ಸುಮಾರು ಐದು ತಿಂಗಳ ಬಳಿಕ ವಿಶ್ವದ ಅತಿ ದೊಡ್ಡ ಲಸಿಕಾ ಉತ್ಪಾದನಾ ಘಟಕ ಹೊಂದಿರುವ ಭಾರತವು ಮುಂದಿನ ತಿಂಗಳಿಂದ ಮತ್ತೆ ಕೋವಿಡ್ ಲಸಿಕೆಗಳನ್ನು ವಿದೇಶಕ್ಕೆ ರಫ್ತು ಮಾಡಲಿದೆ. ಪ್ರಧಾನಿ ಮೋದಿ ಅಮೇರಿಕಾ ಪ್ರವಾಸ ಕೈಗೊಳ್ಳುವ ಒಂದು ದಿನದ ಮುಂಚೆ ಲಸಿಕೆಗಳ ರಫ್ತು ಆರಂಭವಾಗಲಿದೆ.
ಭಾರತದಲ್ಲಿ ಕೊರೋನಾ ಸೋಂಕಿನ ಎರಡನೇ ಅಲೆಯ ತೀವ್ರತೆಯು ಹತೋಟಿಗೆ ಬರದೇ ಇದ್ದಾಗ ವಿಪಕ್ಷಗಳ ಒತ್ತಡದಿಂದ ಅನಿವಾರ್ಯವಾಗಿ ಕೇಂದ್ರ ಸರ್ಕಾರ ಲಸಿಕೆ ರಫ್ತು ಮಾಡುವುದನ್ನು ನಿಲ್ಲಿಸಿತ್ತು. ಆ ಬಳಿಕ ಭಾರತದ ವಯಸ್ಕರಿಗೆ ಲಸಿಕೆ ನೀಡುವತ್ತ ಗಮನ ಹರಿಸಲಾಗಿತ್ತು.. ಡಿಸೆಂಬರ್ ಅಂತ್ಯದ ವೇಳೆಗೆ, ದೇಶ 94.4 ಕೋಟಿ ವಯಸ್ಕರಿಗೆ ಲಸಿಕೆ ನೀಡುವ ಗುರಿಯನ್ನು ಸರ್ಕಾರ ಹೊಂದಿದೆ. ಸದ್ಯಕ್ಕೆ ಇದರಲ್ಲಿ 61% ಪ್ರಗತಿಯನ್ನು ಸಾಧಿಸಿದೆ.
ಒಂದು ವೇಳೆ ಮೊದಲಿಗೆ ರಫ್ತಿನತ್ತ ಹೆಚ್ಚು ಗಮನ ಹರಿಸದೇ, ದೇಶದ ಜನರಿಗೆ ಲಸಿಕೆ ನೀಡುವತ್ತ ಶ್ರಮ ವಹಿಸಿದ್ದರೆ ಇನ್ನೂ ಹೆಚ್ಚಿನ ಪ್ರಗತಿ ಸಾಧಿಸಲು ಸಾಧ್ಯವಿತ್ತು. ಆದರೆ, ಸರ್ಕಾರ ಎಚ್ಚೆತ್ತುಕೊಳ್ಳುವಾಗಲೇ ಸಾಕಷ್ಟು ತಡವಾಗಿತ್ತು.

ವಾಷಿಂಗ್ಟನ್’ನಲ್ಲಿ ನಡೆಯಲಿರುವ ಕ್ವಾಡ್ ರಾಷ್ಟ್ರಗಳ ಶೃಂಗ ಸಭೆಯಲ್ಲಿ ಲಸಿಕೆ ರಫ್ತಿನ ಕುರಿತಾಗಿ ಚರ್ಚೆಯಾಗುವುದು ಖಚಿತ. ಈ ಸಭೆಯಲ್ಲಿ ಅಮೇರಿಕಾ, ಭಾರತ, ಜಪಾನ್ ಹಾಗೂ ಆಸ್ಟ್ರೇಲಿಯಾದ ನಾಯಕರು ಭಾಗವಹಿಸಲಿದ್ದಾರೆ.
ಈ ಕುರಿತಾಗಿ ಮಾಧ್ಯಮಗಳೊಂದಿಗೆ ಮಾತನಾಡಿರುವ ಕೇಂದ್ರ ಆರೋಗ್ಯ ಸಚಿವರಾದ ಮಾನ್ಸುಖ್ ಮಾಂಡವಿಯ ಅವರು, ಲಸಿಕಾ ರಫ್ತು ಅಭಿಯಾನವನ್ನು ‘ವ್ಯಾಕ್ಸಿನ್ ಮೈತ್ರಿ’ ಎಂದು ಕರೆಯಲಾಗುವುದು. ಜಾಗತಿಕ ಲಸಿಕಾ ರಫ್ತು ಯೋಜನೆ ‘ಕೊವ್ಯಾಕ್ಸ್’ ಹಾಗೂ ನೆರೆಹೊರೆಯ ರಾಷ್ಟ್ರಗಳ ಅಗತ್ಯತೆಯನ್ನು ಪೂರೈಸುವತ್ತ ಗಮನ ಹರಿಸಲಾಗುವುದು, ಎಂದು ಹೇಳಿದ್ದಾರೆ.
