ಮೋದಿ ಎಂದರೆ ಸುಳ್ಳು ಅಥವಾ ಸುಳ್ಳು ಎಂದರೆ ಮೋದಿ. ಜರ್ಮನಿಯ ಹಿಟ್ಲರ ಕೂಡ ದೇಶಭಕ್ತಿ ಮತ್ತು ಧರ್ಮದ ಹೆಸರಿನಲ್ಲಿ ಜನರ ಸುಲಿಗೆ ಮಾಡಿದ್ದನ್ನು ನಾವು ಓದಿದ್ದೇವೆ. ಇಲ್ಲಿ ಮೋದಿ ಕೂಡ ಅದನ್ನೆ ಮಾಡುತ್ತಿದ್ದಾರೆ. ನರೇಂದ್ರ ಮೋದಿ ಗುಜರಾತ ಮುಖ್ಯಮಂತ್ರಿಯಾಗಿ ಅಂದಿನ ಡಾ. ಸಿಂಗ್ ಸರಕಾರವನ್ನು ಹೆಜ್ಜೆಹೆಜ್ಜೆಗೆ ಕಾಡಿದ್ದಿದೆ. ಅಂದಿನ ಕೇಂದ್ರ ಸರಕಾರದ ಜನಪರ ಸೇರಿದಂತೆ ಎಲ್ಲ ಬಗೆಯ ಯೋಜನೆಗಳನ್ನು ಮೋದಿ ಕಟುವಾಗಿ ಟೀಕಿಸಿದ್ದರು ಹಾಗು ಸಾರ್ವಜನಿಕವಾಗಿ ವಿರೋಧಿಸಿದ್ದರು. ಆದರೆ ಡಾ. ಸಿಂಗ್ ಸರಕಾರದ ಎಲ್ಲ ಯೋಜನೆಗಳನ್ನು ಅವರು ಪ್ರಧಾನಿಯಾಗಿ ತುರ್ತು ಹಾಗು ವ್ಯಾಪಕ ರೀತಿಯಲ್ಲಿ ಅನುಷ್ಟಾನಕ್ಕೆ ತಂದಿದ್ದಾರೆ.
ಆ ಯೋಜನೆಗಳಲ್ಲಿ ಜಿಎಸ್‌ಟಿ ಅನುಷ್ಟಾನ ಕೂಡ ಒಂದು. ಮೋದಿ ಮುಖಂಡತ್ವದ ಬಿಜೆಪಿ ಸರಕಾರ ಇಂದು ಜನಸಾಮಾನ್ಯರ ನಿತ್ಯ ಬಳಕೆಯ ಬಹುತೇಕ ವಸ್ತುಗಳ ಮೇಲೆ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವಿಪರೀತ ಪ್ರಮಾಣದಲ್ಲಿ ಹೇರಿದೆ. ಆದರೆˌ ಅಂದು ಮುಖ್ಯಮಂತ್ರಿ ಮೋದಿ “ಕೇಂದ್ರದ ಜಿಎಸ್‌ಟಿ ಅನುಷ್ಟಾನದ ನಿರ್ಧಾರವು ರಾಜ್ಯಗಳ ಹಣಕಾಸು ವ್ಯವಹಾರದಲ್ಲಿ ಒಕ್ಕೂಟದ ತತ್ವಗಳಿಗೆ ವಿರುದ್ಧವಾಗಿದೆ” ಎಂದು ಟೀಕಿಸಿದ್ದರು.
