ಭಾರತದ ನ್ಯಾಯ ವ್ಯವಸ್ಥೆ ಬಹಳಷ್ಟು ಹೊರೆಯನ್ನು ಹೊತ್ತಿದ್ದು, ನ್ಯಾಯ ವಿಚಾರಣೆಯ ಪ್ರಕ್ರಿಯೆ ಬಹಳಷ್ಟು ವಿಳಂಬಿತವಾಗಿದೆ. ಈ ಸಮಸ್ಯೆಯ ಜೊತೆಗೆ ಪ್ರಭುತ್ವ ಮತ್ತು ಪೋಲೀಸು ವ್ಯವಸ್ಥೆ ‘ರಾಷ್ಟ್ರೀಯ ಭದ್ರತೆ’ ಎಂಬ ಹೆಸರಿನಲ್ಲಿ ಬಂಧನಗಳನ್ನು ನಡೆಸುತ್ತಾ ವ್ಯವಸ್ಥೆಯ ಮೇಲೆ ಇನ್ನಷ್ಟು ಹೊರೆಯನ್ನು ಹೊರಿಸುತ್ತಿದ್ದಾರೆ. ಈ ಹಿನ್ನಲೆಯಲ್ಲಿ ನ್ಯಾಯ ವ್ಯವಸ್ಥೆಯ ಪ್ರಜಾತಾಂತ್ರೀಕರಣವನ್ನು ನಾವು ಹೇಗೆ ಅರ್ಥೈಸಿಕೊಳ್ಳಬಹುದು?
‘ವಿಚಾರಣಾ ಉಪಕರಣವಾಗಿ’ ಬಂಧನ
ಕಾನೂನಿನ ಪ್ರಕಾರ ಓರ್ವ ಆರೋಪಿಯನ್ನು ವಿಚಾರಣೆಯ ಉದ್ದೇಶದಿಂದ ಬಂಧಿಸಬಹುದು. ಆರೋಪಿ ಜಾಮೀನು ಪಡೆದಾಗ ಅವರನ್ನು ವಿಚಾರಣೆಯ ಸಂದರ್ಭದಲ್ಲಿ ಹಾಜರು ಪಡಿಸುವ ಜವಾಬ್ದಾರಿ ಜಾಮೀನು ಕೊಡಿಸಿದ ತಮ್ಮ ಜಾಮೀನುದಾರರದ್ದು. ಹಾಗಾಗಿ ನ್ಯಾಯವಿಚಾರಣೆಯ ಸಂದರ್ಭದಲ್ಲಿ ಅರೋಪಿಯನ್ನು ಹಾಜರು ಪಡಿಸುವುದು ಬಂಧನದ ಉದ್ದೇಶ, ‘ತನಿಖೆಗೆ ಉಪಯೋಗವಾಗಲಿ’ ಎಂಬುದಲ್ಲ.
ಸಾಮಾನ್ಯವಾಗಿ ಚಾರ್ಜ್ ಶೀಟ್ ಗಳನ್ನು ತಯಾರಿಸಿ ವಿಚಾರಣೆಗೆ ಸಾಕ್ಷಿಗಳೊಡನೆ ಆರೋಪಿಯನ್ನು ಹಜಾರು ಪಡಿಸಲು ಎಲ್ಲಾ ಸಿದ್ಧವಾದ ನಂತರ ಆರೋಪಿಯನ್ನು ಬಂಧಿಸಬೇಕು. ಭಾರತದ ನ್ಯಾಯಾಂಗ ವ್ಯವಸ್ಥೆಯಲ್ಲಿ ಈ ಇಡೀ ಪ್ರಕ್ರಿಯೆ ಉಲ್ಟಾ ಆಗಿದೆ. ಕೆಲವೊಮ್ಮೆ ವಿಚಾರಣೆಗೆ ಅಡ್ಡಿಯಾಗಬಾರದು ಎಂಬ ನೆಪವೊಡ್ಡಿ ಆರೋಪಿಗಳಿಗೆ ತಮ್ಮ ವಕೀಲರನ್ನು ಮತ್ತು ಕುಟುಂಬವನ್ನು ಭೇಟಿ ಮಾಡುವ ಅವಕಾಶವನ್ನೂ ನೀಡಲಾಗುವುದಿಲ್ಲ.

