ಶಿವಮೊಗ್ಗ: ಪ್ರಧಾನಿ ನರೇಂದ್ರ ಮೋದಿ ಆಗಮನಕ್ಕೆ ಕ್ಷಣಗಣನೆ ಆರಂಭವಾಗಿದೆ. ನಾಳೆ ನನ್ನ ಜೀವನದಲ್ಲಿಯೇ ಮರೆಯಲಾಗದ ಕ್ಷಣ. ಸ್ವತಃ ನರೇಂದ್ರ ಮೋದಿಯವರೇ ನನ್ನ ಹುಟ್ಟು ಹಬ್ಬದ ದಿನವೇ ಶಿವಮೊಗ್ಗ ವಿಮಾನ ನಿಲ್ದಾಣ ಉದ್ಘಾಟನೆ ಮಾಡಲು ಬರುತ್ತಿರುವುದು ನನಗೆ ಸಮಧಾನ ತೃಪ್ತಿ ತಂದಿದೆ. ನಾಳೆ ಲಕ್ಷಾಂತರ ಜನ ವಿಮಾನ ನಿಲ್ದಾಣ ಉದ್ಘಾಟನಾ ಕಾರ್ಯಕ್ರಮಕ್ಕೆ ಬರಬೇಕು ಎಂದು ವಿನಂತಿ ಮಾಡುತ್ತೇನೆ. ನಾವ್ಯಾರೂ ಇಷ್ಟು ಕಡಿಮೆ ವೆಚ್ವದಲ್ಲಿ ಏರ್ ಪೋರ್ಟ್ ಮಾಡಿ ಮುಗಿಸಬಹುದು ಎಂದು ನಿರೀಕ್ಷೆ ಮಾಡಿರಲಿಲ್ಲ. ಕನಸು ಮನಸ್ಸಿನಲ್ಲೂ ಯೋಚನೆ ಮಾಡಿರಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಈ ವಿಮಾನ ನಿಲ್ದಾಣ ನೈಟ್ ಲ್ಯಾಂಡಿಂಗ್ ಗೂ ಅವಕಾಶ ನೀಡಲಿದ್ದು, ಎಲ್ಲಾ ತರಹದ ವಿಮಾನಗಳೂ ಸಹ ಬಂದು ಹೋಗುವಂತೆ ಅವಕಾಶ ನೀಡಿದ್ದೇವೆ. ಬೆಂಗಳೂರು ನಂತರ ಶಿವಮೊಗ್ಗ ವಿಮಾನ ನಿಲ್ದಾಣದಲ್ಲೇ ಈ ಅವಕಾಶ ನೀಡಲಾಗಿದೆ. ಹಾಗಾಗಿಯೇ ಪ್ರಧಾನಿ ನರೇಂದ್ರ ಮೋದಿ ಇದರ ಉದ್ಘಾಟನೆ ಮಾಡಲಿದ್ದಾರೆ. ಎಲ್ಲರೂ ಕಾರ್ಯಕ್ರಮಕ್ಕೆ ಆಗಮಿಸಬೇಕು ಎಂದರು.
ಪ್ರಧಾನಿ ಮೋದಿ ಇಡೀ ಪ್ರಪಂಚವೇ ಮೆಚ್ಚುವ ವಿಶ್ವ ನಾಯಕ, ಸಹಜವಾಗಿ ಜನ ಹೆಚ್ಚು ಉತ್ಸುಕರಾಗಿದ್ದಾರೆ. ಪ್ರಧಾನಿ ಬರುವುದು ಸುತ್ತಲ ಜಿಲ್ಲೆಯ ಕಾರ್ಯಕರ್ತರಲ್ಲಿ ಉತ್ಸಾಹ ಮೂಡಿಸಿದೆ. ಮೋದಿ ಸೇರಿ ಹಿರಿಯ ಮುಖಂಡರ ಮಾತುಗಳನ್ನ ಕೇಳುವ ಅವಕಾಶ ಕಾರ್ಯಕರ್ತರಿಗೆ ಸಿಗುತ್ತಿದೆ. ಜನ ಶಾಂತವಾಗಿ ಕಾರ್ಯಕ್ರಮ ಯಶಸ್ವಿಗೊಳಿಸಬೇಕು ಹಾಗೂ ಒಳಗಡೆ ಬರಲು ಸಾರ್ವಜನಿಕರಿಗೆ ಯಾವುದೇ ಪಾಸ್ ಅಗತ್ಯ ಇಲ್ಲ ಎಂದರು.