“ಏಪ್ರಿಲ್ ನಂತರ ದೇಶದ ಲಸಿಕಾ ಉತ್ಪದನಾ ವೇಗವು ದ್ವಿಗುಣಕ್ಕಿಂತ ಹೆಚ್ಚಾಗಿದೆ. ಮುಂದಿನ ತಿಂಗಳು 300 ಮಿಲಿಯನ್’ಗಿಂತಲೂ ಅಧಿಕ ಡೋಸ್ ಲಸಿಕೆಯನ್ನು ಉತ್ಪಾದಿಸುವ ಗುರಿಯನ್ನು ಭಾರತ ಹೊಂದಿದೆ. ಹೊಸ ಲಸಿಕಾ ತಯಾರಿಕಾ ಕಂಪನಿಗಳಿಗೆ ಲಸಿಕೆಗೆ ಉತ್ಪಾದಿಸಲು ಅನುಮತಿ ದೊರೆಯುವ ಸಂಭಾವ್ಯತೆ ಇರುವುದರಿಂದ ಮೂರು ತಿಂಗಳಲ್ಲಿ ನೂರು ಕೋಟಿ ಡೋಸ್ ಲಸಿಕೆ ಉತ್ಪಾದನೆಯಾಗುವ ಸಾಧ್ಯತೆಯಿದೆ,” ಎಂದು ಅವರು ಹೇಳಿದ್ದಾರೆ.
ಈ ಬಾರಿ ದೇಶದ ಎಲ್ಲಾ ರಾಜ್ಯಗಳಿಗೆ ಬೇಕಾಗುವಷ್ಟು ಲಸಿಕೆಯನ್ನು ತಲುಪಿಸಿದ ನಂತರ ಹೆಚ್ಚುವರಿಯಾಗಿ ಉಳಿಯುವ ಲಸಿಕೆಗಳನ್ನು ಮಾತ್ರ ರಫ್ತು ಮಾಡಲಾಗುವುದು ಎಂದು ಸಚಿವರು ಸ್ಪಷ್ಟಪಡಿಸಿದ್ದಾರೆ.
ಲಸಿಕಾ ರಫ್ತಿನ ಮೇಲೆ ನಿರ್ಬಂಧ ಹೇರುವ ಮೊದಲು ಭಾರತವು ಸುಮಾರು ನೂರು ರಾಷ್ಟ್ರಗಳಿಗೆ ಸುಮಾರು 6.6 ಕೋಟಿ ಡೋಸ್’ನಷ್ಟು ಲಸಿಕೆಯನ್ನು ದಾನವಾಗಿ ನೀಡಿತ್ತು ಅಥವಾ ಮಾರಾಟ ಮಾಡಿತ್ತು. ಇದರ ವಿರುದ್ದ ವಿಪಕ್ಷಗಳು ಸರ್ಕರದ ಮೇಲೆ ತೀವ್ರವಾದ ಟೀಕಾ ಪ್ರಹಾರ ನಡೆಸಿದ್ದವು. ಎರಡನೇ ಅಲೆಯು ಉತ್ತುಂಗಕ್ಕೆ ಏರುತ್ತಿದ್ದಂತೆಯೇ ತನ್ನ ತಪ್ಪನ್ನು ಅರಿತುಕೊಂಡ ಸರ್ಕಾರ ಲಸಿಕೆಗಳ ರಫ್ತನ್ನು ನಿಲ್ಲಿಸಿತ್ತು.
ಏಪ್ರಿಲ್ ಬಳಿಕ ಪ್ರಪಂಚದ ಅತಿ ದೊಡ್ಡ ಲಸಿಕೆ ತಯಾರಿಕಾ ಕಂಪನಿಯಾದ ಸೀರಮ್ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರತಿ ತಿಂಗಳು ಇಪ್ಪತ್ತು ಕೋಟಿ ಡೋಸ್ ಲಸಿಕೆಗಳನ್ನು ತಯಾರಿಸುತ್ತಿದೆ. ಈಗ ದೇಶದಲ್ಲಿ ಎಲ್ಲಾ ಲಸಿಕೆ ತಯಾರಕರು ಸೇರಿ ವಾರ್ಷಿಕವಾಗಿ 300 ಕೋಟಿ ಡೋಸ್ ಉತ್ಪಾದಿಸುವ ಕ್ಷಮತೆಯನ್ನು ಹೊಂದಿದೆ