ಬೊಲೆರೋ ಪಿಕಪ್ ವಾಹನದಲ್ಲಿ 60 ಕ್ಕೂ ಅಧಿಕ ಕರುಗಳನ್ನು ಅಮಾನವೀಯವಾಗಿ ಸಾಗಾಟ ಮಾಡುತ್ತಿದ್ದ ಪ್ರಕರಣ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಂಜುಟಗಿ ಬಳಿ ಬೆಳಕಿಗೆ ಬಂದಿದೆ. ಸದ್ಯಕ್ಕೆ ಈಗ ಕರುಗಳ ರಕ್ಷಣೆ ಮಾಡಲಾಗಿದ್ದು, ಈ ಕುರಿತು ಪೊಲೀಸರು ತನಿಖೆಯನ್ನ ಕೈಗೊಂಡಿದ್ದಾರೆ ಎಂದು ಮಾಹಿತಿ ಲಭ್ಯವಾಗಿದೆ.

ಇನ್ನು ಈ ಪ್ರಕರಣ ಬೆಳಕಿಗೆ ಬಂದಿದ್ದು ಒಂದು ಅಪಘಾತದಿಂದ ಎಂದು ಹೇಳಲಾಗುತ್ತಿದೆ. ಹೌದು.. ಮಹಾರಾಷ್ಟ್ರದ ಸಾತಾರಾ ಕಡೆಯಿಂದ ವಿಜಯಪುರಕ್ಕೆ ಬರುತ್ತಿದ್ದ ವೇಳೆ ಬೊಲೆರೋ ಪಿಕಪ್ ವಾಹನ ಅಪಘಾತಕ್ಕೆ ಈಡಾಗಿದೆ, ಅಕ್ರಮ ಸಾಗಾಟ ವೇಳೆ ಅಪಘಾತ ಸಂಭವಿಸಿದ್ದು, ವಾಹನ ಮತ್ತು ಕರುಗಳನ್ನು ಬಿಟ್ಟು ಗೋಸಾಗಾಟಗಾರರು ಸ್ಥಳದಿಂದ ಪರಾರಿಯಾಗಿದ್ದಾರೆ. ಇನ್ನು ಇದನ್ನ ಗಮನಿಸಿದ ಸ್ಥಳಿಯರು ಈ ವಾಹನ ಪರಿಶೀಲನೆ ನಡೆಸಿದಾಗ ವಾಹನದಲ್ಲಿ ಕರುಗಳ ಅಕ್ರಮ ಸಾಗಟದ ವಿಚಾರ ಬೆಳಕಿಗೆ ಬಂದಿದೆ

ವಾಹನದಲ್ಲಿದ್ದ ಸುಮಾರು 60 ಕ್ಕೂ ಅಧಿಕ ಕರುಗಳನ್ನು ಕೈಕಾಲು ಕಟ್ಟಿ, ಬಾಯಿಗೆ ಟಿಕ್ಸೋ ಟೇಪ್ ಬಿಗಿಯಲಾಗಿತ್ತು ಎಂದು ಸ್ಥಳೀಯರು ಹೇಳಿಕೆ ನೀಡಿದ್ದಾರೆ, ಬಳಿಕ ಈ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ, ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆಯನ್ನ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ.












