ಕೋವಿಡ್ ಎರಡನೇ ಅಲೆಯ ಕಾರಣದಿಂದಾಗಿ ದೇಶದಾದ್ಯಂತ ಆತಂಕದ ಅಲೆಯೂ ಎದ್ದಿದೆ. ಬಹಳಷ್ಟು ಜನರು ಉಸಿರಾಟದ ತೊಂದರೆಗೆ ಸಿಲುಕಿ ಸಾವನ್ನಪ್ಪುತ್ತಿದ್ದರೆ, ರೋಗಿಗಳಿಗೆ ಆಮ್ಲಜನಕ ಪೂರೈಸಲು ಆಸ್ಪತ್ರೆಗಳು ಹೆಣಗಾಡುತ್ತಿವೆ. ದೇಶವು ಇಂತಹ ಇಕ್ಕಟ್ಟಿನ ಮತ್ತು ಆತಂಕದ ಸನ್ನಿವೇಶದಲ್ಲಿ ಸಿಲುಕಿರುವಾಗ ಕಳೆದ ಒಂದು ವರ್ಷದಲ್ಲಿ, ಭಾರತದಿಂದ 9,000 ಮೆಟ್ರಿಕ್ ಟನ್ ಆಮ್ಲಜನಕವನ್ನು ಹೊರ ದೇಶಗಳಿಗೆ ರಫ್ತು ಮಾಡಿರುವ ಸುದ್ದಿ ನಿಜಕ್ಕೂ ಆಘಾತಕಾರಿಯಾಗಿದೆ.
admin
ಭಾರತ ಸರ್ಕಾರ ನೀಡಿರುವ ದಾಖಲೆಗಳನ್ನು ಉಲ್ಲೇಖಿಸಿ NDTV ನೀಡಿರುವ ವರದಿಯಲ್ಲಿ, 2020ನೇ ಆರ್ಥಿಕ ವರ್ಷದಲ್ಲಿ 4,500 ಮೆಟ್ರಿಕ್ ಟನ್ ಆಮ್ಲಜನಕ ರಫ್ತಾಗಿದ್ದರೆ, 2021ನೇ ವರ್ಷದಲ್ಲಿ ಇದು ದ್ವಿಗುಣವಾಗಿದೆ. ಜನವರಿ 2020 ರಲ್ಲಿ 352 ಮೆಟ್ರಿಕ್ ಟನ್ ಆಮ್ಲಜನಕವನ್ನು ಭಾರತ ರಫ್ತು ಮಾಡಿತ್ತು. ಜನವರಿ 2021ರ ವೇಳೆಗೆ ಇದರ ಪ್ರಮಾಣ 734 ಶೇಕಡದಷ್ಟು ಏರಿಕೆಯಾಗಿತ್ತು.

ಪ್ರತಿಧ್ವನಿಯನ್ನು ಬೆಂಬಲಿಸಲು ಇಲ್ಲಿ ಕ್ಲಿಕ್ ಮಾಡಿ
2019ರ ಡಿಸೆಂಬರ್‌ನಲ್ಲಿ 538 ಮೆಟ್ರಿಕ್ ಟನ್ ಆಮ್ಲಜನಕ ರಫ್ತಾಗಿದ್ದರೆ, 2020ರ ಡಿಸೆಂಬರ್‌ನಲ್ಲಿ 2,193 ಮೆಟ್ರಿಕ್ ಟನ್‌ನಷ್ಟು ಆಕ್ಸಿಜನ್ ರಫ್ತಾಗಿತ್ತು. 2021ರ ಫೆಬ್ರುವರಿ ಮತ್ತು ಮಾರ್ಚ್ ತಿಂಗಳ ರಫ್ತಿನ ಪ್ರಮಾಣವನ್ನು ಸರ್ಕಾರ ಬಹಿರಂಗಪಡಿಸಿಲ್ಲ ಎಂದು ಎನ್‌ಡಿಟಿವಿ ವರದಿ ಮಾಡಿದೆ.
ದೇಶದ ಬಹುತೇಕ ರಾಜ್ಯಗಳು ಆಮ್ಲಜನಕ ಕೊರತೆಯನ್ನು ಎದುರಿಸುತ್ತಿದ್ದರೆ, ಕೇಂದ್ರ ಸರ್ಕಾರ ಆಮ್ಲಜನಕ ರಫ್ತು ಹೆಚ್ಚಿಸಿರುವುದು ನಿಜಕ್ಕೂ ಆಘಾತಕಾರಿಯಾಗಿದೆ.

