ಕರ್ನಾಟಕ ಶನಿವಾರ ಬರೋಬ್ಬರಿ 17,500 ಹೊಸ ಕರೋನಾ ಪ್ರಕರಣಗಳನ್ನು ಕಂಡಿದೆ. ಒಟ್ಟು ಹೊಸ ಪ್ರಕರಣಗಳ ಪೈಕಿ ಬೆಂಗಳೂರು ಮಹಾನಗರದಲ್ಲೇ 11,404 ಪ್ರಕರಣಗಳು ವರದಿಯಾಗಿವೆ. ಇದು ರಾಜ್ಯದ ಈವರೆಗಿನ ಸಾರ್ವಕಾಲಿಕ ದಾಖಲೆ.
ಈ ಪರಿಯ ಕೋವಿಡ್ ಸೋಂಕಿನ ಹೊತ್ತಿನಲ್ಲಿ ಸಹಜವಾಗೇ ಕಾಡುವ ಪ್ರಶ್ನೆ, ಮುಂದೇನು? ಹೌದು, ಮುಂದೇನು ಎಂಬುದು ಈಗ ರಾಜ್ಯದ ಜನಸಾಮಾನ್ಯರ ಮಟ್ಟಿಗೆ ಮಾತ್ರವಲ್ಲ; ರಾಜ್ಯ ಸರ್ಕಾರದ ಚುಕ್ಕಾಣಿ ಹಿಡಿದವರ ಮುಂದೆಯೂ ಇರುವ ಪ್ರಶ್ನೆ. ಒಂದೇ ವ್ಯತ್ಯಾಸವೆಂದರೆ; ಜನಸಾಮಾನ್ಯರ ಮುಂದೆ ಕರೋನಾ ತೀವ್ರತೆ ಮತ್ತು ಅತಿವೇಗದ ಹರಡುವಿಕೆಯ ಕಾರಣದಿಂದ ಈ ಪ್ರಶ್ನೆ ದುತ್ತನೇ ಎದುರಾಗಿದೆ. ಆದರೆ, ರಾಜ್ಯದ ಅಧಿಕಾರದ ಸೂತ್ರಧಾರರಿಗೆ ಇದು ಹೊಸದಲ್ಲ. ತಿಂಗಳುಗಳ ಹಿಂದೆಯೇ ಕರೋನಾ ಎರಡನೆಯ ಅಲೆ ಹೆಚ್ಚು ಭೀಕರವಾಗಿರಲಿದೆ ಮತ್ತು ವ್ಯಾಪಕವಾಗಿರಲಿದೆ. ಆ ಹಿನ್ನೆಲೆಯಲ್ಲಿ ಸೋಂಕು ತಡೆ, ಸೋಂಕಿತರ ಜೀವ ರಕ್ಷಣೆ ಮತ್ತು ವೈದ್ಯಕೀಯ ವ್ಯವಸ್ಥೆಯ ನಿರ್ವಹಣೆಯ ಬಗ್ಗೆ ವ್ಯಾಪಕ ತಯಾರಿ ಮಾಡಿಕೊಳ್ಳಬೇಕಿದೆ ಎಂಬ ಎಚ್ಚರಿಕೆಯನ್ನು ಸರ್ಕಾರಕ್ಕೆ ನೀಡಲಾಗಿತ್ತು. ಹಾಗಾಗಿ ಸರ್ಕಾರದ ಪಾಲಿಗೆ, ಮುಂದೇನು ಎಂಬುದು ಧುತ್ತನೇ ಎದ್ದ ಪ್ರಶ್ನೆ ಅಲ್ಲವೇ ಅಲ್ಲ!
