ತಬಾಸ್ಸುಮ್ ನಿಶಾ ಎಂಬವರು ದೆಹಲಿಯ ಮಾಲ್ವಿಯಾ ನಗರ ಬಡಾವಣೆಯ ಜೋಪಡಿಯೊಂದರಲ್ಲಿ ತಮ್ಮ ಐದು ಮಕ್ಕಳೊಡನೆ ವಾಸಿಸುತ್ತಿದ್ದಾರೆ.
38 ವರ್ಷದ ವಿಧವೆಯಾಗಿರುವ ಇವರು ಮನೆಗೆಲಸದವರಾಗಿ ಕೆಲಸ ಮಾಡುತ್ತಿದ್ದಾಗ ಅವರ ಮಾಸಿಕ ವೇತನ ಸುಮಾರು ಮೂರೂವರೆ ಸಾವಿರ ರೂಪಾಯಿಗಳಾಗಿದ್ದವು. ಆದರೆ ಅವರು ತಮ್ಮ ಮಕ್ಕಳಿಗೆ ಆಹಾರ ಒದಗಿಸಲು ಇದರ ದುಪ್ಪಟ್ಟಿಗೂ ಹೆಚ್ಚು ಹಣ ಅವರಿಗೆ ಅವಶ್ಯಕವಾಗಿತ್ತು.
ಖರ್ಚುಗಳನ್ನು ಹೇಗೋ ಸಂಭಾಳಿಸುತ್ತಿದ್ದ ನಿಶಾ, ಭಾರತ ಸರಕಾರ ಕಳೆದ ಮಾರ್ಚ್ ತಿಂಗಳಲ್ಲಿ ದಿಢೀರ್ ಲಾಕ್‌ಡೌನ್ ಅನ್ನು ಘೋಷಿಸಿದಾಗ ತಮ್ಮ ಕೆಲಸವನ್ನು ಕಳೆದುಕೊಂಡರು.
ತಿಂಗಳುಗಟ್ಟಲೆ ಲಾಕ್‌ಡೌನ್ ಕಾಲದಲ್ಲಿ ನೆರೆಹೊರೆಯವರಿಂದ ಮತ್ತು ಅಂಗಡಿ ಮಾಲೀಕರಿಂದ ಸಣ್ಣ ಪುಟ್ಟ ಸಾಲಗಳನ್ನು ಮಾಡಿ ಹೇಗೋ ತಮ್ಮ ಮಕ್ಕಳ ಹೊಟ್ಟೆ ತುಂಬಿಸಲು ಪ್ರಯತ್ನಿಸಿದರು. ಅವರೆಲ್ಲರೂ ಇವರಿಗೆ ಸಹಾಯ ಮಾಡುವುದನ್ನು ನಿಲ್ಲಿಸಿದಾಗ, ನಗರದಲ್ಲಿ ದಾನಗಳನ್ನು ಅರಸುತ್ತಾ ಹೋದರು.
ಅವರ ಮಕ್ಕಳಿಗೆ ಆಹಾರ ಹೊಂದಿಸುವುದು ಬಹಳ ಕಷ್ಟವಾಗಿ ಖರ್ಚು ಇಳಿಸುವುದಕ್ಕೆ ಕಳೆದ ಡಿಸೆಂಬರ್ ಮಾಸದಲ್ಲಿ ತಮ್ಮ 18 ವರ್ಷದ ಮಗಳ ಮದುವೆಯನ್ನು ಮಾಡಿಬಿಟ್ಟರು.
ಈ ದಿಗ್ಬಂಧವು 2020ರ ಮೀರಿ ಸಾಗುವುದಿಲ್ಲ ಎಂಬುದು ನಿಶಾ ಅವರ ನಂಬಿಕೆಯಾಗಿತ್ತು. ಆದರೆ ದೇಶದಲ್ಲಿ ಮಾರಣಾಂತಕವಾಗಿ ಎರಡನೆ ಅಲೆ ಹಬ್ಬಿದಾಗ ಮತ್ತೊಂದು ದಿಗ್ಬಂಧವನ್ನು ಏಪ್ರಿಲ್ ನಲ್ಲಿ ಹೇರಲಾಯಿತು.
ಈ ಬಾರಿ ಮಕ್ಕಳಿಗೆ ಊಟ ಹಾಕಲು ಯಾವುದೇ ದಾನಗಳಿರಲಿಲ್ಲ. ಎರಡನೇ ದಿಗ್ಬಂಧದಲ್ಲಿ ಒಂದೇ ಹೊತ್ತು ಮಾತ್ರ ಊಟ ಮಾಡಿ ಕಳೆದಿರುವುದಾಗಿ ನಿಶಾ ಹಂಚಿಕೊಳ್ಳುತ್ತಾರೆ.
