ಒಂದು ಕೈಯ್ಯಲ್ಲಿ ಕೊಟ್ಟ ಹಾಗೆ ಕೊಟ್ಟು ಇನ್ನೊಂದು ಕೈಯ್ಯಲ್ಲಿ ಕಿತ್ತುಕೊಳ್ಳುತ್ತಿರುವ ಈ ಸರಕಾರಕ್ಕೆ ಆತ್ಮಸಾಕ್ಷಿ ಎನ್ನುವುದೇ ಇಲ್ಲ. ಅದಕ್ಕೆ ಈ ಸರಕಾರದ ಗ್ಯಾರಂಟಿಗಳನ್ನು ಪಿಕ್ ಪಾಕೆಟ್ ಗ್ಯಾರಂಟಿಗಳು ಎಂದು ನಾನು ಕರೆದದ್ದು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ಮಂಡ್ಯ ಲೋಕಸಭೆ ಕ್ಷೇತ್ರದ ಜೆಡಿಎಸ್ -ಬಿಜೆಪಿ ಮೈತ್ರಿಕೂಟದ ಅಭ್ಯರ್ಥಿ ಹೆಚ್.ಡಿ.ಕುಮಾರಸ್ವಾಮಿ ಹೇಳಿದರು.

ಮಧುಗಿರಿಯಲ್ಲಿ ತುಮಕೂರು ಲೋಕಸಭೆ ಕ್ಷೇತ್ರದ ಅಭ್ಯರ್ಥಿ ವಿ.ಸೋಮಣ್ಣ ಅವರ ಪರ ಪ್ರಚಾರ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು ನಾನು ಹಿಂದೆ ಎರಡು ಬಾರಿ ಸರಕಾರ ನಡೆಸಿದ್ದೇನೆ. ಜನರಿಗೆ ಏನೆಲ್ಲಾ ಕೊಡುಗೆ ಕೊಟ್ಟಿದ್ದೇನೆ ಎನ್ನುವುದು ಎಲ್ಲರಿಗೂ ಗೊತ್ತಿದೆ. ವಿಧವಾ ತಾಯಂದಿರಿಗೆ 400 ರೂಪಾಯಿ ಮಾಶಾಸನ, ಗ್ರಾಮೀಣ ಭಾಗದ ಶಾಲಾ ಮಕ್ಕಳಿಗೆ ಸೈಕಲ್ ಕೊಟ್ಟಿದೇನೆ.ಗ್ರಾಮ ವಾಸ್ತವ್ಯಕ್ಕೆ ಬಂದಾಗ ತಾಯಂದಿರು ಸಾರಾಯಿ, ಲಾಟರಿ ನಿಷೇಧ ಮಾಡಿ ಎಂದು ಒತ್ತಾಯ ಮಾಡಿದರು. ಅವರ ಮಾತಿಗೆ ಬೆಲೆ ಕೊಟ್ಟು ನಾನು ಸರಕಾರದ ಖಜಾನೆಗೆ ನಷ್ಟ ಆಗುತ್ತದೆ ಎಂದು ಗೊತ್ತಿದ್ದರೂ ಸಾರಾಯಿ, ಲಾಟರಿ ನಿಷೇಧ ಮಾಡಿದ್ದೇನೆ. ಅಂತಹ ನಾನು ತಾಯಂದಿರಿಗೆ ಅವಮಾನ ಮಾಡುತ್ತೇನೆಯೇ? ಎಂದು ಅವರು ಪ್ರಶ್ನಿಸಿದರು.

ರಾಜ್ಯದಲ್ಲಿ ಕೆಟ್ಟ ಸರಕಾರ ಇದೆ. ಐದು ಗ್ಯಾರೆಂಟಿ ಅಂತಾ ಹೇಳ್ತಾರಲ್ಲ, ನಿಮ್ಮೆಲ್ಲ ತಾಯಂದಿರಿಗೆ ನಾನು ಕೈ ಜೋಡಿಸಿ ಮನವಿ ಮಾಡುತ್ತೇನೆ. ನಿಮಗೆ ಕೊಡ್ತಿರೋ 2000 ಇದ್ಯಲ್ಲಾ, ಅದಕ್ಕಾಗಿ ನಿಮ್ಮ ಕುಟುಂಬದ ಮೇಲೆ ಮುಂದೆ ಯಾವ ಹೊರೆ ತಂದಿಡುತ್ತದೆ ಎನ್ನುವುದನ್ನು ಅರ್ಥ ಮಾಡಿಕೊಳ್ಳಿ. ಈ ಸರಕಾರವು ನಮ್ಮ ರಾಜ್ಯವನ್ನು ಸಾಲದ ಹೊರೆಗೆ ಒಯ್ದು ನಿಲ್ಲಿಸುತ್ತಿದೆ. ಒಂದು ಕುಟುಂಬದ ಮೇಲೆ 36,000 ರೂಪಾಯಿ ಸಾಲ ಮಾಡಿ ನಿಲ್ಲಿಸಿದ್ದಾರೆ ಎಂದು ಕಾಂಗ್ರೆಸ್ ಸರ್ಜಾರದ ವಿರುದ್ಧ ಹರಿಹಾಯ್ದರು.