ಪ್ರಮುಖ ಆಟಗಾರರ ಅನುಪಸ್ಥಿತಿಯಲ್ಲೂ ಏಕದಿನ ಸರಣಿಯನ್ನು ಗೆದ್ದು ಬೀಗಿದ ಭಾರತ ತಂಡ ಶುಕ್ರವಾರ ಆರಂಭಗೊಳ್ಳಲಿರುವ 5 ಪಂದ್ಯಗಳ ಟಿ-20 ಸರಣಿಯಲ್ಲಿ ಶುಭಾರಂಭದ ಮೂಲಕ ಆಧಿಪತ್ಯ ಸಾಧಿಸುವ ಗುರಿ ಹೊಂದಿದೆ.
ನಾಯಕ ರೋಹಿತ್ ಶರ್ಮ, ರಿಷಭ್ ಪಂತ್ ಮತ್ತು ಹಾರ್ದಿಕ್ ಪಾಂಡ್ಯ ಟಿ-20 ತಂಡವನ್ನು ಸೇರಿಕೊಂಡಿದ್ದಾರೆ. ಇದರಿಂದ ಟಿ-20 ಸರಣಿ ಮತ್ತಷ್ಟು ಕುತೂಹಲ ಹೆಚ್ಚಿಸಲಿದೆ.
ಟಿ20 ಸರಣಿಯ ಮೊದಲ ಪಂದ್ಯ ಇಂದು ರಾತ್ರಿ 8 ಗಂಟೆಗೆ ಆರಂಭಗೊಳ್ಳಲಿದೆ. ಯುವ ಆಟಗಾರರು ಏಕದಿನ ಸರಣಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವುದರಿಂದ ತಂಡದ ಆತ್ಮವಿಶ್ವಾಸ ಹೆಚ್ಚಿದೆ. ಅದರಲ್ಲೂ ಸ್ಪಿನ್ನರ್ ಆರ್.ಅಶ್ವಿನ್ ಅಖಾಡಕ್ಕೆ ಇಳಿದರೆ ಅವರ ಪ್ರದರ್ಶನದ ಮೇಲೆ ಎಲ್ಲರ ಕಣ್ಣು ನೆಡಲಿದೆ.

ರೋಹಿತ್ ಶರ್ಮಾ ಜೊತೆಗೆ ಎಡಗೈ ಬ್ಯಾಟ್ಸ್ಮನ್ ಇಶಾನ್ ಕಿಶನ್ ಆರಂಭಿಕ ಆಟಗಾರನಾಗಿ ಕಣಕ್ಕಿಳಿಯಬಹುದು. ದೀಪಕ್ ಹೂಡಾ, ಸೂರ್ಯಕುಮಾರ್ ಯಾದವ್, ದಿನೇಶ್ ಕಾರ್ತಿಕ್, ರವೀಂದ್ರ ಜಡೇಜಾ, ಭುವನೇಶ್ವರ್ ಕುಮಾರ್, ಹರ್ಷಲ್ ಪಟೇಲ್, ಅರ್ಷದೀಪ್ ಸಿಂಗ್ ಮುಂತಾದವರು ತಂಡಕ್ಕೆ ಮರಳಿರುವುದರಿಂದ ಎಲ್ಲಾ ವಿಭಾಗದಲ್ಲೂ ಬಲಿಷ್ಠವಾಗಿದೆ.
ಮತ್ತೊಂದೆಡೆ ವೆಸ್ಟ್ ಇಂಡೀಸ್ ತಂಡವನ್ನು ಹಗುರವಾಗಿ ಕಡೆಗಣಿಸಲು ಸಾಧ್ಯವಿಲ್ಲ. ಏಕೆಂದರೆ ಏಕದಿನ ಸರಣಿಯ ಎರಡನೇ ಪಂದ್ಯದಲ್ಲಿ ತಂಡ ಬೃಹತ್ ಮೊತ್ತ ಬೆಂಬತ್ತಿ ೩ ರನ್ ಗಳಿಂದ ಸೋಲುಂಡಿತ್ತು. ಅಲ್ಲದೇ ಓವರ್ ಗಳು ಕಡಿಮೆ ಇರುವುದರಿಂದ ತಂಡ ತಕ್ಕ ಪೈಪೋಟಿ ನೀಡುವುದರಲ್ಲಿ ಸಂಶಯವಿಲ್ಲ.