ಅತಿಥೇಯ ಭಾರತ ಹಾಗೂ ಪ್ರವಾಸಿ ಅಫ್ಘಾನಿಸ್ತಾನ ತಂಡಗಳ ನಡುವಿನ ಮೂರನೇ ಹಾಗೂ ಅಂತಿಮ ಟಿ20 ಪಂದ್ಯ ಇಂದು ಬೆಂಗಳೂರಿನಲ್ಲಿ ನಡೆಯಲಿದೆ. ಸರಣಿಯಲ್ಲಿ ಈಗಾಗಲೇ 2-0 ಅಂತರದಿಂದ ಭಾರತ ಪ್ರಶಸ್ತಿ ತನ್ನದಾಗಿಸಿಕೊಂಡಿದ್ದು, ಇಂದಿನ ಪಂದ್ಯವನ್ನು ಗೆದ್ದು ಕ್ಲೀನ್ ಸ್ವೀಪ್ ಮಾಡುವ ಗುರಿಯೊಂದಿಗೆ ಕಣಕ್ಕಿಳಿಯಲು ಸಜ್ಜಾಗಿದೆ.
ಉಭಯ ತಂಡಗಳ ನಡುವಿನ 3ನೇ ಟಿ20 ಹಣಾಹಣಿಗೆ ಬೆಂಗಳೂರಿನ ಎಂ. ಚಿನ್ನಸ್ವಾಮಿ ಅಂಗಳ ಸಜ್ಜಾಗಿದ್ದು, ಎರಡು ತಂಡಗಳ ಆಟಗಾರರು ಈಗಾಗಲೇ ಚಿನ್ನಸ್ವಾಮಿ ಅಂಗಳದಲ್ಲಿ ಅಭ್ಯಾಸ ನಡೆಸಿದ್ದಾರೆ. ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಉತ್ತಮ ಪ್ರದರ್ಶನ ನೀಡಿರುವ ಭಾರತ ಈ ಪಂದ್ಯವನ್ನು ಸುಲಭವಾಗಿ ಗೆಲ್ಲುವ ನಿರೀಕ್ಷೆ ಹೊಂದಿದೆ. ಆದರೆ ಆರಂಭದ ಎರಡು ಪಂದ್ಯಗಳಲ್ಲಿ ಶೂನ್ಯಕ್ಕೆ ಔಟಾಗಿ ನಿರಾಸೆ ಮೂಡಿಸಿರುವ ತಂಡದ ನಾಯಕ ರೋಹಿತ್ ಶರ್ಮ ಪ್ರದರ್ಶನದ ಮೇಲೆ ಎಲ್ಲರ ಗಮನ ನೆಟ್ಟಿದೆ.

ಉಳಿದಂತೆ ಯಶಸ್ವಿ ಜೈಸ್ವಾಲ್, ವಿರಾಟ್ ಕೊಹ್ಲಿ, ಶಿವಂ ದುಬೆ ಅವರುಗಳು ಭರ್ಜರಿ ಫಾರ್ಮ್‌ನಲ್ಲಿರುವುದು ತಂಡದ ಬಲವನ್ನು ಹೆಚ್ಚಿಸಿದೆ. ಬೌಲಿಂಗ್ ವಿಭಾಗ ಕೂಡ ಬಲಿಷ್ಠವಾಗಿದ್ದು, ಈ ಪಂದ್ಯದಲ್ಲೂ ಪ್ರವಾಸಿ ಅಫ್ಘಾನ್ ತಂಡದ ಬ್ಯಾಟ್ಸ್‌ಮನ್‌ಗಳಿಗೆ ಕಡಿವಾಣ ಹಾಕುವ ನಿರೀಕ್ಷೆ ಹೊಂದಿದ್ದಾರೆ. ಎರಡು ಪಂದ್ಯಗಳನ್ನು ಗೆದ್ದುಬೀಗಿರುವ ಭಾರತ ಇಂದಿನ ಪಂದ್ಯಕ್ಕೂ ಬದಲಾವಣೆ ಇಲ್ಲದೆ ಕಣಕ್ಕಿಳಿಯುವ ಸಾಧ್ಯತೆ ಇದೆ.

ಮತ್ತೊಂದೆಡೆ ಸರಣಿ ಸೋಲಿನ ಆಘಾತ ಕಂಡಿರುವ ಅಫ್ಘಾನಿಸ್ತಾನ ಕೊನೆಯ ಪಂದ್ಯದಲ್ಲಾದರೂ ಗೆದ್ದು ಪ್ರತಿಷ್ಠೆ ಉಳಿಸಿಕೊಳ್ಳುವ ನಿರೀಕ್ಷೆ ಹೊಂದಿದೆ. ಬ್ಯಾಟಿಂಗ್‌ನಲ್ಲಿ ಬಲಿಷ್ಠವಾಗಿದ್ದರೂ, ಬೌಲರ್‌ಗಳು ಟೀಂ ಇಂಡಿಯಾದ ಬ್ಯಾಟರ್‌ಗಳನ್ನು ಕಟ್ಟಿಹಾಕುವಲ್ಲಿ ಸಾಧ್ಯವಾಗುತ್ತಿಲ್ಲ. ಈ ಹಿನ್ನೆಲೆಯಲ್ಲಿ ಇಂದಿನ ಪಂದ್ಯದಲ್ಲಿ ಅಫ್ಘನ್ ಬೌಲರ್‌ಗಳ ಪ್ರದರ್ಶನದ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬೆಂಗಳೂರಿನ ಎಂ. ಚಿನ್ನಸ್ವಾಮಿ ಸ್ಟೇಡಿಯಂನ ಪಿಚ್ ಬ್ಯಾಟರ್‌ಗಳಿಗೆ ಅನುಕೂಲವಾಗಿದ್ದು, ಈ ಪಂದ್ಯದಲ್ಲಿ ರನ್ ಹೊಳೆಯೇ ಹರಿಯುವ ನಿರೀಕ್ಷೆ ಕ್ರಿಕೆಟ್ ಅಭಿಮಾನಿಗಳು ಹೊಂದಿದ್ದಾರೆ.