ಅಕ್ಟೋಬರ್ 11 ಜಯಪ್ರಕಾಶ್ ನಾರಾಯಣ್ ಅವರ 119ನೇ ಜನ್ಮದಿನಾಚರಣೆ ಆಗಿತ್ತು. ಇಡೀ ದಿನ ನನ್ನ ತಲೆಯಲ್ಲಿ ಒಂದಿಷ್ಟು ಯೋಚನೆಗಳು ಓಡುತ್ತಿದ್ದವು.
ಅದು ರಾಮಜನ್ಮಭೂಮಿ ಆಂದೋಲನದ ಪ್ರಮುಖ ಘಟ್ಟ. ಅದು ಲಾಲ್ ಕೃಷ್ಣ ಅಡ್ವಾನಿ ನೇತೃತ್ವದಲ್ಲಿ ಬಾಬ್ರಿ ಮಸೀದಿಯನ್ನು ಒಡೆದುಹಾಕಲು ಸಂಘಟಿತವಾಗಿದ್ದ ಜನಾಂದೋಲನ. ಅಡ್ವಾನಿ ಪಾಟ್ನಾದಲ್ಲಿ ಒಂದು ಸಮಾವೇಶವನ್ನು ಉದ್ದೇಶಿಸಿ ಮಾತನಾಡಬೇಕು. ರಾಮ ರಥದಂತೆ ಕಾಣಿಸುವಂತೆ ಬದಲಾವಣೆ ಮಾಡಿಸಿದ್ದ ಅವರ ಟಯೋಟಾ ಕಾರು ಗಾಂಧಿ ಮೈದಾನವನ್ನು ಇನ್ನೇನು ತಲುಪಬೇಕು. ಮೌರ್ಯ ಹೋಟೆಲ್ಲಿನ ಮುಂದೆ ಮೈದಾನದ ಒಂದು ಮೂಲೆಯಲ್ಲಿ ಜೆಪಿ ಅವರ ಪ್ರತಿಮೆಯೊಂದು ನಿಂತಿದೆ.
ಪ್ರತಿಮೆಯ ನೆರಳಿನಲ್ಲಿ ಒಂದು ಟೆಂಟ್ ಹಾಕಿಕೊಂಡು ಕೆಲವು ಯುವಕ ಯುವತಿಯರು ಅಡ್ವಾನಿ ಅವರ ಕೋಮುವಾದಿ ಆಂದೋಲನದ ವಿರುದ್ಧ ಮೌನ ಪ್ರತಿಭಟನೆಯನ್ನು ಮಾಡುತ್ತಿದ್ದಾರೆ. ಟೆಂಟ್‌ನ ಸುತ್ತ ನೂರಾರು ಜನರು ಕೇಸರಿ ಬಟ್ಟೆಗಳನ್ನು ತಲೆಗೆ ಕಟ್ಟಿಕೊಂಡು ಓಡಾಡುತ್ತಿದ್ದಾರೆ. ಅವರು ಟೆಂಟನ್ನು ಅಲಗಾಡಿಸುತ್ತಿದ್ದಾರೆ. ಕೆಲವು ನಿಮಿಷಗಳ ನಂತರ ಅದನ್ನು ಸಂಪೂರ್ಣವಾಗಿ ಸುಟ್ಟುಹಾಕಿದ್ದಾರೆ.
ಪೋಲೀಸರು ಪ್ರತಿಭಟನಾಕಾರರನ್ನು ಬಂಧಿಸಿ ಕೋಟ್ವಾಲಿ ಪೋಲೀಸ್ ಠಾಣೆಗೆ ಕರೆದೊಯ್ದಿದ್ದಾರೆ. ಪ್ರತಿಮೆಯ ಸುತ್ತ ಇರುವ ಕೆಲವು ಸ್ಕೂಟರ್ ಮತ್ತು ಬೈಕ್ ಗಳನ್ನೂ ಸಹ ಸುಟ್ಟು ಹಾಕಿದ್ದಾರೆ. ಅಲ್ಲಿನ ಬಹುಪಾಲು ಪ್ರತಿಭಟನಾಕಾರರು ಜೆಪಿ ಅವರು ಸಂಸ್ಥಾಪಿಸಿದ್ದ ಛಾತ್ರಾ ಯುವ ಸಂಘರ್ಷ ವಾಹಿನಿಯ ಸದಸ್ಯರು.