ಕಾನೂನು ತತ್ವಗಳ ಪ್ರಕಾರ ಒಬ್ಬ ವ್ಯಕ್ತಿಯನ್ನು ಪೋಲೀಸರು ಬಂಧಿಸಲು ಕೆಲವು ಅವಕಾಶಗಳಿವೆ. ಉದಾಹರಣೆಗೆ, ಅವರು ಸಾರ್ವಜನಿಕ ಗಲಭೆಗಳನ್ನು ಪ್ರಚೋದಿಸದಂತೆ ನೋಡಿಕೊಳ್ಳಲು ಅಥವಾ ಅಪರಾಧವನ್ನು ತಡೆಯಲು ಪೋಲೀಸರು ಹೀಗೆ ಮಾಡಬಹುದು. ಕೆಲವೊಮ್ಮೆ ಪೋಲೀಸರಿಗೆ ಅಪರಾಧಿಯ ಗುರುತಿನ ಬಗ್ಗೆ ಖಚಿತ ಮಾಹಿತಿಯಿದ್ದು ಜುಡೀಷಿಯಲ್ ಕಸ್ಟಡಿಗೆ ನೀಡುವ ಮುನ್ನ ಸಾಕ್ಷಿಗಳೊಡನೆ ಅವರನ್ನೊಮ್ಮೆ ವಿಚಾರಿಸಬೇಕು ಎಂದಾದರೆ ಅವರಿಗೆ ಅವಕಾಶವಿದೆ.
ಇಂತಹ ಸನ್ನಿವೇಶಗಳಲ್ಲಿ ಪೋಲೀಸರಿಗೆ ಅನುಮತಿ ಸಿಕ್ಕಿದರೂ 12 ಘಂಟೆಗಳಿಂದ 4 ದಿನಗಳ ಕಾಲಾವಧಿ ಮೀರದಂತೆ ಅವಕಾಶ ದೊರಕುತ್ತದೆ. ಇಷ್ಟು ಕಾಲಾವಕಾಶದಲ್ಲಿ ಆರೋಪಿಯ ವಿರುದ್ಧ ಖಚಿತ ಸಾಕ್ಷಿಗಳನ್ನು ನೀಡಲಾಗದೇ ಇದ್ದರೆ ಅವರನ್ನು ಬಿಡುಗಡೆಗೊಳಿಸಬೇಕು. ಹೀಗಾಗಿ ಬಂಧನದಲ್ಲಿರುವ ಆರೋಪಿಯನ್ನು ಮಾಹಿತಿ ನೀಡುವಂತೆ ಅಥವಾ ಅಪರಾಧವನ್ನು ಒಪ್ಪಿಕೊಳ್ಳುವಂತೆ ಪೀಡಿಸುವಂತಿಲ್ಲ.
ಆದರೆ ಭಾರತದಲ್ಲಿ ಓರ್ವ ವ್ಯಕ್ತಿ ಅಪರಾಧವನ್ನು ಮಾಡಿರಬಹುದು ಎಂಬ ಶಂಕೆಯಿದ್ದರೇ ಸಾಕು, ಪೋಲೀಸರು ಅವರನ್ನು 90 ದಿನಗಳ ವರೆಗೂ ಕಸ್ಟಡಿಯಲ್ಲಿ ಇರಿಸಿಕೊಳ್ಳಲು ಅನುಮತಿಯನ್ನು ಕೋರಬಹುದು. ಗರಿಷ್ಟ 4 ದಿನಗಳ ಕಸ್ಟಡಿ ಎಲ್ಲಿ, 90 ದಿನಗಳ ಕಸ್ಟಡಿ ಎಲ್ಲಿ?