ಮೂರನೆ ಅಲೆಯ ಲಾಕ್‌ಡೌನ್ ನಿರೀಕ್ಷೆಯು ತಾವು ಹಸಿವಿನಿಂದ ಸಾಯಬಹುದು ಎಂಬ ಭೀತಿಯನ್ನು ಅವರಲ್ಲಿ ಸೃಷ್ಟಿಸಿದೆ.
ಪ್ರಧಾನಿ ನರೇಂದ್ರ ಮೋದಿಯ ಅಹಾರ ಭದ್ರತೆ ಕಾರ್ಯಕ್ರಮವೆಂದೇ ತಿಳಿದಿರುವ ಪ್ರಧಾನ ಮಂತ್ರಿ ಗರೀಬ್ ಕಲ್ಯಾಣ್ ಅನ್ನ್ ಯೋಜನಾ ಹೀಗೆ ನಿಶಾರಂತಹ ಲಕ್ಷಾಂತರ ಬಡ ಭಾರತೀಯರನ್ನು ಆಹಾರ ಭದ್ರತೆಯಿಂದ ಹೊರಗುಳಿಸಿದೆ. ಕಾರಣ: ಅವರ ಬಳಿ ರೇಷನ್ ಕಾರ್ಡ್ ಇಲ್ಲ.
ರಾಷ್ಟ್ರೀಯ ಆಹಾರ ಭದ್ರತೆ ಕಾಯ್ದೆಯಡಿ ಸಬ್ಸಿಡಿ ಸಹಿತವಾಗಿ ಅಹಾರಧಾನ್ಯಗಳನ್ನು ಸಾರ್ವಜನಿಕ ವಿತರಣಾ ವ್ಯವಸ್ಥೆಯಿಂದ ಕೊಳ್ಳಲು ಅರ್ಹತೆ ಉಳ್ಳವರಿಗೆ ಹಲವಾರು ರಾಜ್ಯ ಸರಕಾರಗಳು ನೀಡುವ ದಾಖಲಾತಿ ಪತ್ರಗಳನ್ನು ರೇಷನ್ ಕಾರ್ಡ್ ಎಂದು ಕರೆಯಲಾಗಿದೆ.
ರೇಷನ್ ಕಾರ್ಡ್ ಗಳು 2011 ಜನಗಣತಿಯನ್ನು ಆಧರಿಸಿವೆ
2013ರಿಂದ ನಿಶಾ ರೇಷನ್ ಕಾರ್ಡಿಗಾಗಿ ಮೂರು ಬಾರಿ ಅರ್ಜಿ ಸಲ್ಲಿಸಿದ್ದಾರೆ. ಅವರು ಅರ್ಹರಾಗಿದ್ದರೂ ರೇಷನ್ ಕಾರ್ಡನ್ನು ನೀಡಲಾಗಿಲ್ಲ.
ಜಗತ್ತಿನ ಅತಿ ದೊಡ್ಡ ಆಹಾರ ಭದ್ರತಾ ಕಾರ್ಯಕ್ರಮವೆಂದು ಪ್ರಚಾರ ಪಡೆಯುವ PMGKAY, ಭಾರತದ ಬಡವರಿಗೆ ಆಹಾರ ನೀಡಲು ಉದ್ದೇಶಿಸಿದೆ. ರೇಷನ್ ಕಾರ್ಡ್ ಹೊಂದಿರುವ ಕುಟುಂಬಗಳ ಪ್ರತಿಯೊಬ್ಬರಿಗೂ ತಲಾ ಐದು ಕೆಜಿ. ಅಕ್ಕಿ ಮತ್ತು ಗೋಧಿ ಹಾಗೂ ಒಂದು ಕೆಜಿ. ಬೇಳೆಯನ್ನು ಉಚಿತವಾಗಿ ನೀಡಲಾಗುತ್ತದೆ. ಇದರೊಡನೆ ರೇಷನ್ ಕಾರ್ಡ್ ನೊಂದಿಗೆ ಬರುವ ಸಾಮಾನ್ಯ ಹಕ್ಕು ನೀಡಿಕೆಗಳನ್ನು ಒದಗಿಸಲಾಗುತ್ತದೆ.
ಆದರೂ, ಅವರು ವಾಸವಿರುವ ದೆಹಲಿ ರಾಜ್ಯ ನೀಡಬಹುದಾದ ರೇಷನ್ ಕಾರ್ಡ್ ಗಳ ಕೋಟಾವನ್ನು ಈಗಾಗಲೇ ಮುಟ್ಟಿರುವುದರಿಂದ ನಿಶಾರಂತಹ ಬಡಜನರಿಗೆ ರೇಷನ್ ಕಾರ್ಡ್ ದೊರೆತಿಲ್ಲ.