ಜೆಪಿ ಅವರು ಒಮ್ಮೆ ಹೇಳಿದಂತೆ ತಮ್ಮ ಚಳುವಳಿಯ ದೈಹಿಕ ಶಕ್ತಿ ತಮ್ಮ ಚಳುವಳಿಯ ದನಿಯನ್ನು ಹೊಸಕಿಹಾಕುತ್ತಿದೆ. ಅವರ ಪ್ರತಿಮೆ ಸುಮ್ಮನೆ ನೋಡುತ್ತಾ ನಿಂತಿತ್ತು.
ಜೆಪಿ ಅವರು ರಾಷ್ಟ್ರೀಯ ಸ್ವಯಂಸೇವಕ ಸಂಘವನ್ನು ಹೆಮ್ಮೆಯಿಂದ ತಮ್ಮ ಚಳುವಳಿಗೆ ಸ್ವಾಗತಿಸಿದ್ದರು. ಇಂದಿರಾ ಗಾಂಧಿ ಅವರ ಸರ್ಕಾರವನ್ನು ಅಧಿಕಾರದಿಂದ ಕೆಳಗಳಿಸುವ ಉದ್ದೇಶದಿಂದ ಈ ನಡೆಯನ್ನು ಅವರು ತೆಗೆದುಕೊಂಡಾಗ ಹಲವಾರು ವಿಮರ್ಷಕರು ಇದನ್ನು ಟೀಕಿಸಿದ್ದರು. ಅದಕ್ಕೆ ಪ್ರತ್ಯುತ್ತರವಾಗಿ ಆರ್.ಎಸ್.ಎಸ್. ಫ್ಯಾಸಿಸ್ಟ್ ಗಳಾದರೆ ನಾನೂ ಸಹ ಫ್ಯಾಸಿಸ್ಟ್ ಎಂದು ಜೆಪಿ ಹೇಳಿದ್ದರು.
ಟೆಂಟ್ ಸುಟ್ಟುಹೋಗುತ್ತಿರುವಂತೆ ಅಡ್ವಾನಿಯ ಅನುಯಾಯಿಯಗಳು ಸುತ್ತ ಮುತ್ತಾ ಸಾಗುತ್ತಿರುವ ಮುಸಲ್ಮಾನರ ಮೇಲೆ ಹಲ್ಲೆ ಮಾಡುತ್ತಾ ಅವರಿಗೆ ಜೈ ಶ್ರೀ ರಾಮ್ ಎಂದು ಕೂಗಲು ಒತ್ತಾಯಿಸುತ್ತಿದ್ದಾರೆ. ಅಡ್ವಾನಿ ಅವರೇ ಒಮ್ಮೆ ತಾನು ಜೆಪಿ ಅವರ ಅನುಯಾಯಿ ಎಂದು ಹೇಳಿಕಕೊಂಡಿದ್ದರು. ಜೆಪಿ ಆರ್.ಎಸ್.ಎಸ್. ಜೊತೆಗೆ ನಂಟು ಬೆಳೆಸಿಕೊಳ್ಳುವ ಮೂಲಕ ಆರ್.ಎಸ್.ಎಸ್. ಸಂಘಟನೆಯನ್ನು ಬದಲಾಯಿಸುತ್ತೇನೆ ಮತ್ತು ಕೋಮುವಾದವನ್ನು ದೂರ ತಳ್ಳುತ್ತೇನೆ ಎಂಬ ಭರವಸೆಯನ್ನು ನೀಡಿದ್ದರು. ಆದರೆ ಆರ್.ಎಸ್.ಎಸ್.ಗೆ ಬೇರೆಯದ್ದೇ ಯೋಜನೆ ಇತ್ತು.