ಅಂದು ಜಿಎಸ್‌ಟಿ ಅನುಷ್ಟಾನವನ್ನು ಉಗ್ರವಾಗಿ ಪ್ರತಿರೋಧಿಸಿದ್ದ ಮೋದಿ ಇಂದು ಅದರ ಯದ್ವಾತದ್ವಾ ಹೇರಿಕೆಯಿಂದ ಗರಿಷ್ಟ ಪ್ರಯೋಜನ ಪಡೆಯುತ್ತಿದೆ. ಬಿಜೆಪಿಯ ಅಂದಿನ ಹಿರಿಯ ನಾಯಕ ಮತ್ತು ಹಣಕಾಸು ಸಂಸದೀಯ ಸ್ಥಾಯಿ ಸಮಿತಿಯ ಅಧ್ಯಕ್ಷ ಯಶವಂತ್ ಸಿನ್ಹಾ ಅವರು ಫೆಬ್ರವರಿ ೨೦, ೨೦೧೧ ರಂದು, “ಇದು ಸಿಂಗ್ ಸರಕಾರದ ತಪ್ಪು ನಿರ್ಧಾರˌ ಬಿಜೆಪಿ ಆಡಳಿತವಿರುವ ರಾಜ್ಯ ಸರಕಾರಗಳು ಜಿಎಸ್‌ಟಿಯನ್ನು ವಿರೋಧಿಸುತ್ತಿವೆ ಎಂದು ಹೇಳಿದ್ದರು.
ಡಾ. ಸಿಂಗ್ ನೇತೃತ್ವದ ಯುಪಿಎ ಸರಕಾರ ಅಂದು ಜಿಎಸ್‌ಟಿ ಜಾರಿಗೊಳಿಸಲು ೧೧೫ ನೇ ಸಂವಿಧಾನ ತಿದ್ದುಪಡಿ ಮಸೂದೆ, ೨೦೧೧ ಅನ್ನು ಅಂಗೀಕರಿಸಲು ಸಿದ್ಧವಾದಾಗ
ಅಕ್ಟೋಬರ್ ೨೩, ೨೦೧೩ ರಂದು, ನರೇಂದ್ರ ಮೋದಿ ನೇತೃತ್ವದ ಗುಜರಾತ್ ಸರ್ಕಾರ ಅದನ್ನು ಪ್ರಬಲವಾಗಿ ವಿರೋಧಿಸಿತ್ತು. ನ್ಯಾಷನಲ್ ಎಂಪವರಮೆಂಟ್ ಕಮೀಟಿಯ ಸಭೆಯಲ್ಲಿ ಅಂದಿನ ಗುಜರಾತ್ ಸಚಿವ ಸೌರಭ್ ಪಟೇಲ್, “ಸುಗ್ರೀವಾಜ್ಞೆ ಮೂಲಕ ಒಕ್ಕೂಟ ಸರ್ಕಾರವು ಜಿಎಸ್ಟಿ ಜಾರಿಗೊಳಿಸಿದರೆ, ಗಮ್ಯಸ್ಥಾನ ಆಧಾರಿತ ತೆರಿಗೆ ನೀತಿಯಿಂದ ಗುಜರಾತ್ ರಾಜ್ಯಕ್ಕೆ ವಾರ್ಷಿಕ ೧೪,೦೦೦ ಕೋಟಿ ರೂಪಾಯಿಗಳ ನಷ್ಟವುಂಟಾಗುತ್ತದೆ” ಎಂದು ವಾದಿಸಿದ್ದರು.
