ಟೈಮ್ಸ್ ಪತ್ರಿಕೆ 2021ರ ಜಗತ್ತಿನ ಅತ್ಯಂತ ಪ್ರಭಾವಶಾಲಿ ವ್ಯಕ್ತಿಗಳ ತನ್ನ ಪಟ್ಟಿಯನ್ನು ಇತ್ತೀಚಿನ ಆವೃತ್ತಿಯಲ್ಲಿ (27 ಸೆಪ್ಟೆಂಬರ್ – 4 ಅಕ್ಟೋಬರ್) ಪ್ರಕಟಿಸಿದೆ. ಈ ಪಟ್ಟಿಯಲ್ಲಿ ಮೂರು ಭಾರತೀಯರು ಕಾಣಿಸಿಕೊಂಡಿದ್ದಾರೆ. ಈ ಮೂರ್ವರಲ್ಲಿ ಇಬ್ಬರು ರಾಜಕಾರಣಿಗಳಾಗಿದ್ದಾರೆ.
ಟೈಮ್ಸ್ ಪತ್ರಿಕೆಯಲ್ಲಿ ಮೋದಿ ಕಾಣಿಸಿಕೊಂಡಿರುವುದು ಇದೇ ಮೊದಲೇನಲ್ಲ. ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರ ಪ್ರೊಫೈಲನ್ನು ಬರೆದಿರುವ ಭಾರತೀಯ – ಅಮೇರಿಕನ್ ಪತ್ರಕರ್ತ ಫರೀದ್ ಝಕಾರಿಯಾ ಅವರು ಮೋದಿ ಭಾರತವನ್ನು ಧರ್ಮನಿರಪೇಕ್ಷತೆಯಿಂದ ಹಿಂದೂ ರಾಷ್ಟ್ರವಾದಕ್ಕೆ ತಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ.
ಮೋದಿ ಸರಕಾರವು ಮುಸಲ್ಮಾನರ ಹಕ್ಕುಗಳನ್ನು ಕಸಿದುಕೊಂಡು, “ಇದರ ಕುರಿತು ವರದಿ ಮಾಡುವ ಅಥವಾ ಪ್ರಶ್ನಿಸುವ ಪತ್ರಕರ್ತರನ್ನು ಬಂಧಿಸುತ್ತಾ, ಬೆದರಿಸುತ್ತಾ ಮತ್ತು ಎನ್.ಜಿ.ಒ. ಹಾಗು ವಕಾಲತ್ತು ಗುಂಪುಗಳ ಶಕ್ತಿ ಕುಂದಿಸುವ ಕಾಯ್ದೆಗಳನ್ನು ಜಾರಿಗೆ ತಂದಿದೆ” ಎಂದು ಬರೆದಿದ್ದಾರೆ.
ವಿವಿಧ ಆಯಾಮಗಳಲ್ಲಿ ಪ್ರಭಾವ ಬೀರುವ ವ್ಯಕ್ತಿಗಳನ್ನು ಗುರುತಿಸುವ ಈ ಪಟ್ಟಿಯಲ್ಲಿ ಇರುವ ಮತ್ತೋರ್ವ ರಾಜಕಾರಣಿ ಮಮತಾ ಬ್ಯಾನರ್ಜಿ. ಬಿಜೆಪಿಯ ಆಕ್ರಮಣಕಾರಿ ಪ್ರಚಾರದ ನಡುವೆಯೂ ಸತತವಾಗಿ ಮೂರನೇ ಬಾರಿ ಪಶ್ಚಿಮ ಬಂಗಾಳದಲ್ಲಿ ಬ್ಯಾನರ್ಜಿ ಅವರು ಮುಖ್ಯಮಂತ್ರಿಯಾಗಿ ಚುನಾಯಿತರಾಗಿದ್ದಾರೆ. ಬಾರ್ಖಾ ದತ್ತ್ ಅವರು ಮೋದಿಯ ವಿರುದ್ಧದ ಯಾವುದೇ ಮೈತ್ರಿ ಕೂಟದಲ್ಲಿ ಮಮತಾ ಬ್ಯಾನರ್ಜೀ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ ಎಂದು ಬರೆದಿದ್ದಾರೆ.