ಜೆಪಿ ಚಳುವಳಿಯನ್ನು ಬಳಸಿಕೊಂಡು ರಾಜಕೀಯ ಸಮ್ಮತಿಯನ್ನು ಪಡೆದುಕೊಳ್ಳಲು ಆರ್.ಎಸ್.ಎಸ್. ಮುಂದಾಗಿತ್ತು. ಅದನ್ನು ಅದು ಸಾಧಿಸಿತು ಕೂಡ. ಜೆಪಿ ಮತ್ತು ಅವರ ಬಹುತೇಕ ಸಂಗಡಿಗರು ಸೆರೆಮನೆ ವಾಸ ಮಾಡಬೇಕಾದರೆ ಆರ್.ಎಸ್.ಎಸ್.ನ ಪ್ರಮುಖರಾಗಿದ್ದ ಬಾಲಾಸಾಹೇಬ್ ಡಿಯೋರಸ್ ಅವರು ಇಂದಿರಾ ಗಾಂಧಿ ಅವರಿಗೆ ಬೆಂಬಲವನ್ನು ಸೂಚಿಸುತ್ತಾ ಅವರನ್ನು ಹೊಗಳುತ್ತಾ ಸಂಘಟನೆಯ ಮೇಲಿರುವ ನಿಷೇಧವನ್ನು ಹಿಂಪಡೆಯುವಂತೆ ಪತ್ರಗಳನ್ನು ಬರೆಯುತ್ತಿದ್ದರು. ಇಂದಿರಾ ಗಾಂಧಿ ಅದಕ್ಕೆ ಬಗ್ಗಲಿಲ್ಲ. ಡಿಯೋರಸ್ ಅವರ ಮಾತುಗಳನ್ನು ನಂಬಲು ಇಂದಿರಾ ಗಾಂಧಿ ಅವರಿಗೆ ಆರ್.ಎಸ್.ಎಸ್. ಬಗ್ಗೆ ಬಹಳ ಚೆನ್ನಾಗಿ ತಿಳಿದಿತ್ತು.
ಇಂದಿರಾ ಗಾಂಧಿ ಆರ್.ಎಸ್.ಎಸ್. ಸಂಘಟನೆಯನ್ನು ಎಷ್ಟು ವಿರೋಧಿಸುತ್ತಿದ್ದರೋ, ಜೆಪಿ ಸಹ ಅಷ್ಟೇ ವಿರೋಧಿಸುತ್ತಿದ್ದರು. ಆದರೆ, ರಾಜಕೀಯ ಮುತ್ಸದ್ಧಿಯಾಗಿದ್ದ ಅವರು ಇಂತಹ ದುರಂತಕರ ಒಪ್ಪಂದಕ್ಕೆ ಯಾಕೆ ಮುಂದಾದರು? ಇಂದಿರಾ ಗಾಂಧಿ ಅವರನ್ನು ಸೋಲಿಸಲು ಯಾರೊಂದಿಗೆ ಬೇಕಾದರೂ ಮೈತ್ರಿ ಮಾಡಿಕೊಳ್ಳುವಷ್ಟು ದೇಶದ ಪರಿಸ್ಥಿತಿ ಹಾಳಾಗಿತ್ತೇ?
ಜೆಪಿ ಚಳುವಳಿಯ ಕುರಿತು ಒಂದು ಪ್ರಾಮಾಣಿಕ ಚರಿತ್ರೆಯನ್ನು ಇನ್ನೂ ಬರೆಯಲಾಗಿಲ್ಲ. ಜೆಪಿ ಅವರ ಅನೇಕ ಸಂಗಡಿಗರು ಬದುಕುಳಿದಿಲ್ಲ. ಬದುಕಿರುವವರಲ್ಲಿ ಯಾರೂ ಚಳುವಳಿಯನ್ನು ವಿಮರ್ಷಾತ್ಮಕವಾಗಿ ಅಧ್ಯಯಿಸುವ ಕುರಿತು ಆಸಕ್ತಿ ವಹಿಸುತ್ತಿಲ್ಲ. ಆದರೂ ಛಾತ್ರಾ ಯುವ ಸಂಘರ್ಷ ವಾಹಿನಿಯ ಹಲವಾರು ಸದಸ್ಯರು ಅದನ್ನು ಒಂದು ಅಚಾತುರ್ಯ ಎಂದು ಒಪ್ಪಿಕೊಳ್ಳುತ್ತಾರೆ. ಜೆಪಿ ಅವರ ಈ ತಪ್ಪು ನಡೆ ಆರ್.ಎಸ್.ಎಸ್. ಬೆಳೆಯಲು ಕಾರಣವಾಯಿತು.
