ಶಿವಕುಮಾರ್ ಎ
ಪ್ರಧಾನಿ ನರೇಂದ್ರ ಮೋದಿಯವರು ಕೇಂದ್ರದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದು ಏಳು ವರ್ಷಗಳು ಸಂದಿವೆ. ಇವರನ್ನು ಇತಿಹಾಸ ಕಠೋರವಾಗಿ ನೋಡುವುದೋ ಅಥವಾ ಕನಿಕರದಿಂದ ನೋಡುವುದೋ ಎಂಬುದು ಭವಿಷ್ಯದಲ್ಲಿ ತಿಳಿಯಲಿದೆ. ಆದರೆ, ಸದ್ಯಕ್ಕಂತೂ ಅವರು ತಮ್ಮ ಜೀವನ ಅತ್ಯಂತ ಕ್ಲಿಷ್ಟಕರವಾದ ಸವಾಲನ್ನು ಎದುರಿಸುತ್ತಿದ್ದಾರೆ. ಹಲವು ರೀತಿಯಲ್ಲಿ ವರ್ಚಸ್ಸು ಕಳೆದುಕೊಂಡಿರುವ ತಮ್ಮ ಸರ್ಕಾರದ ಡ್ಯಾಮೇಜ್ ಕಂಟ್ರೋಲ್’ಗೆ ಮುಂದಾಗಿದ್ದಾರೆ. ಈವರೆಗೆ ತಮ್ಮೊಂದಿಗೆ ಬೆಳೆಸಿಕೊಂಡು ಬಂದಿದ್ದ ‘ಅಂತಸ್ತು’ ಉಳಿಸುವ ಪ್ರಯತ್ನದಲ್ಲಿ ತೊಡಗಿದ್ದಾರೆ. ಸಂಪೂರ್ಣ ಸಂಘ ಪರಿವಾರ ಈಗ ಅಖಾಡಕ್ಕೆ ಇಳಿಯಬೇಕಾದ ಪರಿಸ್ಥಿತಿ ಎದುರಾಗಿದೆ. ಕರೋನಾ ಎರಡನೇ ಅಲೆಯ ಸಂದರ್ಭದಲ್ಲಿ ಸ್ಥೈರ್ಯ ಕಳೆದುಕೊಂಡ ಕಾರ್ಯಕರ್ತರನ್ನು ಹುರಿದುಂಬಿಸಲು RSSನ ದ್ವಿತೀಯ ಹಂತದ ನಾಯಕರಾದ ದತ್ತಾತ್ರೆಯ ಹೊಸಬಾಳೆ ಅವರು ಕಾಲಿಗೆ ಚಕ್ರ ಕಟ್ಟಿಕೊಂಡು ಓಡಾಡುತ್ತಿದ್ದಾರೆ.
ಕಳೆದ ಕೆಲವು ವರ್ಷಗಳಿಂದ ಭಾರತವನ್ನು ‘ವಿಶ್ವಗುರು’ವನ್ನಾಗಿ ಮಾಡುವ ‘ಇಮೇಜ್’ಅನ್ನು ಇಷ್ಟು ದಿನಗಳ ಕಾಲ ಕಟ್ಟಿಕೊಂಡು ಬಂದಂತಹ ನರೇಂದ್ರ ಮೋದಿಯವರು, ಪ್ರಶ್ನಾತೀತ ನಾಯಕರಂತೆ ಬೆಳೆದರು. ಎಂತಹ ಕಠಿಣ ನಿರ್ಧಾರಗಳನ್ನು ತಾಳಲು ಹಿಂದೆಮುಂದೆ ನೋಡದ ‘ಜೀವನದಲ್ಲಿ ಒಂದು ಬಾರಿಗೆ ಮಾತ್ರ’ ಕಾಣಸಿಗುವ ರಾಜಕೀಯ ನಾಯಕ ಎಂಬಂತೆ ಅವರನ್ನು ಬಿಂಬಿಸಲಾಯಿತು. ನೋಟ್ ಬ್ಯಾನ್, ಆರ್ಟಿಕಲ್ ೩೭೦ ರದ್ದುಗೊಳಿಸಿದ್ದು ಈ ಮಾತಿಗೆ ಪೂರಕವಾಗಿ ಪರಿಣಮಿಸಿತು. ನೋಟ್ ಬ್ಯಾನ್ ನಿಂದ ಆರ್ಥಿಕತೆ ಪಾತಾಳಕ್ಕೆ ಕುಸಿದರೂ, ಕಾಶ್ಮೀರ ಸಮಸ್ಯೆಯಿಂದ ಅಮತರಾಷ್ಟ್ರೀಯ ಮಟ್ಟದಲ್ಲಿ ಟೀಕೆಗಳು ಕೇಳಿ ಬಂದರೂ ಆ ನಿರ್ಧಾರಗಳನ್ನು ಜನರು ಬೆಂಬಲಿಸಿದರು.
