ವಿಜಯಪುರ: ರಾಜ್ಯ ಉಳಿಯಬೇಕಾದರೆ ಹಾಗೂ ಭ್ರಷ್ಟಾಚಾರ ತೊಲಗಬೇಕಾದರೆ ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕಿದ್ದು, ಹೀಗಾಗಿ ನಮ್ಮನ್ನು ಬೆಂಬಲಿಸಿ ಎಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ತಿಳಿಸಿದರು.
ವಿಜಯಪುರದಲ್ಲಿ ನಡೆದ ಕೃಷ್ಣಾ ಮೇಲ್ದಂಡೆಯ ಜನಾಂದೋಲನ ಸಮಾವೇಶದಲ್ಲಿ ಮಾತನಾಡಿದ ಅವರು, ಕಬ್ಬು ಬೆಳೆಗೆ ಟನ್ ಗೆ 3500 ರೂ. ಕೊಟ್ಟು ಖರೀದಿ ಮಾಡಿ ಎಂದು ಸದನದಲ್ಲಿ ಮನವಿ ಮಾಡಿದೆ. ನರೇಂದ್ರ ಮೋದಿ ಅವರು ಕಬ್ಬಿನ ಇಳುವರಿಯನ್ನು 10 ರಿಂದ 10.25ಕ್ಕೆ ಹೆಚ್ಚಿಸಿ, 150 ರೂ. ಹೆಚ್ಚು ಕೊಟ್ಟಂತೆ ಮಾಡಿ ಜನರಿಗೆ ಟೋಪಿ ಹಾಕಿದ್ದಾರೆ. ನಾವು ಅಧಿಕಾರದಲ್ಲಿದ್ದಾಗ ಕಬ್ಬಿನ ಬೆಳೆ ಬಿದ್ದುಹೋದಾಗ 1800 ಕೋಟಿ ರೂ. ಅನ್ನು ರೈತರಿಗೆ ನೀಡಿ ರೈತರನ್ನು ಕಾಪಾಡುವ ಕೆಲಸ ಮಾಡಿದ್ದೆವು.
ನಾವು ಮಹದಾಯಿ ಯೋಜನೆಯನ್ನು ಜಾರಿ ಮಾಡುತ್ತೇವೆ ಎನ್ನುವ ಬೊಮ್ಮಾಯಿ ಅವರೇ, 22-7-2022ರಲ್ಲಿ ನೋಟಿಫಿಕೇಷನ್ ಆಗಿತ್ತು, ಎರಡು ವರ್ಷ 9 ತಿಂಗಳು ಯೋಜನೆ ಕೈಗೆತ್ತಿಕೊಳ್ಳದೆ ಸುಮ್ಮನಿದ್ರು. ಕೇಂದ್ರದಲ್ಲಿ ರಾಜ್ಯದಲ್ಲಿ ಬಿಜೆಪಿ ಇದ್ದರೆ ರೈತರಿಗೆ ಡಬ್ಬಲ್ ಟೋಪಿ ಬಿದ್ದಂತೆ. ಕಾಂಗ್ರೆಸ್ ಅಧಿಕಾರಕ್ಕೆ ಬರಬೇಕು ಎಂಬ ಕಾರಣಕ್ಕೆ ನಿಮ್ಮ ಬೆಂಬಲ ಕೇಳುತ್ತಿಲ್ಲ, ರಾಜ್ಯ, ರೈತರು, ಬಡವರು ಉಳಿಯಬೇಕು ಎಂಬ ಕಾರಣಕ್ಕೆ ನಮ್ಮನ್ನು ಬೆಂಬಲಿಸಿ ಎಂದು ಕೈಮುಗಿದು ಮನವಿ ಮಾಡುತ್ತಿದ್ದೇನೆ.
ಬಿಜೆಪಿ ಅಧಿಕಾರಕ್ಕೆ ಬಂದು 4 ವರ್ಷ ಆಗುತ್ತಾ ಬಂತು, ಮುಖ್ಯಮಂತ್ರಿಯಾಗಿದ್ದ ಯಡಿಯೂರಪ್ಪ, ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ನೀರಾವರಿ ಸಚಿವರಾದ ಗೋವಿಂದ ಕಾರಜೋಳ ಅವರು ನೀರಾವರಿಗೆ ಎಷ್ಟು ಖರ್ಚು ಮಾಡಿದ್ದಾರೆ? ಬಿಜೆಪಿ ಸರ್ಕಾರ ನೀರಾವರಿಗೆ ಖರ್ಚು ಮಾಡಿರುವುದು 45,000 ಕೋಟಿ ಮಾತ್ರ. ಬಿಜೆಪಿಯವರಿಗೆ ನಾಚಿಕೆಯಾಗಲ್ವಾ? ನಿಮಗೆ ಉತ್ತರ ಕರ್ನಾಟಕ ಮತ್ತು ಕೃಷ್ಣಾ ಮೇಲ್ದಂಡೆ ಬಗ್ಗೆ ಮಾತನಾಡುವ ಯಾವ ನೈತಿಕತೆ ಇದೆ?