2021ರಲ್ಲಿ 22 ರಾಜ್ಯಗಳ ಕೋಟಾದಲ್ಲಿ 5 ಪ್ರತಿಶತಕ್ಕೂ ಕಡಿಮೆ ಇನ್ನೂ ಉಳಿದಿದೆ.
ಯಾಕೆಂದರೆ ಈ ಕೋಟಾವನ್ನು 2011ರ ಜನಗಣತಿಯನ್ನು ಆಧರಿಸಿ ನಿಗದಿಪಡಿಸಲಾಗಿತ್ತು. ಈ ವರ್ಷ ನಡೆಸಬೇಕಿದ್ದ ಜನಗಣತಿಯನ್ನು ಸಾಂಕ್ರಾಮಿಕದ ಕಾರಣದಿಂದಾಗಿ ಅನಿಶ್ಚಿತ ಅವಧಿಗೆ ಮುಂದೂಡಲಾಗಿದೆ.
ಹೀಗುರುವಾಗ, ಕಳೆದ ದಶಕದಲ್ಲಿ ಆಹಾರ ಭದ್ರತೆ ಕಾಯ್ದೆಯಿಂದ ಹೊರಗುಳಿದ ಬಡವರ ಸಂಖ್ಯೆ ಸಾಕಷ್ಟು ಹೆಚ್ಚಾಗಿದೆ.
ಇದನ್ನು ಪರಿಗಣಿಸಿ 2020ರಲ್ಲಿ ದೆಹಲಿ ಸರಕಾರ ತಾತ್ಕಾಲಿಕ ಸಾಂಕ್ರಾಮಿಕ ನಡೆಯಾಗಿ ರೇಷನ್ ಕಾರ್ಡ್ ಗಳಿಲ್ಲದೆಯೇ ಆಹಾರ ಧಾನ್ಯಗಳನ್ನು ವಿತರಿಸುವುದಾಗಿ ಘೋಷಿಸಿದಾಗ ರೇಷನ್ ಕಾರ್ಡ್ ಉಳ್ಳ 73 ಲಕ್ಷ ಜನರನ್ನು ಹೊರತುಪಡಿಸಿ ಇದನ್ನು ಪಡೆಯಲು 69 ಲಕ್ಷ ಜನರು ಮುಂದಾದರು.
“ದೆಹಲಿ ನಗರದ ರೇಷನ್ ಕಾರ್ಡ್ ಕೋಟಾಗಳ ಅಂದಾಜು ಎಷ್ಟು ಕೆಟ್ಟದ್ದಾಗಿದೆ ಎಂದರೆ ಆಹಾರದ ಅವಶ್ಯಕತೆಯಿರುವ ದೆಹಲಿಯ ಸುಮಾರು ಅರ್ಧದಷ್ಟು ಜನತೆಯನ್ನು ಸಾಂಕ್ರಾಮಿಕದ ಸಂದರ್ಭದಲ್ಲಿ ಪ್ರಾಥಮಿಕ ಆಹಾರ ಭದ್ರತಾ ಕಾರ್ಯಕ್ರಮದಿಂದ ಹೊರಗುಳಿಸಲಾಗಿದೆ” ಎಂದು ರೈಟ್ ಟು ಫೂಡ್ ಆಂದೋಲನದ ಸದಸ್ಯೆ ಅಮೃತಾ ಜೋಹ್ರಿ ಅಲ್ ಜಝೀರಾ ಬಳಿ ಹಂಚಿಕೊಂಡಿದ್ದಾರೆ.
ನಿಶಾ ಅವರಂತೆಯೇ 51 ವರ್ಷದ ರಹೇಲಾ 2018ರಲ್ಲಿ ಅರ್ಜಿ ಸಲ್ಲಿಸಿದ್ದರು, 37 ವರ್ಷದ ರಾಧಾ 2019ರಲ್ಲೂ ಮತ್ತು 22 ವರ್ಷದ ಹರಿಪ್ರಿಯಾ 2021ರಲ್ಲೂ ಅರ್ಜಿ ಸಲ್ಲಿಸಿದ್ದರು. ಇವರೆಲ್ಲರಿಗೂ ಸರಕಾರದಿಂದ ಇನ್ನೂ ಪ್ರತಿಕ್ರಿಯೆ ದೊರೆತಿಲ್ಲ.