ಆದರೆ, ಯಾವಾಗ ಸಿಎಎ ಮತ್ತು ಕೃಷಿ ಕಾನೂನುಗಳನ್ನು ತರಲಾಯಿತೋ, ಜನರು ಬೀದಿಗಿಳಿದು ಪ್ರತಿಭಟಿಸಲು ಆರಂಭಿಸಿದರು. ಭಾರತದ ಗಲ್ಲಿಗಲ್ಲಿಗಳಲ್ಲಿ ಪ್ರತಿಭಟನೆಗೆ ಇಳಿದ ಜನರನ್ನು ಕೇಂದ್ರ ಸರ್ಕಾರವು, ‘ದೇಶದ್ರೋಹಿಗಳು’ ಎಂಬ ಪಟ್ಟದೊಂದಿಗೆ ಸ್ವಾಗತಿಸಿತು. ವಿದೇಶಿ ಶಕ್ತಿಗಳ ಪ್ರೇರಣೆಯಿಂದ ಭಾರತ ಮತ್ತು ಪ್ರಧಾನಿ ಮೋದಿಯವರ ‘ಇಮೇಜ್’ಗೆ ಧಕ್ಕೆ ತರುವ ಪ್ರಯತ್ನ ಎಂದು ಪ್ರತಿಭಟನೆಗಳನ್ನು ಬಿಂಬಿಸಲಾಯಿತು. ಕರೋನಾದಿಂದ ದೇಶದ ಪ್ರತಿಯೊಂದು ಮನೆಯಲ್ಲಿಯೂ ಆತಂಕದ ಮತ್ತು ಸಾವು-ನೋವುಗಳ ಛಾಯೆ ಮೂಡಿರುವ ಸಂದರ್ಭದಲ್ಲಿ ಕೇಂದ್ರ ಸರ್ಕಾರ ತನ್ನ ಇಮೇಜ್ ಬಗ್ಗೆಯೇ ಆಲೋಚಿಸುತ್ತಿದೆ. ಪ್ರತಿಯೊಬ್ಬ ಭಾರತೀಯನೂ ಸಾವಿಗೆ ಹೆದರುತ್ತಿರುವ ಸಂದರ್ಭದಲ್ಲಿ, ಆಕ್ಸಿಜನ್, ವೆಂಟಿಲೇಟರ್, ಆಸ್ಪತ್ರೆಗಳಲ್ಲಿ ಬೆಡ್ ಗಳ ಕೊರತೆಯಿಂದಾಗಿ ತಮ್ಮ ಪ್ರೀತಿ ಪಾತ್ರರು ಸಾವನ್ನಪ್ಪುತ್ತಿರುವ ಸಂದರ್ಭದಲ್ಲಿ, ಗುರುತು ಪರಿಚಯವಿಲ್ಲದ ಶವಗಳು ಗಂಗಾ ನದಿಯಲ್ಲಿ ತೇಲುತ್ತಿರುವಾಗ ಸರ್ಕಾರ ತಮ್ಮ ಇಮೇಜ್’ಗೆ ಉಂಟಾದ ಡ್ಯಾಮೇಜ್ ಕಂಟ್ರೋಲ್ ಮಾಡಲು ಮುಂದಾಗಿದೆ. ಎಲ್ಲಾ ದೋಷವನ್ನು ರಾಜ್ಯ ಸರ್ಕಾರಗಳ ಮೇಲೆ ಹೊರಿಸಲಾಗಿದೆ. ಕೋವಿಡ್ ಪರಿಸ್ಥಿತಿಯ ಕಳಪೆ ನಿರ್ವಹಣೆಗೆ ವಿಪಕ್ಷಗಳನ್ನು ದೂರಲಾಗುತ್ತಿದೆ.
