ರಾಜ್ಯದಲ್ಲಿ ಅಗತ್ಯ ಬಿದ್ದರೆ ಉತ್ತರ ಪ್ರದೇಶದ ಯೋಗಿ ಸರ್ಕಾರ ನಿಯಮಗಳನ್ನು ಜಾರಿ ಮಾಡುವುದಾಗಿ ಮುಖ್ಯಮಂತ್ರಿ ಬೊಮ್ಮಾಯಿ ಹೇಳಿದ್ದಾರೆ.
ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸುದ್ದಿಗೋಷ್ಠಿಯನ್ನು ನಡೆಸಿದ ಸಿಎಂ ಬೊಮ್ಮಾಯಿ, ಕೋಮುಸೌಹಾರ್ದ ಕದಡುವ ಶಕ್ತಿಗಳಿಗೆ ಕಡಿವಾಣ ಹಾಕುವುದರಲ್ಲಿ ಹಿಂದೇಟು ಹಾಕುವುದಿಲ್ಲ, ಕಳೆದ 10 ವರ್ಷಗಳಲ್ಲಿ ವಿಧ್ವಂಸಕ ಶಕ್ತಿಗಳು ಹೆಚ್ಚಾಗಿವೆ. ಪ್ರವೀಣ್ ಕೊಲೆ ಪ್ರಕರಣ ಗಂಭೀರವಾಗಿ ಪರಿಗಣಿಸಿದ್ದೇವೆ. ಹರ್ಷನ ಪ್ರಕರಣದಲ್ಲಿ 24 ಗಂಟೆಯಲ್ಲೇ ಹಂತಕರನ್ನು ಬಂಧಿಸಿದೆವು, ಪ್ರವೀಣ್ ಪ್ರಕರಣದಲ್ಲಿ ಮಾತು ಕೊಡಲ್ಲ.. ಮಾಡಿ ತೋರಿಸುತ್ತೇವೆ ಅಲ್ಲಿವರೆಗೂ ರಾಜ್ಯದ ಜನರು ಸಂಯಮದಿಂದ ವರ್ತಿಸಬೇಕು ಎಂದು ಹೇಳಿದ್ದಾರೆ.
ಅಗತ್ಯಬಿದ್ದರೆ ರಾಜ್ಯದಲ್ಲಿ ಉತ್ತರ ಪ್ರದೇಶದ ಯೋಗಿ ಮಾದರಿ ನಿಯಮವನ್ನು ಜಾರಿಗೆ ತರುತ್ತೇವೆ. ಗಲಭೆ ಸೃಷ್ಟಿಸಲೆಂದೇ ಸಂಘಟನೆಗಳು ಹುಟ್ಟಿಕೊಂಡಿವೆ. ಪ್ರವೀಣ್ ಕೊಲೆ ಪ್ರಕರಣವನ್ನು ಸರ್ಕಾರ ಗಂಭೀರವಾಗಿ ತೆಗೆದುಕೊಂಡಿದೆ. ಹಂತಕರ ಪತ್ತೆಗೆ ಐದು ತಂಡ ರಚನೆ ಮಾಡಲಾಗಿದ್ದು, ಕೇರಳಕ್ಕೂ ಹೋಗಿ ಕಾರ್ಯಾಚರಣೆ ಮಾಡಲಾಗುತ್ತಿದೆ. ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ರಾಜಿ ಇಲ್ಲ ಎಂದರು.

ರಾಜ್ಯದಲ್ಲಿ ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಇಂದು ಜುಲೈ 28ಕ್ಕೆ 3 ವರ್ಷ ತುಂಬುತ್ತಿರುವ ಕಾರಣ ಬೊಮ್ಮಾಯಿ ಸಂಪುಟ ಸಹೋದ್ಯೋಗಿಗಳ ಜೊತೆ ವಿಧಾನಸೌಧದ ಬ್ಯಾಂಕ್ವೆಟ್ ಹಾಲ್ ನಲ್ಲಿ ಸುದ್ದಿಗೋಷ್ಠಿ ನಡೆಸಿದರು.