಂದಿಗೆ ಸಭೆ ನಡೆಸಿದ ಸಚಿವರು, ಚುನಾವಣೆ ನಡೆಯುವ ರಾಜ್ಯಗಳಲ್ಲಿ ಕೋವಿಡ್ ಸ್ಥಿತಿ ಗತಿ ಬಗ್ಗೆ ಮಾಹಿತಿಯನ್ನು ಪಡೆದಿದ್ದಾರೆ ಎಂದು ತಿಳಿದು ಬಂದಿದೆ.

ಮುಂದಿನ ವರ್ಷ ಚುನಾವಣೆ ನಡೆಯುವ ರಾಜ್ಯಗಳಲ್ಲಿ ಲಸಿಕೆ ಅಭಿಯಾನವನ್ನ ಹೆಚ್ಚಿಸಬೇಕು ಮತ್ತು ಕೋವಿಡ್ ಪರೀಕ್ಷೆಗಳನ್ನು ಸಹ ಹೆಚ್ಚಿಸಬೇಕು ಎಂದು ಸಭೆ ಮುಗಿದ ನಂತರ ಕೇಂದ್ರ ಆರೋಗ್ಯ ಇಲಾಖೆಯ ಅಧಿಕಾರಿಗಳು ತಿಳಿಸಿದ್ದಾರೆ. ರಾಜ್ಯಗಳಲ್ಲಿ ಕಟ್ಟುನಿಟ್ಟಾದ ಮಾರ್ಗಸೂಚಿಗಳನ್ನು ಜಾರಿಗೆ ತರಬೇಕು ಎಂದು ಸಭೆಯಲ್ಲಿ ತೀರ್ಮಾನಿಸಲಾಗಿದೆ.
ಒಟ್ಟಾರೆ ಚುನಾವಣೆ ನಡೆಯುವ ರಾಜ್ಯಗಳು ಕೋವಿಡ್ ಮೂರನೇ ಅಲೆಗೆ ಮುನ್ನುಡಿ ಬರೆಯುತ್ತಾ ಅಥವಾ ಪರಿಸ್ಥಿತಿ ಹೀಗೆ ಸುಧಾರಿಸುತ್ತದೆಯೇ ಎಂಬುದನ್ನ ಮುಂದಿನ ದಿನಗಳಲ್ಲಿ ಕಾದು ನೋಡಬೇಕಿದೆ.












