ಬೆಂಗಳೂರು: ನನ್ನ ಕಾರು ಅಪಘಾತ ಹಿಟ್ ಆಯಂಡ್ ರನ್ ಅಲ್ಲ. ಘಟನೆ ಬಳಿಕ ನಾನು ಓಡಿ ಹೋಗಿರಲಿಲ್ಲ. ಗಾಯಾಳುಗಳನ್ನು ನಾನೇ ಆಸ್ಪತ್ರೆಗೆ ದಾಖಲಿಸಿದ್ದೇನೆ ಎಂದು ನಟ ನಾಗಭೂಷಣ ಮಾಹಿತಿ ನೀಡಿದರು.
ನಗರದ ಕೋಣನಕುಂಟೆ ಕ್ರಾಸ್ ಬಳಿ ಸೆಪ್ಟಂಬರ್ 30 ರ ರಾತ್ರಿ ನಡೆದ ನಟ ನಾಗಭೂಷಣ ಕಾರು ಅಪಘಾತ ಪ್ರಕರಣ ಕುರಿತು ನಟ ನಾಗಭೂಷಣ ಮತ್ತು ಅವರ ಪರ ವಕೀಲ ದಿಲೀಪ್ ಕುಮಾರ್ ಮಾಧ್ಯಮಗೋಷ್ಟಿ ನಡೆಸಿ ಅಂದು ನಡೆದ ಘಟನೆಯ ಕುರಿತು ಮಾಹಿತಿ ನೀಡಿದರು.
ಅವಘಡದ ಬಳಿಕ ನಾನು ನಿಮ್ಮ ಮುಂದೆ ಬಂದು ಮಾತನಾಡಬೇಕಿತ್ತು. ಆದರೆ ಮಾನಸಿಕವಾಗಿ ಡಿಸ್ಟರ್ಬ್ ಆಗಿದ್ದರಿಂದ ಬರಲು ಸಾಧ್ಯವಾಗಲಿಲ್ಲ. ಅಪಘಾತದಿಂದ ಕಾರಿನ ಬಂಪರ್ ಕಿತ್ತು ಹೋಗಿದ್ದಲ್ಲ, ನಾನೇ ಜಖಂಗೊಂಡ ಕಾರಿನ ಬಂಪರ್ ಕಿತ್ತಾಕಿ ಕಾರಿನಲ್ಲಿ ಅವರನ್ನು ಕರೆದೊಯ್ಯಲು ಪ್ರಯತ್ನಿಸಿದ್ದೆ. ಅಪಘಾತದ ಬಗ್ಗೆ ಮಾರ್ಗ ಮಧ್ಯದಲ್ಲಿ ನಾನೇ ಪೊಲೀಸರಿಗೆ ಮಾಹಿತಿ ನೀಡಿದ್ದೇನೆ ಎಂದು ಅಪಘಾತದ ಬಗ್ಗೆ ನಟ ನಾಗಭೂಷಣ ತಿಳಿಸಿದರು.
ಮಹಿಳೆ ಮೃತಪಟ್ಟಿದ್ದಾರೆ ಎಂದು ಕೇಳಿ ನಾನೇ ಕುಸಿದು ಹೋಗಿದ್ದೆ. ಪೊಲೀಸರು ಕಾನೂನು ಕ್ರಮ ಕೈಗೊಂಡು, ಬಳಿಕ ಬೆಳಗ್ಗೆ ಠಾಣಾ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದರು. ಅಪಘಾತದ ಕ್ಷಣದಲ್ಲಿ ಒಬ್ಬ ಮನುಷ್ಯನಾಗಿ ನಾನು ಏನು ಮಾಡಲು ಸಾಧ್ಯವೋ ಅದನ್ನ ಮಾಡಿದ್ದೀನಿ. ನನ್ನ ತಂದೆಯನ್ನ ನಾನು ಅಪಘಾತದಲ್ಲಿ ಕಳೆದುಕೊಂಡಿದ್ದರಿಂದ ನಾನೂ ಸಹ ಈ ನೋವನ್ನು ಅನುಭವಿಸಿದ್ದೇನೆ. ಆದ್ದರಿಂದ ಅಪಘಾತದಲ್ಲಿ ಮನೆಯವರನ್ನು ಕಳೆದುಕೊಂಡ ನೋವೇನು ಎಂಬುದು ನನಗೆ ಗೊತ್ತು. ಆದ್ದರಿಂದ ನನ್ನ ಕಾರು ಅಪಘಾತದಲ್ಲಿ ಮೃತಪಟ್ಟ ಕುಟುಂಬಸ್ಥರ ನೋವಿನಲ್ಲಿ ನಾನೂ ಅವರ ಜೊತೆ ಭಾಗಿಯಾಗಿದ್ದೀನಿ ಎಂದು ಭಾವುಕರಾದರು.