ಪೂಣೆಯ ಸೀರಂ ಇನ್ಸ್ಟಿಟ್ಯೂಟ್ ಆಫ್ ಇಂಡಿಯಾದ ಸಿ.ಇ.ಒ. ಆದ ಅದಾರ್ ಪೂನಾವಾಲ ಅವರು ಈ ಪಟ್ಟಿಯಲ್ಲಿ ಕಾಣಿಸಿಕೊಂಡಿರುವ ಮೂರನೇ ಭಾರತೀಯರಾಗಿದ್ದಾರೆ. ಟೈಮ್ಸ್ ನ ಪತ್ರಕರ್ತರಾದ ಅಭಿಶ್ಯಾಂತ್ ಕಿದಂಗೂರ್ ಅವರು ಅದಾರ್ ಪೂನಾವಾಲಾ ಅವರ ಪ್ರೊಫೈಲನ್ನು ಬರೆದಿದ್ದಾರೆ.
ಮೋದಿ ಎಂಬ ಪ್ರಭಾವಿ ನಾಯಕ
ಜವಹರಲಾಲ ನೆಹರು ಮತ್ತು ಇಂದಿರಾ ಗಾಂಧಿ ಅವರ ನಂತರ ಭಾರತ ಕಂಡಿರುವ ಮೂರನೇ ಅತ್ಯಂತ ಪ್ರಭಾವಿ ನಾಯಕ ನರೇಂದ್ರ ಮೋದಿ ಎಂದು ಝಕಾರಿಯಾ ಹೇಳುತ್ತಾರೆ.
“ಭಾರತದ ಪ್ರಥಮ ಪ್ರಧಾನ ಮಂತ್ರಿ ಜವಹರಲಾಲ ನೆಹರು ಭಾರತವನ್ನು ಧರ್ಮನಿರಪೇಕ್ಷ ಪ್ರಜಾಪ್ರಭುತ್ವವನ್ನಾಗಿ ಸ್ಥಾಪಿಸುವುದರಲ್ಲಿ ಪ್ರಮುಖ ಪಾತ್ರ ವಹಿಸಿದರು. ಯುದ್ಧಗಳ ಸಂದರ್ಭದಲ್ಲಿ, ತುರ್ತು ಪರಿಸ್ಥಿತಿಯಲ್ಲಿ, ಒಳ ಸಂಘರ್ಷಗಳು ಹೆಚ್ಚಾಗುತ್ತಿದ್ದ ಸಂಧಿಗ್ದ ಪರಿಸ್ಥಿತಿಯಲ್ಲಿ ಇಂದಿರಾ ಗಾಂಧಿ ಪ್ರಭಾವಶಾಲಿ ಆಡಳಿತವನ್ನು ನಡೆಸಿದ್ದರು. ಇವರ ನಂತರ ಇಂತಹ ದೊಡ್ಡ ಮಟ್ಟದಲ್ಲಿ ದೇಶದ ರಾಜಕಾರಣವನ್ನು ಪ್ರಭಾವಿಸುತ್ತಿರುವ ವ್ಯಕ್ತಿ ಮೋದಿ ಅವರೇ,” ಎಂದು ಝಕಾರಿಯಾ ಹೇಳುತ್ತಾರೆ.
ಮೋದಿ ಭಾರತವನ್ನು ಬಂಡವಾಳಶಾಹಿ ಭವಿಷ್ಯಕ್ಕೆ ಮುನ್ನಡೆಸುತ್ತಾರೆ ಎಂಬ ನಂಬಿಕೆಯಿತ್ತು. “ಈ ಹಾದಿಯಲ್ಲಿ ಒಂದಿಷ್ಟು ಕೆಲಸಗಳನ್ನು ಮಾಡಿದ್ದಾರೆ, ಆದರೆ ಅದಕ್ಕೂ ಹೆಚ್ಚಾಗಿ ದೇಶವನ್ನು ಧರ್ಮನಿರಪೇಕ್ಷತೆಯಿಂದ ಹಿಂದೂ ರಾಷ್ಷ್ರವಾದದ ಹಾದಿಗೆ ತಳ್ಳುತ್ತಿದ್ದಾರೆ,” ಎಂದು ಬರೆಯುತ್ತಾರೆ. ಕೋವಿಡ್ 19 ಸಾಂಕ್ರಾಮಿಕದ ಸಂದರ್ಭದಲ್ಲಿ ದುರಾಡಳಿತ ನಡೆಸಿದರೂ ಮೋದಿ ಜನಪ್ರಿಯರಾಗಿಯೇ ಉಳಿದಿದ್ದಾರೆ. ನೈಜ ಸಾವಿನ ಸಂಖ್ಯೆ ಅಧಿಕೃತ ಸಂಖ್ಯೆಗಿಂತ ಹೆಚ್ಚಿದೆ ಎಂದು ಅಂದಾಜಿಸಲಾಗಿದೆ ಎಂದೂ ಝಕಾರಿಯಾ ಬರೆದಿದ್ದಾರೆ.