ಸಾಮಾನ್ಯವಾಗಿ ಭಾರತದಲ್ಲಿ ಪೋಲೀಸರು ಚಾರ್ಜ್ ಶೀಟನ್ನು ತಯಾರಿಸುವ ಮುನ್ನವೇ ಮತ್ತು ಸಾಕ್ಷಿಗಳನ್ನು ಕ್ರೋಢೀಕರಿಸುವ ಮುನ್ನವೇ ಆರೋಪಿಗಳನ್ನು ಬಂಧಿಸುತ್ತಾರೆ. ಕಸ್ಟಡಿಯಲ್ಲಿ ನಡೆಸುವ ಪ್ರಶ್ನಾವಳಿ ಒಪ್ಪಿತವಾದ ತನಿಖಾ ವಿಧಾನವಾಗಿ ಹೋಗಿದೆ. ಹಾಗಾಗಿ ಭಾರತದ ನ್ಯಾಯ ವ್ಯವಸ್ಥೆ ವಸಾಹತುಶಾಹಿಗಳಿಂದ ಬಿಡುಗಡೆ ಹೊಂದಿದ್ದರು, ಇಲ್ಲಿನ ವಿಧಾನಗಳು ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರು ಪಡಿಸುವುದಕ್ಕಾಗಿ ಬಂಧಿಸುವುದಿಲ್ಲ.
ಪೋಲೀಸರು ಬಂಧಿಸಿದವರನ್ನು 24 ಗಂಟೆಗಳ ಒಳಗೆ ನ್ಯಾಯಾಲಯಕ್ಕೆ ಪ್ರಸ್ತುತ ಪಡಿಸಬೇಕು ಎಂದು ಕಾನೂನು ಹೇಳುತ್ತದೆ. ಕಾನೂನು ತತ್ವಗಳು ಆರೋಪಿಯನ್ನು ವಿಚಾರಣೆಗೆ ಒಳಪಡಿಸಲು ಮಾತ್ರ ಬಂಧಿಸಬೇಕು ಎಂದು ಹೇಳಿದರೂ, ಭಾರತದ ನ್ಯಾಯ ವ್ಯವಸ್ಥೆಯಲ್ಲಿ ಇದರ ಪಾಲನೆಯನ್ನು ಕಾಣಲಾಗುವುದಿಲ್ಲ. ಪೋಲೀಸರು ನಡೆಸುವ ಬಂಧನಗಳಿಗೆ ಮತ್ತು ತನಿಖೆಗೆ ನ್ಯಾಯಾಂಗದ ಸಮ್ಮತಿ ಇದೆ.
ಇಂಡಿಯನ್ ಕ್ರಿಮಿನಲ್ ಪ್ರೊಸೀಜರ್ ಕೋಡನ್ನು ರಚಿಸಿದ ಸರ್ ಜೇಮ್ಸ್ ಫಿಟ್ಸ್ಜೇಮ್ಸ್ ಸ್ಟೀಫನ್ ಅವರು ಇಂಗ್ಲಿಷ್ ಪೋಲೀಸರು ನ್ಯಾಯಯುತ ವಿಚಾರಣೆಯನ್ನು ನಡೆಸುತ್ತಾರೆ ಎಂದು ಪರಿಗಣಿಸಿದ್ದರಂತೆ. ಪೋಲೀಸರು ಸ್ವತಂತ್ರವಾದ ತನಿಖೆ ನಡೆಸಿ ಅಗತ್ಯವಾದ ಸಾಕ್ಷಿಗಳೆಲ್ಲಾ ದಕ್ಕಿದ ನಂತರ ನ್ಯಾಯಾಲಯಕ್ಕೆ ಆರೋಪಿಗಳನ್ನು ಹಸ್ತಾಂತರಿಸಲು ಸಮರ್ಥರು ಎಂಬುದು ಅವರ ಅಭಿಪ್ರಾಯವಾಗಿತ್ತಂತೆ.
Also Read – ದೇಶದ ಕಾನೂನು ವ್ಯವಸ್ಥೆ ʻಭಾರತೀಕರಣ’ ಆಗಬೇಕು ಎಂದ ಸಿಜೆಐ ರಮಣ; ಹೀಗೆಂದರೇನು? (ಭಾಗ 1)
ಆದರೆ ಇಲ್ಲಿನ ಸ್ಥಳೀಯ ಪೋಲೀಸರು ಶಂಕಿತರಿಗೆ ಚಿತ್ರಹಿಂಸೆ ನೀಡಿ ಅವರು ಅಪರಾಧಗಳನ್ನು ಮಾಡಿರುವುದಾಗಿ ಒಪ್ಪಿಕೊಳ್ಳುವಂತೆ ಮಾಡುತ್ತಾರೆ ಎಂಬುದು ಅವರ ಅನಿಸಿಕೆಯಾಗಿದ್ದರಿಂದ ಯಾವುದೇ ಪೋಲೀಸ್ ಕಸ್ಟಡಿಗೆ ನ್ಯಾಯಾಲಯದ ಸಮ್ಮತಿ ಇರಬೇಕು ಎಂದು ಕಾನೂನನ್ನು ರಚಿಸಿದರು. ಆದರೆ ಈ ಇಡೀ ಪ್ರಕ್ರಿಯೆ ಕಾಲ ಕಳೆದಂತೆ ಉಲ್ಟಾ ಆಗಿ ನ್ಯಾಯಾಲಯದ ಸಮ್ಮತಿಯೊಂದಿಗೆ ಎಷ್ಟು ಕಾಲವಾದರು ‘ಶಂಕಿತರನ್ನು ಬಂಧಿಸಬಹುದು’ ಎಂಬ ಅರ್ಥ ಮೂಡಿದೆ.
ಸುಲಭಾಗಿ ಬಂಧನಗಳನ್ನು ಮಾಡಿದರೆ ಇಡೀ ವ್ಯವಸ್ಥೆ ‘ಶಂಕಿತ’ರಿಂದ ತುಂಬಿಹೋಗುತ್ತದೆ. ಎಲ್ಲಾ ಸಾಕ್ಷಿಗಳನ್ನು ಕೂಲಂಕುಶವಾಗಿ ಪರಿಶೀಲಿಸುವುದರ ಬದಲು ಎಲ್ಲಾ ‘ಶಂಕಿತರನ್ನು’ ಬಂಧಿಸಿ ಅವರನ್ನು ನ್ಯಾಯ ವ್ಯವಸ್ಥೆಯೊಳಗೆ ನೂಕಲಾಗುತ್ತಿದೆ. ಇವರಲ್ಲಿ ಯಾರು ದೋಷಿಗಳು ಯಾರು ನಿರ್ದೋಷಿಗಳು ಎಂದು ನಿರ್ಧರಿಸುವುದು ಈಗ ನ್ಯಾಯಾಲಯಗಳ ಕೆಲಸವಾಗಿ ಹೋಗಿದೆ.
ರಾಷ್ಟ್ರೀಯ ಅಪರಾಧ ದಾಖಲಾತಿ ಬ್ಯೂರೋ (ಎನ್.ಸಿ.ಆರ್.ಬಿ.) ಯ 2020ರ ವರದಿಯ ಪ್ರಕಾರ ದೇಶದಲ್ಲಿ 66,01,285 ಅಪರಾಧಗಳನ್ನು ದಾಖಲಿಸಲಾಗಿತ್ತು. ಆದರೆ 68,14,614 ಬಂಧನಗಳನ್ನು ಮಾಡಿರುವುದರಿಂದ ಅಪರಾಧಗಳಿಗಿಂತ ಹೆಚ್ಚು ಬಂಧನಗಳನ್ನು ನಾವು ನೋಡಬಹುದು.