ಅರ್ಹತೆಯನ್ನು ನಿರ್ಧರಿಸಲು ವಾಸಸ್ಥಳದ ರುಜುವಾತು ಪತ್ರ, ವಿದ್ಯುತ್ ಬಿಲ್ ಮತ್ತು ಇತರ ದಾಖಲೆಗಳು ಬೇಕೇಬೇಕೆಂದು ಹೇಳಿದ್ದರಿಂದಾಗಿ 60 ವರ್ಷದ ರಾಣಿ ದೇವಿ ಮತ್ತು 22 ವರ್ಷದ ನುಸ್ರತ್ ಬಾನೊ ರಂತಹ ಅನೇಕರಿಗೆ ಅರ್ಜಿ ಸಲ್ಲಿಸಲು ಸಾಧ್ಯವಾಗೇ ಇಲ್ಲ.
“ರಾಷ್ಟ್ರೀಯ ರಾಜಧಾನಿಯಲ್ಲಿಯೇ ಪರಿಸ್ಥಿತಿ ಹೀಗಿರಬೇಕಾದರೆ ಗ್ರಾಮಾಂತರ ಪ್ರದೇಶಗಳ ಪಾಡೇನು?” ಎಂದು ಜೋಹ್ರಿ ಪ್ರಶ್ನಿಸುತ್ತಾರೆ.
“ನಾವು ಹಸಿವಿನಿಂದಲೇ ಸಾಯಬಹುದು”
ಈ ದೋಷಪೂರಿತ ಸಾರ್ವಜನಿಕ ವಿತರಣಾ ವ್ಯವಸ್ಥೆಯ ನೇರ ಪರಿಣಾಮವಾಗಿ ನಿರುದ್ಯೋಗ ಮತ್ತು ಹಸಿವಿನಿಂದ ಬಳಲುತ್ತಿರುವ ಭಾರತದ ಅತಿ ದುರ್ಬಲ ವರ್ಗಗಳನ್ನು ಹೊರಗಿಡಲಾಗಿದೆ.
ಇದು ಹಲವಾರು ಜನರನ್ನು ಹಸಿವಿನಿಂದ ಸಾಯಿಸಿದೆ.
ಕಳೆದ ವರ್ಷ ಉತ್ತರ ಪ್ರದೇಶದ ಆಗ್ರಾ ನಗರದಲ್ಲಿ ಸೋನಿಯಾ ಎಂಬ ಬಾಲಕಿ ಸಾವನ್ನಪ್ಪಿದಳು. ಅವಳ ಕುಟುಂಬಕ್ಕೆ ದಿಗ್ಬಂಧದ ಸಂದರ್ಭದಲ್ಲಿ 15 ದಿನಗಳ ಕಾಲ ತಿನ್ನಲೂ ಏನೂ ಇರಲಿಲ್ಲ. ಬಾಲಕಿಯ ಸಾವು ಹೆಡ್ಲೈನ್ ಆದ ನಂತರ ಅವರ ಕುಟುಂಬಕಕ್ಕೆ ರೇಷನ್ ಕಾರ್ಡನ್ನು ನೀಡಲಾಗಿತ್ತು.
“ಮೂರನೇ ಅಲೆಯ ಮುನ್ನ ನಮಗೆ ರೇಷನ್ ಕಾರ್ಡೊಂದು ದೊರಕದಿದ್ದರೆ ನಾವೂ ಹಸಿವಿನಿಂದಲೇ ಸಾಯಬಹುದೇನೋ” ಎಂದು ನಾಲ್ಕು ಜನರನ್ನು ಸಾಕುವ ರಹೇಲಾ ಅಲ್ ಜಝೀರಾಗೆ ಹೇಳುತ್ತಾರೆ.
ರಾಷ್ಟ್ರೀಯ ಆಹಾರ ಭದ್ರತಾ ಕಾಯ್ದೆಯು ಭಾರತದ ನಗರ ಪ್ರದೇಶಗಳ 50 ಪ್ರತಿಶತ ಜನತೆಯನ್ನು ಮತ್ತು ಗ್ರಾಮಾಂತರ ಪ್ರದೇಶಗಳ 75 ಪ್ರತಿಶತ ಜನತೆಯನ್ನು ಒಳಗೊಂಡಿದ್ದು, ಅವರಿಗೆ ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ರೇಷನ್ ಕಾರ್ಡಿನ ಮೂಲಕ ಆಹಾರಧಾನ್ಯಗಳನ್ನು ಸಬ್ಸಿಡಿಸಹಿತವಾಗಿ ನೀಡುತ್ತದೆ.
ನ್ಯಾಷನಲ್ ಸ್ಯಾಂಪಲ್ ಸರ್ವೆ ಸಂಸ್ಥೆಯ 2011-12ರ ಕೌಟುಂಬಿಕ ಬಳಕೆಯ ಸಮೀಕ್ಷಾ ಮಾಹಿತಿನ್ನಾಧರಿಸಿ ಭಾರತದ ಯೋಜನಾ ಆಯೋಗದ ಕಾರ್ಡ್ ಗಳ ವಿತರಣೆಯ ಕುರಿತು ನಿರ್ಧರಿಸಿತ್ತು.