ಸ್ವಯಂ ನಿರ್ಮಿತ ಹೋರಾಟಗಾರ್ತಿ ಮಮತಾ ಬ್ಯಾನರ್ಜೀ
ಮಮತಾ ಅವರನ್ನು ಹೊರಾಟದ ಮನಸ್ಥಿತಿ ಉಳ್ಳುವವರು ಮತ್ತು ತಮ್ಮ ಜೀವನವನ್ನು ತಾವೇ ಕಟ್ಟಿಕೊಂಡವರು ಎಂದು ವರ್ಣಿಸಲಾಗಿದೆ.
“ಒಂದು ಪುರುಷಪ್ರಧಾನ ವ್ಯವಸ್ಥೆಯಲ್ಲಿ ತಮ್ಮ ಜೀವನವನ್ನು ತಾವಾಗಿಯೇ ಹೋರಾಟದ ಮನೋಭಾವದಿಂದ ನಿರ್ಮಿಸಿಕೊಂಡಿರುವುದು ಮಮತಾ ಬ್ಯಾನರ್ಜಿ ಅವರನ್ನು ಭಿನ್ನಗೊಳಿಸುತ್ತದೆ. ಮೋದಿಯವರನ್ನು ರಾಷ್ಟ್ರೀಯ ಮಟ್ಟದಲ್ಲಿ ಎದುರಿಸುವ ಮೈತ್ರಿ ಕೂಟವೊಂದು ಮುಂದಾದರೆ, ಮಮತಾ ಬ್ಯಾನರ್ಜಿ ಅದರಲ್ಲಿ ಪ್ರಮುಖರಾಗುತ್ತಾರೆ,” ಎಂದು ದತ್ತ್ ಬರೆಯುತ್ತಾರೆ.
ಕೋವಿಡ್ ಜಾಗತಿಕ ನಿಯಂತ್ರಣಕ್ಕೆ ಪೂನವಾಲಾ ಅವರದ್ದು ಮಹತ್ವದ ಕೊಡುಗೆ
ಆಕ್ಸ್ಫರ್ಡ್-ಆಸ್ಟ್ರಾಜೆನಕಾ ಲಸಿಕೆಯನ್ನು ಕೋವಿಶೀಲ್ಡ್ ಎಂಬ ಹೆಸರಿನಲ್ಲಿ ಪೂನಾವಾಲಾ ಅವರ ಕಂಪನಿ ತಯಾರಿಸುತ್ತಿದೆ. ಜಾಗತಿಕವಾಗಿ ಕೋವಿಡ್ 19 ಸಾಂಕ್ರಾಮಿಕವನ್ನು ಕೊನೆಗೊಳಿಸಲು ಪೂನಾವಾಲಾ ಅವರು ಮಹತ್ವದ ಕೊಡುಗೆಯನ್ನು ನೀಡಬಲ್ಲರು ಎಂದು ಕಿದಂಗೂರ್ ಅವರು ಹೇಳುತ್ತಾರೆ. 110 ಕೋಟಿ ಲಸಿಕೆ ಡೋಸ್ ಗಳನ್ನು ವಿತರಿಸಿ ಉತ್ಪಾದನೆಯನ್ನು ದುಪ್ಪಟ್ಟುಗೊಳಿಸುವಂತೆ ಪೂನಾವಾಲಾ ಅವರು ನೀಡಿರುವ ಭರವಸೆಯ ಬಗ್ಗೆ ಕಿದಂಗೂರ್ ಅವರು ಮೆಚ್ಚುಗೆ ವ್ಯಕ್ತ ಪಡಿಸಿದ್ದಾರೆ.
ಇದರ ಜೊತೆಗೆ ಪೂನೆಯ ಉತ್ಪಾದನಾ ಕೇಂದ್ರದಲ್ಲಿ ಘಟಿಸಿದ ಬೆಂಕಿ ಅವಘಡ, ಎರಡನೇ ಅಲೆಯ ಸಂದರ್ಭದಲ್ಲಿ ರಫ್ತು ನಿಯಂತ್ರಣಗಳು, ಮೂಲ ಸಾಮಗ್ರಿಗಳ ಕೊರತೆ, ಇತ್ಯಾದಿ ಸಮಸ್ಯೆಗಳನ್ನು ಪೂನಾವಾಲಾ ಎದುರಿಸಿದರು ಎಂಬುದನ್ನು ಅವರ ಪ್ರೊಫೈಲ್ ತಿಳಿಸಿಕೊಡುತ್ತದೆ.
ಕೃಪೆ: ದ ಪ್ರಿಂಟ್