ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ಕೌಶಲ್ಯ ಅಭಿವೃದ್ಧಿ ತರಬೇತಿ.

ಕುರುಗೋಡು: ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಬೃಹತ್ ಉದ್ಯೋಗ ಮೇಳ
ಕುರುಗೋಡು, ಫೆಬ್ರುವರಿ 22: ಉದ್ಯೋಗ ಮೇಳದಲ್ಲಿ ಕೆಲಸ ಸಿಗಲಿಲ್ಲ ಎಂದು ಹತಾಶರಾಗಬೇಡಿ. ಶೈಕ್ಷಣಿಕ ಅರ್ಹತೆಗೆ ತಕ್ಕಂತೆ ನಮ್ಮ ಫೌಂಡೇಶನ್ ವತಿಯಿಂದ ಕೌಶಲ ಅಭಿವೃದ್ಧಿ ತರಬೇತಿ ನೀಡಿ ಉದ್ಯೋಗ ದೊರಕಿಸಿಕೊಡಲಾಗುವುದು ಎಂದು ಕಾರ್ಮಿಕ ಸಚಿವ ಸಂತೋಷ್ ಎಸ್. ಲಾಡ್ ಅವರು ಹೇಳಿದರು.

ಪಟ್ಟಣದಲ್ಲಿ ಸಂತೋಷ್ ಲಾಡ್ ಫೌಂಡೇಶನ್ ವತಿಯಿಂದ ಶನಿವಾರ ಆಯೋಜಿಸಿದ್ದ ಉದ್ಯೋಗ ಮೇಳ ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಅರ್ಹತೆ ಇದ್ದರೂ ಕೌಶಲ ಕೊರತೆಯ ಕಾರಣಕ್ಕೆ ಇನ್ಫೋಸಿಸ್ ನಲ್ಲಿ 300 ಜನರು ಉದ್ಯೋಗ ಕಳೆದುಕೊಂಡಿರುವುದು ದುರಂತದ ಸಂಗತಿ ಎಂದು ವಿಷಾದ ವ್ಯಕ್ತಪಡಿಸಿದರು.
ಸಾಮಾಜಿಕ ಜಾಲತಾಣಗಳ ಬಳಕೆ ಜೀವನದ ದಿಕ್ಕು ಬದಲಾವಣೆಗೆ ಮೀಸಲಿಡಿ. ಕಾಲಹರಣಕ್ಕಲ್ಲ. ಸ್ಪಷ್ಟತೆ ಇಲ್ಲದ ಅನೇಕ ವಿಷಯಗಳು ಜಾಲತಾಣಗಳಲ್ಲಿ ಹರಿದಾಡುತ್ತಿವೆ. ಯುವಕರು ಅವುಗಳ ಬಗ್ಗೆ ಸೂಕ್ಷ್ಮಮತಿಗಳಾಗಿರಬೇಕು ಎಂದು ಸಲಹೆ ನೀಡಿದರು.

ಯುವಕರು ದುಶ್ಚಟಗಳಿಗೆ ಬಲಿಯಾಗಿ ಜೀವನ ಹಾಳು ಮಾಡಿಕೊಳ್ಳುತ್ತಿದ್ದಾರೆ. ನೂರಾರು ಸಮಸ್ಯೆಗಳ ಮಧ್ಯೆ ಶಿಕ್ಷಣ ಕೊಡಿಸಿ ಭವಿಷ್ಯದ ಕನಸು ಕಾಣುವ ಪೋಷಕರ ಮನಸಿನ ಮೇಲೆ ದುಷ್ಪರಿಣಾಮ ಬೀರುತ್ತದೆ ಎಂದು ಕಳವಳ ವ್ಯಕ್ತಪಡಿಸಿದರು.
ಶಾಸಕ ಜೆಎನ್.ಗಣೇಶ್ ಮಾತನಾಡಿ, ಕ್ಷೇತ್ರದಲ್ಲಿ ಕುಡಿಯುವ ನೀರು, ರಸ್ತೆ, ಚರಂಡಿ ನಿರ್ಮಾಣದ ಅಭಿವೃದ್ಧಿಯ ಸಂತೋಷಕ್ಕಿಂತ ಉದ್ಯೋಗ ಮೇಳ ಆಯೋಜನೆ ಹೆಚ್ಚು ಖುಷಿತಂದಿದೆ ಎಂದರು.
ಯುವಕರು ಸಕಾರಾತ್ಮಕ ಚಿಂತನೆಗಳನ್ನು ಮೈಗೂಡಿಸಿಕೊಂಡರೆ ಜೀವನದಲ್ಲಿ ಯಶಸ್ವಿಯಾಗಲು ಸಾಧ್ಯ ಎಂದರು.

ಕಾರ್ಯಕ್ರಮದಲ್ಲಿ ಐವರು ಅಂಗವಿಕಲರಿಗೆ ಸ್ಥಳದಲ್ಲಿಯೇ ಉದ್ಯೋಗ ನೇಮಕಾತಿ ಪತ್ರ ನೀಡಲಾಯಿತು.
ಆನ್ಲೈನ್ ಮೂಲಕ 1433 ಮತ್ತು ನೇರವಾಗಿ 1209 ಸೇರಿ ಒಟ್ಟು 2733 ಅಭ್ಯರ್ಥಿಗಳು ಉದ್ಯೋಗ ಬಯಸಿ ನೋಂದಾಯಿಸಿ ಕೊಂಡಿದ್ದರು.

ಪುರಸಭೆ ಅಧ್ಯಕ್ಷ ಟಿ.ಶೇಖಣ್ಣ, ಉಪಾಧ್ಯಕ್ಷ ಚನ್ನಪಟ್ಟಣ ಮಲ್ಲಿಕಾರ್ಜುನ, ಕಂಪ್ಲಿ ಪುರಸಭೆ ಅಧ್ಯಕ್ಷ ಭಟ್ಟ ಪ್ರಸಾದ್, ತಹಶೀಲ್ದಾರ್ ನರಸಪ್ಪ ತಹಶೀಲ್ದಾರ್ ಇದ್ದರು.