ತಪ್ಪುಗಳನ್ನು ಮಾಡುವುದು ಮಾನವನ ಸಹಜ ಗುಣ. ಅದು ಯಾರೇ ಆಗಿರಲಿ. ಆದರೆ, ಸರಣಿ ಬಿಕ್ಕಟ್ಟುಗಳನ್ನು ಸೃಷ್ಟಿಸಿ ತಾನು ತಪ್ಪೇ ಮಾಡಿಲ್ಲ ಎಂದು ತನಗೆ ತಾನೇ ಕ್ಲೀನ್ ಚಿಟ್ ನೀಡುವುದು ಸರ್ಕಾರದ ಅಹಂಕಾರ ಹಾಗೂ ಅತಿಯಾದ ಆತ್ಮಾಭಿಮಾದ ಸೂಚನೆ.
ದೇಶಾದ್ಯಂತ ಅಪಾರ ಜನ ಮನ್ನಣೆ ಗಳಿಸಿದ ನಾಯಕರಲ್ಲಿ ಮೋದಿ ಮೊದಲಿಗರಲ್ಲ. ಇವರ ಹಿಂದೆ ಜವಾಹರ್ ಲಾಲ್ ನೆಹರೂ ಮತ್ತು ಇಂದಿರಾ ಗಾಂಧಿ, ಮೋದಿಯವರಿಗಿಂತ ಹೆಚ್ಚು ಜನಪ್ರಿಯತೆ ಹೊಂದಿದ್ದರು. ಅದರಲ್ಲೂ ೧೯೭೧ರ ಯುದ್ದದ ನಂತರ ಇವರ ಜನಪ್ರಿಯತೆ ಇನ್ನೂ ಹೆಚ್ಚಿತ್ತು. ರಾಜೀವ್ ಗಾಂಧಿ, ವಿ ಪಿ ಸಿಂಗ್, ಅಟಲ್ ಬಿಹಾರಿ ವಾಜಪೇಯಿ ಅವರು ಕೂಡಾ ಜನಪ್ರಿಯ ನಾಯಕರು. ಆದರೆ, ವಿಪಕ್ಷಗಳ, ಟೀಕಾಕಾರರ ಅಭಿಪ್ರಾಯಗಳಿಗೆ ಕಿವಿಗೊಡುವ ಗುಣ ಅವರಲ್ಲಿತ್ತು. ಟಿಕಾಕಾರರನ್ನು ವಿರೋಧಿಗಳಂತೆ ನಡೆಸಿಕೊಳ್ಳುವ ಗುಣ ಅವರಲ್ಲಿ ಇರಲಿಲ್ಲ.
