ವಿಜಯನಗರ: ಮುಖ್ಯಮಂತ್ರಿಗಳಿಗೆ ಧೈರ್ಯವಿದ್ದರೆ ಅಭಿವೃದ್ಧಿ ವಿಷಯದ ಕುರಿತು ಚರ್ಚೆಗೆ ಬರಲಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸವಾಲು ಹಾಕಿದ್ದಾರೆ.
ಮಾಲವಿ ಜಲಾಶಯಕ್ಕೆ ಶಾಶ್ವತ ನೀರು ಬಂದ ಹಿನ್ನೆಲೆಯಲ್ಲಿ ಬಾಗಿನ ಅರ್ಪಿಸಿದ ಬಳಿಕ ಮಾತನಾಡಿದ ಅವರು, ಮೂರುವರೆ ವರ್ಷದಲ್ಲಿ ಬಿಜೆಪಿ ಯಾವುದೇ ಭರವಸೆ ಈಡೇರಿಸಿಲ್ಲ. ಬಸವರಾಜ ಬೊಮ್ಮಯಿ ಅವರಿಗೆ ಧೈರ್ಯವಿದ್ದರೆ ಅಭಿವೃದ್ಧಿ ಕುರಿತು ಚರ್ಚೆಗೆ ಬರಲಿ. ಕಾಂಗ್ರೆಸ್ ಅವರ ಧಮ್ಮಿನ ಬಗ್ಗೆ ಪ್ರಶ್ನೆ ಮಾಡುವ ಬೊಮ್ಮಯಿ ಅವರು ಮೋದಿ ಮುಂದೆ ನಾಯಿಯಂತೆ ಇರುತ್ತಾರೆ.. ಗಡ ಗಡ ನಡಗುತ್ತಾರೆ.
ಆಪರೇಷನ್ ಕಮಲದ ಮೂಲ ಅಧಿಕಾರಕ್ಕೆ ಬಂದಿರುವ ಬಿಜೆಪಿ ನಾಯಕರಿಗೆ ಧಮ್ ಇದ್ದರೆ, ತಾಕತ್ ಇದ್ದರೆ ಕೇಂದ್ರದಿಂದ ಹಣ ತನ್ನಿ. ಕೇಂದ್ರದ ನಾಯಕರ ಮುಂದೆ ನಿಮ್ಮ ತಾಕತ್ತು, ಧಮ್ ಎಲ್ಲಿ ಹೋಗುತ್ತೆ ಎಂದು ಪ್ರಶ್ನಿಸಿದ ಅವರು, ಮಹದಾಯಿ ಯೋಜನೆ ನಿರ್ಮಾಣಕ್ಕೆ ಯಡಿಯೂರಪ್ಪ ರಕ್ತದಲ್ಲಿ ಬರೆದುಕೊಡ್ತೇನೆ ಎಂದರು. ಆದರೆ ಇದೀಗ ಡಬಲ್ ಇಂಜಿನ್ ಸರ್ಕಾರ ಏನು ಮಾಡುತ್ತಿದೆ ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಅಧಿಕಾರಕ್ಕೆ ಬಂದೇ ಬರುತ್ತದೆ ರಾಜ್ಯದ ಎಲ್ಲ ಕೆರೆ ತುಂಬಿಸುತ್ತೇವೆ. ನಲವತ್ತು ವರ್ಷಗಳ ಹೋರಾಟಕ್ಕೆ ಅಂತ್ಯ ಹಾಡಿದ್ದೇವೆ. ಭೀಮಾನಾಯ್ಕ ಜೆಡಿಎಸ್ ಶಾಸಕರಾ ದ್ದಾಗಲೇ ಅನುದಾನ ಬಿಡುಗಡೆ ಮಾಡಿದ್ದೇವೆ ಅಭಿವೃದ್ಧಿ ಪಕ್ಷ ಅಗತ್ಯವಿಲ್ಲ. ಚುನಾವಣೆಯಲ್ಲಿ ಮಾತ್ರ ಭರವಸೆ ನೀಡುತ್ತೇವೆ. ಗೆದ್ದ ಮೇಲೆ ಆ ಪಕ್ಷ, ಈ ಪಕ್ಷ ಅಂತೇನಿಲ್ಲ ಎಲ್ಲರ ಅಭಿವೃದ್ಧಿ ಮಾಡಬೇಕು. ನಾನು ಸಿಎಂ ಅಗಿದ್ದಾಗ ಪಕ್ಷಾತೀತವಾಗಿ ಎಲ್ಲ ಕ್ಷೇತ್ರಕ್ಕೆ ಅನುದಾನ ನೀಡಿದ್ದೆ ಎಂದರು.