ಬೆಂಗಳೂರು: ಸಂಚಾರ ದಟ್ಟಣೆ ‘ ಚಕ್ರವ್ಯೂಹ ‘ ಭೇದಿಸಲು ಹೆಣಗಾಡಿ ಗೊಣಗಾಡುವ ನಗರದ ವಾಹನ ಸವಾರರು ಸಂಚಾರ ನಿಯಮ ಪಾಲನೆಗೆ ಅಸಡ್ಡೆ ತೋರುತ್ತಿದ್ದಾರೆ.
ಸಿಗ್ನಲ್‌ಗಳಲ್ಲಿನ ಹೈಡೆಫಿನೇಶನ್ ಕ್ಯಾಮೆರಾ ಕಣ್ಣುಗಳು ಹಾಗೂ ದಂಡದ ಭಯವನ್ನೂ ಲೆಕ್ಕಿಸದೇ ಸಂಚಾರ ನಿಯಮ ಉಲ್ಲಂಘಿಸುತ್ತಿದ್ದಾರೆ. ಪರಿಣಾಮ 9 ತಿಂಗಳಲ್ಲಿಯೇ 68,30,541 ಸಂಚಾರ ನಿಯಮ ಉಲ್ಲಂಘನೆ ಕೇಸ್ ದಾಖಲಾಗಿದ್ದು, ದಂಡ ಕಟ್ಟುವ ಅನಿವಾರ್ಯತೆ ಸೃಷ್ಟಿಸಿಕೊಂಡಿದ್ದಾರೆ.
ಸುಗಮ ಸಂಚಾರ ವ್ಯವಸ್ಥೆಗೆ ಆದ್ಯತೆ ನೀಡಿರುವ ಸಂಚಾರ ಪೊಲೀಸರು, ಕಳೆದ ಒಂದು ವರ್ಷದಿಂದ ರಸ್ತೆ ಮಧ್ಯೆ ತಪಾಸಣೆ ನಡೆಸಿ ಕೇಸ್ ದಾಖಲಿಸುವುದನ್ನು ಕಡಿಮೆ ಮಾಡಿದ್ದಾರೆ. ಇದೇ ಅವಕಾಶ ಎಂದುಕೊಂಡ ವಾಹನ ಸವಾರರು ನಿಯಮ ಬ್ರೇಕ್ ಮಾಡುತ್ತಿದ್ದಾರೆ. ಆದರೆ, ಪೊಲೀಸರ ಕೆಲಸವನ್ನು 50 ಜಂಕ್ಷನ್‌ಗಳಲ್ಲಿರುವ ಇಂಟೆಲಿಜನ್ಸ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (ಐಟಿಎಂಎಸ್) ಹೈ ರೆಸಲ್ಯೂಶನ್ ಕ್ಯಾಮೆರಾಗಳು, 180 ಟ್ರಾಫಿಕ್ ಜಂಕ್ಷನ್‌ಗಳಲ್ಲಿನ ಪ್ಯಾನ್ ಟಿಲ್ಟ್ ಕ್ಯಾಮೆರಾಗಳು ನಿರ್ವಹಿಸುತ್ತಿದ್ದು, ನಿಯಮ ಉಲ್ಲಂಘನೆ ಪತ್ತೆ ಮಾಡಿ ಕೇಸ್ ದಾಖಲಿಸಲು ನೆರವಾಗುತ್ತಿವೆ.