ಅಷ್ಟೇ ಅಲ್ಲದೆ ಗುಜರಾತ ಮಂತ್ರಿ ಪಟೇಲ್ ಎಲ್ಲ ರೀತಿಯಲ್ಲೂ ದಿವಾಳಿಯಾಗಿರುವ ಗುಜರಾತ ಸರಕಾರಕ್ಕೆ ತೀವ್ರ ಆದಾಯದ ಸಮಸ್ಯೆ ಎದುರಾಗುತ್ತದೆˌ ಕೇಂದ್ರ ತಕ್ಷಣಕ್ಕೆ ೪, ೫೦೦ ಕೋಟಿ ರೂಪಾಯಿಗಳ ಬಾಕಿ ಪರಿಹಾರ ನೀಡಬೇಕೆಂದು ಅಗ್ರಹಿಸಿದ್ದರು ಹಾಗು ಆ ಕುರಿತು ಆಗಸ್ಟ್ ೪, ೨೦೧೦ ರಂದು ಅಧಿಕಾರ ಸಮಿತಿಯ ಮುಂದೆ ಜಿಎಸ್‌ಟಿಯನ್ನು ವಿರೋಧಿಸುವ ಲಿಖಿತ ತಕರಾರನ್ನು ವಿವರವಾಗಿ ಸಲ್ಲಿಸಿತ್ತು. ಅದರಲ್ಲಿ ಈ ತಿದ್ದುಪಡಿಯು ರಾಜ್ಯಗಳ ಪರೋಕ್ಷ ತೆರಿಗೆ ಸಂಗ್ರಹದ ಅಧಿಕಾರವನ್ನು ಕಸಿದುಕೊಳ್ಳುತ್ತದೆ ಎಂದು ವಾದಿಸಲಾಗಿತ್ತು. ತೆರಿಗೆ ದರ ನಿಗದಿ ಅಧಿಕಾರವು ಸಂಸತ್ತು ಮತ್ತು ರಾಜ್ಯ ಶಾಸಕಾಂಗದ ಮೂಲಭೂತ ಹಕ್ಕು ˌ ಆದ್ದರಿಂದ, ಪ್ರಸ್ತಾವಿತ ಕಾನೂನು ಇದ್ದುಪಡಿಯು ೨೭೯ ‘ಎ’ ನ ನಿಬಂಧನೆಗಳು ರಾಜ್ಯಗಳ ಸಂವಿಧಾನಬದ್ಧ ಹಕ್ಕುಗಳನ್ನು ಮೊಟಕುಗೊಳಿಸುತ್ತದೆ ಎಂದು ಮೋದಿ ಸರಕಾರ ದೂರು ನೀಡಿತ್ತು.
ಜಿಎಸ್‌ಟಿ ಕೌನ್ಸಿಲ್‌ನ ಅಧಿಕಾರ ಗುಜರಾತ ಸರಕಾರ ಒಪ್ಪಿಕೊಳ್ಳುವುದಿಲ್ಲವೆಂತಲುˌ ಹಾಗೆ ಒಪ್ಪಿಕೊಂಡರೆ ಅದು ರಾಜ್ಯಗಳು ಸಂಪೂರ್ಣ ಆರ್ಥಿಕ ಸ್ವಾಯತ್ತತೆಯನ್ನು ಕಸಿದುಕೊಳ್ಳುತ್ತದೆ ಎಂಬುದು ಅಂದಿನ ಮೋದಿ ಸರಕಾರದ ವಾದವಾಗಿತ್ತು. ಪ್ರಧಾನಿಯಾದ ಮೇಲೆ ನರೇಂದ್ರ ಮೋದಿ ತಮ್ಮ ನಿರ್ಧಾರವನ್ನು ಬದಲಾಯಿಸಿ ಜಿಎಸ್‌ಟಿ ಹೇರಿಕೆಯ ಬಗ್ಗೆ ಒಲವು ವ್ಯಕ್ತಪಡಿಸಿದರು. ಮೋದಿಯವರು ೨೦೧೬ ರ ಆಗಸ್ಟ್ ೯ ರಂದು ಸದನದಲ್ಲಿ ಜಿಎಸ್‌ಟಿ ಬಗ್ಗೆ ತಮಗೆ ಅನುಮಾನವಿರುವ ಬಗ್ಗೆ ಒಪ್ಪಿಕೊಂಡಿದ್ದರು.