ಕಾಂಗ್ರೆಸ್ ಪಕ್ಷ ತನ್ನ 27 ವರ್ಷದ ಆಡಳಿತದಲ್ಲಿ ಭಾರತೀಯರ ನಂಬಿಕೆಗೆ ದ್ರೋಹ ಬಗೆದಿತ್ತು ಎಂದು ಜೆಪಿ ವಾದಿಸಲು ಕಾರಣವೇನಿರಬಹುದು? ತಮ್ಮ ಸ್ನೇಹಿತರಾದ ಜವಹರಲಾಲ ನೆಹರು ಅವರ ಆಡಳಿತ ಶೈಲಿಯನ್ನು ಅವರೇಕೆ ಧಿಕ್ಕರಿಸಿದರು? ಈ ಚಳುವಳಿಯನ್ನು ‘ಎರಡನೇ ಸ್ವಾತಂತ್ರ ಸಂಗ್ರಾಮ’ ಎಂದು ಯಾಕೆ ಘೋಷಿಸಿದರು? ವಿದ್ಯಾರ್ಥಿಗಳಿಗೆ ತರಗತಿಗಳನ್ನು ಬಹಿಷ್ಕರಿಸಲು, ನಾಗರೀಕರಿಗೆ ಸರ್ಕಾರದೊಡನೆ ಸಹಕರಿಸದೇ ಇರಲು, ಹಾಗು ಪೋಲೀಸರು ಮತ್ತು ಸಶಸ್ತ್ರ ಪಡೆಗಳಿಗೆ ಸರ್ಕಾರಕ್ಕೆ ವಿಧೇಯರಾಗದೇ ಇರಲು ಜೆಪಿ ಯಾಕೆ ಮನವಿ ಮಾಡಿಕೊಂಡರು? ಸ್ವಾತಂತ್ರ ಚಳುವಳಿಯ ತಂತ್ರಗಳನ್ನು ಮತ್ತೆ ಯಾಕೆ ಬಳಸಲಾಯಿತು?
ಜನತಾ ಸರ್ಕಾರಗಳು
ಸರ್ಕಾರವನ್ನು ನಿರಾಕರಿಸಿ ಸ್ಥಳೀಯವಾಗಿ ಜನತಾ ಸರ್ಕಾರಗಳನ್ನು ಸ್ಥಾಪಿಸಲೂ ಜೆಪಿ ತಮ್ಮ ಅನುಯಾಯಿಗಳಿಗೆ ಸೂಚಿಸಿದರು. ಇತಿಹಾಸಕಾರ ಬಿಮಲ್ ಪ್ರಸಾದ್ ಅವರು ಗಮನಿಸಿರುವಂತೆ, “ರಷ್ಯಾದ ಪ್ರಜಾತಾಂತ್ರಿಕ ನೌಕರರ ಸಮಿತಿಗಳಾದ ಸೋವಿಯತ್ ಗಳ ಮಾದರಿಯಲ್ಲಿ ಈ ಜನತಾ ಸರ್ಕಾರಗಳು ಕೆಲವು ಜವಾಬ್ದಾರಿಗಳನ್ನು ನಿರ್ವಹಿಸಬೇಕು ಎಂಬ ನಿರೀಕ್ಷೆಯಿತ್ತು. ವಿವಾದಗಳನ್ನು ಪರಿಹರಿಸುತ್ತಾ, ಅಗತ್ಯ ಸಾಮಗ್ರಿಗಳ ನ್ಯಾಯವಾದ ಬೆಲೆಗಳ ಮಾರಾಟವನ್ನು ಖಾತ್ರಿ ಪಡಿಸುತ್ತಾ, ಜಾತಿಯಾಧಾರಿತ ಶೋಷಣೆಯ ವಿರುದ್ಧ ಹೋರಾಡುತ್ತಾ, ಕಪ್ಪು ಮಾರುಕಟ್ಟೆಯ ಚಟುವಟಿಕೆಗಳನ್ನು ನಿಯಂತ್ರಿಸುತ್ತಾ ಭೂಸೂಧಾರಣೆ ಜಾರಿ ಮಾಡುವುದು ಈ ಸರಕಾರಗಳ ಜವಾಬ್ದಾರಿಯಾಗಿತ್ತು.”
ಜೆಪಿ ಒಂದು ರೀತಿಯಲ್ಲಿ ಪರ್ಯಾಯ ಸರ್ಕಾರಗಳನ್ನು ಸ್ಥಾಪಿಸಲು ಯತ್ನಿಸುತ್ತಿದ್ದರು. ಇದು ಬಹಳ ಅಪಾಯಕಾರಿಯಾಗಿತ್ತು. ಇಂತಹ ಸನ್ನಿವೇಶವೇ ಆರ್.ಎಸ್.ಎಸ್. ಬೇಕಾಗಿತ್ತು. ಆರ್.ಎಸ್.ಎಸ್. ಬಹಳ ವರ್ಷಗಳಿಂದ ಪ್ರಭುತ್ವವನ್ನು ತನ್ನ ಹಿಡಿತಕ್ಕೆ ತೆಗೆದುಕೊಳ್ಳಲು ಕಾಯುತ್ತಿತ್ತು.