ಆ ಮಾಹಿತಿ ಪ್ರಕಟವಾಗಿ ಸುಮಾರು ಹತ್ತು ವರ್ಷಗಳಾಗಿವೆ. ನವದೆಹಲಿಯ ಅಂಬೇಡ್ಕರ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದ ಸಹಾಯಕ ಪ್ರಾಧ್ಯಾಪಕರು ಮತ್ತು ತಜ್ಞರಾದ ದೀಪ ಸಿನ್ಹಾ ಅವರು ಇದನ್ನು ‘ಕಾರ್ಯನೀತಿಯಲ್ಲಿನ ಕುರುಡುತನ’ ಎಂದು ಕರೆದಿದ್ದಾರೆ.
“ಸರಕಾರಕ್ಕೆ ನೈಜ ಚಿತ್ರಣ ಮತ್ತು ದಾಖಲೆಗಳ ನಡುವೆ ಇರುವ ವ್ಯತ್ಯಾಸ ತಿಳಿದಿದೆ. ಸಬ್ಸಿಡಿಯನ್ನು (ಸಹಾಯಧನ) ಹೆಚ್ಚುಗೊಳಿಸಿದರೆ ಭಾರತದ ವಾರ್ಷಿಕ ಕೊರತೆ ಹೆಚ್ಚಾಗುತ್ತದೆಂದು ಅವರಿಗೆ ತಿಳಿದಿರುವ ಕಾರಣ ಅವರು ಸಬ್ಸಿಡಿಗಳನ್ನು ಹೆಚ್ಚಿಸುತ್ತಿಲ್ಲ. ಆದರೂ ಆಹಾರಧಾನ್ಯಗಳು ಭಾರತದಲ್ಲಿ ಅಧಿಕವಾಗಿಯೇ ಇವೆ.” ಎಂದು ಸಿನ್ಹಾ ಹೇಳಿದರು.
ಪ್ರಸ್ತುತವಾಗಿ, ಫುಡ್ ಕಾರ್ಪೊರೇಷನ್ ಆಫ್ ಇಂಡಿಯಾದ ಹಿಡಿತದಲ್ಲಿರುವ ಭಾರತದ ಗೋದಾಮುಗಳು ಹತ್ತು ಕೋಟಿ ಮೆಟ್ರಿಕ್ ಟನ್ ಗಳಷ್ಟು ಧಾನ್ಯಗಳೊಂದಿಗೆ ತುಂಬಿ ಹರಿಯುತ್ತಿವೆ. ಈ ಪ್ರಮಾಣ ಬಫರ್ ಸ್ಟಾಕ್ ನ ಸಾಮಾನ್ಯ ಪ್ರಮಾಣಕ್ಕೆ ಮೂರು ಪಟ್ಟು ಹೆಚ್ಚಿನದ್ದಾಗಿದೆ.
“ಸಾವು ಮತ್ತು ಬದುಕಿನ ನಡುವೆ”
ಮೇ 2020ರಲ್ಲಿ ವಲಸೆ ಕಾರ್ಮಿಕರು ಬೃಹದಾಕಾರವಾಗಿ ತಮ್ಮ ಊರುಗಳಿಗೆ ನಡೆಯುತ್ತಾ ಹೋಗುವುದು ಟಿ.ವಿ.ಯಲ್ಲಿ ಪ್ರಸಾರವಾಗುವಾಗ ಸರ್ವೋಚ್ಛ ನ್ಯಾಯಾಲಯವು ಯಾವುದೇ ಮುಲಾಜಿಲ್ಲದೆ ಕ್ರಮ ತೆಗೆದುಕೊಂಡಿತ್ತು.
ಹಸಿವು ಮತ್ತು ತೀವ್ರ ಬಡತನದಿಂದ ಪೀಡಿತರಾಗಿರುವ ಬಹುತೇಕ ವಲಸೆ ಕಾರ್ಮಿಕರ ಬಳಿ ರೇಷನ್ ಕಾರ್ಡ್ ಇಲ್ಲದಿರುವ ಕಾರಣದಿಂದ ಅವರು ಸಾರ್ವಜನಿಕ ವಿತರಣಾ ವ್ಯವಸ್ಥೆಯ ಹೊರಗುಳಿದಿದ್ದನ್ನು ನ್ಯಾಯಲಯವು ಗಮನಿಸಿತ್ತು.
