
ಬೆಂಗಳೂರು: ನಾನು ಎಂಎಲ್ಎ ಆದ ಮೇಲೆ ಬೆಳಗಾವಿ ಗ್ರಾಮಾಂತರ ಕ್ಷೇತ್ರದಲ್ಲಿ ಯಾವ ಜಾತಿ ಗಲಭೆ, ಜಾತಿ ರಾಜಕಾರಣ, ಪೊಲೀಸರ ಮೇಲೆ ಒತ್ತಡ, ಒತ್ತಾಯ ಮಾಡಿಲ್ಲ.ಕುವೆಂಪುರವರು ಹೇಳಿದಂತೆ ನಮ್ಮ ಕ್ಷೇತ್ರ ಶಾಂತಿಯ ತೋಟವಾಗಿದೆ ಎನ್ನುವುದನ್ನು ನಾನು ಹೆಮ್ಮೆಯಿಂದ ಹೇಳುತ್ತೇನೆ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಸಚಿವೆ ಲಕ್ಷ್ಮೀ ಹೆಬ್ಬಾಳ್ಕರ್ ಭಾವನಾತ್ಮಕ ಮಾತುಗಳನ್ನಾಡಿದ್ದಾರೆ.

ಬೆಳಗಾವಿಯ ಸಹ್ಯಾದ್ರಿ ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿ, ನಾವೆಲ್ಲರೂ ಇದೇ ರೀತಿ ಅನ್ಯೋನ್ಯವಾಗಿ ಕೂಡಿ ಹೋಗೋಣ, ಬಾಳೋಣ
ಇವತ್ತಿಗೆ ನನ್ನ ಕಾರು ಅಪಘಾತಗೊಂಡು ವರ್ಷವಾಗಿದೆ. ಹೀಗಾಗಿ ನೀವು ಇವತ್ತು ಎಲ್ಲಿಯೋ ಓಡಾಡಬೇಡಿ ಎಂದು ಯುವರಾಜ ಅಣ್ಣಾ ಹೇಳಿದ್ದರು. ಆದರೆ ನನ್ನ ದಾರ ಬಹಳ ಗಟ್ಟಿ ಇದೆ. ಕ್ಷೇತ್ರ, ರಾಜ್ಯದಲ್ಲಿ ಬಹಳ ಕೆಲಸ ಮಾಡುವುದಿದೆ. ಸಾಧನೆ ಮಾಡೋದು, ಹೆಸರು ಗಳಿಸುವುದು ಇದೆ ಎಂದು ತಮ್ಮ ಕನಸನ್ನು ಬಿಚ್ಚಿಟ್ಟಿದ್ದಾರೆ.

ಜನರಿಂದ ನಾನು ಜನನಾಯಕಿ ಎನಿಸಿಕೊಳ್ಳಬೇಕೆಂಬ ಹುಚ್ಚು ಹಂಬಲವಿದೆ. ಸಿದ್ದರಾಮಯ್ಯ ಸಾಹೇಬ್ರಿಗೆ, ಯಡಿಯೂರಪ್ಪ ಸಾಹೇಬ್ರಿಗೆ ಜನಪ್ರಿಯ ನಾಯಕ ಅಂತಾ ಹೆಮ್ಮೆಯಿಂದ ಹೇಳ್ತೀವಿ. ಅದೇ ರೀತಿ ಮಹಿಳೆಯರಿಂದ ನಾನು ಜನಪ್ರಿಯ ನಾಯಕಿ ಎನಿಸಿಕೊಳ್ಳಬೇಕೆಂಬ ಹುಚ್ಚಿದೆ ಎಂದು ಪಕ್ಷಾತೀತವಾಗಿ ಇಬ್ಬರು ನಾಯಕರನ್ನು ಶ್ಲಾಘಿಸಿದ್ದಾರೆ.

ನನಗೆ ವರ್ಷದ ಹಿಂದೆ ಏನಾದರೂ ಸ್ವಲ್ಪ ಹೆಚ್ಚೂ ಕಮ್ಮಿ ಆಗಿದ್ರೆ ಒಂದು ವರ್ಷದ ಜಯಂತಿ ಎಲ್ಲರೂ ಮಾಡುತ್ತಿದ್ರು, ಆದರೆ ದೇವರು
ನಿಮ್ಮೆಲ್ಲರ ಆಶೀರ್ವಾದ, ಸೇವೆ ಮಾಡುವ ಸಲುವಾಗಿ ಬದುಕಿದ್ದೇನೆ. ದೇವರ ಸರಿಯಾಗಿ ನಿಮ್ಮ ಸೇವೆ ಮಾಡುತ್ತೇನೆ. ದೇವರ ಸರಿಯಾಗಿ ನಿಮ್ಮ ಜೊತೆಗೆ ನಿಲ್ಲುತ್ತೇನೆ ಎಂದು ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ಕ್ಷೇತ್ರ ಹಾಗೂ ರಾಜ್ಯದ ಜನರಿಗೆ ಭಾವನಾತ್ಮಕ ಮಾತಿನ ಸಂದೇಶ ರವಾನಿಸಿದ್ದಾರೆ.

ಕಳೆದ ವರ್ಷ ಭೀಕರ ರಸ್ತೆ ಅಪಘಾತದಲ್ಲಿ ಗಂಭೀರ ಗಾಯಗೊಂಡಿದ್ದ ಸಚಿವೆ ಹೆಬ್ಬಾಳ್ಕರ್ ಪ್ರಾಣಾಪಾಯದಿಂದ ಪಾರಾಗಿದ್ದರು. ಜನರೆದುರು ಆ ಭೀಕರ ರಸ್ತೆ ಅಪಘಾತದ ನೆನಪು ಮಾಡಿಕೊಂಡು ತಮ್ಮ ರಾಜಕೀಯ ಗುರಿಯನ್ನು ತಲುಪುವ ಇಂಗಿತ ವ್ಯಕ್ತಪಡಿಸಿದ್ದಾರೆ.