ಆರ್.ಎಸ್.ಎಸ್. ಯಾಕೆ ಚಳುವಳಿಯನ್ನು ಸೇರಿತು?
ಪ್ರಭುತ್ವದ ಹಿಡಿತವನ್ನು ಕಸಿದುಕೊಳ್ಳಲು 1947-48 ರ ಸಂದರ್ಭದಲ್ಲಿ ಆರ್.ಎಸ್.ಎಸ್. ನಡೆಸಿದ ಯತ್ನ ವಿಫಲವಾಯಿತು. ಗಾಂಧಿಯ ಕೊಲೆ ಭಾರತವನ್ನು ತಲ್ಲಣಗೊಳಿಸಿತು. ಪಟೇಲ್ ಅವರು ಆ ಸಂದರ್ಭದಲ್ಲಿ ಆರ್.ಎಸ್.ಎಸ್. ಸಂಘಟನೆಯನ್ನು ನಿಷೇಧಿಸಲು ಕಟುವಾದ ನಿರ್ಧಾರ ತೆಗೆದುಕೊಂಡದ್ದು ರಾಜಕೀಯವಾಗಿ ಸಂಘಟನೆಗೆ ದೊಡ್ಡ ಪೆಟ್ಟನ್ನು ನೀಡಿತ್ತು.
ಆದರೆ ರಾಮ್ ಮನೋಹರ್ ಲೋಹಿಯಾ ಅಂತವರ ಕಾಂಗ್ರೆಸ್ ವಿರೋಧಿ ಹತಾಶೆ ಅವರಿಗೆ ‘ಸೈತಾನನ ಜೊತೆಗೆ ಕೈ ಕುಲುಕಿಸವ’ ಸನ್ನಿವೇಶಕ್ಕೆ ನೂಕಿತ್ತು. 1967ರ ಹೊತ್ತಿಗೆ ಹಲವಾರು ಉತ್ತರ ಭಾರತದ ರಾಜ್ಯಗಳಲ್ಲಿ ಸಂಯುಕ್ತ ವಿಧಾಯಕ್ ದಳ ಸರ್ಕಾರಗಳು ಅಧಿಕಾರಕ್ಕೆ ಬಂದವು. ಆರ್.ಎಸ್.ಎಸ್. ನ ರಾಜಕೀಯ ವಿಭಾಗವಾಗಿದ್ದ ಜನ ಸಂಘ್ ಈ ಮೈತ್ರಿ ಸರ್ಕಾರಗಳ ಭಾಗವಾಗಿದ್ದರಿಂದ ಆರ್.ಎಸ್.ಎಸ್. ಭಾರತದ ರಾಜಕಾರಣದಲ್ಲಿ ನಿಧಾನವಾಗಿ ತನ್ನ ಪಯಣವನ್ನು ಆರಂಭಿಸಿತು.
ಸಮಾಜವಾದಿಗಳು ಮತ್ತು ಕಮ್ಯುನಿಸ್ಟರು ಆರ್.ಎಸ್.ಎಸ್. ನ ಜೊತೆ ಸೇರಲು ಹಿಂಜರಿಯಲಿಲ್ಲ. ಪ್ರಜಾಪ್ರಭುತ್ವದ ವಾದವು ಅವರದ್ದಾಗಿತ್ತು. ಅವರಿಗೂ ಧರ್ಮನಿರಪೇಕ್ಷತೆ ಬೇಕಾಗಿತ್ತು. ಆದರೆ ಪ್ರಜಾಪ್ರಭುತ್ವವನ್ನು ಉಳಿಸಿಕೊಳ್ಳುವ ಸಲುವಾಗಿ ಅದನ್ನು ಕೊಂಚ ಕಾಲ ಪಕ್ಕಕ್ಕೆ ಸರಿಸಬಹುದು ಎಂಬುದು ಅವರ ವಾದ.