ದೆಹಲಿಯ ಪ್ರಮುಖ ಆಸ್ಪತ್ರೆಗಳು ಆಕ್ಸಿಜನ್ ಕೊರತೆಯ ಕುರಿತು ದೂರು ನೀಡಿದ್ದನ್ನು ಗಂಭೀರವಾಗಿ ಪರಿಗಣಿಸಿದ್ದ ದೆಹಲಿ ಹೈಕೋರ್ಟ್ ಕೇಂದ್ರ ಸರ್ಕಾರವನ್ನು ತರಾಟೆಗೆ ತೆಗೆದುಕೊಂಡಿತ್ತು. ಆ ನಂತರ ಎಚ್ಚೆತ್ತ ಕೇಂದ್ರ ಏಪ್ರಿಲ್ 22ರ ನಂತರ ಉದ್ಯಮಗಳಿಗೆ ಆಮ್ಲಜನಕ ನೀಡುವುದಿಲ್ಲ ಎಂದಿತ್ತು. ಕೇಂದ್ರದ ಈ ಉತ್ತರಕ್ಕೆ ಸಿಡಿಮಿಡಿಗೊಂಡಿದ್ದ ಹೈಕೋರ್ಟ್, ಏಪ್ರಿಲ್ 22ರಿಂದ ಏಕೆ? ಇಂದಿನಿಂದ ಯಾಕಾಗುವುದಿಲ್ಲ? ಜನರ ಜೀವ ಪಣಕ್ಕಿಡಲಾಗಿದೆ. ಏಪ್ರಿಲ್ 22ರ ವರೆಗೆ ಆಕ್ಸಿಜನ್‌ಗಾಗಿ ಕಾಯಿರಿ ಎಂದು ರೋಗಿಗಳಿಗೆ ಹೇಳುತ್ತೀರಾ? ಎಂದು ತೀಕ್ಷ್ಣವಾಗಿ ಎಚ್ಚರಿಸಿತ್ತು. ಈ ಎಚ್ಚರಿಕೆಯ ನಂತರ ಬುಧವಾರವೇ ದೆಹಲಿಯ ಆಸ್ಪತ್ರೆಗಳಿಗೆ ಆಮ್ಲಜನಕ ಪೂರೈಕೆ ಆರಂಭವಾಗಿದೆ.

ಒಟ್ಟಿನಲ್ಲಿ ದೇಶದಲ್ಲಿ ಆಮ್ಲಜನಕ ಕೊರತೆಯಿಂದ ಹಾಹಾಕಾರವೆದ್ದಿದ್ದರೆ, ಕೆಂದ್ರ ಸರ್ಕಾರ ಬೇಕಾಬಿಟ್ಟಿ ಆಮ್ಲಜನಕ ರಫ್ತು ಮಾಡಿ ಈಗ ಸಾರ್ವಜನಿಕರನ್ನು ಸಾವಿನ ದವಡೆಗೆ ನೂಕಿದಂತಿದೆ. ಕರೋನಾ ಲಸಿಕೆಯ ವಿಚಾರದಲ್ಲಿಯೂ ರಫ್ತಿಗೆ ಹೆಚ್ಚು ಪ್ರಾಧನ್ಯತೆ ಕೊಟ್ಟಿದ್ದ ಕೇಂದ್ರ, ವಿಪಕ್ಷ ನಾಯಕರ ಸಲಹೆಯ ನಂತರ ರಫ್ತನ್ನು ನಿಲ್ಲಿಸಿತ್ತು. ಈಗ ಆಮ್ಲಜನಕದ ಕೊರತೆಯೂ ಆದಷ್ಟು ಶೀಘ್ರದಲ್ಲಿ ನೀಗಿಸಬೇಕಾದ ಅಗತ್ಯತೆ ಎದುರಾಗಿದೆ.