ದಾವಣಗೆರೆ: ಎಲ್ಪಿಜಿ ಸಿಲಿಂಡರ್ ಸ್ಫೋಟಗೊಂಡ ಪರಿಣಾಮ ಐವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ದಾವಣಗೆರೆಯ ರಾಮನಗರದ ಎಸ್ಓಜಿ ಕಾಲೋನಿಯಲ್ಲಿ ಮಂಗಳವಾರ ರಾತ್ರಿ ನಡೆದಿದೆ.
ಗಾಯಗೊಂಡವರನ್ನು ಮಲ್ಲೇಶಪ್ಪ (60) ಲಲಿತಮ್ಮ (50) ಸೌಭಾಗ್ಯ, (36) ಪಾರ್ವತಮ್ಮ(45) ಪ್ರವೀಣ್ (35) ಎಂದು ಗುರುತಿಸಲಾಗಿದೆ. ಇಲ್ಲಿನ ನಿವಾಸಿ ಮಲ್ಲೇಶಪ್ಪ, ಲಲಿತಮ್ಮ ದಂಪತಿ ಮನೆಯಲ್ಲಿ ಅಡುಗೆ ಅನಿಲ ಸೋರಿಕೆಯಾಗಿದ್ದರಿಂದ ಸಿಲಿಂಡರ್ ಸ್ಫೋಟಗೊಂಡಿದೆ. ಗಾಯಗೊಂಡಿರುವ ಸೌಭಾಗ್ಯ, ಪಾರ್ವತಮ್ಮ, ಪ್ರವೀಣ್ ನೆರೆ ಮನೆಯ ವಾಸಿಗಳು ಎಂದು ತಿಳಿದು ಬಂದಿದೆ.
ಮಲ್ಲೇಶಪ್ಪನ ಮನೆಯಿಂದ ಅಡುಗೆ ಅನಿಲ ಸೋರಿಕೆ ವಾಸನೆ ಬರುತಿತ್ತು . ಆದರೆ ಮನೆಯಲ್ಲಿ ಯಾರೂ ಇರಲಿಲ್ಲ .ಬಗ್ಗೆ ಪಕ್ಕದ ಮನೆಯ ನಿವಾಸಿಗ ಪ್ರವೀಣ್ ಅವರು ಮಲ್ಲೇಶಪ್ಪ ನಿಗೆ ಕರೆ ಮಾಡಿ ಗಮನಕ್ಕೆ ತಂದಿದ್ದಾರೆ. ಕೂಡಲೇ ಮನೆಗೆ ಆಗಮಿಸಿದ ಅ ಮಲ್ಲೇಶಪ್ಪ, ಲಲಿತಮ್ಮ ದಂಪತಿ ಬೀಗ ಬಿಚ್ಚಿ ಒಳಗೆ ಹೋಗಿ ಲೈಟ್ ಆನ್ ಮಾಡಿದ್ದೇ ತಡ ಸಿಲಿಂಡರ್ ಬ್ಲಾಸ್ಟ್ ಆಗಿದೆ.
ಸಿಲಿಂಡರ್ ಸ್ಫೋಟದ ರಭಸಕ್ಕೆ ಎರಡು ಮನೆಗಳಿಗೆ ಹಾನಿಯಾಗಿದೆ. ಸ್ಫೋಟದ ಭಾರೀ ಶಬ್ದಕ್ಕೆ ಇಡೀ ಎಸ್ಓಜಿ ಕಾಲೋನಿ ಜನ ಬೆಚ್ಚಿಬಿದ್ದಿದ್ದಾರೆ. ಮಲ್ಲೇಶಪ್ಪ, ಲಲಿತಮ್ಮ, ಸೌಭಾಗ್ಯ, ಪಾರ್ವತಮ್ಮ ಒಟ್ಟು ನಾಲ್ವರಿಗೆ ಶೇ 70 ರಷ್ಟು ಸುಟ್ಟ ಗಾಯಗಳಾಗಿವೆ. ಪ್ರವೀಣ್ಗೆ ಸಣ್ಣಪುಟ್ಟ ಗಾಯಗಳಾಗಿವೆ. ಐವರನ್ನು ಚಿಕಿತ್ಸೆಗಾಗಿ ದಾವಣಗೆರೆಯ ಜಿಲ್ಲಾಸ್ಪತ್ರೆಗೆ ರವಾನಿಸಲಾಗಿದೆ. ಹೆಚ್ಚು ಸುಟ್ಟಗಾಯಗಳಾಗಿರುವುದರಿಂದ ಅವರನ್ನು ಖಾಸಗಿ ಆಸ್ಪತ್ರೆಗೆ ಶಿಫ್ಟ್ ಮಾಡಲಾಗಿದೆ. ನಾಲ್ವರ ಸ್ಥಿತಿ ಚಿಂತಾಜನಕವಾಗಿದ್ದು, ಸಾವು ಬದುಕಿನ ಮಧ್ಯೆ ಹೋರಾಟ ನಡೆಸಿದ್ದಾರೆ.
“ಸಿಲಿಂಡರ್ ಸ್ಫೋಟಕ್ಕೆ ಇಡೀ ನಗರದಲ್ಲಿ ಭಾರಿ ಶಬ್ದ ಬಂದಿದೆ. ಬಾಂಬ್ ಬ್ಲಾಸ್ಟ್ ಆದಂತಹ ಅನುಭವವಾಗಿದೆ. ಬಹಳ ಭೀಕರವಾಗಿ ಸ್ಫೋಟದ ಶಬ್ದ ಕೇಳಿಸಿದೆ. ಸ್ಫೋಟ ಆಗಿದ್ದ ರಭಸಕ್ಕೆ ಇಡೀ ಮನೆಗಳು ಹಾನಿಯಾಗಿವೆ. ವಾಯುವಿಹಾರ ಮಾಡುತ್ತಿರುವಾಗ ಭಾರಿ ಶಬ್ದ ಕೇಳಿತು. ಸ್ಥಳಕೆ ತೆರಳಿದಾಗ ಐವರು ಗಾಯಗೊಂಡಿದ್ದರು. ಅವರನ್ನು ಕಂಡು ತುಂಬಾ ಬೇಸರ ಆಗಿದೆ” ಎಂದು ಪಾಲಿಕೆ ಸದಸ್ಯ ಪಾಮೇನಹಳ್ಳಿ ನಾಗರಾಜ್ ತಿಳಿಸಿದರು.