ಇದೇ ವಾದವನ್ನು 2011 ರಲ್ಲಿ ಮತ್ತೆ ಬಳಸಲಾಯಿತು. ಇಂಡಿಯಾ ಅಗೇನ್ಸ್ಟ್ ಕರಪ್ಷನ್ ಚಳುವಳಿಯ ಕೋಮುವಾದಿ ಆಯಾಮವನ್ನು ವಿಮರ್ಷಕರು ತೋರಿಸಿಕೊಟ್ಟಾಗಲೂ ಪ್ರಜಾಪ್ರಭುತ್ವದ ವಾದವೇ ಗೆಲುವು ಕಂಡಿತು.
1960ರ ದಶಕದಲ್ಲಿ ಆರ್.ಎಸ್.ಎಸ್. ಮತ್ತೆ ನಿಧಾನವಾಗಿ ಕಾಣಿಸಿಕೊಳ್ಳಲು ಆರಂಭಿಸಿತು. ಭಾರತದ ರಾಜಕೀಯ ಪಕ್ಷಗಳಲ್ಲಿ ಬಹುತೇಕ ಪಕ್ಷಗಳು ಹಿಂದೂ ಪಕ್ಷಗಳಾಗಿದ್ದ ಕಾರಣ ಆರ್.ಎಸ್.ಎಸ್. ಯಾವಾಗಲೂ ಭಾರತದ ರಾಜಕಾರಣದಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಭಾಗವಹಿಸುತ್ತಿತ್ತು ಎಂದು ಹೇಳುವುದು ಹೆಚ್ಚು ಸೂಕ್ತ. 1947 ರಲ್ಲಿಯೇ ಇಂದಿರಾ ಗಾಂಧಿ ಲಕ್ನೌನಿಂದ ತಮ್ಮ ತಂದೆಗೆ ಬರೆದ ಪತ್ರದಲ್ಲಿ ಸಂಘ ಪರಿವಾರವು ಕಾಂಗ್ರೆಸ್ ಪಕ್ಷವನ್ನು, ಪೋಲೀಸ್ ವ್ಯವಸ್ಥೆಯನ್ನು ಮತ್ತು ಆಡಳಿತವನ್ನು ಆವರಿಸಿಕೊಳ್ಳುತ್ತಿರುವುದರ ಬಗ್ಗೆ ಆತಂಕ ವ್ಯಕ್ತ ಪಡಿಸಿದ್ದರು.
1967ರಲ್ಲಿ ಭಾರತದ ಧರ್ಮನಿರಪೇಕ್ಷ ಪ್ರಯೋಗ ಆರಂಭಿಕ ಹಂತದಲ್ಲಿತ್ತು. 15 ವರ್ಷಗಳ ನಂತರ ಆರ್.ಎಸ್.ಎಸ್. ಸಣ್ಣ ಮತ್ತು ದೊಡ್ಡ ಮಟ್ಟದಲ್ಲಿ ಕೋಮುಗಲಭೆಗಳನ್ನು ಪ್ರಚೋದಿಸಲು ಆರಂಭಿಸಿತ್ತು. 1961ರ ಜಬಲ್ಪುರ್ ಗಲಭೆಗಳು ಭಾರತ ಇನ್ನೂ ಸುರಕ್ಷಿತವಾಗಿಲ್ಲ ಎಂಬುದರ ಮುನ್ಸೂಚನೆಯಾಗಿತ್ತು. ಆದರೆ ಲೋಹಿಯಾ ಅಂತಹವರು ಅವಸರದಲ್ಲಿದ್ದರು.
ಲೋಹಿಯಾ ಮತ್ತು ಜೆಪಿ ವರ್ಸಸ್ ನೆಹರು!
ಲೋಹಿಯಾ ಮತ್ತು ಜೆಪಿ ಅವರು ನೆಹರು ಅವರೊಂದಿಗೆ ಒಂದೇ ದೋಣಿಯ ಪಯಣಿಗರಾಗಬಹುದಾಗಿದ್ದರೂ ಅವರ ನಡುವೆ ಅಂತರ ಬೆಳೆಯುತ್ತಲೇ ಹೋಯಿತು. 1950ರ ಸಂದರ್ಭದಲ್ಲಿ ನೆಹರು ಅವರಿಗೆ ಆಡಳಿತದಲ್ಲಿ ಜೆಪಿ ಅವರ ಸಹಾಯ ಬೇಕಿದ್ದರೂ, ಜೆಪಿ ಸಕ್ರಿಯ ರಾಜಕಾರಣದಿಂದ ದೂರವಾಗುವುದಾಗಿ ಘೋಷಿಸಿದರು. ಗಾಂಧಿ ಅಥವಾ ಸಾರ್ವಜನಿಕರು ಗುರುತಿಸದೇ ಇದ್ದರೂ ಈ ಇಬ್ಬರು ನಾಯಕರು ತಮ್ಮನ್ನು ತಾವು ಪ್ರಧಾನ ಮಂತ್ರಿ ಹುದ್ದೆಗೆ ಸಮರ್ಥರು ಎಂದು ಭಾವಿಸಿದ್ದರೇ ಎಂಬ ಪ್ರಶ್ನೆ ಕುತೂಹಲಕಾರಿಯಾಗಿದೆ.