ಈಗ ಆ ಅನುಮಾನಗಳು ಬಗೆಹರಿದದ್ದರಿಂದ ಜಿಎಸ್‌ಟಿ ಅನುಷ್ಟಾನ ಅನಿವಾರ್ಯವೆಂದು ಸಮರ್ಥಿಸಿಕೊಂಡಿದ್ದರು. ಸದನ ಚರ್ಚೆಯಲ್ಲಿ ಕಾಂಗ್ರೆಸ್ ನಾಯಕ ಮಲ್ಲಿಕಾರ್ಜುನ್ ಖರ್ಗೆಯವರು ಈಗ ಜಿಎಸ್‌ಟಿ ಜಾರಿಯನ್ನು ಸಮರ್ಥಿಸಿಕೊಳ್ಳುವ ನೀವು ಅಂದೇಕೆ ವಿರೋಧಿಸಿದ್ದಿರಿ ಎಂದು ಪ್ರಶ್ನಿಸಿದ್ದರು. ಇಂದು ಮೋದಿಯವರು ತಮ್ಮ ಸರಕಾರದ ಕಳಪೆ ಆರ್ಥಿಕ ನಿರ್ವಹಣೆಯ ವಿಫಲತೆಯನ್ನು ಸರಿದೂಗಿಸಿಕೊಳ್ಳಲು ಜನ ಸಾಮಾನ್ಯರ ಮೇಲೆ ಜಿಎಸ್‌ಟಿಯ ವ್ಯಾಪಕ ಹೇರಿಕೆ ಮಾಡುತ್ತಿದ್ದಾರಲ್ಲದ ಅದರಿಂದ ದೇಶಕ್ಕೆ ಪ್ರಯೋಜನವಿದೆ ಎಂದು ವಾದಿಸುತ್ತಿದ್ದಾರೆ. ಈ ಪ್ರಕರಣ ಮೋದಿ ಹಾಗು ಅವರ ಪಕ್ಷದ ದ್ವಂದ್ವಗಳನ್ನು ಪ್ರತಿಬಿಂಬಿಸುತ್ತದೆ.
ಹಾಲುˌ ಮೊಸರು ಇತ್ಯಾದಿ ಅಗತ್ಯ ವಸ್ತುಗಳಷ್ಟೇ ಅಲ್ಲದೆ ಪ್ಯಾಕ್ ಮಾಡಲಾದ ಎಲ್ಲ ಅಗತ್ಯ ವಸ್ತುಗಳು ಇಂದು ಜಿಎಸ್‌ಟಿಯ ಭಾರಕ್ಕೆ ಜನಸಾಮಾನ್ಯರ ಕೈಗೆಟುಕದಂತಾಗಿವೆ. ಹೇಳಿಕೇಳಿ ಮೋದಿ ಸರಕಾರ ಧಾರ್ಮಿಕ ಮೂಲಭೂತವಾದಿ ಹಿಂದುತ್ವ ಸಂಘಟನೆಗಳ ಕೈಗೊಂಬೆಯಾಗಿದೆ. ಸಾಂಪ್ರದಾಯವಾದಿಗಳು ಪೂರ್ವದಿಂದ ವಿಜ್ಞಾನವನ್ನು ದ್ವೇಷಿಸುತ್ತಾರೆ. ವೈಜ್ಞಾನಿಕ ದೃಷ್ಟಿಕೋನವಿಲ್ಲದ ಮೋದಿ ಇಂದು ವೈಜ್ಞಾನಿಕ ಸಂಶೋಧನೆಗಳಿಗೆ ಬಳಸಲಾಗುವ ಉಪಕರಣಗಳ ಮೇಲೆ ಜಿಎಸ್‌ಟಿ ವಿಧಿಸಿ ತಾನು ವಿಜ್ಞಾನ ದ್ವೇಷಿ ಎನ್ನುವುದು ಸಾಬೀತು ಪಡಿಸಿದೆ. ದೇಶವೊಂದರ ಅಧಿಕಾರದ ಚುಕ್ಕಾಣಿಯು ಪ್ರಗತಿವಿರೋಧಿಗಳು ಹಾಗು ಜೀವವಿರೋಧಿಗಳಾಗಿರುವ ಸಾಂಪ್ರದಾಯವಾದಿಗಳು ಮತ್ತು ಸರ್ವಾಧಿಕಾರಿ ಮನಸ್ಥಿತಿಯುಳ್ಳ ವ್ಯಕ್ತಿಯ ಕೈಗೆ ಸಿಲುಕಿದರೆ ಸರ್ವನಾಶವಾಗುವುದರಲ್ಲಿ ಯಾವುದೆ ಸಂದೇಹವಿರುವುದಿಲ್ಲ. ಈಗ ಭಾರತ ಅದೇ ದಿಕ್ಕಿನಲ್ಲಿ ಸಾಗುತ್ತಿದೆ.