“ತೀವ್ರ ಟೀಕೆಗೆ ಒಳಗಾದ ಸರಕಾರ ರೇಷನ್ ಕಾರ್ಡ್ ಇಲ್ಲದ 8 ಕೋಟಿ ಬಡಜನರಿಗೆ ಮೇ ಮತ್ತು ಜೂನ್ ತಿಂಗಳಿಗೆ ರೇಷನ್ ಕಾರ್ಡ್ ಹಂಚುವುದಾಗಿ 2020ರ ಮೇ ತಿಂಗಳಲ್ಲಿ ಘೋಷಿಸಿತ್ತು” ಎಂದರು ಜೋಹ್ರಿ.
“ಆದರೆ, ಇದನ್ನೂ ಕೂಡ ಸರಿಯಾಗಿ ಜಾರಿಗೆ ತರಲಾಗಲಿಲ್ಲ. ಮಾಹಿತಿಗಳ ಪ್ರಕಾರ ಸರಕಾರಕ್ಕೆ ಕೇವಲ 2.8 ಕೋಟಿ ಜನರನ್ನು ಗುರುತಿಸಿ ಅವರಿಗೆ ಆಹಾರಧಾನ್ಯ ವಿತರಿಸಲು ಸಾಧ್ಯವಾಯಿತು.”
ಮಧ್ಯ ಪ್ರದೇಶ, ಆಂಧ್ರ ಪ್ರದೇಶ, ಗುಜರಾತ್ ಮತ್ತು ಉತ್ತರಾಖಂಡ್ ರಾಜ್ಯಗಳು ತಮಗೆ ಮಂಜೂರು ಮಾಡಿದ್ದ ಆಹಾರಧಾನ್ಯಗಳಲ್ಲಿ 3 ಪ್ರತಿಶತಕ್ಕೂ ಕಡಿಮೆ ಧಾನ್ಯಗಳನ್ನು ವಿತರಿಸಿದ್ದವು ಎಂದು ಜೋಹ್ರಿ ಹೇಳುತ್ತಾರೆ.
2021ರಲ್ಲಿ ಎಂತಹದ್ದೇ ಪರಿಸ್ಥಿತಿ ಮರುಕಳಿಸಿದಾಗ ಜೂನ್ 9ರಂದು ಸರಕಾರ ಸರ್ವೋಚ್ಛ ನ್ಯಾಯಾಲಯಕ್ಕೆ ಹೀಗೆಂದು ಹೇಳಿತು: “2020ರ ಕಾರ್ಯಕ್ರಮವು ಕೇವಲ ಎರಡು ತಿಂಗಳ ಕಾಲಾವಧಿಗೆ ಸೀಮಿತವಾಗಿತ್ತು. ಅದಾದ ನಂತರ ರಾಜ್ಯಗಳಿಗೆ ತಮ್ಮ ಅವಶ್ಯಕತೆಗೆ ಅನುಸಾರ ಕಾರ್ಯಕ್ರಮಗಳನ್ನು ರೂಪಿಸಲು ಸೂಚಿಸಲಾಗಿತ್ತು.”
ಕೆಲವು ರಾಜ್ಯಗಳು ರೇಷನ್ ಕಾರ್ಡ್ ಇಲ್ಲದವರಿಗೆ ಯಾವುದೇ ಧಾನ್ಯವನ್ನು ನೀಡಲಿಲ್ಲವಾದರೆ, ಕೆಲವು ರಾಜ್ಯಗಳು ಒಂದೇ ಒಂದು ಬಾರಿ ನೆರವು ನೀಡಿದವು.
ಕೆಲಸವಿಲ್ಲದ ಪರಿಸ್ಥಿತಿಯಲ್ಲಿ ನಿಶಾ ತಮ್ಮ ಮಕ್ಕಳಿಗೆ ಉಣಬಡಿಸಲು ತಾವು ಉಪವಾಸವಿರುತ್ತಾರೆ.
“ನಾನು ನನ್ನ ಮಕ್ಕಳಿಗೆ ಶಿಕ್ಷಣವನ್ನು ಒದಗಿಸಬೇಕು. ಹಾಗಾಗಿ ನಾನು ಅವರನ್ನು ಕೆಲಸಕ್ಕೆ ದಬ್ಬಿಲ್ಲ. ಅವರಿಗೆ ಹಾಲನ್ನಾಗಲೀ ಮೊಟ್ಟೆಯನ್ನಾಗಲೀ, ಕೊನೆಯ ಬಾರಿ ತಿನ್ನಿಸಿದ್ದು ಯಾವಾಗ ಎಂಬುದೇ ನನಗೆ ನೆನಪಿಲ್ಲ. ಆಲೂಗಡ್ಡೆ ಅಗ್ಗವಾಗಿ ಸಿಗುವುದರಿಂದ ನಾವು ಅತೀ ಹೆಚ್ಚು ಸೇವಿಸುವುದೇ ಆಲೂಗಡ್ಡೆಗಳನ್ನು.” ಎಂದು ಅಲ್ ಜಝೀರಾಗೆ ಆಕೆ ಹೇಳುತ್ತಾರೆ.