ಲೋಹಿಯಾ ಅವರನ್ನು ಗೌರವಿಸಲು ಪಶ್ಚಿಮ ಬಂಗಾಳದ ಬರಾಕರ್ ನಲ್ಲಿ ಸಭೆಯೊಂದು ನಡೆದಿತ್ತು. ಅಲ್ಲಿ ಘಟಿಸಿದ್ದನ್ನು ನನ್ನ ತಂದೆ ಆಗಾಗ ನೆನಪಿಸಿಕೊಳ್ಳುತ್ತಿದ್ದರು. ಲೋಹಿಯಾ ಅವರು ತಾವು ಪ್ರಧಾನಿಯಾಗಲು ಯೋಗ್ಯರು ಎಂದು ಹೇಳಿದಾಗಲೂ ಗಾಂಧಿ ಅವರು ನೆಹರು ಅವರನ್ನು ಆಯ್ಕೆ ಮಾಡಿದ್ದರ ಬಗ್ಗೆ ಲೋಹಿಯಾ ಅಸಮಾಧಾನವನ್ನು ವ್ಯಕ್ತ ಪಡಿಸಿಸದ್ದರಂತೆ.
ಜೆಪಿ ಅವರಿಗೂ ಅಂತದ್ದೇ ಆದ ಸೇಡಿತ್ತೇ? ಅವರನ್ನು 1942ರ ಹೀರೋ ಎಂದು ಸದಾಕಾಲ ನೆನೆಯಲಾಗುತ್ತಿದೆ, ಆದರೆ ಅವರನ್ನು ನಾಯಕನಾಗಿ ನೆನೆಯಬೇಕು ಎಂಬುದು ಅವರ ನಿರೀಕ್ಷೆಯಾಗಿತ್ತೇ? ಹಾಗಾಗಿ 27 ವರ್ಷಗಳ ನಂತರ ಸ್ವಾತಂತ್ರ ಸಂಗ್ರಾಮದ ತಮ್ಮ ಫ್ಯಾಂಟಸಿಯನ್ನು ಅವರು ಜೀವಿಸುತ್ತಿದ್ದರೇ? ಅವರ ಚಳುವಳಿಯನ್ನು ಎರಡನೇ ಸ್ವಾತಂತ್ರವೆಂದು ಪರಿಗಣಿಸಲು ಯಾವ ವಿಷಯ ಅಷ್ಟು ಮಹತ್ವದ್ದಾಗಿತ್ತು?
ಅವರಿಗೆ ಪ್ರಧಾನಿ ಹುದ್ದೆ ದಕ್ಕಲಿಲ್ಲ ಎಂಬ ಅವರ ಅಸಮಾಧಾನ ಧರ್ಮಯುಗ ಪತ್ರಿಕೆಯಲ್ಲಿ ಪ್ರಕಟವಾದ ಅವರ ಕವಿತೆಯಲ್ಲಿ ಎದ್ದು ಕಾಣುತ್ತದೆ. ಈ ಕವಿತೆಯಲ್ಲಿ ಅವರಿಗೆ ಬೇಕಾಗಿದ್ದಿದ್ದರೆ ಅವರು ಪ್ರಧಾನಿಯೇ ಆಗಬಹುದಿತ್ತೆಂದು ಹೇಳಿಕೊಳ್ಳುತ್ತಾರೆ. ಆದರೆ ಅವರದ್ದು ಕ್ರಾಂತಿಯ ಮಾರ್ಗವಾಗಿತ್ತು. ಹಾಗಾಗಿ ಅವರು ಎಲ್ಲವನ್ನು ತೊರೆದರಂತೆ.