ಹಾಗಿದ್ದರೆ, ರಾಜ್ಯ ಬಿಜೆಪಿ ಸರ್ಕಾರ ತೀವ್ರ ಗಂಭೀರ ಪರಿಸ್ಥಿತಿ ನಿರ್ಮಿಸಿರುವ ಕರೋನಾದ ಸಂಕಷ್ಟಗಳನ್ನು ಎದುರಿಸಿ, ರಾಜ್ಯದ ಜನಸಾಮಾನ್ಯರ ಜೀವ ರಕ್ಷಣೆಗೆ ಬೇಕಾದ ಮಟ್ಟಿಗೆ ಸಜ್ಜಾಗಿದೆಯೇ ಎಂದರೆ; ಅದಕ್ಕೆ, ಶನಿವಾರ ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಎದುರಿಸಿದ ಸಮಸ್ಯೆಯೇ ಉತ್ತರ! ಕುಮಾರಸ್ವಾಮಿ ಅವರಿಗೆ ಕೋವಿಡ್ ಧೃಢಪಟ್ಟ ಹಿನ್ನೆಲೆಯಲ್ಲಿ ವೈದ್ಯರ ಸಲಹೆ ಮೇರೆಗೆ ಅವರು ಬೆಂಗಳೂರಿನ ಪ್ರತಿಷ್ಠಿತ ಖಾಸಗೀ ಆಸ್ಪತ್ರೆಗೆ ದಾಖಲಾಗಲು ಯತ್ನಿಸಿ, ಅಲ್ಲಿ ಬೆಡ್ ಸಿಗದೇ ವಾಪಸ್ಸಾಗಿದ್ದಾರೆ. ಸ್ವತಃ ರಾಜ್ಯ ಆರೋಗ್ಯ ಸಚಿವ ಡಾ ಸುಧಾಕರ್ ಅವರೇ ಬೆಡ್ ಕೊಡಿಸಲು ಯತ್ನಿಸಿದರೂ ಆ ಆಸ್ಪತ್ರೆಯಲ್ಲಿ ಮಾಜಿ ಮುಖ್ಯಮಂತ್ರಿಗೆ ಪ್ರವೇಶ ದೊರೆಯಲೇ ಇಲ್ಲ! ಬಳಿಕ ಅವರು ಮತ್ತೊಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.
ಜಗತ್ತಿನ ವೈದ್ಯಕೀಯ ಪ್ರವಾಸೋದ್ಯಮದ ಕೇಂದ್ರಬಿಂದು, ‘ಮೆಡಿಕಲ್ ಹಬ್’ ಎಂದೇ ದಶಕಗಳಿಂದ ಜನಜನಿತವಾಗಿರುವ ಬೆಂಗಳೂರಿನಲ್ಲೇ ಪರಿಸ್ಥಿತಿ ಹೀಗಿದ್ದರೆ, ಇನ್ನು ರಾಜ್ಯದ ಇತರ ಭಾಗಗಳಲ್ಲಿ, ಅದರಲ್ಲೂ ತಾಲೂಕು ಮಟ್ಟದಲ್ಲಿ ಪರಿಸ್ಥಿತಿ ಎಷ್ಟು ಭಯಾನಕವಾಗಿರಬಹುದು ಎಂಬುದನ್ನು ಯಾರು ಬೇಕಾದರೂ ಊಹಿಸಬಹುದು.
ಅದೇ ಬೆಂಗಳೂರಿನಲ್ಲಿ ಹೀಗೆ ಆಸ್ಪತ್ರೆಗಳಲ್ಲಿ ಬೆಡ್ ಸಿಗದೆ ಸಕಾಲಕ್ಕೆ ಚಿಕಿತ್ಸೆ ದೊರೆಯದೆ, ಬೆಡ್ ಸಿಕ್ಕರೂ ರೆಮಿಡಿಸಿವರ್ ಔಷಧಿ ದೊರೆಯದೆ ಸಾವು ಕಂಡವರು ಸಂಖ್ಯೆ ದೊಡ್ಡದಿದೆ. ಡಾ ಅಶ್ವಿನಿ ಸರೋದೆ ಎಂಬ ಬೆಂಗಳೂರಿನ ವೈದ್ಯೆಯೊಬ್ಬರ ವಯೋವೃದ್ಧ ತಂದೆಯ ಜೀವಕ್ಕೆ ಕಂಟಕವಾದದ್ದು ಕೂಡ ಇಂಥಹದ್ದೇ ಪರಿಸ್ಥಿತಿ. ಕಿಡ್ನಿ ಕಸಿ ಮಾಡಿಸಿಕೊಂಡಿದ್ದ ಅವರಿಗೆ ಕೋವಿಡ್ ಸೋಂಕು ತಗುಲಿದಾಗ, ಸಹಜವಾಗೇ ಆತಂಕದ ಪರಿಸ್ಥಿತಿ ಇತ್ತು. ಅವರ ಆರೋಗ್ಯ ಬಿಗಡಾಯಿಸಿದ ಹಿನ್ನೆಲೆಯಲ್ಲಿ ಡಾ ಸರೋದೆ, ಅವರನ್ನು