ಬೆಂಗಳೂರು: ಸಿಎಂ ಬದಲಾವಣೆ, ಸಂಪುಟ ಪುನಾರಚನೆ ಚರ್ಚೆ ಮಧ್ಯೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಮತ್ತು ಸಿಎಂ ಸಿದ್ದರಾಮಯ್ಯ ಭೇಟಿಯಾಗಿದ್ದು, ರಾಜ್ಯ ರಾಜಕಾರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದೆ.

ನಿನ್ನೆ ದೆಹಲಿಯಿಂದ ಮಲ್ಲಿಕಾರ್ಜುನ ಖರ್ಗೆ ಬೆಂಗಳೂರಿಗೆ ವಾಪಸ್ ಆಗಿದ್ದರು. ಬಳಿಕ ರಾತ್ರಿ ಸಿಎಂ ಸಿದ್ದರಾಮಯ್ಯ ಸದಾಶಿವ ನಗರದಲ್ಲಿರೋ ಖರ್ಗೆ ನಿವಾಸಕ್ಕೆ ಭೇಟಿ ನೀಡಿ ಸುಮಾರು 1 ಗಂಟೆಗೂ ಕಾಲ ಪ್ರಸ್ತುತ ರಾಜಕೀಯ ಬೆಳವಣಿಗೆಗಳ ಬಗ್ಗೆ ಚರ್ಚೆ ನಡೆಸಿದರು.
ಈ ಬಗ್ಗೆ ಪ್ರತಿಕ್ರಿಯಿಸಿದ ಸಿಎಂ ಸಿದ್ದರಾಮಯ್ಯ, ಇದೊಂದು ಸೌಹರ್ದಯುತ ಭೇಟಿಯಾಗಿದ್ದು, ಪಕ್ಷ ಸಂಘಟನೆ, ಸ್ಥಳೀಯ ಸಂಸ್ಥೆಗಳ ಚುನಾವಣೆ ಬಗ್ಗೆ ಎಐಸಿಸಿ ಅಧ್ಯಕ್ಷರ ಜೊತೆ ಚರ್ಚಿಸಿದ್ದೇವೆ. ನಾಯಕತ್ವ ಬದಲಾವಣೆ ಕೇವಲ ಉಹಾಪೋಹ ಅಷ್ಟೇ. ಕೆಲ ಶಾಸಕರು ದೆಹಲಿಗೆ ಹೋಗಿದ್ದರ ಬಗ್ಗೆ ಶಾಸಕರ ಬಳಿ ಅಥವಾ ಖರ್ಗೆ ಬಳಿ ಮಾಹಿತಿ ಕೇಳಿಲ್ಲ. ಇಂಟಲಿಜೆನ್ಸ್ ನಿಂದ ಆ ಮಾಹಿತಿ ತೆಗೆದುಕೊಳ್ತೇನೆ ಎಂದರು.

ಇನ್ನು ಯಾರು ಯಾರನ್ನೇ ಭೇಟಿ ಮಾಡಿದರು, ಯಾವುದೇ ಬದಲಾವಣೆ ಇದ್ದರೂ ಅಂತಿಮವಾಗಿ ಹೈಕಮಾಂಡ್ ಕೈಗೊಳ್ಳುವ ನಿರ್ಧಾರಕ್ಕೆ ನಾನು, ಡಿಸಿಎಂ ಸೇರಿ ಎಲ್ಲರೂ ಒಪ್ಪಬೇಕು. ಹೈಕಮಾಂಡ್ ಯಾವಾಗ ಕರೆಯುತ್ತಾರೆ ಆಗ ದೆಹಲಿಗೆ ಹೋಗುತ್ತೇನೆ ಎಂದು ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.











