ಅಮೆರಿಕ (ವಾಷಿಂಗ್ಟನ್) ಏ.11 : ಭಾರತದಲ್ಲಿ ನೆಲೆಸಿರುವ ಮುಸ್ಲಿಮರು ಪಾಕಿಸ್ತಾನದಲ್ಲಿ ವಾಸಿಸುತ್ತಿರುವವರಿಗಿಂತಲೂ ಉತ್ತಮವಾದ ಜೀವನವನ್ನು ನಡೆಸುತ್ತಿದ್ದಾರೆ. ಅತಿಹೆಚ್ಚು ಮುಸ್ಲಿಮರನ್ನು ಹೊಂದಿರುವ ವಿಶ್ವದ ಎರಡನೇ ರಾಷ್ಟ್ರ ಭಾರತ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ಭಾರತದಲ್ಲಿ ಮುಸ್ಲಿಮರ ಬದುಕು ಸಂಕಷ್ಟದಲ್ಲಿದೆ ಅಥವಾ ಸರ್ಕಾರಗಳೇ ಅವರನ್ನು ಸಂಕಷ್ಟಕ್ಕೆ ದೂಡಿದೆ ಎಂದು ಹಲವು ಬರಹಗಳು ಸೂಚಿಸುತ್ತವೆ. ಅಂಥದ್ದೊಂದು ಗ್ರಹಿಕೆ ಇದ್ದಿದ್ದರೆ ಅಥವಾ ಅದು ನಿಜವೇ ಆಗಿದ್ದಿದ್ದರೆ 1947ರ ನಂತರದ ಕಾಲಘಟ್ಟದಲ್ಲಿ ಭಾರತದಲ್ಲಿ ಮುಸ್ಲಿಮರ ಜನಸಂಖ್ಯೆ ಹೆಚ್ಚಳವಾಗಲು ಸಾಧ್ಯವಾಗುತ್ತಿತ್ತೇ? ಎಂದು ಕೇಳಿದ್ದಾರೆ.

ಅಮೆರಿಕದ ಪೀಟರ್ಸನ್ ಇನ್‌ಸ್ಟಿಟ್ಯೂಟ್ ಫಾರ್ ಇಂಟರ್‌ನ್ಯಾಷನಲ್ ಎಕನಾಮಿಕ್ಸ್ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ಭಾಗವಹಿಸಿದ ನಿರ್ಮಲಾ ಸೀತಾರಾಮನ್, ‘ಪಾಕಿಸ್ತಾನ ಸ್ವತಃ ‘ಮುಸ್ಲಿಂ ರಾಷ್ಟ್ರ’ ಎಂದು ಘೋಷಿಸಿಕೊಂಡಿದೆ ಮತ್ತು ಅಲ್ಪಸಂಖ್ಯಾತರ ರಕ್ಷಣೆಗೆ ಬದ್ಧ ಎಂದು ಪ್ರತಿಜ್ಞೆ ಮಾಡಿದೆ. ಇದು ಸತ್ಯಕ್ಕಿಂತ ತುಂಬಾ ದೂರವಾದ ಮಾತು. ಮುಹಾಜಿರ್‌ಗಳು, ಶಿಯಾ ಮತ್ತು ಮುಖ್ಯವಾಹಿನಿಯಲ್ಲಿ ಇಲ್ಲದ ಪ್ರತಿಯೊಂದು ವರ್ಗದ ಮೇಲೂ ಹಿಂಸಾಚಾರ ನಡೆಯುತ್ತಿವೆ. ಭಾರತದಲ್ಲಿ ಮುಸ್ಲಿಮರು ವ್ಯಾಪಾರ ಮಾಡಿಕೊಂಡಿದ್ದಾರೆ. ಅವರ ಮಕ್ಕಳು ಶಿಕ್ಷಣ ಪಡೆಯುತ್ತಿರುವುದನ್ನು ನೀವು ಕಾಣಬಹುದು. ಸರ್ಕಾರದ ವತಿಯಿಂದ ಅವರಿಗೆ ವಿದ್ಯಾರ್ಥಿವೇತನ ನೀಡಲಾಗುತ್ತಿದೆ’ ಎಂದು ತಿಳಿಸಿದ್ದಾರೆ.