2020ರ ಜಾಗತಿಕ ಹಸಿವಿನ ಸೂಚ್ಯಂಕದಲ್ಲಿ 107 ದೇಶಗಳ ಪೈಕಿ ಭಾರತ ಹೀನಾಯವಾದ 94ನೇ ಸ್ಥಾನವನ್ನು ಪಡೆದಿತ್ತು.
“ಜನತೆ ಹಸಿವಿನಿಂದ ಒದ್ದಾಡುತ್ತಿದ್ದಾರೆ ಎಂಬುದನ್ನು ಸರಕಾರ ಒಪ್ಪಿಕೊಳ್ಳುತ್ತಲೇ ಇಲ್ಲ. ದಿಗ್ಬಂಧ ಹಸಿವನ್ನು ಸೃಷ್ಟಿಸುತ್ತದೆ, ಅದು ಮುಗಿದ ನಂತರ ಎಲ್ಲವೂ ಸರಿ ಹೋಗುತ್ತದೆ ಎಂಬ ನಂಬಿಕೆ ಚಾಲ್ತಿಯಲ್ಲಿದೆ. ಇಲ್ಲಿ ಉದ್ಯೋಗಗಳಿಲ್ಲ. ದಿನನಿತ್ಯದ ಆರ್ಥಿಕತೆಯಂತೂ ಸಾಂಕ್ರಾಮಿಕದಿಂದ ಬಹಳ ಪೆಟ್ಟು ತಿಂದಿದೆ. ಆದರೆ ಸರಕಾರ ಇದನ್ನು ನಿರಾಕರಿಸುತ್ತಿದೆ.” ಎಂಬುದು ಸಿನ್ಹಾ ಅವರ ಹೇಳಿಕೆ.
ಅಲ್ ಜಝೀರಾ ರಾಣಿದೇವಿ ಅವರ ಜೋಪಡಿಗೆ ಭೇಟಿ ನೀಡಿದಾಗ ಉಪ್ಪನ್ನು ಹೊರತುಪಡಿಸಿದರೆ ಸೇವಿಸಲು ಇನ್ನೇನೂ ಇರಲಿಲ್ಲ. 60 ವರ್ಷದ ಮಹಿಳೆ ತನ್ನ ಮೂರು ಮೊಮ್ಮಕ್ಕಳನ್ನು ನೋಡಿಕೊಳ್ಳುತ್ತಿದ್ದಾಳೆ.
ಅವರ 14 ವರ್ಷದ ಮೊಮ್ಮಗ ರಿಕ್ಷಾವಾಲನಾಗಿ ದುಡಿದು ಕುಟುಂಬದ ಏಕೈಕ ದುಡಿಮೆಗಾರನಾಗಿದ್ದಾನೆ. ಅವನು ದಿನಕ್ಕೆ ಸುಮಾರು 300 ರಿಂದ 350 ರುಪಾಯಿಗಳನ್ನು ದುಡಿಯುತ್ತಾನೆ.
“ಸಾರ್ವಜನಿಕ ವಿತರಣಾ ವ್ಯವಸ್ಥೆಯಡಿ ನೀಡಲಾಗುವ ಕಳಪೆ ಮಟ್ಟದ ಬೇಳೆ ಮತ್ತು ಧಾನ್ಯಗಳು ಹಲವಾರು ಬಾರಿ ಸಾವೂ ಬದುಕಿನ ನಡುವಿನ ರೇಖೆಯಂತೆ ಕಾಣುತ್ತದೆ” ಎಂದು ಸಿನ್ಹಾ ಅಲ್ ಜಝೀರಾಗೆ ತಿಳಿಸಿದ್ದಾರೆ.
“ಸೋನಿಯಾಳ ಕುಟುಂಬದ ಬಳಿ ರೇಷನ್ ಕಾರ್ಡ್ ಇದ್ದಿದ್ದರೆ, ಆಕೆ ಅಪೌಷ್ಟಿಕತೆಯಿಂದ ನರಳುತ್ತಿದ್ದರೂ ಬದುಕುಳಿಯುತ್ತಿದ್ದಳು.”
2016ರಲ್ಲಿ ರೇಷನ್ ಕಾರ್ಡ್ ಇಲ್ಲ ಎಂಬ ಕಾರಣದಿಂದ ಅವಶ್ಯಕತೆ ಇರುವವರಿಗೆ ಧಾನ್ಯಗಳನ್ನು ನಿರಾಕರಿಸಬಾರದು ಎಂದು ಸರ್ವೋಚ್ಛ ನ್ಯಾಯಾಲಯ ತೀರ್ಪು ನೀಡಿತ್ತು.
