ಮಧ್ಯಮ ಕ್ರಮಾಂಕದಲ್ಲಿ ನಾಯಕ ಜೋ ರೂಟ್ ಮತ್ತು ಬೇರ್ ಸ್ಟೋ ಅವರ ಅಜೇಯ ಶತಕಗಳ ನೆರವಿನಿಂದ ಇಂಗ್ಲೆಂಡ್ ತಂಡ 7 ವಿಕೆಟ್ ಗಳಿಂದ ಭಾರತ ತಂಡವನ್ನು ಸೋಲಿಸಿ 5 ಪಂದ್ಯಗಳ ಟೆಸ್ಟ್ ಸರಣಿಯಲ್ಲಿ 2-2ರಿಂದ ಸಮಬಲ ಸಾಧಿಸಿದೆ.
ಬರ್ಮಿಂಗ್ ಹ್ಯಾಂ ಮೈದಾನದಲ್ಲಿ ನಡೆದ 5ನೇ ಟೆಸ್ಟ್ ಪಂದ್ಯದಲ್ಲಿ 378 ರನ್ ಗುರಿ ಬೆಂಬತ್ತಿರುವ ಇಂಗ್ಲೆಂಡ್ ತಂಡ ಅಂತಿಮ ದಿನದಾಟವಾದ ಮಂಗಳವಾರ 3 ವಿಕೆಟ್ ಗೆ 259 ರನ್ ಗಳಿಂದ ಎರಡನೇ ಇನಿಂಗ್ಸ್ ಮುಂದುವರಿಸಿ ಇಂಗ್ಲೆಂಡ್ 3 ವಿಕೆಟ್ ಕಳೆದುಕೊಂಡು ಜಯಭೇರಿ ಬಾರಿಸಿತು.
ನಿನ್ನೆ ಅರ್ಧಶತಕ ಬಾರಿಸಿ ಅಜೇಯರಾಗಿ ಉಳಿದಿದ್ದ ಜಾನಿ ಬೇರ್ ಸ್ಟೋ ಮತ್ತು ಜೋ ರೂಟ್ ಶತಕ ಪೂರೈಸಿದ್ದೂ ಅಲ್ಲದೇ ತಂಡಕ್ಕೆ ಸುಲಭ ಗೆಲುವು ತಂದುಕೊಟ್ಟರು. ಈ ಮೂಲಕ ಈ ಮೈದಾನದಲ್ಲಿ ದಾಖಲೆ ಮೊತ್ತ ಬೆಂಬತ್ತಿ ಗೆದ್ದ ದಾಖಲೆ ಬರೆದರು.

ಜೋ ರೂಟ್ 173 ಎಸೆತಗಳಲ್ಲಿ 19 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 142 ರನ್ ಬಾರಿಸಿ ಅಜೇಯರಾಗಿ ಉಳಿದರೆ, ಮೊದಲ ಇನಿಂಗ್ಸ್ ನಲ್ಲಿ ಶತಕ ಸಿಡಿಸಿದ್ದ ಜಾನಿ ಬೇರ್ ಸ್ಟೊ ಎರಡನೇ ಇನಿಂಗ್ಸ್ ನಲ್ಲೂ 145 ಎಸೆತಗಳಲ್ಲಿ 15 ಬೌಂಡರಿ ಮತ್ತು 1 ಸಿಕ್ಸರ್ ಒಳಗೊಂಡ 114 ರನ್ ಗಳಿಸಿ ತಂಡದ ಗೆಲುವಿನಲ್ಲಿ ಮಹತ್ವದ ಪಾತ್ರ ವಹಿಸಿದರು.
ಕೆಲವು ತಿಂಗಳ ಹಿಂದೆ ನಡೆದ ಸರಣಿಯಲ್ಲಿ ಭಾರತ 2-1ರಿಂದ ಮುನ್ನಡೆ ಸಾಧಿಸಿತ್ತು. ಆದರೆ ಕೊರೊನಾ ವೈರಸ್ ಅಬ್ಬರದ ಹಿನ್ನೆಲೆಯಲ್ಲಿ 5ನೇ ಹಾಗೂ ಅಂತಿಮ ಪಂದ್ಯವನ್ನು ಮುಂದೂಡಲಾಗಿತ್ತು.