ಬ್ರಿಟೀಷರನ್ನು ಓಡಿಸುವುದು ಮಾತ್ರ ನೆಹರು ಅವರ ಗುರಿಯಾಗಿತ್ತು, ಆದರೆ ಬ್ರಿಟೀಷರ ಪರಂಪರೆಯನ್ನೇ ಭಾರತದಿಂದ ಓಡಿಸುವುದು ನಾರಾಯಣ್ ಅವರ ಗುರಿ ಆಗಿರುವುದರಿಂದ ನಾರಾಯಣ್ ಅವರೇ ತಮ್ಮ ನಿಜವಾದ ಅನುಯಾಯಿ ಎಂದು ಗಾಂಧಿ ಹೇಳಿದ್ದರೆಂದು ಜೆಪಿ ಹೇಳಿದ್ದರಂತೆ.
ಈ ಸಂಭಾಷಣೆಯ ಬಗ್ಗೆಯೂ ಜೆಪಿ ಕನಸು ಕಾಣುತ್ತಿದ್ದರೇ? ಯಾಕೆಂದರೆ ತಮ್ಮ ನಡುವಿನ ಅತ್ಯಂತ ಕಟುವಾದ ಚರ್ಚೆಗಳಲ್ಲೂ ಗಾಂಧಿ ಅವರು ನೆಹರು ಅವರಲ್ಲಿ ಇಂತಹ ದೌರ್ಬಲ್ಯವನ್ನು ಕಂಡಿರಲಿಲ್ಲ.
ನಮ್ಮಲ್ಲಿ ಜೆಪಿ ಚಳುವಳಿಯ ಕುರಿತು ಬಹಳ ಪ್ರಾಮಾಣಿಕವಾದ ಮತ್ತು ತೆರೆದ ಮನದ ಚರ್ಚೆ ನಡೆಯಬೇಕು. ಆರ್.ಎಸ್.ಎಸ್. ಸಂಘಟನೆಯನ್ನು ಮುಖ್ಯವಾಹಿನಿಗೆ ತಂದದ್ದನ್ನು ಬಿಟ್ಟರೆ ಆಂದೋಲನ ಏನನ್ನೂ ಸಾಧಿಸಲಿಲ್ಲ ಎಂದು ಹಲವರು ಸರಿಯಾಗಿ ಗಮನಿಸಿದ್ದಾರೆ. ಜೆಪಿ ಅವರಿಗೆ ತಮ್ಮ ಉದ್ದೇಶವನ್ನು ಸಾಧಿಸಲು ಪಡೆಗಳು ಬೇಕಾಗಿದ್ದವು. ಹಾಗಾಗಿ ಆರ್.ಎಸ್.ಎಸ್. ಅವರೊಂದಿಗೆ ಹೋದರು.
ಜೆಪಿ ತಮ್ಮ ಜೀವನದ ಅತ್ಯಂತ ಮಹತ್ವದ ದಿನಗಳಲ್ಲಿ ‘ಉದ್ದೇಶ ಮತ್ತು ಮಾರ್ಗದ ಏಕತೆ’ ಎಂಬ ಮೂಲಭೂತ ಗಾಂಧಿವಾಧಿ ತತ್ವವನ್ನು ಮರೆತರು. ಹಾದಿ ಕೊಳೆಯಿಂದ ತುಂಬಿದ್ದರೆ, ಅಂತ್ಯವೂ ಕೊಳಕೇ. ತಮ್ಮ ಕೊನೆಯ ದಿನಗಳಲ್ಲಿ ಜೆಪಿ ಇದನ್ನೇ ಯೋಚಿಸಿರಬಹುದು, ಜೊತೆಗೆ ಇಂದು ತಮ್ಮ ಅರವತ್ತರ ವಯಸ್ಸಿನಲ್ಲಿರುವ ಅಂದಿನ ಆದರ್ಶವಾದಿ ಯುವಕರೂ ಸಹ ಅದನ್ನೇ ಯೋಚಿಸುತ್ತಿರಬಹುದು.
ಜೆಪಿಯ ಆತುರದ ನಿರ್ಧಾರದಿಂದ ಭಾರತ ಇಂದೂ ಅನುಭವಿಸುತ್ತಿದೆ.
ಕೃಪೆ: ಸ್ಕ್ರಾಲ್
ಮೂಲ: ಅಪೂರ್ವಾನಂದ್. ಲೇಖಕರು ದೆಹಲಿ ವಿಶ್ವವಿದ್ಯಾಲಯದಲ್ಲಿ ಹಿಂದಿಯನ್ನು ಕಲಿಸುತ್ತಾರೆ