ಯಾವುದೇ ಚಾರ್ಜ್ ಇಲ್ಲದೆ ಬಂಧಿತರಾಗಿರುವವರಿಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸುತ್ತಿರುವುದನ್ನು ಬಿಟ್ಟರೆ ಬೇರೆಯ ಮಾರ್ಗವೇ ಇಲ್ಲ. ಎನ್.ಸಿ.ಆರ್.ಬಿ.ಯ 2019ರ ಸೆರೆಮನೆ ಸಂಖ್ಯಾಂಶ ವರದಿಯ ಪ್ರಕಾರ 2019ರ ಡಿಸೆಂಬರ್ 31ರ ಹೊತ್ತಿಗೆ 4,78,600 ಸೆರೆಮನೆವಾಸಿಗಳು ನ್ಯಾಯಾಂಗದ ಕಸ್ಟಡಿಯಲ್ಲಿದ್ದರು (ಪೋಲೀಸ್ ಕಸ್ಟಡಿ ಅಲ್ಲ). ಇವರಲ್ಲಿ 3,30,487 ಮಂದಿ (69.05%) ವಿಚಾರಣೆಗೆ ಒಳಗಾಗಿದ್ದರು ಮತ್ತು 3,223 (0.67%) ಮಂದಿ ಯಾವುದೇ ಚಾರ್ಜ್ ಇಲ್ಲದೇ ಬಂಧಿತರಾಗಿದ್ದರು. 2018ರಲ್ಲಿ ಈ ಸಂಖ್ಯೆ 2,384 ಅಗಿದ್ದು ಒಂದು ವರ್ಷದಲ್ಲಿ ಚಾರ್ಜ್ ಇಲ್ಲದೆ ಬಂಧಿತರಾದವರ ಸಂಖ್ಯೆ 35% ಹೆಚ್ಚಳವನ್ನು ಕಂಡಿತು.
ಮತ್ತೊಂದೆಡೆ ನಮ್ಮನ್ನು ವಸಾಹತು ಆಗಿಸಿಕೊಂಡಿದ್ದ ಯು.ಕೆ. 2019-2020ರ ವರ್ಷದಲ್ಲಿ 58 ಲಕ್ಷ ಅಪರಾಧಗಳನ್ನು ದಾಖಲಿಸಿಕೊಂಡಿತ್ತು. ಆದರೆ ಬಂಧಿತರಾದವರ ಸಂಖ್ಯೆ ಕೇವಲ 2.6 ಲಕ್ಷ. ಯು.ಕೆ.ಯ ಸೆರೆಮನೆ ಸಂಖ್ಯಾಂಶಗಳ ಪ್ರಕಾರ ಗಂಭೀರ ಅಪರಾಧಗಳಲ್ಲಿ ಬಂಧನಕ್ಕೆ ಒಳಗಾಗದವರ ಸಂಖ್ಯೆ 16,000 ದಿಂದ 23,200ಕ್ಕೆ ಏರಿದೆ (15% ಇಂದ 27%).
ಯು.ಕೆ.ಯ ನ್ಯಾಯ ವ್ಯವಸ್ಥೆಯಲ್ಲಿ ಪೋಲೀಸರಿಗೆ ಚಾರ್ಜ್ ಇಲ್ಲದೆ ಬಂಧಿಸಲು ಅವಕಾಶವಿಲ್ಲ. ಬಹುತೇಕ ಸಂದರ್ಭಗಳಲ್ಲಿ ಚಾರ್ಜ್ ಇದ್ದರೂ ಪೋಲೀಸರು ಬಂಧಿಸುವುದನ್ನು ಪರಿಗಣಿಸುವುದಿಲ್ಲ, ಬದಲಾಗಿ ಆರೋಪಿಗಳಿಗೆ ನ್ಯಾಯಾಲಯಕ್ಕೆ ಹಾಜರಾಗಲು ಪೋಲೀಸರು ನಿರ್ದೇಶಿಸಿ ಸುಮ್ಮನಾಗಿ ಬಿಡುವರು. ಇದಾದ ನಂತರ ಬಹುತೇಕ ಪ್ರಕರಣಗಳಲ್ಲಿ ಬಂಧನ ರಹಿತವಾದ ವಿಚಾರಣೆಗಳನ್ನು ನ್ಯಾಯಾಲಯಗಳು ನಡೆಸುತ್ತವೆ.