ಆದರೆ, ಇವತ್ತಿನ ದಿನ ಈ ಗುಣವನ್ನು ನಿರೀಕ್ಷಿಸಲು ಸಾಧ್ಯವಿಲ್ಲ. ಕಳೆದ ಏಳು ವರ್ಷಗಳಲ್ಲಿ ಯಾವುದೇ ಕ್ಯಾಬಿನೆಟ್ ಸಚಿವರು, ಬಿಜೆಪಿ ಸದಸ್ಯರು, ಆರ್ ಎಸ್ ಎಸ್ ಮತ್ತು ಸಂಘ ಪರಿವಾರದ ಸದಸ್ಯರು ಮೋದಿ ವಿರುದ್ದ ಚಕಾರ ಎತ್ತಲು ಸಾಧ್ಯವಾಗಲಿಲ್ಲ. ಎಲ್ಲರೂ ಹೇಳಿದ್ದಕ್ಕೆಲ್ಲಾ ತಲೆಯಾಡಿಸುವ ಕೋಲೆ ಬಸವನಂತೆ ಪರಿವರ್ತನೆಗೊಂಡಿದ್ದರು. ಕ್ಯಾಬಿನೆಟ್ ಎನ್ನುವ ವ್ಯವಸ್ಥೆಯೇ ಪಾತಾಳಕ್ಕೆ ಕುಸಿದಿತ್ತು. ಪ್ರಮುಖವಾದ ಚರ್ಚೆಗಳು ಕ್ಯಾಬಿನೆಟ್’ನಲ್ಲಿ ನಡೆಯುತ್ತಲೇ ಇರಲಿಲ್ಲ. ಸಚಿವರು ಎಂದು ಅನ್ನಿಸಿಕೊಂಡವರು, ಕೇವಲ ಸಹಿ ಮಾಡಲು ಇರುವ ರಬ್ಬರ್ ಸ್ಟ್ಯಾಂಪುಗಳಂತಾಗಿದ್ದರು. ಸಂಸದೀಯ ಸಮಿತಿಗಳಿಗೆ ಬೆಲೆ ಇರಲಿಲ್ಲ. ವಿಪಕ್ಷಗಳು ತಿರಸ್ಕರಿಸಲ್ಪಟ್ಟಿದ್ದರು.
ಒಕ್ಕೂಟ ವ್ಯವಸ್ಥೆಯಲ್ಲಿನ ರಾಜ್ಯ ಸರ್ಕಾರಗಳ ಪರಿಸ್ಥಿತಿ ಇದಕ್ಕೆ ಹೊರತಾಗಿರಲಿಲ್ಲ. ಕೇಂದ್ರದ ನಿರ್ಧಾರಗಳಿಗೆ ತಲೆಬಾಗದವರ ಮೇಲೆ ಕೇಂದ್ರ ಸರ್ಕಾರದ ಅಧೀನದಲ್ಲಿರುವ ‘ಸ್ವಾಯತ್ತ’ ಸಂಸ್ಥೆಗಳನ್ನು ಛೂ ಬಿಡಲಾಯಿತು. ಪಶ್ಚಿಮ ಬಂಗಾಳ ಇದಕ್ಕೆ ಜ್ವಲಂತ ಉದಾಹರಣೆ. ಚುನಾವಣೆಯಲ್ಲಿ ಗೆಲುವು ಸಾಧಿಸಿದಕ್ಕೆ ದೀದಿ ನೇತೃತ್ವದ ಸರ್ಕಾರ ಈಗ ಬೆಲೆ ತೆರುತ್ತಿದೆ. ಇದೇ ರೀತಿ ಅರವಿಂದ ಕೇಜ್ರಿವಾಲ್, ಪಿನರಾಯಿ ವಿಜಯನ್, ಎನ್ ನಾರಾಯಣ ಸ್ವಾಮಿ ಮತ್ತು ಉದ್ದವ್ ಠಾಕ್ರೆಯವರನ್ನು ಕೂಡಾ ನಡೆಸಿಕೊಳ್ಳಲಾಗಿತ್ತು. ಕರ್ನಾಟಕ, ಮಧ್ಯಪ್ರದೇಶ, ಉತ್ತರಾಖಂಡ ಮತ್ತು ಅರುಣಾಚಲ ಪ್ರದೇಶದ ಸರ್ಕಾರಗಳನ್ನು ಹಾಡಹಗಲೇ ಪತನಗೊಳಿಸಲಾಗಿತ್ತು. ರಾಜಸ್ಥಾನ ಸರ್ಕಾರ ಕೂದಲೆಳೆಯ ಅಂತರದಲ್ಲಿ ಪತನವಾಗುವುದರಿಂದ ಬಚಾವಾಯಿತು.
