ನಮ್ಮ ಮೊದಲ ಸಚಿವ ಸಂಪುಟದಲ್ಲಿ ನಮ್ಮ ಗ್ಯಾರಂಟಿ ಯೋಜನೆ ಜಾರಿ ಬಗ್ಗೆ ವಾಗ್ದಾನ ನೀಡಿದ್ದು, ಅದನ್ನು ಮಾಡಲಿದ್ದೇವೆ. ಇದರ ಜತೆಗೆ ನಾವು ನೀಡಿರುವ ಇತರೆ ಭರವಸೆಗಳನ್ನು ಜಾರಿ ಮಾಡುತ್ತೇವೆ. ಕಳೆದ ಬಾರಿಯ ಸರ್ಕಾರ ಇದ್ದಾಗಲೂ ನಾವು ಹೇಳಿದ್ದನ್ನು ಮಾಡಿ ತೋರಿಸಿದ್ದೇವೆ. ನಾವು ಬಿಜೆಪಿಯವರ ರೀತಿ ಹೇಳುವುದೊಂದು ಮಾಡುವುದು ಮತ್ತೊಂದು ರೀತಿ ಆಡಳಿತ ಮಾಡುವುದಿಲ್ಲ. ನಾವು ಹೇಳಿದ್ದನ್ನು ಮಾಡಿ ತೋರಿಸುತ್ತೇವೆ.
ಪ್ರಧಾನಿ ಮೋದಿ ಅವರು ಈಗ ಮತ್ತೊಂದು ಆದೇಶ ಹೊರಡಿಸಿದ್ದಾರೆ. ಅವರು ಜಪಾನ್ ಗೆ ತೆರಳಿದಾಗಲೆಲ್ಲಾ ನೋಟು ರದ್ದು ತೀರ್ಮಾನ ಪ್ರಕಟಿಸುತ್ತಾರೆ. ಕಳೆದ ಬಾರಿ ಜಪಾನ್ ಗೆ ತೆರಳಿದಾಗ ಒಂದು ಸಾವಿರ ರೂ. ಮುಖಬೆಲೆ ನೋಟು ರದ್ದು ಮಾಡಿದ್ದರು. ಈ ಬಾರಿ 2 ಸಾವಿರ ಮುಖಬೆಲೆಯ ನೋಟು ರದ್ದು ಮಾಡಿದ್ದಾರೆ. ಇದರರ್ಥ ಇದರಿಂದ ದೇಶಕ್ಕೆ ಲಾಭವೋ, ನಷ್ಟವೋ ಎಂಬುದರ ಬಗ್ಗೆ ಸ್ಪಷ್ಟನೆ ನೀಡುವುದಿಲ್ಲ. ಮೋದಿ ಅವರ ಈ ಕೆಲಸ ದೇಶದ ಜನರಿಗೆ ತೊಂದರೆ ಆಗುತ್ತಿದೆ. ನಮ್ಮ ಸರ್ಕಾರ ರಾಜ್ಯದಲ್ಲಿ ದ್ವೇಷವನ್ನು ಕಿತ್ತೊಗೆದು, ಪ್ರೀತಿ, ಸೌಹಾರ್ದತೆ, ಸಾಮರಸ್ಯದ ಸರ್ಕಾರವಾಗಿದೆ. ನಾವು ನುಡಿದಂತೆ ನಡೆಯುತ್ತೇವೆ. ನಮ್ಮ ಭರವಸೆ ಈಡೇರಿಸುತ್ತೇವೆ.
