
ಜಮ್ಮು (ಜಮ್ಮು ಮತ್ತು ಕಾಶ್ಮೀರ): ಜಮ್ಮು ವಿಭಾಗದಲ್ಲಿ ನಡೆದ ಭಯೋತ್ಪಾದಕ ದಾಳಿಗಳ ಮಧ್ಯೆ, ಶಿವಸೇನೆ (ಉದ್ಧವ್ ಬಾಳಾಸಾಹೇಬ್ ಠಾಕ್ರೆ) ಜಮ್ಮು-ಕಾಶ್ಮೀರ ಘಟಕದ ಮುಖಂಡರು ತೀವ್ರ ಪ್ರತಿಭಟನೆ ನಡೆಸಿ ಪಾಕಿಸ್ತಾನದ ಧ್ವಜವನ್ನು ಸುಟ್ಟು ಹಾಕಿದ್ದಾರೆ.
ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಮರುಸ್ಥಾಪಿಸುವಲ್ಲಿ ಕೇಂದ್ರದ ಬಿಜೆಪಿ ಸರ್ಕಾರ ವಿಫಲವಾಗಿದೆ ಎಂದು ಆರೋಪಿಸಿ ಭಾರತೀಯ ಸೈನಿಕರ ಮೇಲಿನ ಇತ್ತೀಚಿನ ದಾಳಿಯ ಹೊಣೆಯನ್ನು ಹೊತ್ತುಕೊಂಡಿರುವ ನೆರೆಯ ರಾಷ್ಟ್ರದ ವಿಶೇಷವಾಗಿ ಉಗ್ರಗಾಮಿ ಸಂಘಟನೆ ‘ಕಾಶ್ಮೀರ ಟೈಗರ್ಸ್’ ವಿರುದ್ಧ ಪ್ರಬಲ ಸೇನಾ ಕ್ರಮಕ್ಕೆ ಪ್ರತಿಭಟನಾನಿರತ ಪಕ್ಷದ ಮುಖಂಡರು ಒತ್ತಾಯಿಸಿದರು.
ಶಿವಸೇನೆ ಜಮ್ಮು ಕಾಶ್ಮೀರ ಘಟಕದ ಅಧ್ಯಕ್ಷ ಮನೀಶ್ ಸಾಹ್ನಿ ನೇತೃತ್ವದಲ್ಲಿ ಜಮ್ಮು-ಪಠಾಣ್‌ಕೋಟ್ ರಾಷ್ಟ್ರೀಯ ಹೆದ್ದಾರಿಯ ಬದಿ ಬ್ರಾಹ್ಮಣ ಚೌಕ್‌ನಲ್ಲಿ ಪ್ರತಿಭಟನೆ ನಡೆಸಿದ ಮುಖಂಡರು ಭಾರತೀಯ ಯೋಧರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳಬೇಕೆಂದು ಒತ್ತಾಯಿಸಿದರು.

ಜಮ್ಮು ಮತ್ತು ಕಾಶ್ಮೀರದ ಜನರು ಕಳೆದ ಮೂರೂವರೆ ದಶಕಗಳಿಂದ ಭಯೋತ್ಪಾದನೆಯ ಹೊಡೆತವನ್ನು ಎದುರಿಸುತ್ತಿದ್ದಾರೆ ಎಂದು ಪ್ರತಿಭಟನೆಯ ಬದಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಾಹ್ನಿ ಹೇಳಿದರು. “ಜಮ್ಮು ಮತ್ತು ಕಾಶ್ಮೀರದಲ್ಲಿ ಶಾಂತಿ ಕಾಪಾಡುವುದಾಗಿ ಹೇಳಿಕೊಳ್ಳುವ ಬಿಜೆಪಿ, ಕೇಂದ್ರದಲ್ಲಿ ತನ್ನ 10 ವರ್ಷಗಳ ಅವಧಿಯನ್ನು ಪೂರ್ಣಗೊಳಿಸಿದೆ ಮತ್ತು ತನ್ನ ಮೂರನೇ ಅಧಿಕಾರಾವಧಿಯಲ್ಲಿದೆ, ಆದರೆ ಜಮ್ಮು ಮತ್ತು ಕಾಶ್ಮೀರದಲ್ಲಿ ಭಯೋತ್ಪಾದನೆ ಮತ್ತು ಪಾಕಿಸ್ತಾನದ ನೀಚ ಚಟುವಟಿಕೆಗಳನ್ನು ನಿಯಂತ್ರಿಸಲಾಗಿಲ್ಲ. ಭಯೋತ್ಪಾದಕರು ಕಾಶ್ಮೀರದ ಜೊತೆಗೆ ಜಮ್ಮುವಿನಲ್ಲಿ ತಮ್ಮ ಉಗ್ರ ಚಟುವಟಿಕೆಗಳನ್ನು ನಡೆಸುತಿದ್ದಾರೆ ”ಎಂದು ಅವರು ಹೇಳಿದರು.
ಜಮ್ಮು ವಿಭಾಗದಲ್ಲಿ ಭಯೋತ್ಪಾದಕ ಘಟನೆಗಳಲ್ಲಿ ಕಳೆದ ಒಂದು ತಿಂಗಳಲ್ಲಿ 12 ಯೋಧರು ಹುತಾತ್ಮರಾಗಿದ್ದಾರೆ ಮತ್ತು 10 ನಾಗರಿಕರು ಸಾವನ್ನಪ್ಪಿದ್ದಾರೆ ಎಂದು ಸಾಹ್ನಿ ಹೇಳಿದ್ದಾರೆ. ಕಳೆದ ಮೂರು ವರ್ಷಗಳಲ್ಲಿ 50ಕ್ಕೂ ಹೆಚ್ಚು ಭಾರತೀಯ ಯೋಧರು ಜಮ್ಮು ಮತ್ತು ಕಾಶ್ಮೀರದಲ್ಲಿ ಸರ್ವೋಚ್ಚ ತ್ಯಾಗ ಮಾಡಿದ್ದಾರೆ ಎಂದು ಅವರು ಹೇಳಿದರು.

“ಪಾಕಿಸ್ತಾನ ಮತ್ತೊಮ್ಮೆ ಗಡಿಯಾಚೆಯಿಂದ ಒಳನುಸುಳುವಿಕೆಯ ದೊಡ್ಡ ಸಂಚು ರೂಪಿಸುತ್ತಿದೆ. ಸೈನಿಕರ ಹುತಾತ್ಮತೆಯನ್ನು ಇನ್ನು ಮುಂದೆ ಸಹಿಸಬಾರದು. ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯವಾಗಿರುವ ಭಯೋತ್ಪಾದಕರನ್ನು ಕೊಲ್ಲುವ ಮೂಲಕ ಪಾಕಿಸ್ತಾನದ ವಿರುದ್ಧ ಬಲವಾದ ಮಿಲಿಟರಿ ಕ್ರಮದ ಅಗತ್ಯವಿದೆ ಎಂದು ಅವರು ಹೇಳಿದರು.