ನಾವು ಮತ್ತೆ ಅಧಿಕಾರಕ್ಕೆ ಬಂದರೆ ಮುಂದಿನ 5 ವರ್ಷಗಳಲ್ಲಿ ಕೃಷ್ಣಾ ಮೇಲ್ದಂಡೆ, ಭದ್ರಾ ಮೇಲ್ದಂಡೆ, ಎತ್ತಿನಹೊಳೆ, ಮೇಕೆದಾಟು ಈ ಎಲ್ಲಾ ಯೋಜನೆಗಳನ್ನು 2 ಲಕ್ಷ ಕೋಟಿ ರೂ. ಖರ್ಚು ಮಾಡಿ ಕಾಮಗಾರಿಗಳನ್ನು ಪೂರ್ಣಗೊಳಿಸುತ್ತೇವೆ. ಕೃಷ್ಣಾ ಮೇಲ್ದಂಡೆಯ 3ನೇ ಹಂತದ ಕಾಮಗಾರಿಗಳನ್ನು ಕೈಗೆತ್ತಿಕೊಳ್ಳಲು ಪುನರ್ವಸತಿ ಕಾರ್ಯಕ್ಕಾಗಿ 51,000 ಕೋಟಿ ಅಂದಾಜು ಮಾಡಿದ್ದೆವು, ಈಗದು 75,000 ಕೋಟಿಗೆ ಹೆಚ್ಚಾಗಿದೆ. ಈ ಹಣವನ್ನು ಮುಂದಿನ 5 ವರ್ಷಗಳಲ್ಲಿ ನೀಡಿ, ಜನರಿಗೆ ನೀಡಿದ ಮಾತನ್ನು ಉಳಿಸಿಕೊಳ್ಳುತ್ತೇನೆ.
2013ರಲ್ಲಿ ನಮ್ಮ ಪಕ್ಷ ನೀಡಿದ್ದ 165 ಭರವಸೆಗಳಲ್ಲಿ 158 ಭರವಸೆಗಳನ್ನು ಈಡೇರಿಸಿದ್ದೇವೆ. ಈಗಿನ ಬಿಜೆಪಿ ಸರ್ಕಾರ ಜನರಿಗೆ 600 ಭರವಸೆಗಳನ್ನು ನೀಡಿ ಅದರಲ್ಲಿ 10% ಕೂಡ ಈಡೇರಿಸಿಲ್ಲ. ಬಸವರಾಜ ಬೊಮ್ಮಾಯಿ ಜನರ ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದಾರೆ. ನಾವು ಮತ್ತೆ ಅಧಿಕಾರಕ್ಕೆ ಬಂದರೆ ಕೇಂದ್ರ ಸರ್ಕಾರದ ಮೇಲೆ ಒತ್ತಡ ಹಾಕಿ, ನ್ಯಾಯಾಲಯದಲ್ಲಿ ಹೋರಾಟ ಮಾಡಿ ಗೆಜೆಟ್ ನೋಟಿಫಿಕೇಷನ್ ಹೊರಡಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇವೆ. ಪ್ರತೀ ವರ್ಷ 40,000 ಕೋಟಿಯಂತೆ ಹಣ ಖರ್ಚು ಮಾಡಿದರೆ 5 ವರ್ಷಗಳಲ್ಲಿ ಯೋಜನೆ ಪೂರ್ಣಗೊಳಿಸಲು ಸಾಧ್ಯವಿದೆ ಎಂದು ಹೇಳಿದರು.
ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧಿಕಾರಕ್ಕೆ ಬರಲಿದೆ. ಕಾರಣ ಈಗಿನದು 40% ಕಮಿಷನ್ ಸರ್ಕಾರ. ಹೇಮಾವತಿ ಎಡದಂಡೆ ನಾಲೆ ಕೆಲಸವನ್ನೇ ಮಾಡದೆ ಬಿಲ್ ಹಣ ತೆಗೆದುಕೊಂಡಿದ್ದಾರೆ. ನಾರಾಯಣಪುರ ಬಲದಂಡೆ ನಾಲೆ 750 ಕೋಟಿ ಇದ್ದದ್ದು 2000 ಕೋಟಿಗೂ ಹೆಚ್ಚಾಗಿದೆ. ಹೀಗೆ ಎಸ್ಟಿಮೇಷನ್ ನಲ್ಲೇ ಭ್ರಷ್ಟಾಚಾರ ನಡೆಯುತ್ತಿದೆ. ಇದನ್ನು ನಮ್ಮ ಪಕ್ಷದವರು ಮುಖ್ಯಮಂತ್ರಿಗಳಿಗೆ ದೂರು ನೀಡಿದ್ದರು, ದೂರಿನ ಅನ್ವಯ ಸ್ಥಳ ಪರಿಶೀಲನೆಗೆ ಹೋದ ತಂಡದ ಮೇಲೆ ರೌಡಿಗಳನ್ನು ಬಿಟ್ಟು ಹಲ್ಲೆ ಮಾಡಿಸಿ, ವಾಪಾಸು ಕಳಿಸಿದ್ದಾರೆ. ಇದು ಬಿಜೆಪಿ ಗೂಂಡಾಗಳ ಕೆಲಸ ಅಲ್ಲವಾ? ಎಂದು ಪ್ರಶ್ನಿಸಿದ ಅವರು, ರೈತರ ಜಮೀನಿಗೆ ನೀರು ಕೇಳಿದರೆ ಅಲ್ಲೂ ಲೂಟಿ ಮಾಡುತ್ತಾರೆ. ಈ ಕಳ್ಳರ ತಂಡವನ್ನು ಅಧಿಕಾರದಿಂದ ಕಿತ್ತು ಹಾಕುವ ಕೆಲಸವನ್ನು ರಾಜ್ಯದ ಜನತೆ ಮಾಡಬೇಕು ಎಂದರು.