ಆತಂಕಕ್ಕೆ ಕಾರಣವಾಗುವ ಕೋಮು ಧ್ರುವೀಕರಣ, ಹಿಂದೆಂದೂ ಕಾಣದಂತಹ ಹಿಂದು-ಮುಸ್ಲಿಂ ವಿಭಾಜಕ ರಾಜಕರಣವನ್ನು ಹೊರತುಪಡಿಸಿ, ಕೇಂದ್ರ ಹಾಗೂ ರಾಜ್ಯ ಸರ್ಕಾರಗಳ ನಡುವೆ ಮೂಡಿರುವ ಬಿಕ್ಕಟ್ಟು, ದೇಶದ ಏಕತೆಗೆ ಮಾರಕವಾಗಿದೆ. ದೇಶದಲ್ಲಿ ಬಹುತ್ವದ ಮೌಲ್ಯಗಳನ್ನು ಕೇಂದ್ರ ಸರ್ಕಾರ ಹೇರಲು ಪ್ರಯತ್ನಿಸಿದಷ್ಟೂ, ಪ್ರಾದೇಶಿಕ ಅಸ್ಮಿತೆ ಅಪಾಯಕ್ಕೆ ಒಳಗಾದಮತೆ ಭಾಸವಾಗುತ್ತದೆ. ಈ ಭಾವನೆ ಹೆಚ್ಚಾದಂತೆ ಕೇಂದ್ರ ಸರ್ಕಾರದಿಂದ ಅವು ದೂರವಾಗುತ್ತಿವೆ. ಇದಕ್ಕೆ ಉದಾಹರಣೆಯೆಂದರೆ, ಪಶ್ಚಿಮ ಬಂಗಾಳದಲ್ಲಿ ನಡೆದ ಚುನಾವಣೆಯಲ್ಲಿ ಬೆಂಗಾಲಿಗಳು ಬಿಜೆಪಿಗೆ ನೀಡಿದ ದಿಟ್ಟ ಉತ್ತರ. ತಮಿಳುನಾಡು ಚುನಾವಣೆಯಲ್ಲಿ ಹಿಂದುತ್ವ ಸಿದ್ದಾಂತಕ್ಕೆ ಉಂಟಾದ ಸೋಲು ಅದು. ರೈತರನ್ನು ನಡೆಸಿಕೊಳ‌್ಳುತ್ತಿರುವ ರೀತಿಯಿಂದ ಸಿಖ್ಖರು ಕೇಂದ್ರ ಸರ್ಕಾರದೊಂದಿಗೆ ಒಮ್ಮತವನ್ನು ಕಳೆದುಕೊಂಡಿದ್ದಾರೆ. ಪಂಜಾಬ್’ನಲ್ಲಿ ನಡೆದ ಸ್ಥಳೀಯ ಸಂಸ್ಥೆಗಳ ಚುನಾವಣೆಯ ಫಲಿತಾಂಶ ಇದಕ್ಕೆ ಉದಾಹರಣೆ.
ವಿವಿಧತೆಯಲ್ಲಿ ಏಕತೆಯನ್ನು ಕಾಣುವ ದೇಶದಲ್ಲಿ ಕೇವಲ ಏಕತೆಯನ್ನೇ ಪ್ರತಿಪಾದಿಸಿದರೆ, ಅದು ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಆದರೆ, ಮೋದಿ-ಶಾ ನೇತೃತ್ವದ ಬಿಜೆಪಿ ಅನುಸರಿಕೆಯ ರಾಜಕಾರಣವನ್ನು ಇನ್ನೂ ಅರಿತಿಲ್ಲ. ತಮ್ಮನ್ನು ವಿರೋಧಿಸುವವರ ವಿರುದ್ದ ದ್ವೇಷಿಸುವ ಗುಣ ಹಿಂದಿನಿಂದಲು ಅವರಲ್ಲಿ ಇದೆ. ಇದರ ಬೆಲೆಯನ್ನು ಅವರು ತೆರಲೇಬೇಕಾಗುತ್ತದೆ. ಓರ್ವ ವ್ಯಕ್ತಿಯ ಅಹಂಗಿಂತ ಭಾರತ ದೇಶ ಶ್ರೇಷ್ಟ. ಭಾರತದ ಆದರ್ಶಗಳು ಹಿಂದೂ ರಾಷ್ಟ್ರದ ಕನಸಿಗಿಂತಲೂ ಶ್ರೇಷ್ಟ.
ಮೂಲ: NDTV ಲೇಖಕರು: ಅಶುತೋಷ್ (ಸಂಪಾದಕರು: satyahindi.com)