ನನ್ನ ಹುಟ್ಟು ಹಬ್ಬದ ದಿನವೇ ಪ್ರಧಾನಿ ಮೋದಿ ವಿಮಾನ ನಿಲ್ದಾಣ ಉದ್ಘಾಟನೆ ಮಾಡುತ್ತಿರುವುದು ಗಿಫ್ಟ್ ಎಂದಾದರೂ ಕರೆಯಿರಿ ಆದರೆ ಪ್ರಧಾನಿ ಮೋದಿ, ಈ ವಿಮಾನ ನಿಲ್ದಾಣ ಉದ್ಘಾಟನೆಗೆ ನನ್ನ ಜನ್ಮ ದಿನದಂದೇ ಬರುತ್ತೇನೆ ಎಂದು ಭರವಸೆ ನೀಡಿದ್ದರು. ಇದು ನನ್ನ ಜೀವನದಲ್ಲಿ ಮರೆಯಲಾಗದ ಸಂತಸದ ದಿನ ಎಂದು ಹೆಮ್ಮೆಯಿಂದ ಹೇಳುತ್ತೇನೆ. ನನ್ನ ಜೀವನದ ಅತೀ ಸಂತಸದ ದಿನ ಯಾವುದು ಎಂದು ಕೇಳಿದರೆ ಪ್ರಧಾನಿ ಮೋದಿಯವರೇ ಜನ್ಮದಿನದಂದು ಉದ್ಘಾಟನೆ ಮಾಡುತ್ತಿರುವುದು ಎಂದು ಹೆಮ್ಮೆಯಿಂದ ಹೇಳುತ್ತೇನೆ ಎಂದರು.
ಈಗಾಗಲೇ ನಾನು ತೀರ್ಮಾನ ಮಾಡಿದ್ದೇನೆ. ಸೂರ್ಯ ಚಂದ್ರ ಇರುವುದು ಎಷ್ಟು ಸತ್ಯವೋ ಬಿಜೆಪಿ ಪುನಃ ಆಡಳಿತಕ್ಕೆ ಬರುವುದು ಅಷ್ಟೇ ಸತ್ಯ ಎಂದು ಯಡಿಯೂರಪ್ಪ ಹೇಳಿದರು.
ಹೆಚ್ ಡಿ ಕುಮಾರಸ್ವಾಮಿ ಮನಸ್ಸಲ್ಲಿ ಯಾರಿಗೂ ಬಹುಮತ ಬರಬಾರದು ಎಂಬುದಿದೆ. ಆ ತರಹ ಆಗುವುದಿಲ್ಲ. ಬಿಜೆಪಿಗೆ ಸ್ಪಷ್ಟ ಬಹುಮತ ಬರಲಿದೆ ಎಂದರು. ಇದಷ್ಟೇ ಅಲ್ಲದೇ ಮುಂದಿನ ಲೋಕಸಭಾ ಚುನಾವಣೆ ಕೂಡ ನಮಗೆ ಸವಾಲು. ಅದರ ಮೇಲೆ ಹೆಚ್ಚು ಕೆಲಸ ಮಾಡುತ್ತೇನೆ. ಬಿಜೆಪಿ ಪಟ್ಟಿ ಬಿಡುಗಡೆ ವರಿಷ್ಠರಿಗೆ ಬಿಟ್ಟಿದ್ದು ಕಾಂಗ್ರೆಸ್ ಪಕ್ಷದವರು ನಮ್ಮ ಪೋಸ್ಟರ್ ಮೇಲೆ ಅವರ ಪೋಸ್ಟರ್ ಅಂಟಿಸಬಾರದು ಇದು ಅವರಿಗೆ ಶೋಭೆ ತರೋದಿಲ್ಲ ಎಂದು ಯಡಿಯೂರಪ್ಪ ಹೇಳಿದರು.