ಬೆಂಗಳೂರಿನ ಹಲವು ಖಾಸಗೀ ಆಸ್ಪತ್ರೆಗಳಲ್ಲಿ ವಿಚಾರಿಸಿದಾಗ, ಸ್ವತಃ ಅವರೇ ಈ ಮೊದಲು ಕೆಲಸ ಮಾಡಿದ ಆಸ್ಪತ್ರೆಗಳೂ ಸೇರಿ ಬಹುತೇಕ ಕಡೆ ಬೆಡ್ ಲಭ್ಯವಿಲ್ಲ ಎಂಬ ಕಾರಣ ನೀಡಿ ಅವರಿಗೆ ಪ್ರವೇಶ ನಿರಾಕರಿಸಲಾಗಿತ್ತು. ಅಂತಿಮವಾಗಿ ಒಂದು ಪ್ರತಿಷ್ಠಿತ ಖಾಸಗೀ ಆಸ್ಪತ್ರೆಯಲ್ಲಿ ಸಾಕಷ್ಟು ಪ್ರಯತ್ನದ ಬಳಿಕ ಅವರಿಗೆ ಪ್ರವೇಶ ದೊರೆತಿತ್ತು. ಆದರೆ, ಅವರಿಗೆ ತುರ್ತಾಗಿ ಬೇಕಾಗಿದ್ದ ರೆಮಿಡಿಸಿವರ್ ಔಷಧಿ ಆಸ್ಪತ್ರೆಯಲ್ಲಿ ಲಭ್ಯವಿರಲಿಲ್ಲ!
ಹಾಗಾಗಿ ಡಾ ಸರೋದೆ ಸ್ವತಃ ವೈದ್ಯೆಯಾಗಿದ್ದರೂ, ನೂರಾರು ಮಂದಿ ವೈದ್ಯರು ಸಹೋದ್ಯೋಗಿಗಳಾಗಿದ್ದರೂ, ತಮ್ಮ ತಂದೆಗೆ ಸಕಾಲದಲ್ಲಿ ಬೆಡ್ ಹೊಂದಿಸಲಾಗಲಿಲ್ಲ! ಬೆಡ್ ಸಿಕ್ಕರೂ ರೆಮಿಡಿಸಿವರ್ ಔಷಧಿ ಹೊಂದಿಸಲಾಗಲಿಲ್ಲ. ತಂದೆಯನ್ನು ಕಳೆದುಕೊಳ್ಳಬೇಕಾಯಿತು. ತಂದೆಯನ್ನು ನೋಡಿಕೊಳ್ಳಲು ಆಸ್ಪತ್ರೆಯಲ್ಲಿದ್ದ ತಾಯಿಗೂ ಕರೋನಾ ಸೋಂಕು ತಗುಲಿದ್ದು, ಅವರೂ ಸಾವು ಬದುಕಿನ ಹೋರಾಟ ನಡೆಸಿದ್ದಾರೆ.

ವೈದ್ಯೆ ಡಾ ಸರೋದೆ ಮತ್ತು ಮಾಜಿ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಪ್ರಕರಣಗಳು ಕರ್ನಾಟಕ ಸರ್ಕಾರ, ಕೋವಿಡ್ ಎರಡನೇ ಅಲೆಯ ಭೀಕರತೆಯನ್ನು ಎದುರಿಸಲು ಎಷ್ಟರಮಟ್ಟಿಗೆ ಸಜ್ಜಾಗಿದೆ ಎಂಬುದಕ್ಕೆ ಸ್ಪಷ್ಟ ನಿದರ್ಶನಗಳು. ತಿಂಗಳುಗಳ ಹಿಂದೆಯೇ ತಜ್ಞರು ಮತ್ತು ಕೇಂದ್ರ ಕೋವಿಡ್ ಕಾರ್ಯಪಡೆ ಕೂಡ ಎರಡನೇ ಅಲೆಯ ಭೀಕರತೆಯ ಬಗ್ಗೆ ಮತ್ತು ಅದು ತಂದೊಡ್ಡಬಹುದಾದ ಆರೋಗ್ಯ ವಲಯದ ಸವಾಲಿನ ಬಗ್ಗೆ ಎಚ್ಚರಿಕೆ ನೀಡಿದ್ದರೂ, ರಾಜ್ಯ ಬಿಜೆಪಿ ಸರ್ಕಾರ ಆ ಬಗ್ಗೆ ಎಷ್ಟು ಕಾಳಜಿ ವಹಿಸಿತ್ತು ಎಂಬುದನ್ನು ಇದು ಸಾರಿ ಹೇಳುತ್ತಿದೆ. ಉಪ ಚುನಾವಣೆಗಳನ್ನು ಗೆಲ್ಲುವ ಮೂಲಕ ಬಿಜೆಪಿಯ ಅಖಿಲ ಭಾರತ ಅಶ್ವಮೇಧ ಯಾಗದ ಯಶಸ್ಸಿಗೆ ಹಗಲಿರುಳೂ ಶ್ರಮಿಸುತ್ತಿದ್ದ ಕರ್ನಾಟಕ ಸರ್ಕಾರ, ಇದೀಗ ಉಪ ಚುನಾವಣೆ ಮುಗಿದ ಬಳಿಕ ಕರೋನಾದತ್ತ ಗಮನ ಹರಿಸಿದೆ.