ಮುಖ್ಯಮಂತ್ರಿ ಸಿದ್ದರಾಮಯ್ಯ
ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸಿಕ್ಕಿರುವ ಜಯ ರಾಜ್ಯದ ಜನರಿಗೆ ಸಿಕ್ಕಿರುವ ಗೆಲುವು. ಜನರ ಆಶೀರ್ವಾದದಿಂದ ಕಾಂಗ್ರೆಸ್ ಅಧಿಕಾರಕ್ಕೆ ಬಂದು ಸರ್ಕಾರ ಅಸ್ಥಿತ್ವಕ್ಕೆ ಬಂದಿದೆ. ರಾಜ್ಯದಲ್ಲಿ ಪ್ರಚಾರ ಆರಂಭವಾಗಿದ್ದು, ರಾಹುಲ್ ಗಾಂಧಿ ಅವರ ಭಾರತ ಜೋಡೋ ಯಾತ್ರೆ ಮೂಲಕ. ಇದರ ಜತೆಗೆ ರಾಹುಲ್ ಗಾಂಧಿ, ಖರ್ಗೆ, ಪ್ರಿಯಾಂಕಾ ಗಾಂಧಿ ಹಾಗೂ ಅನೇಕ ನಾಯಕರು ಕಾಂಗ್ರೆಸ್ ಪರವಾಗಿ ಪ್ರಚಾರ ಮಾಡಿದ್ದು ಎಲ್ಲರಿಗೂ ಹೃದಯಪೂರ್ವಕ ಅಭಿನಂದನೆ ಸಲ್ಲಿಸುತ್ತೇನೆ. ಇದರ ಜತೆಗೆ ಸಾಹಿತಿಗಳು, ಚಿಂತಕರು, ಸಂಘಟನೆ ನಾಯಕರುಗಳು ಕಾಂಗ್ರೆಸ್ ಪಕ್ಷಕ್ಕೆ ಆಶೀರ್ವಾದ ಮಾಡಿದ್ದು, ಧನ್ಯವಾದ ಅರ್ಪಿಸುತ್ತೇನೆ. ರಾಜ್ಯದ ಯುವಕರು, ರೈತರು, ಕಾರ್ಮಿಕರು, ಮಹಿಳೆಯರಿಗೂ ಧನ್ಯವಾದ ತಿಳಿಸುತ್ತೇನೆ.
ಈ ಕಾರ್ಯಕ್ರಮಕ್ಕೆ ಬಂದು ನಮಗೆ ಶುಭ ಕೋರಿ ಆಶೀರ್ವಾದ ಮಾಡಲು ಬಂದಿರುವ ಎಲ್ಲಾ ಪ್ರಮುಖ ನಾಯಕರು ಹಾಗೂ ಗಣ್ಯರಿಗೆ ಧನ್ಯವಾದ ತಿಳಿಸುತ್ತೇನೆ. ನಾವು ಜನರ ನಿರೀಕ್ಷೆಗೆ ತಕ್ಕಂತೆ ಆಡಳಿತ ನೀಡುತ್ತೇವೆ. ಜನ ಬದಲಾವಣೆ ಬಯಸಿದ್ದು, ನಾವು ಜನರಿಗೆ ಕೊಟ್ಟಿರುವ ಭರವಸೆ, ಗ್ಯಾರಂಟಿ ಯೋಜನೆಗಳನ್ನು ಇವತ್ತೇ ಸಂಪುಟ ಸಭೆಯಲ್ಲಿ ಒಪ್ಪಿಗೆ ನೀಡಿ ಆದೇಶ ಹೊರಡಿಸಿ ಜಾರಿಗೆ ತರುತ್ತೇವೆ. ಇದು ಕನ್ನಡನಾಡಿನ ಜನತೆಗೆ ನೂತನ ಸರ್ಕಾರದ ಕೊಡುಗೆಯಾಗಿದೆ. ನಮ್ಮ ಪ್ರಮಾಳಿಕೆಯಲ್ಲಿ ಕೊಟ್ಟಿರುವ ಎಲ್ಲಾ ಕಾರ್ಯಕ್ರಮಗಳನ್ನು ಮುಂದಿನ ಐದು ವರ್ಷಗಳಲ್ಲಿ ಈಡೇರಿಸುತ್ತೇವೆ ಎಂದರು.