ಆಸ್ಟ್ರೇಲಿಯಾದ ಗಬ್ಬಾ ಕ್ರೀಡಾಂಗಣದಲ್ಲಿ ನಡೆದ 4ನೇ ಟೆಸ್ಟ್ ಪಂದ್ಯದ ಜಯದ ಮೂಲಕ ಟೆಸ್ಟ್ ಸರಣಿಯನ್ನು ಗೆದ್ದ ಭಾರತ ತಂಡಕ್ಕೆ ಬಿಸಿಸಿಐ 5 ಕೋಟಿ ರೂಗಳ ನಗದು ಬಹುಮಾನ ಘೋಷಿಸಿದೆ.
ಈ ಕುರಿತಂತೆ ಟ್ವೀಟ್ ಮೂಲಕ ಮಾಹಿತಿ ಹಂಚಿದ ಬಿಸಿಸಿಐ, ಈ ಸರಣಿ ಜಯ ಭಾರತೀಯ ಕ್ರಿಕೆ್ಟ್ ನ ಇತಿಹಾಸದಲ್ಲಿ ಸುದೀರ್ಘ ಕಾಲದವರೆಗೂ ನೆನಪಿನಲ್ಲಿರುತ್ತದೆ ಎಂದು ಸಂತಸ ವ್ಯಕ್ತಪಡಿಸಿದ್ದು, ಭಾರತ ತಂಡದ ಆಟಗಾರರು ಮತ್ತು ತಂಡದ ಕೋಚಿಂಗ್ ಹಾಗೂ ಇತರೆ ಸಿಬ್ಬಂದಿಗಳಿಗೆ 5 ಕೋಟಿ ರೂ ನಗದು ಘೋಷಣೆ ಮಾಡಿದೆ.
ಆಸ್ಟ್ರೇಲಿಯಾ ವಿರುದ್ಧದ ಭಾರತದ ಗೆಲುವು ಭಾರತ ತಂಡದ ಅಭಿಮಾನಿಗಳಲ್ಲಿ ಸಂಭ್ರಮ ಮನೆಮಾಡಿದ್ದು, ಭಾರತೀಯ ತಂಡದ ಈ ಐತಿಹಾಸಿಕ ವಿಜಯಕ್ಕೆ ಮಾಜಿ ಮತ್ತು ಹಾಲಿ ಆಟಗಾರರು, ರಾಜಕೀಯ ನಾಯಕರು, ಸೆಲೆಬ್ರಿಟಿಗಳು ಸೇರಿದಂತೆ ಕೋಟ್ಯಾಂತರ ಮಂದಿ ಶುಭಾಶಯಗಳ ಮಹಾಪೂರವನ್ನೇ ಹರಿಸಿದ್ದಾರೆ.
ಆಸ್ಟ್ರೇಲಿಯಾ ವಿರುದ್ದದ 4ನೇ ಮತ್ತು ಅಂತಿಮ ಟೆಸ್ಟ್ ನಲ್ಲಿ ಪ್ರವಾಸಿ ಭಾರತ ತಂಡ ಪ್ರಬಲ ಆಸ್ಟ್ರೇಲಿಯಾ ತಂಡವನ್ನು 3 ವಿಕೆಟ್ ಗಳ ಅಂತರದಲ್ಲಿ ಮಣಿಸಿ ಟೆಸ್ಟ್ ಸರಣಿಯನ್ನು ಕೈ ವಶ ಮಾಡಿಕೊಳ್ಳುವ ಮೂಲಕ ಕಳೆದ ಮೂರು ದಶಕಗಳ ದಾಖಲೆಯನ್ನು ಮುರಿದಿದೆ. ಆಸ್ಟ್ರೇಲಿಯಾ ಕ್ರಿಕೆಟ್ ತಂಡದ ಭದ್ರಕೋಟೆಯೆಂದೇ ಕರೆಯಲ್ಪಡುತ್ತಿದ್ದ ಗಬ್ಬಾ ಕ್ರೀಡಾಂಗಣದಲ್ಲಿ ಕಳೆದ 32 ವರ್ಷಗಳಿಂದ ಆಸ್ಟ್ರೇಲಿಯಾ ಒಂದು ಪಂದ್ಯವನ್ನೂ ಸೋತಿಲ್ಲ.
ಆಸ್ಟ್ರೇಲಿಯಾ ತಂಡದ ಆಟಗಾರರಿಗೆ ಹೋಲಿಸಿದರೆ ಭಾರತ ತಂಡದ ಆಟಗಾರರು ತೀರಾ ಅನನುಭವಿಗಳು. ಅನನುಭವಿ ಆಟಗಾರರೇ ಹೆಚ್ಚಿದ್ದ ಭಾರತದ ತಂಡವು ಆಸ್ಟ್ರೇಲಿಯನ್ನರು ಮರೆಯಲಾಗದ ಸೋಲನ್ನುಣಿಸಿ ಭಾರತಕ್ಕೆ ಮರೆಯಲಾಗದ ಗೆಲುವನ್ನು ತಂದುಕೊಟ್ಟಿದೆ.