‘ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಸ್ವಾತಂತ್ರ್ಯ ದಿನಾಚರಣೆಯಂದು ದೇಶವನ್ನುದ್ದೇಶಿಸಿ ಮಾಡುವ ತಮ್ಮ ಭಾಷಣಗಳಲ್ಲಿ ಯೋಜನೆಗಳನ್ನು ಘೋಷಿಸುತ್ತಾರೆಯೇ ಹೊರತು ಅದನ್ನು ಜಾರಿಗೆ ತರುವುದಿಲ್ಲ’ ಎಂದು ಕಾಂಗ್ರೆಸ್ ನಾಯಕರು ಟೀಕಿಸಿದ್ದಾರೆ.
ಕಳೆದ ಏಳು ವರ್ಷಗಳಿಂದ ನರೇಂದ್ರ ಮೋದಿಯವರು ಒಂದೇ ರೀತಿಯ ಭಾಷಣವನ್ನು ಮಾಡುತ್ತಾ ಬಂದಿದ್ದಾರೆ. ಪ್ರತಿ ವರ್ಷವೂ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸುತ್ತಾರೆ, ಆದರೆ, ಅದನ್ನು ಕಾರ್ಯರೂಪಕ್ಕೆ ತರುವುದಿಲ್ಲ ಎಂದು ರಾಜ್ಯ ಸಭಾ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ವಾಗ್ದಾಳಿ ನಡೆಸಿದ್ದಾರೆ.

ಈವರೆಗೆ ಸಣ್ಣ ರೈತರು, ನೊಂದ ವರ್ಗಗಳಿಗಾಗಿ ಯಾವ ಕೆಲಸವನ್ನು ಮಾಡಿಲ್ಲ.ಈಗ ನೂತನ ಕೃಷಿ ಕಾನೂನುಗಳನ್ನು ಜಾರಿಗೆ ತರುವ ಮೂಲಕ ರೈತರಿಗೆ ಅಪಾಯವನ್ನು ತಂದಿಟ್ಟಿದ್ದಾರೆ. ಆದರೆ ಈಗಲೂ ಅವರು ಸಣ್ಣ ರೈತರು ಮತ್ತು ಅಭಿವೃದ್ಧಿಗೆ ಸಂಬಂಧಿಸಿದಂತೆ ಹಿಂದಿನ ಕಾಂಗ್ರೆಸ್ ಆಡಳಿತವನ್ನು ದೂರುತ್ತಾರೆ. ಕೆಂಪುಕೋಟೆಯಲ್ಲಿ ಪದೇ ಪದೇ ಕಾಂಗ್ರೆಸ್ ಪಕ್ಷವನ್ನು ಟೀಕಿಸುವುದರಿಂದ ದೇಶದ ಪ್ರಗತಿಯಾಗುದಿಲ್ಲ’ ಎಂದು ಅವರು ಹೇಳಿದ್ದಾರೆ.
ಅವರು ಬಹಳಷ್ಟು ವಿಷಯಗಳನ್ನು ಹೇಳುತ್ತಾರೆ ಆದರೆ ಅವುಗಳನ್ನು ಎಂದಿಗೂ ಪಾಲಿಸುವುದಿಲ್ಲ ಎಂದು ಖರ್ಗೆ ಮೋದಿಯವರನ್ನು ಟೀಕಿಸಿದ್ದಾರೆ.
‘ಕಾಂಗ್ರೆಸ್ ಆಡಳಿತದಲ್ಲಿದ್ದಾಗ ರೈತರಿಗಾಗಿ ನೀರಾವರಿ ಯೋಜನೆ ಸೇರಿದಂತೆ ಹಲವರು ಕೆಲಸಗಳನ್ನು ಮಾಡಿದೆ. ಮನಮೋಹನ್ ಸಿಂಗ್ ಮತ್ತು ಸೋನಿಯಾ ಗಾಂಧಿ ಅವರು ಯುಪಿಎ ಆಡಳಿತಾವಧಿಯಲ್ಲಿ ರೈತರ ಸಾಲ ಮನ್ನಾ ಮಾಡಿದ್ದರು’ ಎಂದು ಅವರು ತಿಳಿಸಿದ್ದಾರೆ.
ಈ ನಡುವೆ ಕಾಂಗ್ರೆಸ್ ಮುಖ್ಯ ವಕ್ತಾರ ರಣದೀಪ್ ಸಿಂಗ್ ಸುರ್ಜೇವಾಲ ಕೂಡಾ ನರೇಂದ್ರ ಮೋದಿಯವರನ್ನು ಟೀಕಿಸಿದ್ದು, ಖಾಲಿ ಭರವಸೆಗಳನ್ನು ನೀಡುವುದರಲ್ಲಿ ಏನಿದೆ ಎಂದು ಅವರು ಪ್ರಶ್ನಿಸಿದ್ದಾರೆ.
ಪ್ರಧಾನಿ ಮೋದಿ ಅವರ 2019ರ ಸ್ವಾತಂತ್ರ್ಯ ದಿನಾಚರಣೆಯ ಭಾಷಣದ ವಿಡಿಯೋ ತುಣುಕನ್ನು ಹಂಚಿಕೊಂಡಿರುವ ಸುರ್ಜೇವಾಲ, ಮೂಲಸೌಕರ್ಯ ವಲಯದ ಅಭಿವೃದ್ಧಿಗಾಗಿ ಪ್ರಧಾನಿ ಅವರು ಎರಡು ವರ್ಷಗಳ ಹಿಂದೆಯೂ ₹100 ಲಕ್ಷ ಕೋಟಿಯನ್ನು ಘೋಷಿಸಿದ್ದರು. ಈಗ ಕನಿಷ್ಠ ₹100 ಲಕ್ಷ ಕೋಟಿಯ ಸಂಖ್ಯೆಯನ್ನಾದರೂ ಬದಲಿಸಬೇಕಾಗಿತ್ತು’ ವ್ಯಂಗ್ಯವಾಡಿದ್ದಾರೆ.