ಈ ನಡುವೆ, ಆಸ್ಪತ್ರೆಗಳಲ್ಲಿ; ಅದರಲ್ಲೂ ಮೆಡಿಕಲ್ ಹಬ್ ಬೆಂಗಳೂರಿನ ಪ್ರತಿಷ್ಠಿತ ಆಸ್ಪತ್ರೆಗಳಲ್ಲಿ ರೆಮೆಡಿಸಿವರ್ ಸಕಾಲದಲ್ಲಿ ಸಿಗದೆ ರೋಗಿಗಳು ಜೀವ ಕಳೆದುಕೊಳ್ಳುತ್ತಿರುವ ಹೊತ್ತಿಗೇ ಆನ್ ಲೈನ್ ಮಾರ್ಕೆಟಿಂಗ್ ಜಾಲತಾಣ ಒಎಲ್ ಎಕ್ಸ್ ನಲ್ಲಿ 6000 ರೂ.ಗಳಿಂದ 20,000 ರೂ.ಗಳವರೆಗೆ ಭಾರೀ ಬೆಲೆಯಲ್ಲಿ ಅದೇ ಔಷಧಿ ಮಾರಾಟವಾಗುತ್ತಿದೆ! ಔಷಧಿಗಳ ಆನ್ ಲೈನ್ ಮಾರಾಟಕ್ಕೆ ದೇಶದಲ್ಲಿ ಕಾನೂನು ನಿರ್ಬಂಧವಿದ್ದರೂ, ಒಎಲ್ ಎಕ್ಸ್ ನಲ್ಲಿ ದೇಶಾದ್ಯಂತ ಭಾರೀ ಹಾಹಾಕಾರವೆದ್ದಿರುವ ಔಷಧಿಯನ್ನು ಹೀಗೆ ರಾಜಾರೋಷವಾಗಿ ಮಾರಾಟಮಾಡಲಾಗುತ್ತಿದೆ!

ಅದೇ ಹೊತ್ತಿಗೆ ರಾಜ್ಯದ ಹಲವು ಕಡೆ ಕೆಲವು ಔಷಧ ಅಂಗಡಿಗಳು ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ರೆಮಿಡಿಸಿವರ್ ಔಷಧಿಯನ್ನು ಹತ್ತಾರು ಪಟ್ಟು ದುಬಾರಿ ಬೆಲೆಗೆ ಮಾರಲಾಗುತ್ತಿದೆ. ಅಂತಹ ಲಾಭದ ಮೇಲೆ ಕಣ್ಣಿಟ್ಟು ಮಾರುಕಟ್ಟೆಯಲ್ಲಿ ಆ ಔಷಧಿ ಸಿಗದಂತೆ ಕೃತಕ ಅಭಾವ ಸೃಷ್ಟಿಲಾಗುತ್ತಿದೆ ಎಂಬ ದೂರುಗಳು ಸಾಕಷ್ಟು ದಿನಗಳಿಂದ ಕೇಳಿಬರುತ್ತಿವೆ. ಆದಾಗ್ಯೂ ಕರೋನಾ ಸೋಂಕಿತರ ಜೀವ ರಕ್ಷಕ ಔಷಧಗಳ ವಿಷಯದಲ್ಲಿ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸುವ ನಿಟ್ಟಿನಲ್ಲಿ ಕೂಡ ಸರ್ಕಾರ ದಿಟ್ಟ ಹೆಜ್ಜೆ ಇಡಲು ಸಿದ್ಧವಿಲ್ಲ! ಇನ್ನು ಖಾಸಗೀ ಆಸ್ಪತ್ರೆಗಳಲ್ಲಿ ಶೇ.50ರಷ್ಟು ಬೆಡ್ ಗಳನ್ನು ಸರ್ಕಾರಕ್ಕೆ ಬಿಟ್ಟುಕೊಡಬೇಕು ಎಂಬ ನಿಯಮ ರೂಪಿಸಿದ್ದರೂ, ಆ ನಿಯಮಗಳನ್ನು ಮೊದಲ ಕರೋನಾ ಅಲೆ ತಗ್ಗುತ್ತಲೇ ಗಾಳಿಗೆ ತೂರಿ ತಿಂಗಳುಗಳೇ ಉರುಳಿವೆ. ಇದೀಗ ಸ್ವತಃ ಆರೋಗ್ಯ ಸಚಿವರೇ ಬೆಂಗಳೂರಿನ ಖಾಸಗೀ ಆಸ್ಪತ್ರೆಯೊಂದಕ್ಕೆ ಭೇಟಿ ನೀಡಿದಾಗ ಕೂಡ, ಅಲ್ಲಿನ ಸಿಬ್ಬಂದಿ ಆಸ್ಪತ್ರೆಯಲ್ಲಿ ಎಷ್ಟು ಬೆಡ್ ಇವೆ, ಎಷ್ಟು ಖಾಲಿ ಇವೆ ಮುಂತಾದ ಯಾವ ಮಾಹಿತಿಯನ್ನೂ ನೀಡದೇ ಸಾಗಹಾಕಿದ್ದಾರೆ! ಈ ಘಟನೆ, ಖಾಸಗೀ ಆಸ್ಪತ್ರೆಗಳ ಮೇಲೆ ಸರ್ಕಾರ ಎಷ್ಟರಮಟ್ಟಿಗೆ ಹಿಡಿತ ಹೊಂದಿದೆ? ಖಾಸಗೀ ಆಸ್ಪತ್ರೆಗಳು ಸರ್ಕಾರ, ಸಚಿವರ ಆದೇಶಗಳನ್ನು ಹೇಗೆ ಪರಿಗಣಿಸುತ್ತವೆ ಎಂಬುದಕ್ಕೆ ಒಂದು ನಿದರ್ಶನ.
ಹಾಗಾಗಿ, ಒಂದು ಕಡೆ ಸೋಂಕಿನ ಪ್ರಮಾಣ ಊಹಾತೀತ ಪ್ರಮಾಣದಲ್ಲಿ ಹೆಚ್ಚುತ್ತಿದ್ದರೆ, ಮತ್ತೊಂದು ಕಡೆ ಸರ್ಕಾರಿ ಮತ್ತು ಖಾಸಗೀ ಆಸ್ಪತ್ರೆಗಳಲ್ಲಿ ಬೆಡ್ ಗಳು ಖಾಲಿ ಇಲ್ಲ, ಜೀವರಕ್ಷಕ ರೆಮಿಡಿಸಿವರ್ ಔಷಧಿ ಲಭ್ಯವಿಲ್ಲ! ಕೊನೆಗೆ ಸ್ಮಶಾನದಲ್ಲಿ ಕೂಡ ಶವಗಳಿಗೆ ಜಾಗವಿಲ್ಲದ ಹೀನಾಯ ಪರಿಸ್ಥಿತಿ ನಿರ್ಮಾಣವಾಗಿದೆ. ರಾಜ್ಯದ ಮುಖ್ಯಮಂತ್ರಿ ಬಿ ಎಸ್ ಯಡಿಯೂರಪ್ಪ ಅವರೇ ಸ್ವತಃ ಎರಡನೇ ಬಾರಿಗೆ ಸೋಂಕಿತರಾಗಿ ಕ್ವಾರಂಟೈನ್ ಆಗಿದ್ದರೆ, ಅವರ ಸಂಪರ್ಕಕ್ಕೆ ಬಂದ ಹತ್ತಾರು ಸಚಿವರು, ಶಾಸಕರು, ಅಧಿಕಾರಿಗಳು ಕೂಡ ಕ್ವಾರಂಟೈನ್ ಆಗಿದ್ದಾರೆ. ಹಾಗಾಗಿ ಒಂದು ರೀತಿಯಲ್ಲಿ ರಾಜ್ಯ ಬಿಜೆಪಿ ಸರ್ಕಾರವೇ ಕ್ವಾರಂಟೈನ್ ಆದಂತಾಗಿದ್ದು, ಇನ್ನು ಜನ ಸಾಮಾನ್ಯರ ಪಾಡು ಕೇಳುವರಾರು? ಎಂಬ ಶೋಚನೀಯ ಸ್ಥಿತಿ ನಿರ್ಮಾಣವಾಗಿದೆ.