ಭಾರತದಲ್ಲಿ ತನಿಖೆ ಇಲ್ಲದೇ ಶಂಕಿತರ ಹಿಂಡನ್ನೇ ಬಂಧಿಸಲಾಗುತ್ತದೆ. ಬಹುತೇಕ ಸನ್ನಿವೇಶಗಳಲ್ಲಿ ಮ್ಯಾಜಿಸ್ಟ್ರೇಟ್ ನ್ಯಾಯಾಲಯಗಳೂ ಸಹ ಈ ಬಂಧನಗಳಿಗೆ ಅವಕಾಶವನ್ನು ನೀಡುತ್ತವೆ. ಹಾಗಾಗಿ ಒಂದಾದ ಮೇಲೊಂದು ಜಾಮೀನು ಅರ್ಜಿಗಳು ನ್ಯಾಯಾಲಯಗಳ ಸಮಯವನ್ನು ತಿನ್ನುತ್ತವೆ. ಶಂಕಿತರನ್ನೆಲ್ಲಾ ಬಂಧಿಸುವುದು ಮತ್ತು ವಿಚಾರಣೆಗೆ ಗುಡ್ಡೆ ಹಾಕುವುದು ಸ್ಥಳೀಯರ ಕುರಿತು ವಸಾಹತುಶಾಹಿಗಳ ವರ್ತನೆಯ ಪ್ರತೀಕವಾಗಿದೆ. ಇದನ್ನು ಖಂಡಿತವಾಗಿ ಬದಲಿಸಬಹುದು. ನನ್ನ ಪ್ರಕಾರ ಸ್ಥಳೀಯ ಆರೋಪಿಗಳನ್ನು ಮತ್ತು ಸ್ಥಳೀಯ ಪೋಲೀಸರನ್ನು ವಸಾಹತುಶಾಹಿಗಳು ಹೇಗೆ ನಡೆಸಿಕೊಳ್ಳುತ್ತಿದ್ದರೋ, ಆ ವರ್ತನೆಯನ್ನು ವಸಾಹತು ನಂತರದ ಪ್ರಭುತ್ವ ಮುಂದುವರೆಸಿಕೊಂಡು ಬಂದಿದೆ.
ಬಹುಶಃ ಬದಲಾವಣೆಯನ್ನು ವಸಾಹತು-ಭಾರತೀಯ ಎಂಬ ದ್ವಂದ್ವಗಳನ್ನು ಮೀರಿ ಪ್ರಜಾತಾಂತ್ರೀಕರಣದ ದೃಷ್ಟಿಯಿಂದ ನೋಡಬೇಕು. ವಸಾಹತುಶಾಹಿ ನಂತರದ ಪ್ರಭುತ್ವ ಹಲವಾರು ಬಾರಿ ವಸಾಹತುಶಾಹಿ ವರ್ತನೆಯನ್ನು ತೋರಿ ಆ ದ್ವಂದ್ವವನ್ನು ಮೊದಲೇ ನಾಶ ಮಾಡುತ್ತಾ ಬಂದಿದೆ.
ಭಾಷೆ ಮತ್ತು ಶೈಲಿಯ ಬಗ್ಗೆ ಚೀಫ್ ಜಸ್ಟಿಸ್ ರಮಣ ಅವರು ತೋರಿಸುರುವ ಕಳಕಳಿ ಸ್ವತಂತ್ರವಾಗಿ ಪ್ರಾಮುಖ್ಯತೆಯನ್ನು ಪಡೆಯುವುದಿಲ್ಲ. ನ್ಯಾಯಾಲಯಗಳು ತಮ್ಮ ಅತ್ಯಂತ ಹಿಂದುಳಿದ ಕಕ್ಷಿಗಾರರ ಭಾಷೆಯಲ್ಲಿ ಪ್ರಕ್ರಿಯೆಗಳನ್ನು ನಡೆಸಲು ಆರಂಭಿಸಿದರೆ, ನ್ಯಾಯಾಲಯಗಳ ಪ್ರಕ್ರಿಯೆಗಳಲ್ಲಿ ದೊಡ್ಡ ಭಾಗವನ್ನು ಸಂತಾಲಿ, ಗೊಂಡಿ ಅಥವಾ ಉರ್ದು ಭಾಷೆಯಲ್ಲಿ ನಡೆಸಬೇಕಾಗುತ್ತದೆ.
ಕೃಪೆ: ದ ವೈರ್
ಮೂಲ: ಶಾಹ್ ರುಖ್ ಅಲಂ.
ಲೇಖಕರು ನವ ದೆಹಲಿಯಲ್ಲಿ ಅಭ್ಯಾಸಿಸುತ್ತಿರುವ ವಕೀಲರು