ಆ ವರ್ಷ, ನ್ಯಾಯಾಲಯವು ತನ್ನ ತೀರ್ಪನ್ನು ಪುನರಾವರ್ತಿಸಿ, ಕೋಟಾವನ್ನು ಇಂದಿನ ಅಂದಾಜಿಗೆ ಪರಿಷ್ಕರಿಸಬೇಕು ಎಂದು ಸೇರಿಸಿದೆ. ಸಾಂಕ್ರಾಮಿಕ ಮುಗಿಯುವ ವರೆಗು ಹಸಿದಿರುವ ಎಲ್ಲರಿಗೂ ಒಣ ಪಡಿತರ ನೀಡಬೇಕು ಎಂದು ನ್ಯಾಯಾಲಯ ಎಲ್ಲಾ ರಾಜ್ಯ ಸರಕಾರಗಳಿಗೂ ನಿರ್ದೇಶಿಸಿದೆ.
“ಆದರೆ, ಆ ರೀತಿಯ ಯಾವುದೇ ಕಾರ್ಯಕ್ರಮವನ್ನು ಯಾವುದೇ ರಾಜ್ಯ ಸರಕಾರ ರೂಪಿಸಿಲ್ಲ” ಎಂದು ಹೊರಾಟಗಾರ್ತಿ ಅಂಜಲಿ ಭಾರಧ್ವಾಜ್ ಹೇಳಿದ್ದಾರೆ. ನ್ಯಾಯಾಲಯದ ನಿರ್ದೇಶನವನ್ನು ಪಾಲಿಸದೇ ಇರುವುದಕ್ಕೆ ಹಲವಾರು ರಾಜ್ಯ ಸರಕಾರಗಳಿಗೆ ತಾವು ಕಾನೂನಾತ್ಮಕ ನೋಟಿಸ್ ಗಳನ್ನು ಕಳಿಸಿರುವುದಾಗಿ ಅವರು ತಿಳಿಸಿದ್ದಾರೆ.
ಗ್ರಾಹಕ ವ್ಯವಹಾರ, ಆಹಾರ ಮತ್ತು ಸಾರ್ವಜನಿಕ ವಿತರಣೆಯ ಸಚಿವಾಲಯವು ಕೋಟಾಗಳನ್ನು ಪರಿಷ್ಕರಿಸಲು ಜನಗಣತಿ ನಡೆಯಬೇಕು ಎಂದು ಆಗಸ್ಟ್ 24ರಂದು ಭಾರಧ್ವಾಜರಿಗೆ ಪ್ರತಿಕ್ರಿಯಿಸಿದೆ.
“ಮುಂದಿನ ಜನಗಣತಿ ಸಾಂಕ್ರಾಮಿಕ ಮುಗಿದ ನಂತರ ಪ್ರಕಟನೆಯಾಗಬಹುದು. ಅಲ್ಲಿಯ ವರೆಗೂ ಈ ಜನರು ಏನು ಮಾಡಬೇಕು? ಅವರು ಹಸಿದೇ ಇರಬೇಕೆ?” ಎಂದು ಭಾರಧ್ವಾಜ್ ಪ್ರಶ್ನಿಸಿದರು.
“ನ್ಯಾಯಾಲಯಗಳು ಮತ್ತೆ ಮತ್ತೆ ಜನತೆಯ ಬದುಕುವ ಹಕ್ಕನ್ನು ಎತ್ತಿಹಿಡಿಯಲು ವಿಫವಾಗಿರುವುದು ಮಾತ್ರವಲ್ಲ, ಬದಲಾಗಿ ಜನತೆಯ ಗೌರವಯುತ ಜೀವನ ನಡೆಸುವ ಹಕ್ಕನ್ನೂ ಎತ್ತಿಹಿಡಿಯುವಲ್ಲಿ ವಿಫಲವಾಗಿವೆ. ಆಹಾರಕ್ಕಾಗಿ ಓರ್ವ ವ್ಯಕ್ತಿಯನ್ನು ಭಿಕ್ಷಾಟನೆಗೆ ತಳ್ಳುವಾಗ ಅವರ ಗೌರವ ಇನ್ನೆಲ್ಲಿ ಉಳಿದಿದೆ?
ಮೂಲ: ಸೃಷ್ಟಿ ಜಸ್ವಾಲ್ (ಅಲ್-ಜಝೀರ)
ಅನುವಾದ: ಸೂರ್ಯ ಸಾಥಿ